ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಪಬ್ ವೊಂದರಲ್ಲಿ ಪಾರ್ಟಿ ಆಯೋಜಿಸುತ್ತಿದ್ದಾಗ ದಾಳಿ ನಡೆಸಿದ ಭಜರಂಗ ದಳ ಕಾರ್ಯಕರ್ತರು ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಮಂಗಳೂರಿನ ಬಲ್ಮಠದಲ್ಲಿ ನಡೆದಿದೆ.
ಸೋಮವಾರ ರಾತ್ರಿ ಬಲ್ಮಠದ ರಿ-ಸೈಕಲ್ ದಿ ಲಾಂಜ್ ಪಬ್‌ನಲ್ಲಿ ನಗರದ ಖಾಸಗಿ ಕಾಲೇಜು ವಿದ್ಯಾರ್ಥಿಗಳು ಬೀಳ್ಕೊಡುಗೆ ಕಾರ್ಯಕ್ರಮದ ಅಂಗವಾಗಿ ಪಾರ್ಟಿ ಆಯೋಜಿಸಿದ್ದರು. ಈ ವೇಳೆ ದಾಳಿ ನಡೆಸಿದ ಭಜರಂಗ ದಳ ಕಾರ್ಯಕರ್ತರು ಪಾನಮತ್ತರಾಗಿದ್ದ ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಂಡು ಹೊರಗೆ ಕಳುಹಿಸಿದ್ದಾರೆ ಎನ್ನಲಾಗಿದೆ.
ಭಜರಂಗ ದಳ ಕಾರ್ಯಕರ್ತರು ಪಬ್ ಪ್ರವೇಶಿಸಿ ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರಿಂದ ವಿದ್ಯಾರ್ಥಿಗಳು ಹಾಗೂ ಭಜರಂಗ ದಳ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಕೆಲ ದಿನಗಳ ಹಿಂದಷ್ಟೇ ನಗರದ ಖಾಸಗಿ ಕಾಲೇಜು ವಿದ್ಯಾರ್ಥಿಗಳ ಅಸಭ್ಯ ವರ್ತನೆ ವಿಡಿಯೋ ವೈರಲ್ ಆಗಿತ್ತು. ಸೋಮವಾರ ರಾತ್ರಿ ಅದೇ ಕಾಲೇಜಿನ 30ಕ್ಕೂ ಅಧಿಕ ವಿದ್ಯಾರ್ಥಿಗಳು ಪಾರ್ಟಿ ಆಯೋಜಿಸಿದ್ದರು. ಈ ವೇಳೆ ಬಜರಂಗ ದಳ ಕಾರ್ಯಕರ್ತರು ತಡೆಯೊಡ್ಡಿದ್ದು, ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಸಂಘಟನೆ ಕಾರ್ಯಕರ್ತರನ್ನು ಚದುರಿಸಿದ್ದಾರೆ.
೨೦೦೯ರ ಘಟನೆ: ಮಂಗಳೂರಿನಲ್ಲಿ 2009ರಲ್ಲಿ ಬಲ್ಮಠದಲ್ಲಿರುವ ಇದೇ ಪಬ್‌ಗೆ ಹಿಂದೂ ಸಂಘಟನೆಗಳು ದಾಳಿ ನಡೆಸಿ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ಮಾಡಿದ ಘಟನೆ ದೇಶಾದ್ಯಂತ ಭಾರಿ ಚರ್ಚೆಯಾಗಿತ್ತು. 2013ರಲ್ಲಿ ಪಡೀಲ್‌ನ ಹೋಂ ಸ್ಟೇ ಮೇಲೂ ದಾಳಿ ನಡೆದಿದ್ದು, ದೇಶಾದ್ಯಂತ ದೊಡ್ಡ ಚರ್ಚೆ ನಡೆದಿತ್ತು.