ಪ್ರಧಾನಿ ನರೇಂದ್ರ ಮೋದಿ ಅವರ ಮಂಡ್ಯ ಭೇಟಿಗೆ ಮಂಡ್ಯ ಜಿಲ್ಲಾಡಳಿತ ಉಚಿತ ಬಸ್ ವ್ಯವಸ್ಥೆ ಮಾಡಿದ್ದನ್ನು ಕರ್ನಾಟಕ ಕಾಂಗ್ರೆಸ್ ಆಕ್ಷೇಪಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಬೆಂಗಳೂರು-ಮೈಸೂರು ದಶಪಥ ರಸ್ತೆ ಉದ್ಘಾಟನೆ ಮಾಡಲು ಪ್ರಧಾನಿ ಮೋದಿ ಬರುವ ಕಾರ್ಯಕ್ರಮಕ್ಕೆ ಮಂಡ್ಯ ಜಿಲ್ಲೆಯ ವಿವಿಧ ಗ್ರಾಮದ ಜನರನ್ನು ಕರೆತರಲು ಎಲ್ಲಾ ಪಂಚಾಯಿತಿಗಳಿಗೆ ಮಂಡ್ಯ ಜಿಲ್ಲಾಡಳಿತ ಆದೇ ಹೊರಡಿಸಿತ್ತು.

ಕಾರ್ಯಕ್ರಮಕ್ಕೆ ಸರ್ಕಾರದ ಯೋಜನೆಯ ವಿವಿಧ ಫಲಾನುಭವಿಗಳನ್ನು ಬಸ್ ಮಾಡಿ ಕರೆತರಲು ಹಾಗೂ ಕಾರ್ಯಕ್ರಮದ ಬಳಿಕ ಮರಳಿ ಗ್ರಾಮಗಳಿಗೆ ಬಿಡಲು ಪಂಚಾಯಿತಿ ಸಿಬ್ಬಂದಿಗಳನ್ನು ನೇಮಿಸಬೇಕೆಂದು ಜಿಲ್ಲಾಡಳಿತ ಆದೇಶಿಸಿತ್ತು.
ಈ ಆದೇಶ ಪ್ರತಿಯನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರನ್ನು ಟೀಕಿಸಿರುವ ಕಾಂಗ್ರೆಸ್, ‘ಖಾಲಿ ಕುರ್ಚಿಗಳಿಂದ ನರೇಂದ್ರ ಮೋದಿ ಅವರಿಗೆ ಮುಜುಗರ ಆಗಬಾರದೆಂದು ಬಲವಂತವಾಗಿ ಜನರನ್ನು ಕರೆತರುತ್ತಿರುವಿರಾ ಬಸವರಾಜ ಬೊಮ್ಮಾಯಿ ಅವರೇ? ಜನರ ಹಣದಲ್ಲಿ ಪಕ್ಷದ ಮೆರವಣಿಗೆ ಮಾಡಲು ನಾಚಿಕೆ ಎನಿಸುವುದಿಲ್ಲವೇ?. ಬಿಜೆಪಿ ಕರ್ನಾಟಕ ಜನ ಸೇರಿಸಲು ಇಷ್ಟೊಂದು ಪರದಾಡುತ್ತಿರುವುದು ಕರ್ನಾಟಕದಲ್ಲಿ ಮೋದಿ ಮುಖ ಹಳಸಿದೆ ಎಂಬುದನ್ನು ಸೂಚಿಸುತ್ತದೆ’ ಎಂದು ಹೇಳಿದೆ.