ಮುಂಬೈ : ಇಲ್ಲಿನ ಜುಹು ಪ್ರದೇಶದಲ್ಲಿ ಭಾನುವಾರ ಸಂಜೆ ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಬಿಎಂಡಬ್ಲ್ಯೂ (BMW) ಕಾರಿನ ಮೇಲೆ ಮೂವರು ದುಷ್ಕರ್ಮಿಗಳು ಮೋಟಾರ್ ಸೈಕಲ್‌ನಲ್ಲಿ ಬಂದು 5-7 ಗುಂಡು ಹಾರಿಸಿರುವ ಘಟನೆ ನಡೆದಿದೆ. ದಾಳಿಯಲ್ಲಿ ಅದೃಷ್ಟವಶಾತ್ ನಟ ಶ್ರಾಫ್ ಸುರಕ್ಷಿತರಾಗಿದ್ದಾರೆ. ಚಾಲಕ ಫಿರ್ದೌಸ್ ಕೈಗೆ ಗುಂಡು ತಗುಲಿದೆ, ಒಬ್ಬ ಪಾಸರ್‌ಗೆ ಎದೆಯ ಭಾಗದಲ್ಲಿ ಗಾಯಗಳಾಗಿವೆ.

ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ಗೆ ಸೇರಿರುವ ಅನಿಲ್ ಪಂಡಿತ್ ಮತ್ತು ಹರ್ಮನ್ ಸಂಧು ಸಲ್ಮಾನ್ ಖಾನ್ ಜೊತೆಗಿನ ಸಂಬಂಧಕ್ಕಾಗಿ ಈ ದಾಳಿಯ ಹೊಣೆ ಹೊತ್ತಿದ್ದಾರೆ. ಘಟನೆ ನಡೆದ ತಕ್ಷಣ ಅಲರ್ಟ್ ಆಗಿರುವ ಮುಂಬೈ ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ. ಈ ನಡುವೆಯೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಟೈಗರ್ ಶ್ರಾಫ್‌ಗೆ ಕರೆ ಮಾಡಿ ಧೈರ್ಯ ತುಂಬಿದ್ದಾರೆ. ಈ ಘಟನೆಗೆ ಕಾರಣರಾಗಿರುವವರನ್ನು ಸುಮ್ಮನೇ ಬಿಡುವುದಿಲ್ಲ. ಆರೋಪಿಗಳನ್ನು ಶೀಘ್ರದಲ್ಲೇ ಶಿಕ್ಷೆಗೆ ಗುರಿ ಪಡಿಸಲಾಗುವುದು ಎಂದು ಘಟನೆಯನ್ನು ಖಂಡಿಸಿದ್ದಾರೆ. ಅಲ್ಲದೆ ಈ ಪ್ರಕರಣದ ತನಿಖೆಗಾಗಿ ಪೊಲೀಸರಿಗೆ ಮುಕ್ತ ಕೈಗಳ ಅವಕಾಶ ನೀಡಿದ್ದೇವೆ ಎಂದು ಫಡ್ನವೀಸ್ ತಿಳಿಸಿದ್ದಾರೆ.
ಇದಾದ ಬೆನ್ನಲ್ಲೇ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಟೈಗರ್ ಶ್ರಾಫ್ ನಿವಾಸಕ್ಕೆ ಭೇಟಿ ನೀಡಿ ನಟನ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಮಾತನಾಡಿದ ಶಿಂಧೆ, ಪ್ರಕರಣದ ತನಿಖೆಗಾಗಿ 5 ಪೊಲೀಸ್ ತಂಡಗಳು ತನಿಖೆ ನಡೆಸುತ್ತಿವೆ. ಈಗಾಗಲೇ ಒಬ್ಬರನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಭಾಗಿಯಾದವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಶ್ರಾಫ್ ಹಾಗೂ ಅವರ ಕುಟುಂಬಕ್ಕೆ ಭರವಸೆ ನೀಡಿದ್ದೇನೆ ಎಂದು ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ನಾನು ಇದೀಗ ಶ್ರಾಫ್ ಭೇಟಿಯಾಗಿ ಮಾತನಾಡಿದ್ದೇನೆ. ಇದೊಂದು ಆಘಾತಕಾರಿ ಘಟನೆಯಾಗಿದ್ದು, 5 ಸುತ್ತು ಗುಂಡು ಹಾರಿಸಲಾಗಿದೆ. ಆದಾಗ್ಯೂ, ಅದೃಷ್ಟವಶಾತ್ ನಟ ಟೈಗರ್ ಶ್ರಾಫ್ ಸುರಕ್ಷಿತವಾಗಿದ್ದಾರೆ. ಆದರೆ, ಅವರ ಕೈಗೆ ಗನ್‌ಪೌಡರ್ ಮತ್ತು ಗಾಜಿನ ಚೂರುಗಳಿಂದ ಗಾಯಗಳಾಗಿದ್ದು, ಘಟನೆಯಿಂದಾಗಿ ನಟ ಹಾಗೂ ಅವರ ತಾಯಿ ಇಬ್ಬರೂ ತುಂಬಾ ಆಘಾತಕ್ಕೆ ಒಳಗಾಗಿದ್ದಾರೆ. ಸಾರ್ವಜನಿಕ ವ್ಯಕ್ತಿಗಳ ಮೇಲೆ ಬಹಿರಂಗ ಬೆದರಿಕೆಗಳನ್ನು ಎದುರಿಸಲು ರಾಜ್ಯ ಸರ್ಕಾರವು ಅವರೊಂದಿಗೆ ನಿಲ್ಲುತ್ತದೆ ಎಂದು ನಾನು ಅವರಿಗೆ ಭರವಸೆ ನೀಡಿದ್ದೇನೆ ಎಂದು ಹೇಳಿದ್ದಾರೆ.
90 ರ ದಶಕದ ವೇಳೆಯಲ್ಲಿ ಇಂತಹ ಗ್ಯಾಂಗ್ ವಾರ್‌ಗಳು ಸಾಮಾನ್ಯವಾಗಿ ನಡೆಯುತ್ತಿದ್ದವು, ಆದರೆ ಮುಂಬೈ ಪೊಲೀಸರು 1995ರಲ್ಲಿ ಅವುಗಳನ್ನು ಮಟ್ಟ ಹಾಕಿದ್ದಾರೆ. ಇನ್ಮುಂದೆ ಜನರನ್ನು ಬೆದರಿಸುವ ಈ ತಂತ್ರಗಳನ್ನು ಸಹಿಸಲಾಗುವುದಿಲ್ಲ ಮತ್ತು ನಾವು ಈ ಗೂಂಡಾಗಿರಿಯನ್ನು ಬುಡ ಸಮೇತ ಕಿತ್ತು ಹಾಕುತ್ತೇವೆ, ಇದಕ್ಕೆ ಇತಿಶ್ರೀ ಹಾಡುತ್ತೇವೆ ಎಂದು ಶಿಂಧೆ ಗುಡುಗಿದ್ದಾರೆ..!






