ಶಿವಮೊಗ್ಗ ಕೋಮು ಗಲಭೆಗೆ ಕಾರಣವಾದ ಯುವಕ ಹರ್ಷ ಎಂಬಾತನ ಕೊಲೆ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದ್ದು, ಆತನ ಕೊಲೆಗೆ ಕೆಲವೇ ಕ್ಷಣಗಳ ಮುಂಚೆ ಇಬ್ಬರು ಯುವತಿಯರು ಆತನಿಗೆ ವೀಡಿಯೋ ಕಾಲ್ ಮಾಡಿ, ತಮಗೆ ಸಹಾಯ ಮಾಡುವಂತೆ ಕೋರಿದ್ದರು ಎಂಬ ಸಂಗತಿ ಪೊಲೀಸ್ ತನಿಖೆಯ ವೇಳೆ ಹೊರಬಿದ್ದಿದ್ದೆ.
ಫೆಬ್ರವರಿ 20 ರ ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಶಿವಮೊಗ್ಗ ನಗರದ ಸೇಗೆಹಟ್ಟಿ ಪ್ರದೇಶದ ಹರ್ಷ ಎಂಬಾತನನ್ನು ಆತನ ಮನೆಯ ಸಮೀಪದ ಎನ್ ಟಿ ರಸ್ತೆಯ ಕಾಮತ್ ಪೆಟ್ರೊಲ್ ಬಂಕ್ ಬಳಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಆ ಘಟನೆಗೆ ಕೆಲವೇ ಕ್ಷಣಗಳ ಮುಂಚೆ ಹರ್ಷನಿಗೆ ಇಬ್ಬರು ಹುಡುಗಿಯರು ವಿಡಿಯೋ ಕಾಲ್ ಮಾಡಿ ಸಹಾಯ ಕೋರಿದ್ದರು ಎಂಬ ಮಾಹಿತಿಯನ್ನು ಹರ್ಷನ ಸ್ನೇಹಿತ ಪೊಲೀಸ್ ವಿಚಾರಣೆಯ ವೇಳೆ ಬಹಿರಂಗಪಡಿಸಿದ್ದಾನೆ.
ಕೊಲೆಯಾದ ದಿನ ರಾತ್ರಿ ಘಟನೆಗೆ ಮುನ್ನ ಹರ್ಷನಿಗೆ ವಿಡಿಯೋ ಕಾಲ್ ಬಂದಿತ್ತು. ಇಬ್ಬರು ಅಪರಿಚಿತ ಹುಡುಗಿಯರು ಆ ವೀಡಿಯೋ ಕರೆ ಮಾಡಿದ್ದರು. ಅವರು ಇಬ್ಬರು ಆ ಮೊದಲೂ ಅಂತಹ ಕರೆ ಮಾಡುತ್ತಿದ್ದರು. ಘಟನೆಗೆ ಮುಂಚೆ ಕೂಡ ಹರ್ಷನಿಗೆ ಫೋನ್ ಮಾಡಿ ನಾನು ನಿಮ್ಮ ಫ್ರೆಂಡ್ ಎಂದು ಮಾತನಾಡುತ್ತಿದ್ದರು. ಆ ಕರೆಯ ಬಳಿಕ ಹರ್ಷ ಮನೆಯಿಂದ ಹೊರಗೆ ಬಂದಾಗ ಆತನ ಜೊತೆ ನಾವಿಬ್ಬರು ಸ್ನೇಹಿತರು ಕೂಡ ಜೊತೆಗಿದ್ದೆವು ಎಂಬ ಸಂಗತಿಯನ್ನು ಆತನ ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ರಾತ್ರಿ ಊಟಕ್ಕೆ ಹೊರಗೆ ಹೋಗಲು ಹರ್ಷ ಹೇಳಿದಾಗ ನಾವು ಬೈಕ್ ತೆಗೆದುಕೊಂಡು ಊಟಕ್ಕೆ ಹೋಗೋಣ ಎಂದೆವು. ಆದರೆ ಹರ್ಷ, ಇಲ್ಲ ನಡೆದು ಕೊಂಡು ಹೋಗೋಣ ಎಂದು ಹೇಳಿದ್ದ. ಹಾಗಾಗಿ ನಡೆದುಕೊಂಡು ಹೊರಟೆವು. ಆದರೆ, ಸ್ವಲ್ಪ ದೂರ ನಡೆದುಕೊಂಡು ಹೋದ ಮೇಲೆ ಇದ್ದಕ್ಕಿದ್ದಂತೆ ಬೈಕ್ ತೆಗೆದುಕೊಂಡು ಬನ್ನಿ ಹೋಗಿ ಎಂದು ಆತನೇ ಕಳುಹಿಸಿದ್ದ. ಆದರೆ ನಾವು ವಾಪಸ್ ಹೋಗಿ ಬೈಕ್ ತೆಗೆದುಕೊಂಡು ಬರುವಷ್ಟರಲ್ಲಿ ಆತನ ಮೇಲೆ ದಾಳಿ ನಡೆದಿದೆ ಎಂದು ಸ್ನೇಹಿತ ತನಿಖಾಧಿಕಾರಿಗಳಿಗೆ ವಿವರಿಸಿದ್ದಾನೆ.
ಭಾರತಿ ಕಾಲೋನಿಯಿಂದ ಎನ್.ಟಿ. ರಸ್ತೆಗೆ ಬರುತ್ತಿದ್ದಂತೆ ಹರ್ಷನ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ನಾವು ಬೈಕ್ ತೆಗೆದುಕೊಂಡು ಬರುವಷ್ಟರಲ್ಲಿ ಹರ್ಷ ಕೊಲೆಯಾದ ವಿಷಯವನ್ನು ಫೋನ್ ಮಾಡಿ ತಿಳಿಸಿದರು. ನಾವು ನೋಡಿದಾಗ ಖಾಸಿಫ್ ಬ್ಯಾಟ್ ಹಿಡಿದು ಕೊಂಡು ನಿಂತಿದ್ದ ಕಳೆದ ಒಂದು ವಾರದಿಂದ ಅವರು ಹರ್ಷನನ್ನು ಹಿಂಬಾಲಿಸಿ ಕೊಲೆ ಮಾಡಿದ್ದಾರೆ ಎಂದು ಆ ಸ್ನೇಹಿತ ಹೇಳಿದ್ದಾನೆ.
ಆದರೆ, ಹರ್ಷನ ಫೋನ್ ಪತ್ತೆಯಾಗಿಲ್ಲ. ಪೊಲೀಸರು ಫೋನ್ ಪತ್ತೆಗಾಗಿ ಪ್ರಯತ್ನಿಸುತ್ತಿದ್ದು ಫೋನ್ ಪತ್ತೆಯಾದಲ್ಲಿ ಕರೆ ಮಾಡಿದವರ ವಿವರ ಮತ್ತು ಕೊಲೆಗೂ ಆ ಫೋನ್ ಕರೆಗೂ ಇರುವ ನಂಟು ಬಯಲಾಗಲಿದೆ.
