ಕರ್ನಾಟಕದ ನಿವೃತ್ತ ಪೊಲೀಸ್ ಮಹಾನಿರ್ದೇಶಕರಾಗಿರುವ ಶಂಕರ ಬಿದರಿ ಅವರು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದ ಬೇಸರ ವ್ಯಕ್ತಪಡಿಸಿದ್ದಾರೆ. ಮೋದಿಯವರನ್ನು ಬೆಂಬಲಿಸಿ ನಾನು ಬಹಳ ದೊಡ್ಡ ತಪ್ಪು ಮಾಡಿದೆ ಎಂದು ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
“ಜನರ ಸಂಕಷ್ಟಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಪ್ರಧಾನಿ ಮೋದಿಯವರ ಮೇಲೆ ಸಾಕಷ್ಟು ಭರವಸೆಗಳಿದ್ದವು. ಆದರೆ, ಅವರೂ ವಿಫಲರಾಗಿದ್ದಾರೆ. ಮೋದಿಯವರು 2014ರಲ್ಲಿ ಪ್ರಧಾನಿಯಾದಾಗ ನಾನು ಖುಶಿಪಟ್ಟಿದ್ದೆ. ದೇಶದ 130 ಕೋಟಿ ಜನರನ್ನು ಜೊತೆಗೆ ಕರೆದೊಯ್ಯುತ್ತಾರೆ ಹಾಗೂ ದೇಶ ಸಾಗುತ್ತಿರುವ ಹಾದಿಯನ್ನು ಬದಲಾಯಿಸುತ್ತಾರೆಂದು ನಾನು ನಂಬಿದ್ದೆ. ನೋಟ್ ಬ್ಯಾನ್ ಹಾಗೂ 370ನೇ ವಿಧಿ ರದ್ದು ಮಾಡಿದ್ದನ್ನೂ ಬೆಂಬಲಿಸಿದ್ದೆ. ಆದರೆ, ಇಂದು ಬೇಸವಾಗುತ್ತಿದೆ. ಅವರೂ ವಿಫಲರಾಗಿದ್ದಾರೆ,” ಎಂದು ಬರೆದಿದ್ದಾರೆ.

ಇದರೊಂದಿಗೆ ಕೇಂದ್ರ ಸರ್ಕಾರದ ವಿರುದ್ದ ಬೇಸರ ಮೂಡಲು ಕಾರಣವಾಗಿರುವ ವಿಚಾರಗಳನ್ನು ಕೂಡಾ ಪಟ್ಟಿ ಮಾಡಿದ್ದಾರೆ. ಕೃಷ್ಣಾ ನದಿ ಕಣಿವೆ ಭಾಗದ ಜನರು 1999ರಿಂದ ನಿರಂತರವಾಗಿ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಈ ನದಿಯ ಒಂದು ಹನಿ ನೀರನ್ನೂ ವ್ಯರ್ಥವಾಗಲು ಬಿಡಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದರು. ಆದರೆ, ಈಗಲೂ 300 ಟಿಎಂಸಿ ನೀರು ವ್ಯರ್ಥವಾಗುತ್ತಿದೆ, ಎಂದಿದ್ದಾರೆ.

“ರಾಜಕೀಯದಲ್ಲಿ ಭ್ರಷ್ಟಾಚಾರದ ಆರೋಪವನ್ನು ಹೊತ್ತಿರುವ ಜನರನ್ನು ಪ್ರಧಾನಿ ಮೋದಿ ಕಿತ್ತೆಸೆಯುತ್ತಾರೆ ಎಂಬ ಭರವಸೆ ಹೊಂದಿದ್ದೆ. ಏಳು ವರ್ಷಗಳಾದವು, ನಮ್ಮ ಭರವಸೆ ಈಗ ನುಚ್ಚುನೂರಾಗಿದೆ. ಇಂದು ದೇಶದ ಹಲವು ಪ್ರಭಾವಿ ಸಚಿವರು ಹಾಗೂ ಮುಖ್ಯಮಂತ್ರಿಗಳು ಗಂಭೀರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ದೇಶದ ಪರಿಣಾಮಕಾರಿಯಲ್ಲದ ನ್ಯಾಯಾಂಗ ವ್ಯವಸ್ಥೆಯ ಕಾರಣದಿಂದ ಅವರು ಇನ್ನೂ ಅಧಿಕಾರದಲ್ಲಿದ್ದಾರೆ,” ಎಂದಿದ್ದಾರೆ.
ಇನ್ನು ದೇಶದಲ್ಲಿ ಸರ್ಕಾರಿ ಸ್ವಾಮ್ಯದಲ್ಲಿದ್ದ ಸಂಸ್ಥೆಗಳನ್ನು ಖಾಸಗಿ ಬಂಡವಾಳಶಾಹಿಗಳಿಗೆ ಮಾರುತ್ತಿರುವ ವಿಚಾರವನ್ನು ಪ್ರಸ್ತಾಪಿಸಿರುವ ಬಿದರಿ ಅವರು ನೆಹರೂ, ಶಾಸ್ತ್ರಿ, ಇಂದಿರಾ, ಮೊರಾರ್ಜಿಯವರು ಮೂರ್ಖರೇ? ಎಂದು ಪ್ರಶ್ನಿಸಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ, ವಿಮಾ ಕಂಪೆನಿ, ವಿದೇಶಿ ತೈಲ ಮತ್ತು ಇತರ ಪ್ರಮುಖ ಸಂಸ್ಥೆಗಳನ್ನು ರಾಷ್ಟ್ರೀಕೃತಗೊಳಿಸಿದ್ದರು. ಆದರೆ, ಅವುಗಳು ಇಷ್ಟು ಬೇಗ ವಿದೇಶಿ ಕಂಪೆನಿಗಳಿಗೆ ಮಾರಾಟವಾಗುತ್ತದೆ ಎಂದು ಊಹಿಸಿರಲಿಕ್ಕಿಲ್ಲ ಎಂದಿದ್ದಾರೆ.

ಒಟ್ಟಾರೆಯಾಗಿ, ಕೇಂದ್ರ ಸರ್ಕಾರದ ನೀತಿಗಳ ವಿರುದ್ದ ಕಿಡಿ ಕಾರಿರುವ ಶಂಕರ ವಿದರಿ ಅವರು, ಬಿಜೆಪಿ ಸರ್ಕಾರದ ಆಡಳಿತ ವೈಖರಿಯನ್ನು ಟೀಕಿಸಿದ್ದಾರೆ. ಈ ಹಿಂದೆಯೂ ಏರುಗತಿಯಲ್ಲಿ ಸಾಗುತ್ತಿರುವ ತೈಲ ಬೆಲೆಯ ಕುರಿತು ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದರು.