ಮಂಗಳೂರು: ಮಂಗಳೂರಿನಲ್ಲಿ ಕೋಟಿ ಕೋಟಿ ವ್ಯಯಿಸಿ ನಿರ್ಮಿಸಿದ್ದ ವ್ಯಾಪಾರ ಮಳಿಗೆಗಳು ಹಾರಾಜಾಗದೆ ಅನಾಥವಾಗಿದೆ. ಕೈ ಕಮಲ ನಾಯಕರ ಟೆಂಡರ್ ಗುದ್ದಾಟದಿಂದ ಈ ಯೋಜನೆ ಹಳ್ಳ ಹಿಡಿದಿದ್ದು. ನ್ಯಾಯಯುತವಾಗಿ ಸಾರ್ವಜನಿಕರ ಉಪಯೋಗಕ್ಕೆ ಬರಬೇಕಿದ್ದ ಮಳಿಗೆಗಳು ಪಾಳು ಬೀಳುವ ಹಂತಕ್ಕೆ ತಲುಪಿದೆ. ಹೊಸ ಸರಕಾರ ಈ ಮಳಿಗೆಗಳಲ್ಲಿ ವ್ಯಾಪಾರ ಭಾಗ್ಯ ಕಲ್ಪಿಸುವುದು ಯಾವಾಗ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ..
ಅದು ಕಡಲ ನಗರಿ ಮಂಗಳೂರಿನ ಪ್ರಸಿದ್ಧ ಪ್ರವಾಸಿ ತಾಣ ಕದ್ರಿ ಪಾರ್ಕ್. ಇದೆ ಕದ್ರಿ ಪಾರ್ಕ್ ಸಮೀಪ ಸುಮಾರು 8 ತಿಂಗಳ ಹಿಂದೆ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಸುಮಾರು 12 ಕೋಟಿ ವೆಚ್ಚದಲ್ಲಿ 38 ಫುಡ್ ಕೋರ್ಟ್ ವ್ಯಾಪಾರ ಮಳಿಗೆಗಳನ್ನ ಉದ್ಘಾಟನೆಗೊಳಿಸಲಾಗಿತ್ತು. ಅಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ನಗರದ ಓರ್ವ ಪ್ರಭಾವಿ ಉದ್ಯಮಿಗೆ ಇಲ್ಲಿನ ಟೆಂಡರ್ ನೀಡಲಾಗಿತ್ತು. ಇನ್ನೇನು ಎಲ್ಲಾ ಮುಗಿತು ಅಂದುಕೊಳ್ಳುವಷ್ಟರಲ್ಲೇ ಬಂದ ಚುನಾವಣೆಯಿಂದಾಗಿ ನಿಂತ ಟೆಂಡರ್ ಪ್ರಕ್ರಿಯೆ ಮತ್ತೆ ಮುಂದುವರೆಯಲೇ ಇಲ್ಲ…!ಇದರಿಂದಾಗಿ ಕೋಟ್ಯಂತರ ರೂಪಾಯಿಯಲ್ಲಿ ನಿರ್ಮಾಣವಾಗಿ ಜನರ ಕೈ ಸೇರಬೇಕಿದ್ದ ಯೋಜನೆಯೊಂದು ಹಳ್ಳ ಹಿಡಿದಿದೆ.

ಸುಮಾರು ಎರಡು ವರ್ಷಗಳ ಹಿಂದೆಯೇ ಕದ್ರಿ ಪಾರ್ಕ್ ರಸ್ತೆ ಮತ್ತು ಅದರ ಸುತ್ತಮುತ್ತಲಿನ ಜಾಗಗಳ ಅಭಿವೃದ್ಧಿಗಾಗಿ ಸುಮಾರು 16 ಕೋಟಿ ರೂ. ಯೋಜನೆಗೆ ಚಾಲನೆ ಸಿಕ್ಕಿ 2023ರ ಮಾರ್ಚ್ ನಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಧಿಕೃತವಾಗಿ ಉದ್ಘಾಟನೆಯಾಗಿತ್ತು. ಈ ಯೋಜನೆಯಲ್ಲಿ ಬಹಳ ಮುಖ್ಯವಾಗಿ 12 ಕೋಟಿ ವೆಚ್ಚದ 38 ಸ್ಮಾರ್ಟ್ ಸಿಟಿ ಫುಡ್ ಕೋರ್ಟ್ ಆಹಾರ ಮಳಿಗೆಗಳನ್ನು ಕೂಡ ಲೋಕಾರ್ಪಣೆ ಮಾಡಲಾಗಿತ್ತು. ಆದರೆ ಸದ್ಯ ಏಳೆಂಟು ತಿಂಗಳು ಕಳೆದರೂ ಇನ್ನೂ ಈ ಮಳಿಗೆಗಳು ಖಾಲಿ ಬಿದ್ದಿದ್ದು, ವ್ಯಾಪಾರಕ್ಕೆ ತೆರೆದುಕೊಳ್ಳದೇ ಅಕ್ಷರಶಃ ತುಕ್ಕು ಹಿಡಿತಿದೆ. ಈ ಕುರಿತು ಮಂಗಳೂರಿನ ಬಿಜೆಪಿ ಶಾಸಕ ವೇದಾವ್ಯಾಸ್ ಕಾಮತ್ ಆಕ್ರೋಶ ಹೊರಹಾಕಿದ್ದು ಕಾಂಗ್ರೆಸ್ ಮಳಿಗೆಗಳನ್ನ ಏಳಂ ಮಾಡುವ ವಿಚಾರದಲ್ಲಿ ತಮ್ಮ ಆಪ್ತರಿಗೆ ಅಂಗಡಿಗಳ ಟೆಂಡರ್ ಸಿಗಬೇಕು ಎಂಬ ಉದ್ದೇಶದಿಂದ ಸ್ವಜನಪಕ್ಷಪಾತದ ನಡೆಯನ್ನ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ

ಆದರೆ ಕಾಮತ್ ರವರ ಈ ಆರೋಪವನ್ನ ತಳ್ಳಿ ಹಾಕಿರುವ ಕಾಂಗ್ರೆಸ್ ನಾಯಕರು, ಯುಟಿ ಖಾದರ್ ಅವರು ನಗರಾಭಿವೃದ್ಧಿ ಸಚಿವರಾಗಿದ್ದ ವೇಳೆ ಸ್ಮಾರ್ಟ್ ಸಿಟಿ ಯೋಜನೆಯಡಿ ಪಾರ್ಕ್ ರಸ್ತೆ ಮತ್ತು ಮಳಿಗೆಗಳ ಅಭಿವೃದ್ಧಿ ಯೋಜನೆ ರೂಪುಗೊಂಡಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ಬಳಿಕ ಉದ್ಘಾಟನೆ ಮಾಡಿ ಯಾರೋ ಒಬ್ಬ ಉದ್ಯಮಿಗೆ 38 ಮಳಿಗೆಗಳನ್ನು ಟೆಂಡರ್ ಮೂಲಕ ಕೊಡಲಾಗಿತ್ತು. ಇದು ಸರಿಯಲ್ಲ, ಸಾಮಾಜಿಕ ನ್ಯಾಯದಡಿ ಅಂಗಡಿಗಳ ಏಲಂ ಪ್ರಕ್ರಿಯೆ ನಡೆಯಬೇಕು ಅನ್ನೋದು ಕಾಂಗ್ರೆಸ್ ಸರ್ಕಾರದ ಉದ್ದೇಶ. ಹೀಗಾಗಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚನೆಯಂತೆ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗದವರಿಗೂ ಮಳಿಗೆ ಸಿಗೋವಂತೆ ಏಲಂ ಪ್ರಕ್ರಿಯೆ ನಡೆಸಲು ನಿರ್ಧರಿಸಲಾಗಿದೆ. ಆದರೆ ಶಾಸಕ ಕಾಮತ್ ರಾಜಕೀಯ ಮಾಡ್ತಾ ಇದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ವರ್ಷವಾಗ್ತಾ ಬಂದರೂ ಕದ್ರಿಯ ಕೋಟಿ ಯೋಜನೆ ಜನರನ್ನ ತಲುಪಿಲ್ಲ ಎಂದರೆ ವಿಪರ್ಯಾಸವೇ ಸರಿ.ಸುಂದರವಾಗಿ ನಿರ್ಮಾಣಗೊಂಡ ಮಳಿಗೆಗಳನ್ನು ರಾಜಕೀಯ ಕೆಸರೆರಚಾಟದ ಕಾರಣಕ್ಕೆ ಜನರ ಬಳಕೆಗೆ ಬಿಟ್ಟುಕೊಡಲು ಆಗಿಲ್ಲ. ಅಪ್ಪ ಅಮ್ಮನ ಜಗಳದಿಂದ ಕೂಸು ಬಡವಾಯ್ತು ಅಂದಂತಾಗಿದೆ ಮಂಗಳೂರಿನ ಈ ಮಳಿಗೆಗಳ ಕಥೆ. ಇನ್ನಾದರೂ ಸರಕಾರ ಎಚ್ಚೆತ್ತು ಈ ಮಳಿಗೆಗಳು ಜನರ ಉಪಯೋಗಕ್ಕೆ ಬರುವಂತೆ ಆಗುತ್ತಾ ಎಂದು ಕಾದು ನೋಡಬೇಕಿದೆ.