ಈ ನಡುವೆ, ಪ್ರಕರಣದಲ್ಲಿ ಬಂಧಿತರಾಗಿರುವ ಖಾಸೀಫ್ ಮತ್ತು ಆತನ ಸಹಚರರಿಗೂ ಮತ್ತು ಹರ್ಷನಿಗೂ ಹಿಂದಿನಿಂದಲೂ ಧರ್ಮ ಮತ್ತು ಕೋಮು ವಿಷಯಕ್ಕೆ ಸಂಬಂಧಿಸಿದಂತೆ ಸಂಘರ್ಷವಿತ್ತು. ಹರ್ಷ ಸೀಗೆಹಟ್ಟಿ ಬೀದಿಗಳಲ್ಲಿ ಹಿಂದೂ ಹುಲಿ ಎಂದು ಗುರುತಿಸಿಕೊಂಡಿದ್ದರ, ಖಾಸೀಫ್ ಮುಸ್ಲಿಂ ಬಾಹುಳ್ಯದ ಇಮಾಮ್ ಬಾಡಾ ಪ್ರದೇಶದಲ್ಲಿ ಮುಸ್ಲಿಂ ಧರ್ಮರಕ್ಷಕ ಎಂಬಂತೆ ಖಟ್ಟರ್ ವಾದಿಗಳಾಗಿದ್ದರು.
ಆದರೆ ಖಾಸೀಫ್ ಮತ್ತು ಆತನ ತಂಡದ ಹುಡುಗರು ಕಡುಬಡವರಾಗಿದ್ದರು. ಹಾಗಿದ್ದರೂ ಹರ್ಷನ ಕೊಲೆ ಬರುವಾಗ ಶಿಫ್ಟ್ ಕಾರಿನಲ್ಲಿ ಬಂದಿದ್ದರು ಎನ್ನಲಾಗಿದೆ. ಜೊತೆಗೆ ಕೊಲೆ ಬಳಿಕ ಅವರು ಅನ್ಯ ಕೋಮಿನ ವ್ಯಕ್ತಿಯೊಬ್ಬನಿಗೆ ಮೊಬೈಲ್ ಕರೆ ಮಾಡಿದ್ದರು ಮತ್ತು ಆ ವ್ಯಕ್ತಿ ಅವರನ್ನು ಪೊಲೀಸರಿಗೆ ಶರಣಾಗಿಸಲು ಪ್ರಯತ್ನಿಸಿದ್ದ ಎಂಬ ಮಾಹಿತಿ ಕೂಡ ಹೊರಬಿದ್ದಿದೆ.
ಆ ಹಿನ್ನೆಲೆಯಲ್ಲಿ ಹರ್ಷನ ಮೊಬೈಲ್ ನಾಪತ್ತೆ, ಇಬ್ಬರು ಹುಡುಗಿಯರ ವೀಡಿಯೋ ಕರೆ, ಗಾಂಜಾ ವ್ಯಸನಿ ಕಡುಬಡವ ಆರೋಪಿಗಳಿಗೆ ಸ್ವಿಫ್ಟ್ ಕಾರು ಕೊಟ್ಟವರು ಯಾರು? ಕೊಲೆ ಬಳಿಕ ಅವರು ಕರೆ ಮಾಡಿದ ವ್ಯಕ್ತಿಗೂ ಹರ್ಷನಿಗೂ ಇರುವ ಸಂಬಂಧವೇನು? ಎಂಬ ಸಂಗತಿಗಳು ಪೊಲೀಸ್ ತನಿಖೆಯಿಂದ ಹೊರಬೀಳಬೇಕಾಗಿದೆ.
ಆಗ ಕೊಲೆಯ ಹಿಂದಿನ ಅಸಲೀ ಸಂಗತಿ ಬಯಲಾಗುವ ಜೊತೆಗೆ ಆರೋಪಿಗಳ ಹಿಂದಿನ ಶಕ್ತಿಗಳು ಯಾರು ಮತ್ತು ಯಾವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂಬುದು ಕೂಡ ಬಯಲಾಗಲಿದೆ. ದಕ್ಷ ಪೊಲೀಸ್ ಅಧಿಕಾರಿ ಗುರುರಾಜ್ ಅವರ ನೇತೃತ್ವದ ತನಿಖಾ ತಂಡ ಆ ರಹಸ್ಯವನ್ನು ಬಯಲಿಗೆಳೆಯಲಿದೆ ಎಂಬುದು ಶಿವಮೊಗ್ಗ ಜನರ ವಿಶ್ವಾಸ.