ರಾಷ್ಟ್ರಮಟ್ಟದಲ್ಲಿ ಆಡಳಿತರೂಢ ಬಿಜೆಪಿಗೆ ಪರ್ಯಾಯ ರಾಜಕೀಯ ಶಕ್ತಿಯನ್ನು ಹುಟ್ಟುಹಾಕುವ ನಿಟ್ಟಿನಲ್ಲಿ ಕಳೆದ ಎರಡು-ಮೂರು ವರ್ಷಗಳಿಂದ ಹಲವು ಪ್ರಯತ್ನಗಳು ನಡೆಯುತ್ತಲೇ ಇವೆ. ಪ್ರತಿ ಬಾರಿಯೂ ಪ್ರತಿಪಕ್ಷಗಳು ಒಂದಾಗಿ, ಒಗ್ಗಟ್ಟಿನ ದನಿ ಮೊಳಗಿಸಿದಾಗಲೂ ಮರುಕ್ಷಣವೇ ಒಡಕಿನ ದನಿಯೂ ಪ್ರತಿಧ್ವನಿಸುತ್ತಲೇ ಇದೆ.
ಹಾಗಾಗಿಯೇ ಭಾರಿ ಜನಾದೇಶದೊಂದಿಗೆ ಬಿಜೆಪಿ ಮತ್ತು ಅದರ ಎನ್ ಡಿಎ ಬಣ ಸತತ ಎರಡನೇ ಬಾರಿ ದಿಲ್ಲಿ ಗದ್ದುಗೆಯನ್ನು ಹಿಡಿದು ಎರಡೂವರೆ ವರ್ಷ ಕಳೆದರೂ ಭಾರೀ ಕಾರ್ಯಕರ್ತರ ಜಾಲ, ಹಣಕಾಸು ಬಲ, ಚುನಾವಣಾ ತಂತ್ರಗಾರಿಕೆಯ ನಿಪುಣ ಶಕ್ತಿಗಳೊಂದಿಗೆ ಜನಪ್ರಿಯತೆ ಮತ್ತು ಮಾಧ್ಯಮಗಳ ಬೆಂಬಲವನ್ನೂ ಹೊಂದಿರುವ ಬಿಜೆಪಿಗೆ ರಾಷ್ಟ್ರೀಯ ಮಟ್ಟದಲ್ಲಿ ಪ್ರಬಲ ಪರ್ಯಾಯವೊಂದು ಅಸ್ತಿತ್ವಕ್ಕೆ ಬರಲು ಸಾಧ್ಯವಾಗಿಲ್ಲ.
ಈ ನಡುವೆ, ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಭಾರೀ ನಿರೀಕ್ಷೆಯ ಹೊರತಾಗಿಯೂ ಅಧಿಕಾರ ಹಿಡಿಯಲಾಗದ ಸೋಲಿನ ಬಳಿಕ ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಸೇರಿದಂತೆ ವಿವಿಧ ಪ್ರತಿಪಕ್ಷಗಳ ನಡುವೆ ಹೊಸ ಭರವಸೆಯೊಂದು ಚಿಗುರಿತ್ತು. ಅಂತಹ ಭರವಸೆಯ ಮೇಲೆಯೇ ಟಿಎಂಸಿ, ಕಾಂಗ್ರೆಸ್, ಎನ್ ಸಿಪಿ, ಡಿಎಂಕೆ, ಆರ್ ಜೆಡಿ, ಎಎಪಿ, ಎನ್ ಸಿ ಮತ್ತು ಶಿವಸೇನಾ ಮುಂತಾದ ಪ್ರಮುಖ ಪ್ರತಿಪಕ್ಷಗಳ ನಾಯಕರ ನಡುವೆ ಹಲವು ಸುತ್ತಿನ ಭೇಟಿ ಮತ್ತು ಮಾತುಕತೆಗಳು ನಡೆದಿದ್ದವು. ಮಾಜಿ ಸಚಿವ ಹಾಗೂ ಒಂದು ಕಾಲದ ಪ್ರಭಾವಿ ಬಿಜೆಪಿ ನಾಯಕ ಯಶವಂತ್ ಸಿನ್ಹಾ ನೇತೃತ್ವದಲ್ಲಿ ಕೂಡ ಪ್ರತಿಪಕ್ಷ ನಾಯಕರು ದೆಹಲಿಯಲ್ಲಿ ಸರಣಿ ಸಭೆ ನಡೆಸಿದ್ದರು.
