ಮಣಿಪುರದಲ್ಲಿ ಏನು ನಡೆಯುತ್ತಿದೆ ಎಂಬುದು ಜನರ ಊಹೆಗೆ ಮೀರಿದ ರೀತಿಯಲ್ಲಿ ಜಗತ್ತಿನ ಗಮನವನ್ನು ಸೆಳೆದಿದೆ. ಮುಂಬರುವ ಚುನಾವಣೆಯ ಈ ಸಂದಿಗ್ಧ ಸಂದರ್ಭದಲ್ಲಿ ರಾಜ್ಯದ ವಿವಿಧ ಸಮುದಾಯಗಳಲ್ಲಿ ತೀವ್ರವಾದ ಭಯ ಮತ್ತು ಹೇಸಿಗೆಯ ಪರಿಸ್ಥಿತಿ ಉಲ್ಬಣಗೊಂಡಿದೆ ಎನ್ನುತ್ತಾರೆ ಹಿರಿಯ ಪತ್ರಕರ್ತೆ ಮತ್ತು ಲೇಖಕಿ ಮೃಣಾಲ್ ಪಾಂಡೆಯವರು. ಇದೇ ಜೂನ್ ೨೫, ೨೦೨೩ ರ ‘ದಿ ವೈರ್’ ವೆಬ್ ಜರ್ನಲ್ಲಿನಲ್ಲಿ ಬರೆದ ತಮ್ಮ ಲೇಖನದಲ್ಲಿ “ನಮ್ಮಲ್ಲಿ ಒಂದು ಭಾಗ ಮಾತ್ರ ವಿವೇಕಯುತವಾಗಿ ಚಿಂತಿಸುತ್ತದೆ ಹಾಗು ದೀರ್ಘ ಕಾಲೀನ ಸಂತೋಷವನ್ನು ಪ್ರೀತಿಸುತ್ತದೆ. ನಮ್ಮ ನಡುವೆ ಅರ್ಧದಷ್ಟು ಜನರು ಬಹುತೇಕ ಹುಚ್ಚರಾಗಿದ್ದಾರೆ. ಸಮಾಜವು ತನ್ನ ವಿಚಾರ ಒಪ್ಪುದವರನ್ನು ಸಾರಾಸಗಟು ನಿರಾಕರಿಸುವುದಕ್ಕೆ ಆದ್ಯತೆ ನೀಡುತ್ತಿದೆ. ಈಗಿನ ಸದ್ಯದ ಜನರ ಚಿಂತನೆಯು ತಮ್ಮ ಆರಂಭಿಕ ಜೀವನದ ವೈಭವವನ್ನು ಹಿಮ್ಮೆಟ್ಟಿಸುವ ದುರಂತದಲ್ಲಿ ಸುಟ್ಟು ಸಾಯಲು ಬಯಸುತ್ತದೆ” ಎಂದು ಮಣಿಪುರದ ಹಿಂಸಾತ್ಮಕ ಘಟನೆಗಳ ಹಿನ್ನೆಲೆಯಲ್ಲಿ ಲೇಖಕಿ ಆತಂಕ ವ್ಯಕ್ತಪಡಿಸಿದ್ದಾರೆ.
