ಕಾಲೇಜುಗಳಲ್ಲಿ ಮುಸ್ಲಿಂ ಹುಡುಗಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡುವುದಿಲ್ಲ ಎಂಬ ಕಾಲೇಜು ಅಧಿಕಾರಿಗಳ ನಿರ್ಧಾರವನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಟ್ವೀಟ್ ಮಾಡಿದ್ದು, “ನಾವು ಭಾರತದ ಹೆಣ್ಣುಮಕ್ಕಳ ಭವಿಷ್ಯವನ್ನು ಕಸಿದುಕೊಳ್ಳುತ್ತಿದ್ದೇವೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಹಿಜಾಬ್ ವಿಚಾರಕ್ಕಾಗಿ ಅವರ ಶಿಕ್ಷಣವನ್ನು ಕಸಿದುಕೊಳ್ಳುವ ಹಾದಿಯಲ್ಲಿ ವಿಚಾರ ಮಾಡಲಾಗುತ್ತಿದೆ. ಈ ಮೂಲಕ ನಾವು ಭಾರತದ ಹೆಣ್ಣುಮಕ್ಕಳ ಭವಿಷ್ಯವನ್ನು ಕಸಿದುಕೊಳ್ಳುತ್ತಿದ್ದೇವೆ. ತಾಯಿ ಸರಸ್ವತಿ ಎಲ್ಲರಿಗೂ ಜ್ಞಾನವನ್ನು ನೀಡುತ್ತಾಳೆ. ಎಲ್ಲರನ್ನು ಒಂದೇ ರೀತಿಯಲ್ಲಿ ನೋಡುತ್ತಾಳೆ. ಆ ತಾಯಿಯಲ್ಲಿ ಭಿನ್ನಾಭಿಪ್ರಾಯವಿಲ್ಲ” ಎಂದು ತಿಳಿಸಿದ್ದಾರೆ.
ಸುಮಾರು 40 ಮಹಿಳಾ ವಿದ್ಯಾರ್ಥಿಗಳು ಉಡುಪಿಯ ಜಿಲ್ಲೆಯ ಕುಂದಾಪುರದ ಭಂಡಾರ್ ಕಾರ್ಸ್ ಕಲಾ ಮತ್ತು ವಿಜ್ಞಾನ ಪದವಿ ಕಾಲೇಜಿನ ಗೇಟ್‌ನಲ್ಲಿ ಪ್ರತಿಭಟನೆ ನಡೆಸಿದ್ದು ದೇಶಾದ್ಯಂತ ಸುದ್ದಿಯಾಯಿತು. ಇದಕ್ಕೆ ಕಾರಣ ಕಾಲೇಜು ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಆ ಹುಡುಗಿಯರಿಗೆ ಸ್ಕಾರ್ಫ್ ತೆಗೆದಿಟ್ಟು ಬರಲು ಹೇಳಿದ್ದು. ಇದರಿಂದಾಗಿ ಆ ಮಕ್ಕಳು ಸತತವಾಗಿ ತರಗತಿಗಳಿಂದ ವಂಚಿತರಾಗುತ್ತಿದ್ದಾರೆ.
ಹೆಣ್ಣು ಮಕ್ಕಳು ಕ್ಯಾಂಪಸ್‌ನೊಳಗೆ ಸ್ಕಾರ್ಫ್ ಧರಿಸಲು ಅನುಮತಿಸಲಾಗಿದೆ, ಆದರೆ, ಸ್ಕಾರ್ಫ್‌ನ ಬಣ್ಣವು ದುಪಟ್ಟಾದೊಂದಿಗೆ ಹೊಂದಿಕೆಯಾಗಬೇಕು ಮತ್ತು ಕಾಲೇಜು ಸೇರಿದಂತೆ ಕ್ಯಾಂಪಸ್‌ನೊಳಗೆ ಯಾವುದೇ ವಿದ್ಯಾರ್ಥಿಯು ಯಾವುದೇ ಇತರ ಬಟ್ಟೆಯನ್ನು ಧರಿಸುವಂತಿಲ್ಲ ಎಂದು ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ನೋಟಿಸ್ ಹಚ್ಚಲಾಗಿದೆ.