ವಿಪರ್ಯಾಸವೆಂದರೆ; ಯಾವ ಬಂಗಾಳದ ವಿಧಾನಸಭಾ ಚುನಾವಣೆ ಬಿಜೆಪಿ ವಿರುದ್ಧ ಸಂಘಟಿತರಾಗಲು ಪ್ರತಿಪಕ್ಷಗಳಿಗೆ ಪ್ರೇರಣೆ ನೀಡಿತ್ತೋ, ಅದೇ ಚುನಾವಣೆಯ ಯಶಸ್ಸೇ ಇದೀಗ ಬಿಜೆಪಿಗೆ ಪರ್ಯಾಯ ರಾಜಕೀಯ ಶಕ್ತಿ ರೂಪಿಸುವ ಪ್ರತಿಪಕ್ಷಗಳ ಮಹತ್ವಾಕಾಂಕ್ಷೆಗೆ ಅಡ್ಡಗಾಲಾಗಿ ಪರಿಣಮಿಸಿದೆ. ಮುಖ್ಯವಾಗಿ ಪ್ರಧಾನಿ ಮೋದಿ ಮತ್ತು ಚುನಾವಣಾ ಚಾಣಕ್ಯ ಎಂದೇ ಹೆಸರಾಗಿರುವ ಗೃಹ ಸಚಿವ ಅಮಿತ್ ಶಾ ಅವರ ಎಲ್ಲಾ ತಂತ್ರಗಾರಿಕೆಯನ್ನು ಬುಡಮೇಲು ಮಾಡಿ ಚುನಾವಣಾ ಕಣದಲ್ಲಿ ರಣಭೇರಿ ಭಾರಿಸಿದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು ತಮ್ಮ ಆ ಯಶಸ್ಸಿನ ಪ್ರಭಾವವನ್ನು ರಾಷ್ಟ್ರವ್ಯಾಪಿ ವಿಸ್ತರಿಸುವ ಮತ್ತು ಆ ಮೂಲಕ ದೆಹಲಿ ಗದ್ದುಗೆ ಏರುವ ಮಹತ್ವಾಕಾಂಕ್ಷೆಯಿಂದ ವಿವಿಧ ರಾಜ್ಯಗಳಿಗೆ ಪಕ್ಷವನ್ನು ವಿಸ್ತರಿಸುವ ದಂಡೆಯಾತ್ರೆ ಆರಂಭಿಸಿರುವುದು ಬಿಜೆಪಿಗೆ ಪರ್ಯಾಯ ಶಕ್ತಿ ಕಟ್ಟುವ ಪ್ರಯತ್ನಗಳಿಗೆ ತೊಡಕಾಗಿ ಪರಿಣಮಿಸಿದೆ.

ಅದರಲ್ಲೂ ಮುಖ್ಯವಾಗಿ ಮಹಾರಾಷ್ಟ್ರ, ಗೋವಾ, ಉತ್ತರಪ್ರದೇಶ, ಮೇಘಾಲಯ, ಅಸ್ಸಾಂ ಮತ್ತು ದೆಹಲಿಯಲ್ಲಿ ಕಾಂಗ್ರೆಸ್ ಮತಬ್ಯಾಂಕ್ ಮತ್ತು ನಾಯಕರನ್ನು ಸೆಳೆಯುವ ತೃಣಮೂಲ ಕಾಂಗ್ರೆಸ್ಸಿನ ಪ್ರಯತ್ನಗಳು ಮತ್ತು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ ಅಂತಹ ಕಾರ್ಯಾಚರಣೆಗಳು ಕಾಂಗ್ರೆಸ್ಸಿಗೆ ದೊಡ್ಡ ಪೆಟ್ಟು ನೀಡುತ್ತಿರುವುದು ಕಾಂಗ್ರೆಸ್ ಮತ್ತು ಟಿಎಂಸಿ ನಡುವಿನ ಸಂಬಂಧ ಹಳಸಲು ಕಾರಣವಾಗಿದೆ. ಜೊತೆಗೆ ಕಾಂಗ್ರೆಸ್ ನೇತೃತ್ವದಲ್ಲೇ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಗೆ ಪರ್ಯಾಯ ರಾಜಕೀಯ ಶಕ್ತಿ ಅಸ್ತಿತ್ವಕ್ಕೆ ಬರಲಿದೆ ಎಂಬ ಪ್ರತಿಪಕ್ಷಗಳ ಸಾಮಾನ್ಯ ಪ್ರಸ್ತಾವನೆಗೆ ಪ್ರತಿಯಾಗಿ ಟಿಎಂಸಿ ನಾಯಕಿ, ದೇಶದಲ್ಲಿ ಯುಪಿಎ ಎಲ್ಲಿದೆ ಎಂದು ಕೇಳುವ ಮೂಲಕ, ಕಾಂಗ್ರೆಸ್ ಮತ್ತು ಅದರ ನೇತೃತ್ವದ ಯುಪಿಎ ಬಣವೇ ಅಪ್ರಸ್ತುತ ಎಂಬ ಸಂದೇಶ ನೀಡಿದ ಬಳಿಕ ಈ ನಂಟು ಸಂಪೂರ್ಣ ಕುಸಿದುಬಿದ್ದಿದೆ.
ಈ ನಡುವೆ, ಮಮತಾ ಬ್ಯಾನರ್ಜಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮಿತ್ರಪಕ್ಷ ಮತ್ತು ರಾಷ್ಟ್ರೀಯ ಪರ್ಯಾಯ ರಂಗದ ಪ್ರಮುಖ ಮುಂಚೂಣಿ ನೇತಾರ ಎನ್ ಸಿಪಿ ಯ ಶರದ್ ಪವಾರ್ ಜೊತೆ ಮಾತುಕತೆ ನಡೆಸಿರುವುದು ಮತ್ತು ಅವರೊಂದಿಗೆ ಸಾರ್ವಜನಿಕ ವೇದಿಕೆಯಲ್ಲಿ ನಿಂತು ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದ ವಿರುದ್ಧ ಕಿಡಿಕಾರಿರುವುದು ಕಾಂಗ್ರೆಸ್ ವಲಯದಲ್ಲಿ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ, ಬಹಿರಂಗವಾಗಿ ರಾಷ್ಟ್ರೀಯ ಪರ್ಯಾಯ ರಂಗದ ವಿಷಯ ಪ್ರಸ್ತಾಪಿಸಿ ಮಮತಾ ಅವರ ಮೇಲೆ ಪ್ರಹಾರ ನಡೆಸಿದರೆ, ಬಿಜೆಪಿಗೆ ಪರ್ಯಾಯ ರಂಗ ಕಟ್ಟುವ ಯತ್ನಗಳಿಗೆ ತಾನೇ ಅಡ್ಡಗಾಲು ಹಾಕಿದೆ ಎಂಬ ಟೀಕೆಗೆ ಗುರಿಯಾಗಬೇಕಾದೀತು ಎಂಬ ಕಾರಣಕ್ಕೆ ಕಾಂಗ್ರೆಸ್ ನಾಯಕರು ಎಲ್ಲವನ್ನೂ ಸಹಿಸಿಕೊಂಡಿದ್ದಾರೆ.
ಆದರೆ, ಅದೇ ಹೊತ್ತಿಗೆ ಈವರೆಗೆ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ನಡುವೆ ವಿವಿಧ ರಾಜ್ಯಗಳಿಗೆ ಸೀಮಿತವಾಗಿ ನಡೆಯುತ್ತಿದ್ದ ಅಂತರ್ಯುದ್ಧ ಚಳಿಗಾಲದ ಅಧಿವೇಶದ ಆರಂಭದಿಂದಲೇ ಸಂಸತ್ತಿನ ಒಳಗೂ ಚಾಚಿದೆ. ಆಡಳಿತರೂಢ ಬಿಜೆಪಿಗೆ ಪರ್ಯಾಯವಾಗಿ ಸಂಸತ್ತಿನ ಒಳಗೆ ಪ್ರತಿಪಕ್ಷಗಳು ಒಕ್ಕೊರಲಿನಿಂದ ಹೋರಾಡಬೇಕು ಎಂಬ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಕರೆದಿದ್ದ ಸಭೆಗೆ ಟಿಎಂಸಿ ನಾಯಕರು ಚಿಕ್ಕಾಸಿನ ಬೆಲೆ ನೀಡಿಲ್ಲ. ಹಾಗೇ ರಾಜ್ಯಸಭೆಯ ಪ್ರತಿಪಕ್ಷ ಸಂಸದರನ್ನು ಅಮಾನತು ಮಾಡಿದ ಸ್ಪೀಕರ್ ಕ್ರಮದ ವಿರುದ್ಧ ಒಕ್ಕೊರಲ ಹೋರಾಟ ನಡೆಸುವ ಮೂಲಕ ಒತ್ತಡ ಹೇರುವ ತಂತ್ರಗಾರಿಕೆ ಕುರಿತು ಚರ್ಚಿಸಲು ರಾಜ್ಯಸಭೆಯ ಪ್ರತಿಪಕ್ಷ ನಾಯಕ ಕಾಂಗ್ರೆಸ್ ನ ಮಲ್ಲಿಕಾರ್ಜುನ ಖರ್ಗೆ ಅವರು ಕರೆದಿದ್ದ ಪ್ರತಿಪಕ್ಷಗಳ ಸಭೆಗೂ ಟಿಎಂಸಿ ಗೈರಾಗಿತ್ತು. ಜೊತೆಗೆ ಚಳಿಗಾಲದ ಅಧಿವೇಶದ ಆರಂಭದಿಂದಲೂ ಪ್ರತಿಪಕ್ಷಗಳ ವಿವಿಧ ಬೇಡಿಕೆ ಮೇಲಿನ ಪ್ರತಿಭಟನೆಯಲ್ಲೂ ಟಿಎಂಸಿ ಸಂಸದರು ಕಾಣಿಸಿಕೊಂಡಿಲ್ಲ. ಬದಲಾಗಿ ಅವರು ಪ್ರತ್ಯೇಕ ಪ್ರತಿಭಟನೆ ನಡೆಸಿದ್ದಾರೆ.
