ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣ ಇನ್ನು ಪ್ರಾಥಮಿಕ ಹಂತದಲ್ಲಿದೆ ಈಗಲೇ ಕಮೆಂಟ್ ಮಾಡುವುದು ಸೂಕ್ತ ಅಲ್ಲ. ಕಾದು ನೋಡೋಣ ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಆರೋಪ ಸತ್ಯ ಆಗಿದ್ದರೆ ಶಿಕ್ಷೆಗೆ ಒಳಪಡುತ್ತಾರೆ ಎಂದು ಈಶ್ವರಪ್ಪ ಹೇಳಿದರು.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೇಲ್ ತೆಗೆದುಕೊಳ್ಳುವ ಸಂದರ್ಭದಲ್ಲಿ ಈ ಪ್ರಕರಣಕ್ಕೂ ಅವರಿಗೂ ಸಂಬಂಧ ಇಲ್ಲ ಎಂದು ಹೇಳಿದ್ದಾರೆ ಎಂದರು.
ಬಿಜೆಪಿ ಅಭ್ಯರ್ಥಿ ಆಯ್ಕೆ ಕುರಿತು ಮಾತನಾಡಿದ ಈಶ್ವರಪ್ಪ, ಕೇಂದ್ರ ನಾಯಕರು ಅಂತಿಮ ಪಟ್ಟಿ ಬಿಡುಗಡೆ ಮಾಡುತ್ತಾರೆ. ಇಡೀ ರಾಜ್ಯದಲ್ಲಿ ಈ ಕುರಿತು ಸರ್ವೆ ನಡೆಯುತ್ತಿದೆ ಸರ್ವೆಯಲ್ಲಿ ನಾಲ್ಕೈದು ಹೆಸರುಗಳು ಕೇಳಿ ಬರುತ್ತವೆ. ಮೊದಲೆಲ್ಲಾ ಒಂದೂ ಹೆಸರು ಇರುತ್ತಿರಲಿಲ್ಲ, ಈಗ ಬಿಜೆಪಿಯಿಂದ ಸ್ಪರ್ಧಿಸಲು ಹಲವರು ಉತ್ಸುಕರಾಗಿ ಬರುತ್ತಾರೆ. ಚಾಮರಾಜನಗರದಲ್ಲಿ ಹತ್ತು ಜನ ಚುನಾವಣೆಗೆ ಸ್ಪರ್ಧಿಸಲು ಮುಂದೆ ಬಂದಿರುತ್ತಾರೆ. ಎಲ್ಲರ ಅಭಿಪ್ರಾಯ ಪಡೆದು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದರು.
ಚಾಮರಾಜನಗರದಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ಜೆಪಿ ನಡ್ಡಾ ಭಾಷಣ ಮಾಡುವಾಗ ಜನರ ಪ್ರತಿರೋಧ ವ್ಯಕ್ತವಾಯಿತು. ಯಡಿಯೂರಪ್ಪ ಭಾಷಣ ಮಾಡಬೇಕು ಎಂದು ಜನರ ಕೂಗು ಎದ್ದಿತ್ತು ಎಂಬ ಪ್ರಶ್ನೆಗೆ ಗರಂ ಆದ ಈಶ್ವರಪ್ಪ, ನಡ್ದಾಗೆ ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಯಡಿಯೂರಪ್ಪ ಅವರ ಪರ ಜನ ಇದ್ದಾರೆ ಎಂದು ಒಪ್ಪಿಕೊಂಡರು. ಹಿಂದೆ ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಎಲ್ಲಾ ಕೇಂದ್ರದ ನಾಯಕರು ಬಂದು ರಾಜ್ಯದಲ್ಲಿ ಪ್ರಚಾರ ಮಾಡುತ್ತಾರೆ ಎಂದು ಹೇಳುತ್ತಿದ್ದರು. ಅಮಿತ್ ಶಾ ನರೇಂದ್ರ ಮೋದಿ ಮುಖಗಳನ್ನು ಬಿಟ್ಟು, ರಾಜ್ಯದಲ್ಲಿ ಲೀಡರ್ ಗಳೇ ಇಲ್ಲ ಎಂದು ಹೇಳುತ್ತಿದ್ದರು. ಕಾಂಗ್ರೆಸ್ಸಿಗರು ರಾಹುಲ್ ಗಾಂಧಿ ಸೋನಿಯಾ ಗಾಂಧಿ ಇಟ್ಟುಕೊಂಡು ಹೋದರೆ ಎಲ್ಲಾ ಕಡೆ ನಿರ್ನಾಮ ಆದಂತೆ ಇಲ್ಲಿಯೂ ಆಗುತ್ತಾರೆ ಎಂದು ಕಿಡಿಕಾರಿದರು.
ನಮ್ಮ ನಾಯಕರ ಬಗ್ಗೆ ದೇಶದ ಜನ ಒಪ್ಪುತ್ತಾರೆ. ನಾವು 60 ನಾಯಕರ ನಾಲ್ಕು ತಂಡಗಳನ್ನು ಮಾಡಿಕೊಂಡು ಓಡಾಡುತ್ತಿದ್ದೇವೆ. ನಮ್ಮಲ್ಲಿ ನಾಯಕರ ಕೊರತೆ ಇಲ್ಲ ಯಡಿಯೂರಪ್ಪ ಕಾಮನ್ ಮ್ಯಾನ್ ಲೀಡರ್, ರಾಷ್ಟ್ರೀಯ ನಾಯಕರು ಜೆಪಿ ನಡ್ಡಾ, ಅವರಿಗೂ ರಾಜ್ಯ ನಾಯಕರಿಗೂ ಹೋಲಿಕೆ ಮಾಡುವ ಹಾಗಿಲ್ಲ. ಯಡಿಯೂರಪ್ಪ ಬೇಕು ಎಂದು ಕೇಳಿದ್ದು ಹೌದು. ಆದರೆ ಚಾಮರಾಜನಗರದ ವಿಜಯ ಸಂಕಲ್ಪ ಯಾತ್ರೆಯಲ್ಲಿ ನಡ್ಡಾ ಭಾಷಣ ವಿರೋಧಿಸಿ ಜನ ಎದ್ದು ಹೋಗಿಲ್ಲವಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಅವರನ್ನ ಕಟ್ಟಿ ಹಾಕಲು ಈಗ ಈಶ್ವರಪ್ಪ ಅವರೇ ಬೇಕಾಯಿತಾ ಎಂಬ ಪ್ರಶ್ನೆಗೆ ಉತ್ತರಿಸಿ, ನಮ್ಮ ಸಾಮಾನ್ಯ ಕಾರ್ಯಕರ್ತ ಕೂಡ ಸಿದ್ದರಾಮಯ್ಯ ಅವರನ್ನ ಹೆದರಿಸುತ್ತಾನೆ, ನಾನೇ ಬೇಕಿಲ್ಲ ಎಂದರು.
ಭಾರತೀಯ ಜನತಾ ಪಾರ್ಟಿ ಬಗ್ಗೆ ಹಾಗೂ ನಮ್ಮ ನಾಯಕತ್ವದ ಬಗ್ಗೆ ಪ್ರಶ್ನೆ ಮಾಡುವುದಕ್ಕೆ ಯಾರಿಗೂ ಯೋಗ್ಯತೆ ಇಲ್ಲ ಎಂದು ಈಶ್ವರಪ್ಪ ಹರಿಹಾಯ್ದರು.