ಈ ಬಗ್ಗೆ ಆ ಕಾಲೇಜಿನ ಪ್ರಾಂಶುಪಾಲ ನಾರಾಯಣ ಶೆಟ್ಟಿ ಮಾತನಾಡಿ, ಆವರಣದಲ್ಲಿ ಸಾಮರಸ್ಯ ಕಾಪಾಡಬೇಕು. ‘ನಾನು ಸರಕಾರಿ ನೌಕರ, ಸರಕಾರದ ಎಲ್ಲಾ ಸೂಚನೆಗಳನ್ನು ಪಾಲಿಸಬೇಕು. ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಕಾಲೇಜಿಗೆ ಪ್ರವೇಶಿಸುತ್ತಾರೆ. ಧರ್ಮದ ಹೆಸರಿನಲ್ಲಿ ಸಾಮರಸ್ಯ ಕದಡಿದರೆ ಪ್ರಾಂಶುಪಾಲರೇ ಹೊಣೆಯಾಗುತ್ತಾರೆ,” ಎಂದಿದ್ದಾರೆ.
ಕರ್ನಾಟಕ ಸರ್ಕಾರವು ಈ ವಿಷಯದ ಬಗ್ಗೆ ತಮ್ಮದೇ ಆದ ಮಾರ್ಗಸೂಚಿಗಳನ್ನು ರೂಪಿಸಲು ಸರ್ಕಾರಿ ಕಾಲೇಜುಗಳಿಗೆ ಅವಕಾಶ ನೀಡುತ್ತದೆ. ಕೆಲವು ಸರ್ಕಾರಿ ಕಾಲೇಜುಗಳು ಮುಸ್ಲಿಂ ಮಹಿಳಾ ವಿದ್ಯಾರ್ಥಿಗಳಿಗೆ ಹಿಜಾಬ್ ಅಥವಾ ಯಾವುದೇ ಅವರ ಬಟ್ಟೆಗಳನ್ನು ಕ್ಯಾಂಪಸ್‌ನಲ್ಲಿ ಧರಿಸಲು ಅವಕಾಶ ನೀಡುತ್ತವೆ. ಆದರೆ ಅವರು ಅದನ್ನು ತರಗತಿಯೊಳಗೆ ಧರಿಸಬಹುದೇ ಎಂಬ ಬಗ್ಗೆ ವಿದ್ಯಾರ್ಥಿಗಳಲ್ಲಿ ಅಸ್ಪಷ್ಟತೆ ಇದೆ ಎನ್ನಲಾಗಿದೆ.
ಗುರುವಾರ ಕುಂದಾಪುರದ ಮತ್ತೊಂದು ಕಾಲೇಜಿನಲ್ಲಿ ಹಿಜಾಬ್ ಧರಿಸಿದ ಹುಡುಗಿಯರ ಗುಂಪು ಆರು ಗಂಟೆಗಳ ಕಾಲ ಗೇಟ್‌ನ ಹೊರಗೆ ನಿಂತಾಗ ಒಂದೇ ರೀತಿಯ ದೃಶ್ಯಗಳು ಕಂಡುಬಂದವು. ಜೂನಿಯರ್ ಪಿಯು ಸರ್ಕಾರಿ ಕಾಲೇಜಿನಲ್ಲಿ ಎರಡು ದಿನಗಳ ಹಿಂದೆಯಷ್ಟೇ ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶ ಕಲ್ಪಿಸಲಾಗಿತ್ತು ಎಂದು ಬಾಲಕಿಯರು ದೂರಿದ್ದಾರೆ.
ಉಡುಪಿ ಜಿಲ್ಲೆಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ವಾರದ ಹಿಂದೆ ಸ್ಕಾರ್ಫ್ ಧರಿಸಲು ಒತ್ತಾಯಿಸಿದ್ದಕ್ಕಾಗಿ ಆರು ವಿದ್ಯಾರ್ಥಿನಿಯರು ತಮ್ಮನ್ನು ತರಗತಿಗಳಿಂದ ನಿಷೇಧಿಸಲಾಗಿದೆ ಎಂದು ಆರೋಪಿಸಿ ಹಿಜಾಬ್ ಪ್ರತಿಭಟನೆ ಅಲ್ಲಿಂದ ಪ್ರಾರಂಭವಾಗಿದೆ.