ಮೈಸೂರು: ವಿಚ್ಛೇದಿತ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಿರುವ ಘಟನೆಯೊಂದು ನಡೆದಿದೆ.
ಮೈಸೂರಿನ ಬೋಗಾದಿಯ ಬ್ಯಾಂಕರ್ಸ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ 34 ವರ್ಷದ ಸಂತ್ರಸ್ತೆ ಮೋಸ ಹೋದ ಮಹಿಳೆ. ಕೊಳ್ಳೇಗಾಲದ ತೇರಂಬಳ್ಳಿ ಗ್ರಾಮದ ಹರೀಶ(25) ವಂಚಿಸಿ, ಲೈಂಗಿಕವಾಗಿ ಬಳಸಿಕೊಂಡಿರುವ ಆರೋಪಿ ಮೋಸ ಮಾಡಿದ್ದಾನೆ ಎಂದು ಮಹಿಳೆ ದೂರು ಸಲ್ಲಿಸಿದ್ದಾರೆ.
ಮೈಸೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿರುವ ಆರೋಪಿ, ಸಂತ್ರಸ್ತೆಯೊಂದಿಗೆ ಪ್ರೀತಿಯ ನಾಟಕವಾಡಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾನೆ. ಮಹಿಳೆ ಗರ್ಭಿಣಿಯಾಗಿರುವುದು ತಿಳಿಯುತ್ತಿದ್ದಂತೆ ನಾಪತ್ತೆಯಾಗಿದ್ದಾನೆ ಎಂದು ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಈ ಕುರಿತು ಮೈಸೂರಿನ ಸರಸ್ವತಿ ಪುರಂ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಹಿಳೆಯು 2018ರಲ್ಲಿ ಗಂಡನಿಂದ ವಿಚ್ಛೇದನ ಪಡೆದು ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಜೀವನ ಸಾಗಿಸುತ್ತಿದ್ದರು. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಪ್ರವೃತ್ತಿಯಲ್ಲಿ ಉತ್ತಮ ಹಾಡುಗಾರನಾಗಿದ್ದಾನೆ. ಇತ್ತ ಸಂತ್ರಸ್ತೆ ಮಹಿಳೆ ಕೂಡ ಹಾಡುಗಾರ್ತಿ ಆಗಿದ್ದರಿಂದ ಸಿಂಗಿಂಗ್ ಇವೆಂಟ್ಸ್ ಗಳಲ್ಲಿ ಹಾಡು ಹೇಳಲು ಹೋಗುತ್ತಿದ್ದಾಗ ಇಬ್ಬರ ಮಧ್ಯೆ ಪರಿಚಯವಾಗಿದೆ. ಪರಿಚಯ ಪ್ರೀತಿಗೆ ತಿರುಗಿದೆ. ಈ ವೇಳೆ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಮಹಿಳೆ ಗರ್ಭಿಣಿಯಾದ ವಿಷಯ ತಿಳಿಯುತ್ತಿದ್ದಂತೆ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.
ಆಗಾಗ ಮನೆಗೆ ಬಂದು ನನಗೆ ಬಲವಂತವಾಗಿ ಮದ್ಯ ಕುಡಿಸಿ ಲೈಂಗಿಕವಾಗಿ ಬಳಸಿಕೊಂಡು ಅತ್ಯಾಚಾರ ನಡೆಸಿದ್ದಾನೆ. ಅದರ ಪರಿಣಾಮ ನಾನೀಗ ಗರ್ಭಿಣಿಯಾಗಿದ್ದೇನೆ. ಆದರೆ ಅವನು ಕಳೆದೆರಡು ತಿಂಗಳಿನಿಂದ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.