ಅಮೇರಿಕಾದಲ್ಲಿ ಬುಧವಾರ ಸಂಜೆ ಸಾಮೂಹಿಕ ಗುಂಡಿನ ದಾಳಿ ನಡೆಸಿ 18 ಮಂದಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದ ಆರೋಪಿ ಶೂಟರ್ ಶವವಾಗಿ ಪತ್ತೆಯಾಗಿದ್ದಾನೆ.
ಅಕ್ಟೋಬರ್ 25 ರಂದು ಈತ ಯದ್ವಾತದ್ವಾ ಗುಂಡು ಹಾರಿಸಿದ್ದ ಪರಿಣಾಮ 18 ಜನರು ಪ್ರಾಣಬಿಟ್ಟಿದ್ದು, 13 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಲೆವಿಸ್ಟನ್ ಪ್ರಾಂತ್ಯದ ಮೈನೆಯ ಬೌಲಿಂಗ್ ಅಲ್ಲೆ ಮತ್ತು ಬಾರ್ & ರೆಸ್ಟೋರೆಂಟ್ನಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆಸಿದ್ದ ಈತನನ್ನು ರಾಬರ್ಟ್ ಕಾರ್ಡ್ ಎಂದು ಗುರುತಿಸಲಾಗಿತ್ತು.
ಆದರೆ, ಆರೋಪಿ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳದೆ ತಲೆ ಮರೆಸಿಕೊಂಡಿದ್ದ. ಇದರಿಂದ ಸ್ಥಳೀಯ ಪ್ರದೇಶಗಳಲ್ಲಿ ಆತಂಕ ಶುರುವಾಗಿತ್ತು.
ಈತನ ಪತ್ತೆಗೆ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಆದರೆ ಇದೀಗ ಆರೋಪಿ ನಿನ್ನೆ ರಾತ್ರಿ ರಾಬರ್ಟ್ ಕಾರ್ಡ್ ಶವವಾಗಿ ಪತ್ತೆಯಾಗಿದ್ದಾನೆ. ಸ್ವತಃ ಗುಂಡುಹಾರಿಸಿಕೊಂಡು ಈತ ಸಾವನ್ನಪ್ಪಿರುವುದಾಗಿ ಮೈನೆ ಸಾರ್ವಜನಿಕ ಸುರಕ್ಷತಾ ಆಯುಕ್ತ ಮೈಕ್ ಸೌಶುಕ್ ಹೇಳಿದ್ದಾರೆ.
“ರಾಬರ್ಟ್ ಕಾರ್ಡ್ ಇನ್ನು ಮುಂದೆ ಯಾರಿಗೂ ಬೆದರಿಕೆಯಿಲ್ಲ ಎಂದು ತಿಳಿದು ನಾನು ಇಂದು ರಾತ್ರಿ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದೇನೆ” ಎಂದು ಗವರ್ನರ್ ಜಾನೆಟ್ ಮಿಲ್ಸ್ ತಿಳಿಸಿದ್ದಾರೆ.