ಸಾಹಿತ್ಯ ಸಮ್ಮೇಳನ ರಾಜ್ಯಕ್ಕೆ ಮಾದರಿಯಾಗಬೇಕು: ಬಸವರಾಜ ಬೊಮ್ಮಾಯಿ
Chitradurga (ಹೊಸದುರ್ಗ): ಸಾಹಿತ್ಯವಿಲ್ಲದೇ ಮನುಕುಲ ಬದುಕಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು.
ತಾಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಲ್ಲಿ ಶನಿವಾರ ನಡೆದ 2 ನೇ ದಿನದ ಚಿತ್ರದುರ್ಗ – ಚಿಕ್ಕಮಗಳೂರು ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅಂತರ ಜಿಲ್ಲಾ ಸಮ್ಮೇಳನ ಇದೊಂದು ಅಪರೂಪದ ಕಾರ್ಯಕ್ರಮವಾಗಿದೆ. ಸಾವಿರಾರು ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಸಂತೋಷ ತಂದಿದೆ. ಮನುಷ್ಯನ ಅತ್ಯಂತ ಪ್ರಬಲ ಗುಣಧರ್ಮ ಮಾತು, ಅಂತಹ ಶಕ್ತಿಯನ್ನು ಸೃಷ್ಟಿಕರ್ತ ನೀಡಿದ್ದಾನೆ. ನಮ್ಮ ಭಾವನೆಗಳನ್ನು ಅಭಿವ್ಯಕ್ತ ಪಡಿಸುವ ಕ್ರಿಯೆ ವಿಚಾರಗಳಿಂದ ಬರುತ್ತವೆ. ಸಾಹಿತ್ಯವಿಲ್ಲದೇ ಮನುಕುಲ ಬದುಕಲು ಸಾಧ್ಯವಿಲ್ಲ ಎಂದು ಹೇಳಿದರು.
ಸಾಹಿತ್ಯಕ್ಕೆ ಎಂದಿಗೂ ಸಾವಿಲ್ಲ. ಎಲ್ಲರೂ ತಮ್ಮನ್ನು ತಾವು ಚಿಂತನಾ ಕ್ರಮಕ್ಕೆ ಒಳಪಡಿಸಿಕೊಂಡರೆ, ಎಲ್ಲರೂ ಸಾಹಿತಿಗಳೇ ಆಗುತ್ತಾರೆ. ನಮ್ಮಲ್ಲಿನ ಸ್ವಂತಿಕೆಯ ವಿಚಾರವನ್ನು ಪ್ರಖರವಾಗಿ ತಿಳಿಸಬೇಕು. ಕನ್ನಡ ಭಾಷೆ ಗಿರುವಂತಹ ಸಾಹಿತ್ಯ ಶ್ರೀಮಂತಿಕೆ ಮತ್ತೊಂದು ಭಾಷೆಗಳಿಗಿಲ್ಲ. ನಾವು ಎಷ್ಟು ವೈಚಾರಿಕವಾಗಿ ಹೋಗುತ್ತೇವೊ ಅಷ್ಟು ಸಾಹಿತ್ಯ ಶ್ರೀ ಮಂತಿಕೆಯನ್ನು ಕಾಣಲು ಸಾಧ್ಯ. ಇಂತಹ ಸಾಹಿತ್ಯ ಸಮ್ಮೇಳನಕ್ಕೆ ರಾಜಕಾರಣಿಗಳನ್ನು ಕರೆದರೆ, ಒಳ್ಳೆಯ ವಿಚಾರಗಳು ತಿಳಿದು ಕೊಳ್ಳುತ್ತಾರೆ. ರಾಜಕೀಯ ವಿಚಾರಗಳನ್ನು ಬದಿಗೊತ್ತಿ, ವೈಚಾರಿಕ ವಿಚಾರಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ. ಕನ್ನಡ ಸಾಹಿತ್ಯ ಸಮ್ಮೇಳನ ಎಂದಾಗ ಜಿಲ್ಲೆಗಳ ಮಧ್ಯೆ ಘರ್ಷಣೆ ಆರಂಭವಾಗುತ್ತದೆ. ಹಾಗಾಗದೆ, ಒಮ್ಮತದಿಂದ ಸಮ್ಮೇಳನ ನಡೆಯಬೇಕು. ಸಾಹಿತ್ಯ ಸಮ್ಮೇಳನ ರಾಜ್ಯಕ್ಕೆ ಮಾದರಿಯಾಗಬೇಕು. ಇಲ್ಲಿ ಗಾಂಭೀರ್ಯ, ಅರ್ಥಪೂರ್ಣ ಬಹಳ ಮುಖ್ಯ ಎಂದು ಹೇಳಿದರು.