ಆ ಹಿನ್ನೆಲೆಯಲ್ಲೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮಂಗಳವಾರ ಕರೆದಿದ್ದ ಪ್ರತಿಪಕ್ಷ ನಾಯಕರ ಸಭೆಗೆ ತೃಣಮೂಲ ಕಾಂಗ್ರೆಸ್ ನಾಯಕಿಗೆ ಆಹ್ವಾನವನ್ನೇ ನೀಡಿರಲಿಲ್ಲ! ಸೋನಿಯಾ ಅವರ ಸಭೆಯಲ್ಲಿ ಎನ್ ಸಿಪಿಯ ಶರದ್ ಪವಾರ್, ಸಿಪಿಐಎಂನ ಸೀತಾರಾಂ ಯೆಚೂರಿ, ಶಿವ ಸೇನಾ ನಾಯಕ ಸಂಜಯ್ ರಾವತ್, ಡಿಎಂಕೆಯ ಟಿ ಆರ್ ಬಾಲು, ಎನ್ ಸಿಯ ಫಾರೂಕ್ ಅಬ್ದುಲ್ಲಾ ಕೂಡ ಭಾಗವಹಿಸಿದ್ದರು. ಜೊತೆಗೆ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಕೂಡ ಸಭೆಯಲ್ಲಿದ್ದರು. ಅದೇ ಹೊತ್ತಿಗೆ ದಕ್ಷಿಣದಲ್ಲಿ ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಮತ್ತು ತಮಿಳು ನಾಡು ಸಿಎಂ ಎಂ ಕೆ ಸ್ಟಾಲಿನ್ ನಡುವೆ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಗೆ ಪರ್ಯಾಯ ಶಕ್ತಿ ರಚನೆಯ ಕುರಿತ ಮಾತುಗಳು ಕೂಡ ನಡೆದವು ಎಂಬುದು ಗಮನಾರ್ಹ.
ಈ ನಡುವೆ ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಕಾಂಗ್ರೆಸ್ ನೊಂದಿಗೆ ಹಳಸಿರುವ ಟಿಎಂಸಿಯ ಸಂಬಂಧದಿಂದಾಗಿ ಬಿಜೆಪಿಯ ಪರ್ಯಾಯ ಶಕ್ತಿ ರಚನೆಯ ವೇದಿಕೆಯಲ್ಲಿ ತೆರವಾಗಿರುವ ಪ್ರಮುಖ ಸ್ಥಾನವನ್ನು ಆಕ್ರಮಿಸುವ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಲು ಶಿವಸೇನಾ ಇನ್ನಿಲ್ಲದ ಯತ್ನ ಮಾಡುತ್ತಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಮತ್ತು ರಾಹುಲ್ ಗುಣಗಾನ ಮಾಡುತ್ತಿದ್ದ ಶಿವಸೇನಾ, ಮಮತಾ ಬ್ಯಾನರ್ಜಿ ಅವರ ಮುಂಬೈ ಭೇಟಿಯ ವೇಳೆಯ ಗಾಂಧಿ ಕುಟುಂಬ ಮತ್ತು ಕಾಂಗ್ರೆಸ್ ವಿರುದ್ಧದ ವಾಗ್ದಾಳಿಗೆ ಪರ್ಯಾಯವಾಗಿ ಕಾಂಗ್ರೆಸ್ ಹೊರತುಪಡಿಸಿ ಪರ್ಯಾಯ ರಾಜಕೀಯ ಶಕ್ತಿ ರಚಿಸುವುದು ಸಾಧ್ಯವಿಲ್ಲ ಎನ್ನುವ ತಿರುಗೇಟು ನೀಡಿತ್ತು.
ಇದೀಗ ಮತ್ತೊಂದು ಬೆಳವಣಿಗೆಯಲ್ಲಿ ಶಿವಸೇನಾ ನಾಯಕ ಹಾಗೂ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಸ್ವತಃ ಕರೆ ಮಾಡಿ ಸೋನಿಯಾ ಅವರೊಂದಿಗೆ ಮಹತ್ವದ ರಾಜಕೀಯ ವಿಷಯಗಳನ್ನು ಚರ್ಚಿಸಿದ್ದಾರೆ. ಮಮತಾ ಮತ್ತು ಶರದ್ ಪವಾರ್ ಭೇಟಿಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸಮ್ಮಿಶ್ರ ಸರ್ಕಾರದ ಬಗ್ಗೆ ಎದ್ದಿದ್ದ ವದಂತಿಗಳು ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಗೆ ಪರ್ಯಾಯ ರಾಜಕೀಯ ಶಕ್ತಿ ಕಟ್ಟುವ ನಿಟ್ಟಿನಲ್ಲಿ ಕೂಡ ಆ ಮಾತುಕತೆಯ ವೇಳೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ತಾನೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಸುಧಾರಿಸಿಕೊಳ್ಳುತ್ತಿರುವ ಠಾಕ್ರೆ, ಬುಧವಾರ ಬೆಳಗ್ಗೆ ಸೋನಿಯಾ ಗಾಂಧಿಯವರೊಂದಿಗೆ ಸುದೀರ್ಘ ದೂರವಾಣಿ ಮಾತುಕತೆ ನಡೆಸಿದ್ದಾರೆ. ಆ ವೇಳೆ, ಕೇವಲ ಪರಸ್ಪರ ಕುಶಲೋಪರಿಯ ಮಾತುಕತೆಗಳಷ್ಟೇ ಅಲ್ಲದೆ ಪ್ರಮುಖ ರಾಜಕೀಯ ವಿಷಯಗಳನ್ನೂ ಚರ್ಚಿಸಿದ್ದಾರೆ. ಜೊತೆಗೆ ಮುಖ್ಯವಾಗಿ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರ ಬಗ್ಗೆ ಕೂಡ ಚರ್ಚೆಯಾಗಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಈ ಮಾತುಕತೆ ಮುಂದಿನ ದಿನಗಳಲ್ಲಿ ಯುಪಿಎಗೆ ಬಲ ನೀಡಲಿದೆಯೇ? ಅಂತಹ ಬಲದ ನಿರೀಕ್ಷೆಯಲ್ಲಿಯೇ ಕಳೆದೊಂದು ವಾರದಿಂದ ಕಾಂಗ್ರೆಸ್ ನಾಯಕಿ ರಾಜಕೀಯವಾಗಿ ಇತ್ತೀಚಿನ ದಿನಗಳಲ್ಲೇ ಅತಿ ಚುರುಕಾಗಿದ್ದಾರೆಯೇ? ಎಂಬ ಪ್ರಶ್ನೆಗಳು ಎದ್ದಿವೆ.
ಅದೇನೇ ಇದ್ದರೂ, ಒಂದು ಕಡೆ ತೃಣಮೂಲ ನಾಯಕಿ ಮಮತಾ ಅವರ ಮಹತ್ವಾಕಾಂಕ್ಷೆ ಬಿಜೆಪಿಯ ಪರ್ಯಾಯ ರಾಜಕೀಯ ಶಕ್ತಿ ರಚನೆಯ ಯತ್ನಗಳಿಗೆ ತೊಡಕಾಗಿದ್ದರೆ, ಮತ್ತೊಂದು ಕಡೆ ಒಂದು ಕಾಲದ ಬಿಜೆಪಿಯ ಆಪ್ತ ಮಿತ್ರ ಪಕ್ಷ ಶಿವಸೇನಾದ ನಾಯಕ ಉದ್ಧವ್ ಠಾಕ್ರೆಯ ಹೊಸ ನಡೆ ಪರ್ಯಾಯ ರಂಗದಲ್ಲಿ ಕಾಂಗ್ರೆಸ್ ಅನಿವಾರ್ಯತೆಯನ್ನು ಗಟ್ಟಿಗೊಳಿಸುತ್ತಿದೆ.