ಮೈಸೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವಕಾಶವಾದಿ ರಾಜಕಾರಣಿಯಾಗಿದ್ದು, ಅವರನ್ನ ನಾಯಕರೆಂದು ದಲಿತರು ಪರಿಗಣಿಸಿಲ್ಲ ಎಂದು ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಟೀಕಿಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆಯಲ್ಲಿ ಸೋತು ಅಲ್ಲಿಗೆ ಹೋಗಿದ್ದಾರೆ. ಅವರು ಎಐಸಿಸಿ ಅಧ್ಯಕ್ಷರಾಗಿರುವುದರಿಂದ ಯಾವುದೇ ಬದಲಾವಣೆ ಆಗುವುದಿಲ್ಲ. ಅಲ್ಲದೇ ಖರ್ಗೆ ಎಂದಿಗೂ ದಲಿತರ ಪರ ಹೋರಾಟ ಮಾಡಿಲ್ಲ. ಅವರೊಬ್ಬ ಅವಕಾಶವಾದಿ ರಾಜಕಾರಣಿ ಆಗಿದ್ದು, ಅಧಿಕಾರಕ್ಕೆ ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ಖರ್ಗೆ ಅವರನ್ನ ನಾಯಕರೆಂದು ದಲಿತರು ಪರಿಗಣಿಸಿಲ್ಲ ಎಂದರು.
ದೇಶದಲ್ಲಿ ಕಾಂಗ್ರೆಸ್ ನೆಲಕಚ್ಚಿದ್ದು, ಕೇಂದ್ರದಲ್ಲಿ ನಾಯಕತ್ವವೇ ಇಲ್ಲದ ಪರಿಸ್ಥಿತಿ ಬಂದಿದೆ. ರಾಜ್ಯದಲ್ಲಿ ಅಲ್ಪಸ್ವಲ್ಪ ಸಂಘಟನೆ ಮಾಡುತ್ತಿದ್ದಾರೆ. ಆದರೆ ಚುನಾವಣೆಯಲ್ಲಿ ಗೊತ್ತಾಗುತ್ತದೆ. ಇನ್ನೂ ಪ್ರತಿ ಪಕ್ಷದ ನಾಯಕರು ಎಲ್ಲಿಂದ ಸ್ಪರ್ಧೆ ಮಾಡುತ್ತೇವೆ ಎಂದು ಹೇಳಲು ಹೆದರಿಕೊಂಡಿದ್ದಾರೆ. ಹೀಗಿರುವಾಗ ಚುನಾವಣೆಯಲ್ಲಿ ಅವರಿಗೆ ಬಹುಮತ ಬರಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಬಿಜೆಪಿ ಕಾರ್ಯಕ್ರಮಗಳು ಉತ್ತಮವಾಗಿ ನಡೆಯುತ್ತಿದೆ. ಸರ್ಕಾರ ಜನರಿಗೆ ಉತ್ತಮ ಕಾರ್ಯಕ್ರಮಗಳನ್ನು ನೀಡುತ್ತಾ, ಜನರಿಗೆ ಸ್ಪಂದಿಸುತ್ತಿದೆ. ಆದರೂ ವಿರೋಧ ಪಕ್ಷದವರು ಸುಮ್ಮನೆ ಬೊಬ್ಬೆ ಹಾಕುತ್ತಿದ್ದು, ಮೀಸಲಾತಿ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಎಲ್ಲದಕ್ಕೂ ಸಿಎಂ ಚೆನ್ನಾಗಿ ಉತ್ತರ ಕೊಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಲ್ಲದೇ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬಲಿಷ್ಠವಾಗಲು ಅಮಿತ್ ಶಾ ಅವರು ಯೋಜನೆ ರೂಪಿಸುತ್ತಿದ್ದು, ಪಕ್ಷ ಸಂಘಟನೆಗೆ ಒತ್ತು ನೀಡಿದ್ದಾರೆ. ಮೈಸೂರು-ಚಾಮರಾಜನಗರ, ಕೋಲಾರ-ತುಮಕೂರು ಸೇರಿ ಹಳೆ ಮೈಸೂರು ಭಾಗದಲ್ಲಿ ಗೆದ್ದಿದ್ದೇವೆ. ಪಕ್ಷಕ್ಕೆ ಉತ್ತಮ ಬೇಸ್ ಇದೆ. ಜೊತೆಗೆ ಕಳೆದ ಸಂಸತ್ ಚುನಾವಣೆಯಲ್ಲಿ ನಮಗೆ ಬೇಸ್ ಸಿಕ್ಕಿದೆ. ಹೀಗಾಗಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಡಿಯೂರಪ್ಪ-ವಿಜಯೇಂದ್ರ ಅವರನ್ನ ಕಡೆಗಣಿಸುತ್ತಿದ್ದಾರೆ ಎಂಬ ವಿಷಯ ಪಕ್ಷಕ್ಕೆ ಸೀಮಿತವಾಗಿದೆ. ಅದನ್ನ ನಾವು ಸರಿಪಡಿಸಿಕೊಳ್ಳುತ್ತೇವೆ. ಯಡಿಯೂರಪ್ಪ ನಮ್ಮ ಪಕ್ಷದ ದೊಡ್ಡ ಮುಖಂಡರು. ಅವರೇ ಒಪ್ಪಿ ಸಿಎಂ ಸ್ಥಾನವನ್ನ ಬಿಟ್ಟುಕೊಟ್ಟಿದ್ದಾರೆ. ವಿಜಯೇಂದ್ರ ರಾಜ್ಯ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದು, ಯಾವ ತೊಂದರೆ ಇಲ್ಲ ಎಂದ ಅವರು, ನಮ್ಮದು ರಾಷ್ಟ್ರೀಯ ಪಕ್ಷವಾಗಿದ್ದು, ಪಕ್ಷಕ್ಕೆ ಯಾವ ಕೊರತೆ ಇಲ್ಲ. ಒಳ್ಳೆಯ ಸಂಘಟನೆ, ನಾಯಕತ್ವ, ಆಡಳಿತ ಇದೆ ಎಂದರು.