ಕರೋನಾ ಮೊದಲನೇ, ಎರಡನೇ ಅಲೆಯಿಂದ ಹಾಗೂ ಇಂಧನ ಸೇರಿದಂತೆ ಅಗತ್ಯ ವಸ್ತುಗಳ ದರ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಜನರಿಗೆ ಇದೀಗ ಮತ್ತೊಂದು ಬರೆ ಬಿದ್ದಿದೆ.
ತೈಲ ಮಾರುಕಟ್ಟೆ ಕಂಪನಿಗಳು (OMCs) ಗುರುವಾರದಿಂದ (ಜುಲೈ 1) ಜಾರಿಗೆ ಬರುವಂತೆ 14.2 ಕೆಜಿ ಅಡುಗೆ ಅನಿಲದ ಸಿಲಿಂಡರ್ನ ಬೆಲೆಯನ್ನು 25.50 ರೂ.ಗೆ ಹೆಚ್ಚಿಸಿವೆ. 2021 ರಲ್ಲಿ ಇದು ನಾಲ್ಕನೇ ಬಾರಿಯ ದರ ಏರಿಕೆಯಾಗಿದೆ.
ಈ ವರ್ಷದ ಜನವರಿ, ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಕ್ರಮವಾಗಿ 25 ರುಪಾಯಿಗಳಂತೆ ದರ ಏರಿಕೆಯಾಗಿತ್ತು. ಎಪ್ರಿಲ್ ತಿಂಗಳಿನಲ್ಲೂ 10 ರುಪಾಯಿ ಏರಿಸಲಾಗಿತ್ತು. ಮೇ ಹಾಗೂ ಜೂನ್ ತಿಂಗಳಲ್ಲಿ ಯಾವುದೇ ಬೆಲೆ ಏರಿಕೆ ಆಗದಿದ್ದರೂ, ಇದೀಗ ಮತ್ತೆ 25 ರುಪಾಯಿಯಷ್ಟು ಏರಿಸಲಾಗಿದೆ.
ದೆಹಲಿ ಮತ್ತು ಮುಂಬೈನ ಜನರು ಈಗ 14.2 ಕೆಜಿ ಸಿಲಿಂಡರ್ಗೆ 834.50 ರೂ ತೆರುತ್ತಿದ್ದರೆ, ಕೋಲ್ಕತ್ತಾದ ನಾಗರಿಕರು ಸಬ್ಸಿಡಿ ರಹಿತ 14.2 ಕೆಜಿ ಅಡುಗೆ ಗ್ಯಾಸ್ ಸಿಲಿಂಡರ್ಗೆ 861 ರೂ. ಹಾಗೂ ಚೆನ್ನೈನಲ್ಲಿ 850.50 ರೂ.ಗಳನ್ನು ತೆರಬೇಕಾಗಿದೆ.
ಇನ್ನು, 19 ಕೆಜಿ ಅಡುಗೆ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಪ್ರತಿ ಸಿಲಿಂಡರ್ಗೆ 76 ರೂ.ಗೆ ಹೆಚ್ಚಿಸಲಾಗಿದೆ. ಈ ಹೆಚ್ಚಳದಿಂದ ದೆಹಲಿ ನಿವಾಸಿಗಳು ಈಗ 19 ಕೆಜಿ ಅಡುಗೆ ಗ್ಯಾಸ್ ಸಿಲಿಂಡರ್ಗೆ 1,550 ರೂ. ಪಾವತಿಸಬೇಕಿದೆ.