ಇವತ್ತು ಮಕರ ಸಂಕ್ರಾಂತಿ ಸಂಭ್ರಮ ನಾಡಿನೆಲ್ಲೆಡೆ ಮನೆ ಮಾಡಿದೆ. ಶಬರಿಮಲೆಯಲ್ಲಿ ಮಕರ ಸಂಕ್ರಮಣ ಜ್ಯೋತಿ ನೋಡಲು ಭಕ್ತ ಸಾಗರವೇ ಹರಿದು ಬಂದಿದೆ. ಶಬರಿಮಲೆಯಲ್ಲಿ ಮಕರ ಜ್ಯೋತಿ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಈಗಾಗಲೇ ಸೇರಿದ್ದು, ಇಂದು ಪಂದಳದಿಂದ ಅಯ್ಯಪ್ಪ ಸ್ವಾಮಿಗೆ ತಿರುವಾಭರಣ ಕಣ್ತುಂಬಿಕೊಳ್ಳಲು ಬೆಟ್ಟದ ಮಾರ್ಗದಲ್ಲೂ ಭಕ್ತರು ಮೊಕ್ಕಾಂ ಹೂಡಿದ್ದಾರೆ. ಪಟ್ಟಾಭಿಷೇಕವನ್ನು ತೊರೆದು ಬಂದ ಅಯ್ಯಪ್ಪ ಸ್ವಾಮಿ, ಶಬರಿಗಿರಿಯಲ್ಲಿ ನೆಲೆಸಿದ್ದಾನೆ.

ಕರ್ನಾಟಕದಿಂದಲೂ ಪ್ರತಿವರ್ಷ ಸಾಕಷ್ಟು ಭಕ್ತರು ಶಬರಿಮಲೆಗೆ ತೆರಳುತ್ತಾರೆ. ಈ ವರ್ಷವೂ ಸಾಕಷ್ಟು ಭಕ್ತರು ಈಗಾಗಲೇ ಶಬರಿಮಲೆಯಲ್ಲಿ ಸೇರಿದ್ದಾರೆ. 48 ದಿನಗಳ ಕಾಲ ಕಠಿಣ ವ್ರತ ಮಾಡಿ ಸಕ್ರಮಣದಂದು ಜ್ಯೋತಿ ರೂಪದಲ್ಲಿ ದರ್ಶನ ನೀಡುವ ಅಯ್ಯಪ್ಪನನ್ನು ಕಣ್ತುಂಬಿಕೊಳ್ಳಲು ಭಕ್ತರು ಉತ್ಸುಕರಾಗಿದ್ದಾರೆ. ಭಕ್ತರನ್ನು ನಿಯಂತ್ರಿಸಲು ಕೇರಳ ಸರ್ಕಾರ ಹಾಗು ಶಬರಿಮಲೆ ದೇವಸ್ವಯಂ ಬೋರ್ಡ್ ಸಾಕಷ್ಟು ತಯಾರಿ ಮಾಡಿಕೊಂಡಿದೆ.

ಕಳೆದ ಬಾರಿಯಷ್ಟು ಶಬರಿಮಲೆಯಲ್ಲಿ ಭಕ್ತರಿಲ್ಲ ಎನ್ನಲಾಗ್ತಿದೆ. ಕೇರಳ ಸರ್ಕಾರವೂ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದು, ಇಂದು ಸಂಜೆ 6.30ರ ಸುಮಾರಿಗೆ ಕೃಷ್ಣ ಗರುಡು ಬಂದು ದೇವಸ್ಥಾನದ ಗರುಡಕಂಬ ಸುತ್ತಿದ ಬಳಿಕ ಪೊನ್ನಂಬಲ ಮೇಡುವಿನಲ್ಲಿ ಜ್ಯೋತಿ ದರ್ಶನ ಆಗುತ್ತದೆ.

ಈಗಾಗಲೇ ಜನವರಿ 12 ರಂದು ಪಂದಳದಿಂದ ಹೊರಟಿರುವ ತಿರುವಾಭರಣ, ಇಂದು ಸಂಜೆ 6.30 ರ ವೇಳೆಗೆ ಅಯ್ಯಪ್ಪ ಸ್ವಾಮಿ ಸನ್ನಿಧಾನವನ್ನು ತಲುಪಲಿದೆ. ತಿರುವಾಭರಣವನ್ನು ಅಯ್ಯಪ್ಪ ಸ್ವಾಮಿಗೆ ಧರಿಸಿ ದೀಪಾರಾಧನೆ ಮಾಡಲಾಗುತ್ತದೆ. ದೀಪಾರಾಧನೆ ವೇಳೆ ಪೊನ್ನಂಬಲ ಮೇಡುನಲ್ಲಿ ಬೆಳಗುವ ಮಕರ ಜ್ಯೋತಿ ಕಾಣಿಸಿಕೊಳ್ಳುತ್ತದೆ.

ಮಕರ ಜ್ಯೋತಿಯನ್ನು ಕಾಣಲು ಶಬರಿಮಲೆಯಲ್ಲಿ ನೆರೆದಿರುವ ಭಕ್ತರು ಕಾಯುತ್ತಿರುತ್ತಾರೆ. ಶಬರಿಮಲೆ ಸನ್ನಿಧಾನದ ಎತ್ತರದ ಭಾಗದಲ್ಲಿ, ಗಣೇಶ್ ಬೆಟ್ಟ, ನೀಲಕಲ್‌ನಲ್ಲಿ ಮಕರ ಜ್ಯೋತಿಯನ್ನೂ ಕಣ್ತುಂಬಿಕೊಳ್ಳಲಿದ್ದಾರೆ.










