ನವದೆಹಲಿ (Newdelhi): ಲೋಕಾಸಭಾ ಚುನಾವಣೆಗೆ (Loksabha Election) ಕರ್ನಾಟಕದ ಅಭ್ಯರ್ಥಿಗಳ ಆಯ್ಕೆ ಇಂದೇ ಅಂತಿಮಗೊಳ್ಳುವ ಸಾಧ್ಯತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (B.S.Yediyurappa) ಹೇಳಿದ್ದಾರೆ.
ಇಂದು ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿ.ಎಸ್. ಯಡಿಯೂರಪ್ಪ ಅವರು, ಕೇಂದ್ರದ ನಾಯಕರ ಜತೆಗೆ ಇಂದು ಸಭೆ ಇದೆ. ವರಿಷ್ಠರ ಜತೆ 28 ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಯಲಿದೆ. ಜೆಡಿಎಸ್‌ಗೆ ಎಷ್ಟು ಸ್ಥಾನ ಬಿಟ್ಟು ಕೊಡಬೇಕು ಎಂಬುದನ್ನು ಹೈಕಮಾಂಡ್ ಇಂದು ಅಥವಾ ನಾಳೆ ನಿರ್ಧಾರ ಮಾಡಲಿದೆ. ವಿಧಾನಸಭೆಯಲ್ಲಿ ಸೋತ ನಾಯಕರು ಸಹ ಈ ಬಾರಿ ಟಿಕೆಟ್‌ಗೆ ಲಾಬಿ ನಡೆಸುತ್ತಿದ್ದು, ಅವರಿಗೆ ಟಿಕೆಟ್ ಕೊಡುವ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆ. ಶೀಘ್ರದಲ್ಲಿ ಎರಡನೇ ಪಟ್ಟಿಯಲ್ಲಿ ಕರ್ನಾಟಕದ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಆಗಲಿದೆ ಎಂದರು.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ರಾಜ್ಯದ 28 ಲೋಕಸಭೆ ಕ್ಷೇತ್ರಗಳ ಅಭ್ಯರ್ಥಿಗಳ ಅದರಲ್ಲೂ ವಿಶೇಷವಾಗಿ ಮಂಡ್ಯ ಮತ್ತು ಹಾಸನ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ತೀವ್ರ ಸಂಚಲನ ಮೂಡಿಸಿದೆ.
ಇಂದು ದೆಹಲಿಯಲ್ಲಿ ಸಿಇಸಿ ಸಭೆ: ಈಗಾಗಲೇ ಬಿಜೆಪಿ ಎಲ್ಲ ಪಕ್ಷಗಳಿಗಿಂತ ಮೊದಲು ವಿವಿಧ ರಾಜ್ಯಗಳ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈಗ 2ನೇ ಪಟ್ಟಿಯನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಇದರಲ್ಲಿ ಕರ್ನಾಟಕದ ಅಭ್ಯರ್ಥಿಗಳ ಪಟ್ಟಿ ಸಹ ಇರಲಿದೆ ಎನ್ನಲಾಗಿದ್ದು, ಇಂದು ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಫೈನಲ್ ಮಾಡಲಾಗುವುದು. ಜತೆಗೆ ಜೆಡಿಎಸ್‌ಗೆ ಯಾವೆಲ್ಲ ಕ್ಷೇತ್ರಗಳನ್ನು ಬಿಟ್ಟುಕೊಡಬೇಕು ಎಂಬುದು ಸಹ ತೀರ್ಮಾನ ಆಗಲಿದೆ ಎಂದು ಹೇಳಲಾಗುತ್ತಿದೆ.
ದೆಹಲಿಯಲ್ಲಿ ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ(Narendra Modi), ಗೃಹ ಸಚಿವ ಅಮಿತ್ ಶಾ (Amit shah), ಅಧ್ಯಕ್ಷ ಜೆ ಪಿ ನಡ್ಡಾ (j.p.nadda) ನೇತೃತ್ವದಲ್ಲಿ ಸಿಇಸಿ ಸಭೆ ನಡೆಯಲಿದೆ. ಬಿಜೆಪಿ ಚುನಾವಣಾ ಸಮಿತಿ ಸಭೆಯ ಸದಸ್ಯರಾಗಿರುವ ಬಿ.ಎಸ್.ಯಡಿಯೂರಪ್ಪನವರು ಈಗಾಗಲೇ ದೆಹಲಿಯಲ್ಲಿದ್ದು ಅವರ ಜೊತೆ ರಾಜ್ಯದ ಕೆಲವು ಪ್ರಮುಖ ನಾಯಕರೂ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ.
#Newdelhi #karnataka #mpelection #bsyediyurappa #bjp #bjplist