ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹಾಗೂ ಆತನ ಸಹಚರರೊಡನೆ ಸೇರಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಮ್ಮಿಶ್ರ ಸರ್ಕಾರದ ಸಚಿವ ನವಾಬ್ ಮಲ್ಲಿಕ್ನನ್ನು ದೀರ್ಘ ಕಾಲ ವಿಚಾರಣೆ ನಡೆಸಿದ ನಂತರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ಬಂಧಿಸಿದ್ದಾರೆ.
ಬಂಧನದ ಸುತ್ತ ಪ್ರಮುಖ 10 ಅಂಶಗಳು ಇಲ್ಲಿವೆ…
1) ತನಿಖಾ ಕಚೇರಿಯಿಂದ ವಿಚಾರಣೆ ಮುಗಿಸಿ ಹೊರ ಬಂದ ನಂತರ ಮಲಿಕ್ ಮಾಧ್ಯಮದವರತ್ತ ಕೈ ಬೀಸುತ್ತಾ ನಾವು ಹೋರಾಡಿ ಗೆಲ್ಲುತ್ತೇವೆ ಮತ್ತು ಸಮಯ ನೋಡಿಕೊಂಡು ಎಲ್ಲವನ್ನು ಬಹಿರಂಗಪಡಿಸುತ್ತೇವೆ ಎಂದು ಹೇಳಿದ್ದಾರೆ. ನಂತರ ED ಅಧಿಕಾರಿಗಳು ವೈದ್ಯಕೀಯ ತಪಾಸಣೆಗಾಗಿ ಕೊಂಡೊಯ್ದರು.
2) ಸುದ್ದಿ ಮೂಲಗಳ ಪ್ರಕಾರ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹಾಗೂ ಅವನ ಸಹಚರರೊಂದಿಗೆ ಅಕ್ರಮ ಹಣ ವರ್ಗಾವಣೆ ಹಾಗೂ ಭೂ ವ್ಯವಹಾರದಲ್ಲಿ ಮಲ್ಲಿಕ್ ಹೆಸರು ತಳಕು ಹಾಕಿಕೊಂಡಿತ್ತು. ತನಿಖೆಗೆ ಹೆಚ್ಚು ಸಹಕರಿಸದೆ ತಪ್ಪಿಸಿಕೊಳ್ಳುತ್ತಿದ್ದರು ಎಂದು ED ತಿಳಿಸಿದೆ.
3) ಇತ್ತೀಚಿಗೆ ED ಮುಂಬೈನ ಹಲವು ಕಡೆ ದಾಳಿ ನಡೆಸಿತ್ತು ಮತ್ತು ದಾವೂದ್ ಸಹೋದರ ಇಕ್ಬಾಲ್ ಕಸ್ಕರ್ರನ್ನು ವಶಕ್ಕೆ ಪಡೆದಿತ್ತು. ಈ ವೇಳೆ ಮಲ್ಲಿಕ್ ಖರೀದಿಸಿದ ಆಸ್ತಿ ವಿವರಗಳು ತನಿಖೆ ವೇಳೆ ಹೊರ ಬಂದಿತ್ತು.
4) ಮಹಾರಾಷ್ಟ್ರದ ಕಾಂಗ್ರೆಸ್, ಶಿವಸೇನಾ, ಎನ್ಸಿಪಿ ಮೈತ್ರಿಕೂಟ ಹಾಗೂ ಕೇಂದ್ರ ಸರ್ಕಾರದ ನಡುವೆ ನಡೆಯುತ್ತಿರುವ ತೀವ್ರ ವಾಕ್ಸಮರದ ನಡುವೆ 62 ವರ್ಷದ ಮಲ್ಲಿಕ್ರನ್ನು ವಿಚಾರಣೆಗೆ ED ಅಧಿಕಾರಿಗಳು ಕರೆದೊಯ್ದಿದ್ದರು. ಬೆಳಗ್ಗೆ 6 ಘಂಟೆ ಸುಮಾರಿಗೆ ಮಲ್ಲಿಕ್ ಮನೆ ತೆರಳಿದ ಅಧಿಕಾರಿಗಳು ಒಂದು ಘಂಟೆ ವಿಚಾರಣೆ ನಡೆಸಿದ್ದಾರೆ. ನಂತರ ED ಕಚೇರಿಗೆ ಕರೆತಂದು ಸುಮಾರು 8 ಘಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ ನಂತರ ಅವರನ್ನು ತನ್ನ ವಶಕ್ಕೆ ಪಡೆದಿದೆ.