ಸಮ್ಮೇಳನದ ಸರ್ವಾಧ್ಯಕ್ಷತೆವಹಿಸಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜಗತ್ತಿನಲ್ಲಿ ಬೆಲೆ ಇರುವುದು ಅಕ್ಷರ ಮತ್ತು ಸಂಸ್ಕಾರಕ್ಕೆ. ಅದನ್ನು ತಲೆ ಮೇಲೆ ಇಟ್ಟು ನಡೆಯುತ್ತಾರೋ ಅಂತಹ ವ್ಯಕ್ತಿಗಳು ಶ್ರೇಶ್ಟರಾಗುತ್ತಾರೆ. ಇಡೀ ವಿಶ್ವದಲ್ಲಿ ಜನ ಹೆಣ್ಣು, ಹೊನ್ನು, ಮಣ್ಣಿಗಾಗಿ. ಆದರೆ, ಬಹುಮುಖ್ಯವಾಗಿ ಜ್ಞಾನ ಪ್ರಧಾನವಾಗುರಬೇಕು. ಇದಕ್ಕಾಗಿ ಶರಣರು, ಚಿಂತಕರು, ಸಾಹಿತಿಗಳು ಶ್ರಮಿಸಿದ್ದಾರೆ. ಮನುಷ್ಯನಲ್ಲಿ ವೈಚಾರಿಕ ಚಿಂತನೆ ಬೆಳೆದರೆ, ಜ್ಞಾನದ ಗಣಿ ಯಾಗುತ್ತಾನೆ. ಸಮ್ಮೇಳನದಲ್ಲಿ ನಡೆದ ಕಾರ್ಯಕ್ರಮ ಅಕ್ಷರ ಮತ್ತು ಜ್ಞಾನದ ರಸ ಔತಣವನ್ನು ಉಣಬಡಿಸಲಾಯಿತು. ಎಲ್ಲಾ ಸಾಹಿತ್ಯಸಕ್ತರ ಶ್ರಮದಿಂದ ಕಾರ್ಯಕ್ರಮ ಬಹಳ ಚೆನ್ನಾಗಿ ನಡೆದಿದೆ ಎಂದು ಹೇಳಿದರು.
ಹಳಗನ್ನಡ, ನಡುಗನ್ನಡ, ಹೊಸಗನ್ನಡ ಬದುಕಿಗೆ ಹೊಂದಿಕೊಂಡಿರುವ ಸಾಹಿತ್ಯವಾಗಿದೆ. ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ, ಸಾಹಿತ್ಯವಿಲ್ಲದೇ ಪರಿಪೂರ್ಣವಾಗಲು ಸಾಧ್ಯವಿಲ್ಲ. ಯಾವ ದೇಶ, ಸಮುದಾಯಗಳು ಶಿರದ ಮೇಲೆ ಸಾಹಿತ್ಯವನ್ನು ಇಡುತ್ತವೆಯೇ ಅವು ಶ್ರೇಷ್ಟತೆಯನ್ನು ಪಡೆದು ಕೊಳ್ಳುತ್ತವೆ. ಮನುಷ್ಯನ ಮೆದುಳಿನಿಂದಲೇ ಎಲ್ಲಾ ಸಾಹಿತ್ಯ, ವಿಚಾರ ಹರಿದು ಬರುತ್ತಿದೆ ಎಂದು ತಿಳಿಸಿದರು.

ಈ ವೇಳೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಏಸ್.ನವೀನ್, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ತಮ್ಮಯ್ಯ, ಚಿತ್ರದುರ್ಗ ಜಿಲ್ಲಾ ಕಸಾಪ ಅಧ್ಯಕ್ಷ ಶಿವಸ್ವಾಮಿ ಮತ್ತು ಚಿಕ್ಕಮಗಳೂರು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಸೇರಿದಂತೆ ಎರಡು ಜಿಲ್ಲೆಗಳ ಕಸಾಪ ಪದಾಧಿಕಾರಿಗಳು ಹಾಗೂ ಸಾವಿರಾರು ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.
#BasavarajBommai #Chitradurga #Sahityasammelana