ಕರ್ನಾಟಕ ಲೋಕಾಯುಕ್ತರು ಮಂಗಳವಾರ ರಾಜ್ಯಾದ್ಯಂತ 13 ಸರ್ಕಾರಿ ಅಧಿಕಾರಿಗಳು ಸೇರಿ 63ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿ ಕೋಟ್ಯಂತರ ಮೌಲ್ಯದ ಆಸ್ತಿ ಮತ್ತು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಿನ ಮೂರು ಸ್ಥಳಗಳಲ್ಲಿ 200ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ಮುಂಜಾನೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಬಳ್ಳಾರಿ, ಕೊಪ್ಪಳ, ಚಿಕ್ಕಬಳ್ಳಾಪುರ, ಮೈಸೂರು, ಕೋಲಾರ ಮತ್ತು ಧಾರವಾಡ ನಗರದಲ್ಲಿ ದಾಳಿ ನಡೆಸಲಾಗುತ್ತಿದೆ.
ಬೆಸ್ಕಾಂ ಅಧಿಕಾರಿಗಳ ಮನೆಯಲ್ಲಿ ಕೋಟಿ ಕೋಟಿ ಮೌಲ್ಯದ ವಸ್ತು, ನಗದು
ಜಕ್ಕೂರಿನಲ್ಲಿರುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ಡಿ.ಚನ್ನಕೇಶವ ಅವರಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ಮಂಗಳವಾರ ಬೆಳಗ್ಗೆ ಕರ್ನಾಟಕ ಲೋಕಾಯುಕ್ತ ದಾಳಿ ನಡೆಸಿದ್ದು, ಅಧಿಕಾರಿಗಳು ವಜ್ರ, ಚಿನ್ನ, ಪುರಾತನ ವಸ್ತುಗಳು ಸೇರಿದಂತೆ 1.5 ಕೋಟಿ ರೂಪಾಯಿ ಮೌಲ್ಯದ 92.95 ಲಕ್ಷ ರೂಪಾಯಿ ನಗದು ಪತ್ತೆ ಮಾಡಿದ್ದಾರೆ.
ಮನೆಯಲ್ಲಿ ಶೋಧ ನಡೆಸಿದಾಗ 6 ಲಕ್ಷ ರೂಪಾಯಿ ನಗದು, ಅಂದಾಜು 3 ಕೆಜಿ ತೂಕದ ಚಿನ್ನ, 28 ಕೆಜಿ ಬೆಳ್ಳಿ, 25 ಲಕ್ಷ ಮೌಲ್ಯದ ವಜ್ರ, 25 ಲಕ್ಷ ಮೌಲ್ಯದ ಪುರಾತನ ವಸ್ತುಗಳು ಪತ್ತೆಯಾಗಿವೆ.
ಬಿವೈ ವಿಜಯೇಂದ್ರ ಸಂಬಂಧಿ ಮೇಲೆ ಲೋಕಾಯುಕ್ತ ದಾಳಿ
ಈ ಹಿಂದೆ ಕಲಬುರಗಿಯ ಆರ್‌ಸಿಎಚ್ ಆಗಿದ್ದು, ಈಗ ಯಾದಗಿರಿಯ ಡಿಎಚ್ಒ ಆಗಿರುವ ಡಾ.ಪ್ರಭುಲಿಂಗ ಮಾನಕರ ಅವರ ಕಲಬುರಗಿಯ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜತೆಗೆ ಯಾದಗಿರಿಯ ಮನೆ, ಕಚೇರಿ ಹಾಗೂ ಕಲಬುರಗಿ ಸಮೀಪದ ಫಾರ್ಮ್ ಹೌಸ್ ಮೇಲೂ ಲೋಕಾಯುಕ್ತ ಎಸ್ ಪಿ ಕರ್ನೂಲ್ ನೇತೃತ್ವದ ತಂಡ ದಾಳಿ ನಡೆಸಿದ್ದು, ದಾಖಲೆಗಳ ತಪಾಸಣೆ ನಡೆಸಿದ್ದಾರೆ.