ಮಣಿಪುರದಿಂದ ಪ್ರತಿದಿನ ಹೊರಬರುತ್ತಿರುವ ಭಯಾನಕ ದೃಶ್ಯಗಳು ರೆಬೆಕಾ ವೆಸ್ಟ್ನ ಬ್ಲ್ಯಾಕ್ ಲ್ಯಾಂಬ್ ಮತ್ತು ಗ್ರೇ ಫಾಲ್ಕನ್ನ ಈ ಸಾಲುಗಳಲ್ಲಿನ ಸತ್ಯವನ್ನು ಒತ್ತಿಹೇಳುತ್ತಿವೆ. ಸೋನಿಯಾ ಗಾಂಧಿ ಹೇಳಿದಂತೆ ಮಣಿಪುರದಲ್ಲಿ ನಡೆಯುತ್ತಿರುವ ಘಟನೆಗಳ ಪರಿಣಾಮ ಅಲ್ಲಿಯಷ್ಟೆ ಉಳಿಯುವುದಿಲ್ಲ. ಅದು ಇಡೀ ರಾಷ್ಟ್ರದ ಆತ್ಮಸಾಕ್ಷಿಯ ಮೇಲೆ ಆಳವಾದ ಗಾಯವನ್ನು ಮಾಡಿದೆ. ಪರಿಸ್ಥಿತಿಯನ್ನು ಹೇಗೆ ನಿಯಂತ್ರಿಸುವುದು ಮತ್ತು ಶಾಂತಿಯನ್ನು ಹೇಗೆ ಮರುಸ್ಥಾಪಿಸುವುದು ಎಂಬುದರ ಕುರಿತು ಚರ್ಚಿಸಲು ಗೃಹ ಸಚಿವರು ಸರ್ವಪಕ್ಷಗಳ ಸಭೆಯನ್ನು ಕರೆದಿದ್ದರು, ಆದರೆ ಅಲ್ಲಿನ ಸಮಸ್ಯೆಯ ಬೇರುಗಳು ಬಹಳ ಆಳವಾಗಿವೆ ಮತ್ತು ಪ್ರಧಾನಿ ತಮ್ಮ ವಿದೇಶ ಪ್ರವಾಸದ ನಂತರ ರಾಜ್ಯದಲ್ಲಿ ಶಾಂತಿ ಮತ್ತು ಪರಸ್ಪರರ ನಡುವೆ ನಂಬಿಕೆಯನ್ನು ಮರುಸ್ಥಾಪಿಸುವ ಉಪಕ್ರಮವನ್ನು ತಾವೇ ಸ್ವತಃ ಮುನ್ನಡೆಸುವುದು ಅತ್ಯವಶ್ಯಕವಾಗಿತ್ತು. ಪ್ರಧಾನಿಯವರ ದೀರ್ಘವಾದ ಮೌನವು ಅಲ್ಲಿನ ಇಡೀ ದೃಶ್ಯಗಳ ಮೇಲೆ ದೊಡ್ಡ ನಕಾರಾತ್ಮಕ ಪರಿಣಾಮವನ್ನು ಬೀರಿದೆ ಎನ್ನುತ್ತಾರೆ ಲೇಖಕಿ.

ಇತ್ತೀಚಿನವರೆಗೂ, ವಿವಿಧ ಜನಾಂಗದ ಮತ್ತು ಧರ್ಮದ ಜನರು ತಮ್ಮ ಸಾಂಸ್ಕೃತಿಕ ಗುರುತನ್ನು ಉಳಿಸಿಕೊಂಡು ಅಲ್ಲಿ ಶಾಂತಿಯುತವಾಗಿ ಹಾಗು ಒಟ್ಟಾಗಿ ಬಾಳುತ್ತಿರುವುದಕ್ಕೆ ಮಣಿಪುರವು ಒಂದು ಉತ್ತಮ ಉದಾಹರಣೆಯಾಗಿತ್ತು. ಕಣಿವೆಯಲ್ಲಿನ ಪ್ರಸ್ತುತ ಹಿಂಸಾಚಾರವು ೧೯೪೦ ರ ದಶಕದಲ್ಲಿ ಜರುಗಿದ ಹಾಗು ಅಂತಿಮವಾಗಿ ಭಾರತವನ್ನು ಧರ್ಮ ಮತ್ತು ಜನಾಂಗದ ಆಧಾರದಲ್ಲಿ ವಿಭಜನೆಗೆ ಈಡು ಮಾಡಿದ ರೀತಿಯಲ್ಲಿಯೆ ಅದೇ ವಿಭಜಕ ಮಾರ್ಗವನ್ನು ಅನುಸರಿಸುತ್ತಿರುವ ಲಕ್ಷಣಗಳು ಸ್ಪಷ್ಟವಾಗಿ ಕಾಣುತ್ತಿವೆ ಎನ್ನುತ್ತಾರೆ ಲೇಖಕಿ ಮೃಣಾಲ್ ಪಾಂಡೆಯವರು. ಇದ್ದಕ್ಕಿದ್ದಂತೆ, ತಮ್ಮ ಒಡೆತನದ ಭೂಮಿ ಮತ್ತು ಜನಾಂಗೀಯ ಗುರುತನ್ನು ಕಳೆದುಕೊಳ್ಳುವ ಭಯವು ಅಲ್ಲಿನ ಜನರಲ್ಲಿ ಕೋಪವಾಗಿ ರೂಪಾಂತರಗೊಂಡುˌ ಹಿಂಸಾಚಾರವು ಸ್ಫೋಟಿಗೊಂಡಿದೆ. ಮೊದಲು ಬಹುಸಂಖ್ಯಾತರಾಗಿರುವ ವೈಷ್ಣವ ಹಿಂದೂಗಳು ಮತ್ತು ಕಣಿವೆಯ ಸುತ್ತಲಿನ ಬುಡಕಟ್ಟು ಜನರ ನಡುವೆ ಆರಂಭಗೊಂಡ ಈ ಹಿಂಸಾಚಾರವು ನಂತರ ಇತರ ಸಮುದಾಯಗಳಿಗೆ ಹರಡಿತು ಎನ್ನುತ್ತಾರೆ ಮೃಣಾಲ್ ಪಾಂಡೆ.
೨೦೨೪ ರ ಸಾರ್ವತ್ರಿಕ ಚುನಾವಣೆಯ ಹತ್ತಿರದಲ್ಲಿ ವೋಟ್ ಬ್ಯಾಂಕ್ ರಾಜಕೀಯವು ಇಲ್ಲಿನ ಸಮುದಾಯಗಳನ್ನು ವಿವಿಧ ಗುಂಪುಗಳಾಗಿ ಚದುರಿಸಿ ಅದರ ಪ್ರತಿಕೂಲತೆಯ ಪರಿಣಾಮವನ್ನು ಮತ ಬ್ಯಾಂಕಿನ ರೂಪದಲ್ಲಿ ಕ್ರೋಢೀಕರಿಸುವ ಆತಂಕವಿದ್ದು, ಈ ಮಾಲಿನ್ಯವು ಇತರ ರಾಜ್ಯಗಳಿಗೂ ಹರಡಬಹುದು ಎನ್ನುತ್ತಾರೆ ಲೇಖಕಿ. ಈಶಾನ್ಯ ಭಾರತದ ರಾಜ್ಯಗಳು
ಅತ್ಯಂತ ಪ್ರಕ್ಷುಬ್ಧ ಹಾಗು ಹಿಂಸಾತ್ಮಕ ಜನಾಂಗೀಯ ಘರ್ಷಣೆಗಳ ಸುದೀರ್ಘ ಇತಿಹಾಸವನ್ನು ಹೊಂದಿದ್ದು ಅವು ಆಗಾಗ್ಗೆ ಅಲ್ಲಿನ ಬುಡಕಟ್ಟು ನಾಯಕರು ಮತ್ತು ಪ್ರತ್ಯೇಕತಾವಾದಿ ಗುಂಪುಗಳು ದೆಹಲಿಯ ಆಡಳಿತಗಾರರೊಂದಿಗೆ ಒಂದು ನಿರ್ದಿಷ್ಟ ಬಗೆಯ ಹಗೆತನವನ್ನು ಪ್ರದರ್ಶಿಸಿವೆ ಎಂಬುದು ನಿಜ. ಇದನ್ನು ಆಗಲೇ ಗ್ರಹಿಸಿದ್ದ ಮೊಘಲ್ ಆಡಳಿತಗಾರರು ಅಲ್ಲಿನ ಜನಾಂಗೀಯ ಮತ್ತು ಬುಡಕಟ್ಟು ಸಮಸ್ಯೆಗಳನ್ನು ತಮ್ಮ ಸ್ವಂತ ಸಾಧನಗಳ ಮೂಲಕವೆ ಪರಿಹರಿಸಿಕೊಳ್ಳಲು ಬಿಟ್ಟಿದ್ದರು. ಅವರು ಅವನ್ನು “ಘೈರ್ ಮುಮ್ಕಿನ್” ಎಂದು ಕರೆದು, ಇವರನ್ನು ಸಾಮಾನ್ಯ ಕಾರ್ಯವಿಧಾನಗಳಿಂದ ಆಳುವುದು ಅಸಾಧ್ಯವೆಂದಿದ್ದರಂತೆ.

