ಚಾಮರಾಜನಗರ ಲೋಕಸಭಾ ಕ್ಷೇತ್ರದ ಇಂಡಿಗನತ್ತ ಬೂತ್ನಲ್ಲಿ ಮರು ಮತದಾನ ಆರಂಭ ಆಗಿದೆ. ಬೆಳಗ್ಗೆ 7 ರಿಂದ ಸಂಜೆ 6 ಗಂಟೆ ತನಕ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮತಗಟ್ಟೆ ತೆರೆದು ಕಾದು ಕುಳಿತಿದ್ದಾರೆ ಚುನಾವಣೆ ಸಿಬ್ಬಂದಿ. ಆದರೆ ಮತದಾನ ಮಾಡಲು ಇನ್ನೂ ಮತಕೇಂದ್ರದ ಕಡೆಗೆ ಬಂದಿಲ್ಲ ಮತದಾರರು.

ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಒಂದು ಕೆಎಸ್ಆರ್ಪಿ, ಒಂದು ಡಿಎಆರ್ ಹಾಗೂ ಪೊಲೀಸ್ ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ. ಮತ ಹಾಕುವಂತೆ ಮನೆಗಳಿಗೆ ತೆರಳಿ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಈ ಮೊದಲು ಏಪ್ರಿಲ್ 26ರಂದು ನಡೆದ ಚುನಾವಣೆ ವೇಳೆ ಇವಿಎಂ ದ್ವಂಸ ಮಾಡಿದ ಪ್ರಕರಣದಲ್ಲಿ 33 ಜನರನ್ನು ಬಂಧನ ಮಾಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿದ ನಂತರ ಹೆದರಿ ಊರು ಖಾಲಿ ಮಾಡಿದ್ದಾರೆ ಹತ್ತಾರು ಮಂದಿ.
ಮರು ಮತದಾನದಿಂದಲೂ ದೂರ ಉಳಿಯಲು ನಿರ್ಧರಿಸಿದೆ ಒಂದು ಗುಂಪು. ಮತ್ತೊಂದು ಗುಂಪು ಕಡೇ ಕ್ಷಣದಲ್ಲಿ ಬಂದು ಮತದಾನ ಮಾಡುವ ಸಾಧ್ಯತೆ ಇದೆ. ಏಪ್ರಿಲ್ 26ರಂದೂ ಕೂಡ ಮತದಾನ ಬಹಿಷ್ಕಾರ ಮಾಡಲಾಗಿತ್ತು.

ಮೂಲಭೂತ ಸೌಕರ್ಯಗಳು ಇಲ್ಲ ಅನ್ನೋ ಕಾರಣಕ್ಕೆ ಮತದಾನ ಬಹಿಷ್ಕರಿಸುವ ನಿರ್ಧಾರ ಮಾಡಿದ ಮೇಲೂ ಒಂದು ಬಣ ಕಡೇ ಕ್ಷಣದಲ್ಲಿ ಮತದಾನ ಮಾಡಲು ಮುಂದಾಗಿತ್ತು. ಹೀಗಾಗಿ ಎದುರಾಳಿ ಗುಂಪು ದಾಳಿ ಮಾಡಿ ಇವಿಎಂ ಸುಟ್ಟು ಹಾಕಿತ್ತು. ಅಧಿಕಾರಿಗಳ ಮೇಲೆ ಕಲ್ಲು ತೂರಾಟ ಮಾಡಲಾಗಿತ್ತು. ಇವಿಎಂ ಸುಟ್ಟ ಹಾಕಿದ್ದರಿಂದ ಮರು ಮತದಾನ ನಿಗದಿಯಾಗಿತ್ತು.