ಕ್ಷುಲಕ ಕಾರಣಕ್ಕೆ ಮುಸ್ಲಿಂ ಸಮುದಾಯದ ವ್ಯಕ್ತಿಯ ಮೇಲೆ ಹಿಂದೂ ಸಂಘಟನೆಯ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮಂಗಳೂರು ಜಿಲ್ಲೆ ಮೂಡಬಿದರೆ ತಾಲ್ಲೂಕಿನಲ್ಲಿ ನಡೆದಿದೆ.
ವೃತ್ತಿಯಲ್ಲಿ ಮೇಸ್ತ್ರಿ ಆಗಿರುವ ಮುಲ್ಲರಪಟ್ನ ನಿವಾಸಿ ಇಸಾಕ್ (45) ಹಲ್ಲೆಗೊಳಗಾದ ಸಂತ್ರಸ್ತ ವ್ಯಕ್ತಿ ಎಂದು ತಿಳಿದು ಬಂದಿದೆ. ಬುಧವಾರ ಬೆಳ್ಳಗ್ಗೆ ಘಟನೆ ನಡೆದಿದ್ದು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಮತ್ತು ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.
ಬಸ್‌ನಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿದ್ದರಿಂದ ಮಹಿಳೆಯೊಬ್ಬರ ಬ್ಯಾಗ್ ಹಿಡಿದು ಇಸಾಕ್ ಕುಳಿತುಕೊಂಡಿದ್ದಾರೆ ನಂತರ ಮಹಿಳೆ ತನ್ನ ಸ್ಟಾಪ್ ಬಂದಾಗ ಆಕೆಗೆ ಬ್ಯಾಗನ್ನ ಕೊಟ್ಟು ಕಳುಹಿಸಿದ್ದಾರೆ. ಈ ವೇಳೆ ಇದನ್ನು ಗಮನಿಸಿದ ಬಸ್ ಕಂಡಕ್ಟರ್ ಕ್ಷುಲಕ ಕಾರಣ ಹೇಳಿ ಇಸಾಕ್‌ನನ್ನು ಬಸ್ಸಿನಿಂದ ಹೊರಗೆ ಕರೆದುಕೊಂಡು ಹೋಗಿ ಗುಡ್ಡಕಾಡು ಪ್ರದೇಶದಲ್ಲಿ ಮರಕ್ಕೆ ಕಟ್ಟಿ ಹಾಕಿ ತನ್ನ ಸಹಚರರೊಮದಿಗೆ ಮನಸ್ಸೋಇಚ್ಚೆ ಥಳಿಸಿದ್ದಾರೆ.
ಸಂಘಪರಿವಾರಕ್ಕೆ ಸೇರಿದ ಆ ಗುಂಪು ಇಸಾಕ್ ಅವರನ್ನು ಆಟೋದಲ್ಲಿ ಕರೆದುಕೊಂಡು ಹೋಗಿ ರಾಯಿ ಎಂಬಲ್ಲಿನ ನಿರ್ಜನ ಪ್ರದೇಶದಲ್ಲಿ ಮರಕ್ಕೆ ಕಟ್ಟಿ ಹಾಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ. ಹಲ್ಲೆಯಿಂದ ಬೆನ್ನು, ಕೈ ಕಾಲುಗಳಿಗೆ ತೀವ್ರ ಗಾಯಗಳಾಗಿವೆ. ನಿರಂತರವಾಗಿ ಹಲ್ಲೆ ನಡೆಸಿದ್ದರಿಂದ ಇಸಾಕ್ ತೀವ್ರ ಅಸ್ವಸ್ಥರಾಗಿದ್ದಾರೆ. ಇದನ್ನು ಕಂಡ ಸಂಘಪರಿವಾರದ ಕಾರ್ಯಕರ್ತರು ಬಳಿಕ ಇಸಾಕ್ ಅವರಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿ ಪೊಲೀಸರಿಗೆ ಕರೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಸಾಕ್ ಅವರನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಹಲ್ಲೆಯಿಂದ ಇಸಾಕ್ ಅವರ ಬೆನ್ನು ಕೈ ಕಾಲುಗಳಲ್ಲಿ ತೀವ್ರವಾದ ಬಾಸುಂಡೆ ಎದ್ದಿದೆ. ಬೆನ್ನಿನಲ್ಲಿ ರಕ್ತ ಹೆಪ್ಪುಗಟ್ಟಿದ್ದು, ತೀವ್ರ ನೋವು ಇದ್ದರೂ ವೈದ್ಯರಲ್ಲಿ ಅದನ್ನು ತೋರಿಸದಂತೆ ಪೊಲೀಸರು ಇಸಾಕ್ ಮೇಲೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ವೈದ್ಯರು ಕೂಡ ಇಸಾಕ್ ಅವರ ಅಂಗಿ ತೆಗೆದು ಪರಿಶೀಲನೆ ನಡೆಸಿಲ್ಲ. ಕೇವಲ ರಕ್ತದೊತ್ತಡ ಪರೀಕ್ಷೆ ಮಾಡಿ ಇಸಾಕ್ ಅವರನ್ನು ಪೊಲೀಸರು ಬಂಟ್ವಾಳ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.
ಇಸಾಕ್ ಕುಟುಂಬಸ್ಥರು ಪೊಲೀಸರಿಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ ಆದರೆ ತಮ್ಮಗೆ ಈ ವಿಚಾರದಲ್ಲಿ ಮುಕ್ತ ಸ್ವಾತಂತ್ರ್ಯವಿಲ್ಲ ಎಂದು ಬಂಟ್ವಾಳ ಪೊಲೀಸರು ಅಸಹಾಯಕತೆ ತೋಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಕುಟುಂಬಸ್ಥರು ಆತಂಕದಲ್ಲಿರುವ ಕಾರಣ ಕಾನೂನು ಸಲಹೆ ಪಡೆದು ಮುಂದಿನ ಹೆಜ್ಜೆ ಇಡುವುದಾಗಿ ತಿಳಿಸಿದೆ.