ಯಾದಗಿರಿ : ಮಲ್ಲಿಕಾರ್ಜುನ ಮುತ್ಯಾ, ಯಾದಗಿರಿ ಜಿಲ್ಲೆಯಲ್ಲಿ ಪವಾಡ ಪುರುಷ ಎಂದು ಕರೆಸಿಕೊಂಡಿದ್ದಾರೆ. ಅವರು ಮಹಲ್ ರೋಜಾ ಗ್ರಾಮದಲ್ಲಿ ಒಂದು ಮಠ ನಡೆಸುತ್ತಿದ್ದು, ಸಾವಿರಾರು ಭಕ್ತರನ್ನು ಹೊಂದಿದ್ದಾರೆ. ಮುತ್ಯಾ ತಮ್ಮನ್ನು ದೇವಮಾನವ ಎಂದು ಘೋಷಿಸಿಕೊಂಡಿದ್ದರು. ಆದರೆ ಇದೀಗ ಅನುಚಿತ ವರ್ತನೆ ಮಾಡಿದ ಆರೋಪದಡಿ ಪೋಕ್ಸೋ (POCSO) ಪ್ರಕರಣದಲ್ಲಿ ಸಿಲುಕಿರುವ ಸ್ವಯಂ ಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ವಿಚಾರಣೆಗೆ ಹಾಜರಾಗಿದ್ದಾರೆ. ಪೋಕ್ಸೋ ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಮಲ್ಲಿಕಾರ್ಜುನ ಮುತ್ಯಾ ಈಗ ಪ್ರತ್ಯಕ್ಷರಾಗಿ ಪೊಲೀಸರ ವಿಚಾರಣೆ ಎದುರಿಸಿದ್ದಾರೆ.

ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ಪೊಲೀಸರು, ಶಹಾಪುರ ಸಿಪಿಐ ಕಚೇರಿಯಲ್ಲಿ ವಿಚಾರಣೆ ನಡೆಸಿದ್ದಾರೆ. ಆರು ಗಂಟೆಗಳ ಕಾಲ ವಿಚಾರಣೆ ಎದುರಿಸಿದ ಮಲ್ಲಿಕಾರ್ಜುನ ಮುತ್ಯಾ, ತನಿಖಾ ತಂಡದ ಎಲ್ಲಾ ಪ್ರಶ್ನೆಗಳಿಗೂ ಸಮಾಧಾನದಿಂದ ಉತ್ತರಿಸಿದ್ದಾರೆ ಎನ್ನಲಾಗುತ್ತಿದೆ.

ವಿಚಾರಣೆ ಎದುರಿಸಿದ ಬಳಿಕ ಹೊರಬಂದು ಮಾತನಾಡಿದ ಮಲ್ಲಿಕಾರ್ಜುನ ಮುತ್ಯಾ ಮಠದ ಜಾತ್ರೆ ಹಿನ್ನೆಲೆಯಲ್ಲಿ ನಾನು ಹೊರಗೆ ಹೋಗಿದ್ದೇನೆ, ನನಗೆ ಜ್ವರ ಬಂದಿತ್ತು, ಆಸ್ಪತ್ರೆಯಲ್ಲಿದ್ದೆನು, ಗೋಗಿ ಪೊಲೀಸರು ನೋಟಿಸ್ ನೀಡಿದ ಬಳಿಕ ನಾನು ವಿಚಾರಣೆಗೆ ಬರುತ್ತೇನೆ ಎಂದು ವಿಡಿಯೋ ಮಾಡಿ ಬಿಟ್ಟಿದ್ದೆನು, ಕಾನೂನಿಗೆ ತಲೆಬಾಗಿ ವಿಚಾರಣೆಗೆ ಬಂದಿದ್ದೇನೆ, ನಾನು ಯಾವುದೇ ತಪ್ಪು ಮಾಡಿಲ್ಲ, ವಿಚಾರಣೆಗೆ ಪೊಲೀಸರು ಕರೆದಾಗ ಮತ್ತೆ ಬರುತ್ತೇನೆ ಎಂದು ಹೇಳಿದ್ದಾರೆ.
ಅಪ್ರಾಪ್ತ ಬಾಲಕಿಯೊಂದಿಗೆ ಮಲ್ಲಿಕಾರ್ಜುನ ಮುತ್ಯಾ ಅನುಚಿತ ವರ್ತನೆ, ಪೋಕ್ಸೋ ಪ್ರಕರಣ ಸಂಬಂಧ ಮಲ್ಲಿಕಾರ್ಜುನ ಮುತ್ಯಾ ಮೊಬೈಲ್ ಜಫ್ತಿ ಮಾಡಿದ್ದಾರೆ. ವಿಚಾರಣೆ ಮುಗಿಸಿ ಮುತ್ಯಾ ಶಹಾಪುರ ಗ್ರಾಮೀಣ ಸಿಪಿಐ ಠಾಣೆಯಿಂದ ಕಾರಿನಲ್ಲಿ ತೆರಳಿದ್ದಾರೆ. ವಿಚಾರಣೆ ಬಳಿಕ ಮಲ್ಲಿಕಾರ್ಜುನ ಮುತ್ಯಾ ಹೊರಗೆ ಬರುತ್ತಿದ್ದಂತೆ ಭಕ್ತರು ಬೆನ್ನು ಬಿದ್ದಿದ್ದರು. ಕಾರು ಏರುವಾಗ ವೃದ್ಧ ಭಕ್ತನೊಬ್ಬನನ್ನು ತಬ್ಬಿಕೊಂಡು ಕಾರು ಏರಿ ಹೊರಟು ಹೋಗಿದ್ದಾರೆ.