5) ದಕ್ಷಿಣ ಮುಂಬೈನಲ್ಲಿರುವ ED ಕಚೇರಿ ಮುಂಭಾಗ ಜಮಾಯಿಸಿದ ಎನ್ಸಿಪಿ ಕಾರ್ಯಕರ್ತರು ಬಿಜೆಪಿ ಸರ್ಕಾರ ಹಾಗೂ ED ವಿರುದ್ದ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. BJP+NCB+CBI+ED ನಡುವೆ ಇರುವ ನಂಟನ್ನು ಬಯಲಿಗೆಳೆದಿದ್ದಕ್ಕೆ ಮತ್ತು ಅನ್ಯಾಯದ ವಿರುದ್ದ ಧ್ವನಿ ಎತ್ತಿದ ನವಾಬ್ ಮಲ್ಲಿಕ್ ವಿರುದ್ದ ಪ್ರಕರಣ ದಾಖಲಿಸುವುದರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಕಾರ್ಯಕರ್ತರು ಹೇಳಿದ್ದಾರೆ.
6) ಕಳೆದ ವರ್ಷ ಅಕ್ಟೋಬರ್ನಲ್ಲಿ ಐಷರಾಮಿ ಹಡಗಿನ ಮೇಲೆ NCB ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ನನ್ನು NCB ವಶಕ್ಕೆ ಪಡೆದಿತ್ತು. ಆ ವೇಳೆ NCB ಅಧಿಕಾರಿ ಸಮೀರ್ ವಾಂಖೆಡೆ ವಿರುದ್ದ ಆರೋಪಗಳ ಸುರಿಮಳೆಯನ್ನೇ ನಾವಬ್ ಮಲ್ಲಿಕ್ ಗೈದು ಸುದ್ದಿಯಲ್ಲಿದ್ದರು.
7) ಇದೇ ವೇಳೆ ಆರ್ಯನ್ ಖಾನ್ ಜೊತೆಗೆ ನವಾಬ್ ಮಲ್ಲಿಕ್ ಅಳಿಯ ಸಮೀರ್ಖಾನ್ನನ್ನು NCB ಅಧಿಕಾರಿಗಳು ಬಂಧಿಸಿದ್ದರು.
8) ಈ ಕುರಿತು ಪ್ರತಿಕ್ರಿಯಿಸಿರುವ NCP ಮುಖ್ಯಸ್ಥ ಶರದ್ ಪವಾರ್ ಕೇಂದ್ರ ಸರ್ಕಾರದ ವಿರುದ್ದ ಆರೋಪ ಮಾಡಿದ್ದಾಗಲೆಲ್ಲ ಅಂತಹವರ ಜೊತೆ ದಾವೂದ್ ಇಬ್ರಾಹಿಂ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಲಾಗುತ್ತದೆ. ಇದು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಅನುಕೂಲಕರ ಮಾರ್ಗವಾಗಿದೆ. ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲೂ ಸಹ ಇದೇ ರೀತಿ ಆರೋಪಗಳನ್ನು ಮಾಡಲಾಗಿತ್ತು. 25 ವರ್ಷಗಳ ನಂತರ ಮತ್ತದೇ ಆರೋಪ ಪುನರಾವರ್ತನೆಯಾಗುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ.
9) ಶಿವಸೇನೆ ವಕ್ತಾರ ಹಾಗೂ ಸಂಸದ ಸಂಜಯ್ ರಾವತ್ ಮಾತನಾಡಿ ಕೇಂದ್ರ ತನಿಖಾ ಸಂಸ್ಥೆಗಳು ರಾಜಕೀಯ ಪಕ್ಷದ ಏಜೆಂಟ್ ರೀತಿ ವರ್ತಿಸುತ್ತಿವೆ. ಕೇಂದ್ರ ಸರ್ಕಾರ ಹಾಗೂ ತನಿಖಾ ಸಂಸ್ಥೆಗಳ ವಿರುದ್ದ ಮಾತನಾಡುವವರನ್ನು ಗುರಿಯಾಗಿಸಿ ದಾಳಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
10) NCP ಹಾಗು ಶಿವಸೇನೆ ನಾಯಕರು ಮಾಡಿರುವ ಅಷ್ಟು ಆರೋಪಗಳನ್ನು ತಳ್ಳಿ ಹಾಕಿರುವ ಬಿಜೆಪಿ, ಈ ಎರಡು ಪಕ್ಷಗಳ ನಾಯಕರು ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿದೆ. ED ದಾವೂದ್ ಇಬಾಹಿಂ ಸಂಬಂಧಿಸಿದ ಭೂಮಿಯನ್ನು ನವಾಬ್ ಖರೀದಿಸಿದ್ದಾರೆ ಎಂದು ಆರೋಪಿಸಿದೆ. ಕೇಂದ್ರ ತನಿಖಾ ಸಂಸ್ಥೆಗಳು ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಿರುವ ಕಾರಣ ಮುಂಬೈ ಬ್ಲ್ಯಾಸ್ಟ್ನ ಪ್ರಮುಖ ಆರೋಪಿಯಿಂದ ಅತಿ ಕಡಿಮೆ ಬೆಲೆಗೆ ಭೂಮಿ ಖರೀದಿಸಿರುವುದು ಸಂಶಯಾಸ್ಪದವಾಗಿರುವುದರಿಂದ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದೆ.