ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ (B.S.Yediyurappa) ಅವರು ತಮ್ಮ ಮಾತನ್ನು ಉಳಿಸಿಕೊಳ್ಳಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (K.S.Eshwarappa).
ಶಿವಮೊಗ್ಗದ ಮಲ್ಲೇಶ್ವರ ನಗರದ ಜಯಲಕ್ಷ್ಮೀ ನಿವಾಸದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (K.S.Eshwarappa) ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (B.S.Yediyurappa) ಅವರ ಮನೆಗೆ ಹೋದಾಗ, ಕಾಂತೇಶ್‌ಗೆ ಹಾವೇರಿ ಕ್ಷೇತ್ರದಿಂದ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಕಾಂತೇಶ್ ಆ ಭಾಗದಲ್ಲಿ ಓಡಾಡಿದ್ದ, ಜನರ ವಿಶ್ವಾಸಗಳಿಸಿದ್ದ. ಈಗ ಯಡಿಯೂರಪ್ಪ ತಮ್ಮ ಮಾತನ್ನು ಉಳಿಸಿಕೊಳ್ಳಲಿಲ್ಲ. ಇದೀಗ ನನ್ನ ಬೆಂಬಲಿಗರು ಶಿವಮೊಗ್ಗ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ನಾನು ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಮಾರ್ಚ್ 15 ರಂದು ನಾನು ಸಭೆ ಕರೆದಿದ್ದೇನೆ. ಆ ಸಭೆಯ ಅಭಿಪ್ರಾಯ ಆಧರಿಸಿ ಮುಂದುವರಿಯುತ್ತೇನೆ ಎಂದಿದ್ದಾರೆ.
ಯಡಿಯೂರಪ್ಪ ಹಠಕ್ಕೆ ಬಿದ್ದು ಶೋಭಾ ಕರಂದ್ಲಾಜೆ (Shobha Karandlaje) ಹಾಗೂ ಬಸವರಾಜ್ ಬೊಮ್ಮಾಯಿ (Basavaraj Bommai) ಅವರಿಗೆ ಟಿಕೆಟ್ ಕೊಡಿಸಿದ್ದಾರೆ. ನನ್ನ ಮಗನಿಗೆ ಟಿಕೆಟ್ ಕೊಡಿಸಲು ಆಗಲಿಲ್ಲವೇ..? ಎಂದು ಪ್ರಶ್ನಿಸಿದ್ದಾರೆ.
ಹಿಂದುತ್ವ ವಿಚಾರದಲ್ಲಿ ಮಾತನಾಡುತ್ತಿದ್ದವರನ್ನು ಮೂಲೆಗುಂಪು ಮಾಡಲಾಗಿದೆ. ಮೋದಿ ಅವರ ಶಿವಮೊಗ್ಗ ಭೇಟಿಯ ಮೊದಲೇ ಅಭಿಪ್ರಾಯ ಸಂಗ್ರಹಣಾ ಸಭೆ ನಡೆಯಲಿದೆ ಎಂದಿದ್ದಾರೆ.
‘ಟಿಕೆಟ್ ತಪ್ಪಿಸಲು ಯತ್ನಿಸಿದವರಿಗೆ ಒಳ್ಳೇದಾಗಲಿ’
ಹಾಲಿ ಸಂಸದ ರಮೇಶ ಜಿಗಜಿಣಗಿಗೆ (Ramesh Jigajinagi) ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಘೋಷಣೆಯಾದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಜಿಗಜಿಣಗಿ ಅವರಿಗೆ ಸಿಹಿ ತಿನಿಸಿ ಸಂಭ್ರಮಾಚರಣೆ ಮಾಡಿದರು.

ಈ ವೇಳೆ ಮಾತನಾಡಿ ಜಿಗಜಿಣಗಿ, ಪಕ್ಷದಿಂದ ಟಿಕೆಟ್ ಘೋಷಣೆ ಮಾಡಿದಕ್ಕೆ ಸಂತಸ ತಂದಿದೆ. ಟಿಕೆಟ್ ಕ್ರೆಡಿಟ್ ನಮ್ಮ ರಾಷ್ಟ್ರೀಯ ನಾಯಕರು ಹಾಗೂ ಕಾರ್ಯಕರ್ತರಿಗೆ ಸಲ್ಲಬೇಕು. ಇದರಲ್ಲಿ ನನದ್ದೇನು ಪಾತ್ರ ಇಲ್ಲ. ಎಲ್ಲ ಕಾರ್ಯಕರ್ತರದ್ದು ಎಂದರು.
ನನಗೆ ಟಿಕೆಟ್ ಸಿಕ್ಕಿದ್ದು ಕಾರ್ಯಕರ್ತರಿಗೆ ಸಿಕ್ಕಂತೆ. ಕಾರ್ಯಕರ್ತರ ಆಶಯದಂತೆ ನನಗೆ ಟಿಕೆಟ್ ಸಿಕ್ಕಿದೆ. ನನಗೆ ಟಿಕೆಟ್ ಸಿಗುತ್ತದೆ ಎಂದು ಮೊದಲೇ ಹೇಳಿದ್ದೇ. ಎಲ್ಲವೂ ಮೀರಿ ನನಗೆ ಟಿಕೆಟ್ ನೀಡಿದ್ದಾರೆ. ನನಗೆ ಯಾರು ವಿರೋಧ ಮಾಡಿದ್ದಾರೆ ಅವರೆಲ್ಲರಿಗೂ ದೇವರು ಒಳ್ಳೆಯದು ಮಾಡಲಿ ಎಂದಿದ್ದಾರೆ.
ಪ್ರತಾಪ್ ಸಿಂಹಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಮುತಾಲಿಕ್ ಕಿಡಿ
ಪ್ರತಾಪ್ ಸಿಂಹಗೆ (Pratap Simha) ಬಿಜೆಪಿ ಟಿಕೆಟ್ ಕೈತಪಿದ್ದಕ್ಕೆ ಬಿಜೆಪಿ ವರಿಷ್ಠರ ನಡೆಯನ್ನು ಪ್ರಮೋದ್ ಮುತಾಲಿಕ್ (Pramod Mutalik) ತೀವ್ರವಾಗಿ ಖಂಡಿಸಿದ್ದಾರೆ.

ಶ್ರೀರಾಮ ಸೇನೆ ಸಂಘಟನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿಸಿ ಬಾರಿ ದೊಡ್ಡ ತಪ್ಪು ಮಾಡಿದ್ದಾರೆ. ಎರಡು ಬಾರಿ ಗೆದ್ದಿರುವ ಪ್ರತಾಪ್ ಸಿಂಹಗೆ ಟಿಕೆಟ್ ಕೊಟ್ಟಿಲ್ಲ, ಇದು ದೊಡ್ಡ ಮಟ್ಟದ ಅಕ್ಷಮ ಅಪರಾಧ. ರಾಜ್ಯ-ರಾಷ್ಟ್ರಮಟ್ಟದ ನಾಯಕರು ಟಿಕೆಟ್ ತಪ್ಪಿಸಿದ್ದಾರ ಗೋತ್ತಿಲ್ಲ. ಆದರೆ ಬಹಳ ದೊಡ್ಡ ತಪ್ಪು. ರಾಜ್ಯಕ್ಕೆ ಒಬ್ಬ ಸಕ್ರಿಯ ಅಭಿವೃದ್ದಿ ಶೀಲ, ಹಿಂದುತ್ವವಾದಿ ಯುವಕನಿಗೆ ಮೊಸ ಮಾಡಿದ್ದೀರಿ. ಕರ್ನಾಟಕದ ಜನ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದಿದ್ದಾರೆ.
ಈ ರೀತಿಯ ನಿಮ್ಮ ಪ್ರವೃತ್ತಿ ಬದಲಾವಣೆ ಮಾಡಿಕೊಳ್ಳದೆ ಇದ್ದರೆ, ಕರ್ನಾಟಕದಲ್ಲಿ ಪ್ರಾಮಾಣಿಕತೆ, ಹಿಂದುತ್ವ ಉಳಿಯುವುದಿಲ್ಲ . ಸಕ್ರಿಯತೆ, ಅಭಿವೃದ್ಧಿ, ಪ್ರಾಮಾಣಿಕತೆಗೆ ಬೆಲೆ ಇಲ್ಲವೇ!? ಎಂದು ಪ್ರಶ್ನಿಸಿದ್ದಾರೆ.
ರಾಯಚೂರು ಪ್ರವಾಸ ರದ್ದು ಮಾಡಿ ಬೆಂಗಳೂರಿಗೆ ಶೆಟ್ಟರ್
ಧಾರವಾಡ ಟಿಕೆಟ್ ತಪ್ಪಿದ ಬೆನ್ನ ಹಿಂದೆಯೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar), ರಾಯಚೂರ ಪ್ರವಾಸ ಅರ್ಧಕ್ಕೆ ಮೊಟಕುಗೊಳಿಸಿ ಹುಬ್ಬಳ್ಳಿಗೆ ವಾಪಸ್ಸಾಗಿದ್ದಾರೆ.

