ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವಧನವನ್ನು ತಡೆಹಿಡಿದ ಆರೋಪದ ಮೇಲೆ ಅಧಿಕಾರಿಗಳ ವಿರುದ್ಧ ಉಪ ಲೋಕಾಯುಕ್ತ ಬಿ ವೀರಪ್ಪ ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಅಘೋಷಿತ ಗೌರವಧನ, ನಿವೃತ್ತ ಸೈನಿಕರಿಗೆ ಸವಲತ್ತುಗಳ ಕುರಿತು ಜಿಲ್ಲೆಗಳಾದ್ಯಂತ ಅಧಿಕಾರಿಗಳ ವಿರುದ್ಧ ಪ್ರಕರಣಗಳು ದಾಖಲಾಗಿವೆ. ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಡಿಜಿಟಲ್ ಸಹಿ ಬಳಸಿ ಭೂ ಕಬಳಿಕೆ ಆಗಿರೋ ಆರೋಪದ ಬೆನ್ನಲ್ಲೇ ತುಮಕೂರು ಜಿಲ್ಲೆಯಾದ್ಯಂತ ಲೋಕಾಯುಕ್ತ ಬಿಗ್ ಶಾಕ್ ನೀಡಿ ಎಲ್ಲಾ ಎಸಿ ಹಾಗೂ ತಹಶೀಲ್ದಾರ್‌ಗಳ ವಿರುದ್ಧ ಲೋಕಾಯುಕ್ತ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ.

ತುಮಕೂರು ತಹಶೀಲ್ದಾರ್-ಪಿ.ಎಸ್.ರಾಜೇಶ್ವರಿ(Rajeshwari PS), ತುಮಕೂರು ಉಪವಿಭಾಗಾಧಿಕಾರಿ-ನಹಿದಾ ಝಮ್ ಝಮ್(Nahiida Zum Zum), ತಿಪಟೂರು ಉಪವಿಭಾಗಾಧಿಕಾರಿ-ಸಪ್ತ ಶ್ರೀ(Saptha Shree), ಮಧುಗಿರಿಯ ಉಪವಿಭಾಗಾಧಿಕಾರಿ-ಗೂಟೂರು ಶಿವಪ್ಪ(Guturu Shivappa), ಗುಬ್ಬಿ ತಹಶೀಲ್ದಾರ್- ಬಿ.ಆರತಿ(B Arathi), ಚಿಕ್ಕನಾಯಕನಹಳ್ಳಿ ತಹಶೀಲ್ದಾರ್- ಪುರಂದರ(Purandar), ಕುಣಿಗಲ್ ತಹಶೀಲ್ದಾರ್- ರಶ್ಮಿ(Rashmi), ಮಧುಗಿರಿ ತಹಶೀಲ್ದಾರ್- ಎಚ್. ಶ್ರೀನಿವಾಸ್(H Srinivas), ಕೊರಟಗೆರೆ ತಹಶೀಲ್ದಾರ್- ಕೆ.ಮಂಜುನಾಥ್(K Manjunath), ಪಾವಗಡ ತಹಶೀಲ್ದಾರ್-ವರದರಾಜು(Varadaraju), ಶಿರಾ ತಹಶೀಲ್ದಾರ್- ಸಚ್ಚಿದಾನಂದ ಕುಚನೂರು(Sachhidananda Kuchanuru), ತಿಪಟೂರು ತಹಶೀಲ್ದಾರ್- ಮೋಹನ್ ಕುಮಾರ್(Mohan Kumar) ಹಾಗೂ ತುರುವೇಕೆರೆ ತಹಶೀಲ್ದಾರ್- ಎಂ.ಇ.ಕುಂಇ ಅಹಮದ್ ಅವರ ಮೇಲೆ ದೂರು ದಾಖಲಾಗಿದೆ.
ದೇಶ ಸೇವೆ ಮಾಡಿ ನಿವೃತ್ತಿ ಹೊಂದಿರೋ ಮಾಜಿ ಸೈನಿಕರು, ಸ್ವಾತಂತ್ರ್ಯ ಹೋರಾಟಗಾರರಿಗೆ ಹಾಗೂ ಅವರನ್ನು ಅವಲಂಬಿತ ಕುಟುಂಬಗಳಿಗೆ ಸೌಲಭ್ಯಗಳನ್ನು ಒದಗಿಸಲು ತಡಮಾಡಿದ ಬೆನ್ನಲ್ಲೇ ತುಮಕೂರು ಜಿಲ್ಲೆಯ ಎಲ್ಲಾ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್‌ಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದು, ಎಲ್ಲಾ ತಹಶೀಲ್ದಾರ್‌ಗಳು ಹಾಗೂ ಉಪವಿಭಾಗಾಧಿಕಾರಿಗಳ ಮೇಲೆ ಲೋಕಾಯುಕ್ತ ಸ್ವಯಂ ಪ್ರೇರಿತವಾಗಿ ದೂರು ದಾಖಲು ಮಾಡಿಕೊಂಡಿದೆ.

ಇನ್ನು ತುಮಕೂರು ಜಿಲ್ಲೆಯಾದ್ಯಂತ ಸುಮಾರು 3 ಸಾವಿರಕ್ಕೂ ಹೆಚ್ಚು ಮಂದಿ ಮಾಜಿ ಸೈನಿಕರು. ಸೇವೆಯಿಂದ ನಿವೃತ್ತಿ ಹೊಂದಿ ಸುಮಾರು ವರ್ಷಗಳೇ ಆಗಿದ್ದರೂ ಈವರೆಗೂ ಅವರಿಗೆ ಯಾವುದೇ ಸೌಲಭ್ಯವನ್ನು ಕೊಟ್ಟಿಲ್ಲ. ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ಸುಮಾರು ಬಾರಿ ಅರ್ಜಿ ಹಾಕಿದ್ದರೂ ಯಾರು ಕಿವಿ ಕೊಡುತ್ತಿಲ್ಲ. ಆಗಾಗಿ ಲೋಕಾಯುಕ್ತ ಅಧಿಕಾರಿಗಳು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿರೋದು ಸಂತೋಷ ತಂದಿದೆ ಎಂದು ಮಾಜಿ ಸೈನಿಕರಿಬ್ಬರು ಅಭಿಪ್ರಾಯ ಹಂಚಿಕೊಂಡರು.

ಒಟ್ಟಿನಲ್ಲಿ ನಿವೃತ್ತ ಯೋಧರರಿಗೆ ಹಾಗೂ ಹುತಾತ್ಮ ಯೋಧರ ಅವಲಂಬಿತ ಕುಟುಂಬಗಳಿಗೆ ನಿಯಮಾನುಸಾರ ಸರ್ಕಾರದಿಂದ ನಿವೇಶನವನ್ನು ನಿಯಮಾನುಸಾರ ನಿಗದಿತ ಸಮಯದಲ್ಲಿ ನೀಡದೇ ಅಧಿಕಾರಿಗಳು ಭ್ರಷ್ಟಾಚಾರ ನಡೆಸುತ್ತಿರುವುದು ಹಾಗೂ ಕರ್ತವ್ಯಲೋಪ ಎಸಗುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಲೋಕಾಯುಕ್ತ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.