ಡಿಎಚ್ಒ ಆಗಿರುವ ಡಾ.ಪ್ರಭುಲಿಂಗ ಮಾನಕರ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪತ್ನಿಯ ಸಹೋದರ ಎಂದು ತಿಳಿದುಬಂದಿದೆ. ಬೆಳಿಗ್ಗೆ ಯಿಂದ ಶೋಧ ನಡೆಸ್ತಿರುವ ಅಧಿಕಾರಿಗಳು ಇಲ್ಲಿವರೆಗೆ 300 ಗ್ರಾಂ ಚಿನ್ನಾಭರಣ, 3 ಲಕ್ಷ ನಗದು ಪತ್ತೆ ಮಾಡಿದ್ದಾರೆನ್ನಲಾಗಿದೆ.

ನಂಜನಗೂಡು ಸರ್ಕಾರಿ ಕಾಲೇಜು ಪ್ರಾಧ್ಯಾಪಕ ಲೋಜಾಯುಕ್ತ ಬಲೆಗೆ
ನಂಜನಗೂಡು ಸರ್ಕಾರಿ ಪದವಿ ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕ ಮಹದೇವಸ್ವಾಮಿ ಅವರ ಮೈಸೂರಿನ ನಿವಾಸ ಸೇರಿಂದಂತೆ 11 ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ತಂಡ ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.
ಜೆ.ಪಿ ನಗರದ ಮಹದೇವಪುರದಲ್ಲಿರುವ ಮನೆ ಹಾಗೂ ನಂಜನಗೂಡು, ವಿಜಯನಗರ, ಜೆ.ಪಿ ನಗರ, ಕೃಷ್ಣರಾಜ ನಗರದಲ್ಲಿರುವ ಒಟ್ಟು ಐದು ಸ್ಟೀಲ್ ಅಂಗಡಿ, ಮಹದೇವಸ್ವಾಮಿ ಶಿಕ್ಷಣ ಸಂಸ್ಥೆ, ಜೆಪಿ ನಗರದಲ್ಲಿರುವ ಬಟ್ಟೆ ಅಂಗಡಿಗೆ ದಾಳಿ ನಡೆಸಿದ್ದಾರೆ. ಸದ್ಯಕ್ಕೆ ಶೋಧ ಮುಂದುವರೆದಿದೆ.
ನಿವೃತ್ತ ಉಪ ಕುಲಪತಿ ಮನೆಗೆ ಲೋಕಾಯುಕ್ತ ದಾಳಿ
ಬೀದರ್ ಪಶು ವಿಶ್ವವಿದ್ಯಾಲಯದ ನಿವೃತ್ತ ಉಪ ಕುಲಪತಿ ಎಚ್ ಡಿ ನಾರಾಯಣಸ್ವಾಮಿ ಅವರ ಮೇಲೆ ಅಕ್ರಮ ಆಸ್ತಿ ಸಂಬಂಧ ಅವರ ಬೆಂಗಳೂರಿನ ನಿವಾಸದ ಮೇಲೆ ಬೀದರ್ ಲೋಕಾಯುಕ್ತ ಪೊಲೀಸರಿಂದ ದಾಳಿ ನಡೆದಿದೆ. ಜತೆಗೆ ಬೆಳಗ್ಗೆ ಬೀದರ್ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಸಿಬ್ಬಂದಿ ಸುನೀಲ್ ಪಾಟೀಲ್ ಮನೆ ಮತ್ತು ಕಾಂಪ್ಲೆಕ್ಸ್ ಮೇಲೆ ಅಕ್ರಮ ಆಸ್ತಿ ಸಂಬಂಧ ಬೀದರ್ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು ಶೋಧನೆ ಕಾರ್ಯ ನಡೆಯುತ್ತಿದೆ.