ಸಂಸತ್ತಿನಲ್ಲಿ ವಿದ್ಯುತ್ (ತಿದ್ದುಪಡಿ), 2020 ಮಸೂದೆಯನ್ನು ಮಂಡಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರೋಧಿಸಿದ್ದಾರೆ. ಈ ಮಸೂದೆಯು “ಜನವಿರೋಧಿ” ಮತ್ತು ದೇಶದ ಒಕ್ಕೂಟ ರಚನೆಗೆ ವಿರುದ್ಧವಾಗಿರುವುದರಿಂದ ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ಬ್ಯಾನರ್ಜಿ ಅವರು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಮಮತಾ ಪ್ರಧಾನಿಗೆ ಬರೆದ ಪತ್ರದಲ್ಲಿ ಮಸೂದೆಯನ್ನು “ಏಕಪಕ್ಷೀಯ ನಿರ್ಧಾರ” ಎಂದು ಟೀಕಿಸಿದ್ದಾರೆ. ಸಂವಿಧಾನದ ಸಮಕಾಲೀನ ಪಟ್ಟಿಯಲ್ಲಿ ವಿದ್ಯುತ್ ಇದ್ದರೂ, ಕೇಂದ್ರವು ರಾಜ್ಯಗಳೊಂದಿಗೆ ಯಾವುದೇ ಸಮಾಲೋಚನೆಗಳನ್ನು ನಡೆಸದೆ ಏಕಪಕ್ಷೀಯ ನಡೆಯನ್ನು ಮುಂದುವರೆಸಿದೆ ಎಂದು ಆರೋಪಿಸಿದ್ದಾರೆ.
ಪ್ರಸ್ತುತ ಸಂದರ್ಭದಲ್ಲಿ ಕೆಲವು ಸಮಾಲೋಚನೆಗಳ ಅಗತ್ಯ ಇದೆ. ಆದರೆ, ಇದು ಯಾವುದೇ ವಿಶ್ಲೇಷಣೆಗಳಿಲ್ಲದೆ ತೆಗೆದುಕೊಂಡ ನಿರ್ಧಾರವಾಗಿದ್ದು, ಇದು ನಮ್ಮ ರಾಜಕೀಯದ ಒಕ್ಕೂಟ ರಚನೆಗೆ ವಿರುದ್ಧವಾಗಿದೆ ಎಂದು ಮಮತಾ ತಿಳಿಸಿದ್ದಾರೆ.
ಕಳೆದ ವರ್ಷವೂ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದ ಅವರು, ಈ ಮಸೂದೆಗೆ ತಾನು ವಿರುದ್ಧವಾಗಿರುವುದಾಗಿ ತಿಳಿಸಿದ್ದರು. ವಿದ್ಯುತ್ ಕ್ಷೇತ್ರದಲ್ಲಿ ರಾಜ್ಯಗಳ ಪಾತ್ರವನ್ನು ಖಾಸಗಿ ವಲಯದ ಪರವಾಗಿ ಮಸೂದೆ ಇರುವುದರಿಂದ ಅದು ರಾಜ್ಯಗಳ ಪಾತ್ರವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು.
ಈ ಮಸೂದೆಯು ರಾಜ್ಯಗಳ ಸಾರ್ವಜನಿಕ ವಲಯದ ಉದ್ದಿಮೆಗಳ ಶಕ್ತಿಯನ್ನು ಕುಂದಿಸುತ್ತದೆ ಹಾಗೂ ಕಾರ್ಪೊರೇಟ್ ಮಾದರಿಯ ಕಂಪೆನಿಗಳನ್ನು ಅವಲಂಬಿಸುವಂತೆ ಒತ್ತಾಯಿಸುತ್ತದೆ. ಈ ವಿಧಾನವು ಖಾಸಗಿಯವರಿಗೆ ಲಾಭದಾಯಕವಾಗಲಿದ್ದು, ಬಡ ಮತ್ತು ಗ್ರಾಮೀಣ ಗ್ರಾಹಕರನ್ನು ಸಾರ್ವಜನಿಕ ವಲಯದ ಡಿಸ್ಕಾಮ್‌ಗಳಿಂದ ವಿಮುಖರಾಗುವಂತೆ ಮಾಡುತ್ತದೆ ಎಂದು ಅವರು ಆರೋಪಿಸಿದ್ದಾರೆ.
ಖಾಸಗಿ ಸಂಸ್ಥೆಗಳನ್ನು ಆಯ್ಕೆ ಮಾಡಲು ಅವಕಾಶ ನೀಡುವುದು ಸಾರ್ವಜನಿಕ ನೀತಿಗಳ ಗುರಿಯಾಗಿರಬಾರದು. ವಿಶೇಷವಾಗಿ ವಿದ್ಯುತ್‌ನಂತಹ ವಲಯದಲ್ಲಿ ಈ ರೀತಿ ಖಾಸಗಿ ವಲಯ ಮೊರೆ ಹೋಗುವಂತಹ ಅನಿವಾರ್ಯತೆ ಸೃಷ್ಟಿಸಬಾರದು ಎಂದು ಮಮತಾ ಪತ್ರದಲ್ಲಿ ತಿಳಿಸಿದ್ದಾರೆ.
ಮಸೂದೆಯ ಉದ್ದೇಶವು ಗ್ರಾಹಕರಿಗೆ “ಬಹು ಆಯ್ಕೆಗಳನ್ನು” ಒದಗಿಸುವುದಾಗಿದೆ . ಇದು ಅಂತಿಮವಾಗಿ ಸುಂಕ ಏರಿಕೆಯ ಮೂಲಕ ಹೊಸ ಸೇವಾ ಪೂರೈಕೆದಾರರಿಂದ ಖಾಸಗಿ ಸಂಸ್ಥೆಗಳಿಗೆ ಲಾಭದಾಯಕವಾಗುವುದರ ಮೂಲಕ ಕೊನೆಗೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.