ಆದರೆ ಬ್ರಿಟಿಷರು ಅಲ್ಲಿ ಜನಾಂಗೀಯ ಅಸ್ಮಿತೆಗಳನ್ನು ಪ್ರತ್ಯೇಕಿಸುವ ಮತ್ತು ನಂತರ ಶಸ್ತ್ರಸಜ್ಜಿತಗೊಳಿಸುವ ತಂತ್ರವನ್ನು ಅನುಸರಿಸಿದರಂತೆ. ಬಹುಸಂಖ್ಯಾತ ಸಮುದಾಯಗಳನ್ನು ಆದಷ್ಟು ಸಮಾಧಾನಪಡಿಸಿˌ ತಮ್ಮ ಉನ್ನತ ಸ್ಥಾನಮಾನಕ್ಕಾಗಿ ಬುಡಕಟ್ಟು ಮುಖ್ಯಸ್ಥರನ್ನು ಆಂತರಿಕ ಯುದ್ಧಗಳಲ್ಲಿ ತೊಡಗಿಸಿ ಬ್ರಿಟೀಷರು ಅಲ್ಲಿನ ಅಮೂಲ್ಯವಾದ ನೈಸರ್ಗಿಕ ಸಂಪನ್ಮೂಲಗಳನ್ನು ಅಡೆತಡೆಯಿಲ್ಲದೆ ಬಳಸಿದರು ಎನ್ನುತ್ತಾರೆ ಲೇಖಕಿ. ಈ ಸಣ್ಣ ರಾಜ್ಯಗಳಲ್ಲಿ ಕಾಣಬರುವ ಸಂಕೀರ್ಣವಾದ ಜನಾಂಗೀಯ ಮಿಶ್ರಣದ ಹೊರತಾಗಿಯೂ ತಮಗೆ ನಿಷ್ಠಾವಂತ ವೋಟ್ ಬ್ಯಾಂಕ್ ನ್ನು ರೂಪಿಸಿಕೊಳ್ಳಲು ಹೆಚ್ಚು ಕಡಿಮೆ ಅದೇ ಬ್ರಿಟೀಷ್ ಮಾದರಿಯ ವಿಭಜನೆಯ ತಂತ್ರವನ್ನು ಇಂದು ಬಿಜೆಪಿ ಆಡಳಿತ ಬಳಸುತ್ತಿದೆ ಎನ್ನುವ ಲೇಖಕಿ ಇದನ್ನು ಬಿಜೆಪಿ ಆಡಳಿತದ ಬ್ರಿಟೀಷ್ ಮಾದರಿಯ ತಂತ್ರದ ಒಡೆದಾಳುವ ನೀತಿಯ ಪ್ರಮಾಣ ಫಲಕ ಎಂದು ವರ್ಣಿಸುತ್ತಾರೆ. ಹೌದುˌ ಲೇಖಕಿಯ ಈ ಅಭಿಪ್ರಾಯ ವಾಸ್ತವವಾಗಿದೆ. ಎಷ್ಟೇಯಾಗಲಿˌ ಬಿಜೆಪಿ ಸ್ಥಾಪಕರ ಪೂರ್ವಜರು ಬ್ರಿಟೀಷರಿಗೆ ಒಡೆದಾಳುವ ನೀತಿ ಕಲಿಸಿದವರ ಸಂತತಿಯಲ್ಲವೆ.
