ಟ್ವಿಟರ್ ವಿರುದ್ಧ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಂಘರ್ಷವನ್ನು ಮಮತಾ ಬ್ಯಾನರ್ಜಿ ಕಟುವಾಗಿ ಟೀಕಿಸಿದ್ದಾರೆ.

ತನಗೆ ವಿಧೇಯವಾಗದಿರುವುದನ್ನು ಬಲವಂತವಾಗಿ ಹತೋಟಿಯಲ್ಲಿಡಲು ಮೋದಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹೇಳಿದ್ದಾರೆ. ತನ್ನೊಂದಿಗೂ ಕೇಂದ್ರ ಸರ್ಕಾರ ಇದೇ ರೀತಿ ವರ್ತಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಟ್ವಿಟರ್ ಅನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ, ಹಾಗಾಗಿ ಅದನ್ನು ಧ್ವಂಸಗೊಳಿಸಲು ನೋಡುತ್ತಿದೆ. ನನ್ನನ್ನೂ ಅವರಿಗೆ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲವೆಂದು, ನನ್ನ ಸರ್ಕಾರವನ್ನು ಧ್ವಂಸಗೊಳಿಸಲು ಇನ್ನಿಲ್ಲದ ಪ್ರಯತ್ನ ಪಡುತ್ತಿದೆ ಎಂದು ಹೇಳಿರುವ ಅವರು ಟ್ವಿಟರ್ ಮೇಲಿನ ಆಕ್ರಮಣವನ್ನು ತೀವ್ರವಾಗಿ ಖಂಡಿಸಿದ್ದಾರೆ.

ನೂತನ ಐಟಿ ನಿಯಮಗಳನ್ನು ಪಾಲಿಸದಿರುವುದು ಮತ್ತು ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕಡ್ಡಾಯವಾಗಿರುವ ಪ್ರಮುಖ ಸಿಬ್ಬಂದಿಯನ್ನು ನೇಮಿಸುವಲ್ಲಿ ವಿಫಲವಾದ ಕಾರಣ ಟ್ವಿಟರ್ ಭಾರತದಲ್ಲಿ ಕಾನೂನು ರಕ್ಷಣೆಯನ್ನು ಕಳೆದುಕೊಂಡಿದೆ. ಆದ್ದರಿಂದ ಈಗ ಟ್ವಿಟರ್‌ನಲ್ಲಿ ವ್ಯಕ್ತಿಯೊಬ್ಬರು ಯಾವುದೆ ಆಕ್ಷೇಪಾರ್ಹ ವಿಷಯಗಳನ್ನು ಹಾಕಿದರೆ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಟ್ವಿಟರ್ ಮೇಲೆ ಕೂಡಾ ಕ್ರಮ ಕೈಗೊಳ್ಳಬಹುದಾಗಿದೆ.

ಮಾತ್ರವಲ್ಲದೆ, ಬಿಜೆಪಿ ನಾಯಕರ ʼಕಾಂಗ್ರೆಸ್ ಟೂಲ್‌ಕಿಟ್ʼ ಟ್ವೀಟ್‌ಗಳಿಗೆ ಮ್ಯಾನಿಪುಲೇಟೇಡ್ ಮೀಡಿಯಾ ಎಂಬ ಅಡಿಬರೆಹ ಹಾಕಿದ ವಿಚಾರವಾಗಿ ಕೂಡಾ ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಟ್ವಿಟರ್ ಗುರಿಯಾಗಿದ್ದು, ಟ್ವಿಟರ್‌ನ ಭಾರತದ ಎಂಡಿ ವಿರುದ್ಧ ವಿಚಾರಣೆಗಾಗಿ ದೆಹಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆಯ ಭಾಗವಾಗಿ ಬೆಂಗಲೂರಿಗೆ ದೆಹಲಿ ಪೊಲೀಸರು ದೌಡಾಯಿಸಿದ್ದು, ಎಂಡಿ ಮನೀಷ್ ಮಹೇಶ್ವರಿಯನ್ನು ನಿರಂತರ ಎರಡು ಗಂಟೆಗಳ ಕಾಲ ಪೊಲೀಸರ ತಂಡ ವಿಚಾರಣೆ ನಡೆಸಿದೆ.