ಮಣಿಪುರವು ಹಿಂದೂ, ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮವನ್ನು ಅನುಸರಿಸುವ ಸುಮಾರು ೩೯ ಜನಾಂಗೀಯ ಸಮುದಾಯಗಳು ನೆಲೆಸಿರುವ ಒಂದು ವಿಶೇಷ ರಾಜ್ಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈಶಾನ್ಯ ರಾಜ್ಯಗಳ ವಿಶೇಷ ಹಕ್ಕುಗಳಿಗಾಗಿ ಹೋರಾಡುತ್ತಿರುವ ಅಲ್ಲಿನ ಅನೇಕ ಗುಂಪುಗಳ ಪ್ರತಿರೋಧವನ್ನು ಗಣನೀಯವಾಗಿ ತಗ್ಗಿಸಲು, ಇತ್ತೀಚಿನ ವರ್ಷಗಳಲ್ಲಿ ಆಳುವ ಸರಕಾರಗಳು ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆ ಅಥವಾ AFSPA ನಂತಹ ಕಾನೂನುಗಳನ್ನು ಆ ರಾಜ್ಯಗಳ ಮೇಲೆ ವ್ಯವಸ್ಥಿತವಾಗಿ ಹೇರಿವೆ. ಈಗ ಈಶಾನ್ಯ ರಾಜ್ಯಗಳಲ್ಲಿ ಶಾಂತಿಪಾಲನಾ ಕಾರ್ಯವನ್ನು ಸರಕಾರಗಳು ಹೆಚ್ಚು ಕಡಿಮೆ ಸೈನ್ಯಕ್ಕೆ ಹಸ್ತಾಂತರಿವೆ. ಏತನ್ಮಧ್ಯೆ, ಚುನಾವಣೆಗಳು ಸಮೀಪಿಸುತ್ತಿದ್ದಂತೆ, ದೆಹಲಿಯ ರಾಜಕೀಯ ನಾಯಕತ್ವವು ಈಶಾನ್ಯ ರಾಜ್ಯಗಳಲ್ಲಿನ ಜನಾಂಗೀಯ ಗುಂಪುಗಳನ್ನು ಪ್ರತ್ಯೇಕವಾಗಿ ಓಲೈಸುತ್ತಿದೆ. ಅದರೊಟ್ಟಿಗೆ ಅದು ತನ್ನ ರಾಜಕೀಯ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಅಧಿಕಾರ ಹಿಡಿಯಲು ಅನೇಕ ಚುನಾವಣಾ ಭರವಸೆಗಳನ್ನು ಆ ರಾಜ್ಯದ ಜನರಿಗೆ ನೀಡುತ್ತಿದೆ ಎನ್ನುತ್ತಾರೆ ಲೇಖಕಿ.

೨೦೧೯ ರ ಸಾರ್ವತ್ರಿಕ ಚುನಾವಣೆಗೆ ಮುನ್ನ, ಭಾರತದ ಗೃಹ ಸಚಿವರಿಗೆ ಅಲ್ಲಿನ ಸಶಸ್ತ್ರ ಗುಂಪುಗಳಿಂದ ಬರೆಯಲಾಗಿದೆ ಎನ್ನಲಾಗುವ ಪತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ತಮ್ಮ ಅಭ್ಯರ್ಥಿಗೆ ಪಕ್ಷದ ಟಿಕೆಟ್ ನೀಡಿದರೆ ತಾವು ಬಿಜೆಪಿಯನ್ನು ಚುನಾವಣೆಯಲ್ಲಿ ಬೆಂಬಲಿಸುತ್ತೇವೆ ಎಂದು ಸಶಸ್ತ್ರ ಗುಂಪುಗಳು ಆ ಪತ್ರದಲ್ಲಿ ಒತ್ತಾಯಿಸಿದ ಸಂಗತಿ ಬಹಿರಂಗಗೊಂಡಿತ್ತು. ಆಮೇಲೆ ಆ ಪತ್ರದಲ್ಲಿ ಬರೆಯಲಾಗಿದ್ದ ಚೌಕಾಸಿ ಸುದ್ದಿಯನ್ನು ಆ ಗುಂಪುಗಳು ನಿರಾಕರಿಸಿದ್ದವು. ಅದಾಗ್ಯೂ, ೨೦೨೨ ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ, ಅಲ್ಲಿನ ಎರಡು ಕುಕಿ ಬಂಡಾಯ ಗುಂಪುಗಳು ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವ ಹೇಳಿಕೆಗಳನ್ನು ನೀಡಿ, ಅದಕ್ಕೆ ಪ್ರತಿಯಾಗಿ ಬಹುಸಂಖ್ಯಾತ ಹಿಂದೂ ಮೈತೇಯಿ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕೆಂದು ಒತ್ತಾಯಿಸಿದ್ದವು. ಈ ಮೀಸಲಾತಿಯ ಸಂಗತಿ ರಾಜ್ಯವನ್ನು ಧ್ರುವೀಕರಿಸಿತು, ಕಣಿವೆಗಳಲ್ಲಿನ ಬುಡಕಟ್ಟುಗಳು, ತಮ್ಮ ಕೋಟಾ ಎಲ್ಲಿ ಕುಗ್ಗೀತು ಎಂಬ ಭಯದಿಂದ ಆತಂಕವನ್ನು ಅನುಭವಿಸಿದವು ಎಂದು ಹಿಂದಿನ ಘಟನೆಗಳನ್ನು ಲೇಖಕಿ ವಿವರವಾಗಿ ಬರೆದಿದ್ದಾರೆ.
ಚುನಾವಣೆಯ ಸಮಯದಲ್ಲಿ, ಉಗ್ರಗಾಮಿಗಳಿಂದ “ಮುಕ್ತ ಬೆದರಿಕೆ” ಮತ್ತು ಮತಗಟ್ಟೆಗಳಲ್ಲಿ ಹಿಂಸಾಚಾರದ ಘಟನೆಗಳ ಬಗ್ಗೆ ನಾಗರಿಕ ಸಮಾಜದ ಗುಂಪುಗಳಿಂದ ಮಾಧ್ಯಮಗಳಲ್ಲಿ ದೂರುಗಳು ಬಂದವು. ಅಂತಿಮವಾಗಿ, ಹಿಂದೂ ಮೈತೇಯಿ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವ ಮರು-ಚುನಾಯಿತ ಸರ್ಕಾರದ ಪ್ರಯತ್ನಗಳು ಮತ್ತು ಪ್ರಸ್ತಾವನೆಗೆ ತೀವ್ರ ಹಿನ್ನೆಡೆಯಾಯಿತು. ಮಣಿಪುರವು ೫೦ ದಿನಗಳಿಗಿಂತ ಹೆಚ್ಚು ಕಾಲ ಹೊತ್ತಿ ಉರಿಯುತ್ತಿದ್ದರೂ ಅಲ್ಲಿನ ಬಿಕ್ಕಟ್ಟಿನ ಬಗ್ಗೆ ಕೇಂದ್ರದ ನಾಯಕತ್ವ ಹಾಗು ಅದನ್ನು ಬೆಂಬಲಿಸುವ ಬಹುಪಾಲು ಮಾಧ್ಯಮಗಳ ಧೋರಣೆಯನ್ನು ಯಿಡ್ಡಿಷ್ ಪದವಾದ ಚುಟ್ಜ್ಪಾಕ್ಕೆ ಹೋಲಿಸಬಹುದಾಗಿದೆ, ಇದರರ್ಥ ಏನನ್ನೂ ಮಾಡದಿದ್ದರೂ, ಕಾಲಾನಂತರದಲ್ಲಿ
ಕ್ರಮೇಣ ಅಲ್ಲಿನ ವಾತಾವರಣ ತನ್ನಿಂದ ತಾನೇ ಸಾಮಾನ್ಯವಾಗುತ್ತವೆ ಎನ್ನುವುದು ಸರಕಾರದ ಧೋರಣೆ. ಮಣಿಪುರದಲ್ಲಿ ಹಿಂಸಾತ್ಮಕ ಘರ್ಷಣೆಗಳು ಪ್ರಾರಂಭವಾದಾಗ, ಕೇಂದ್ರ ಸರಕಾರ ಮತ್ತು ರಾಷ್ಟ್ರೀಯ ಮಾಧ್ಯಮಗಳೆರಡೂ ಅದರ ಗಂಭೀರತೆಯನ್ನು ತಪ್ಪಾಗಿ ಅರ್ಥೈಸಿದವು.
ಮುಂದುವರೆಯುವುದು…