ಜಗದೀಶ್ ಶೆಟ್ಟರ್ ರಾಯಚೂರು ಪ್ರವಾಸ ದಿಢೀರ್ ರದ್ದಾಗಿದೆ. ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಪ್ರವಾಸ ರದ್ದು ಮಾಡಿದ್ದಾರೆ. ಶೆಟ್ಟರ್ ರಾಯಚೂರಿಗೆ ಪೂರ್ವ ನಿರ್ಧರಿತ ಪ್ರವಾಸ ಕೈಗೊಂಡಿದ್ದರು. ಸುದ್ದಿಗೋಷ್ಠಿಗೂ ಸಮಯ ನಿಗದಿಪಡಿಸಿದ್ದರು. ಅಭ್ಯರ್ಥಿ ಸಂಪರ್ಕ ಅಭಿಯಾನ, ಗೋಡೆ ಬರಹಕ್ಕೆ ಚಾಲನೆ ನೀಡಬೇಕಿತ್ತು. ಜೊತೆಗೆ ಹತ್ತಿ ಬೆಳೆಗಾರರು ಹಾಗೂ ವ್ಯಾಪಾರಸ್ಥರ ಜೊತೆ ಸಭೆ ನಿಗದಿಯಾಗಿತ್ತು. ದಿಢೀರನೆ ಎಲ್ಲಾ ಕಾರ್ಯಕ್ರಮಗಳು ರದ್ದು ಮಾಡಿ ಹುಬ್ಬಳ್ಳಿಗೆ ವಾಪಸ್ಸಾಗಿದ್ದಾರೆ. ಇಂದು ಬೆಂಗಳೂರಿಗೆ ತೆರಳಿ ಬಿಜೆಪಿ ಹಿರಿಯ ನಾಯಕರನ್ನು ಭೇಟಿಯಾಗಲಿದ್ದಾರೆ ಎನ್ನಲಾಗ್ತಿದೆ.
‘ಜೆಡಿಎಸ್‌ಗೆ ಕೋಲಾರ ಟಿಕೆಟ್ ಕೊಟ್ಟರೆ ಅಸಮಾಧಾನ ಇಲ್ಲ’
ಕೋಲಾರ, ಮಂಡ್ಯ, ಹಾಸನದಿಂದ ಜೆಡಿಎಸ್ (JDS) ಸ್ಪರ್ಧೆ ಮಾಡಲಿದೆ ಎಂಬ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ (H.D.Kumarswamy) ಹೇಳಿಕೆಗೆ ಕೋಲಾರದಲ್ಲಿ ಸಂಸದ ಎಸ್. ಮುನಿಸ್ವಾಮಿ (S.Muniswamy) ಪ್ರತಿಕ್ರಿಯೆ ನೀಡಿದ್ದು, ಜೆಡಿಎಸ್ NDA ಮೈತ್ರಿಕೂಟದ ಮಿತ್ರಪಕ್ಷ, ಕೋಲಾರ ಕ್ಷೇತ್ರ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ, ಆದರೆ ತೀರ್ಮಾನ ತೆಗೆದುಕೊಳ್ಳುವುದು ನಮ್ಮ ಹೈ ಕಮಾಂಡ್.

6 ತಿಂಗಳ ಹಿಂದೆಯೇ ಹೈಕಮಾಂಡ್ ಕ್ಷೇತ್ರದ ಸರ್ವೆ ಮಾಡಿಸಿದ್ದಾರೆ. ಅದರ ಪ್ರಕಾರ ರಾಷ್ಟ್ರೀಯ ನಾಯಕರು ಮತ್ತು ರಾಜ್ಯ ನಾಯಕರು ತೀರ್ಮಾನ ತೆಗೆದುಕೊಳ್ಳತ್ತಾರೆ.
ನಾನು ಕೋಲಾರ ಟಿಕೆಟ್ ನಂಗೆ ಕೊಡಿ ಎಂದು ಕೇಳಿಲ್ಲ, ನಾನು ಹಾಲಿ ಸಂಸದ ನಾಗಿ, ನನ್ನ ಕೆಲಸ ನೋಡಿ ನಾಯಕರು ತೀರ್ಮಾನ ಮಾಡುತ್ತಾರೆ. ಹೈಕಮಾಂಡ್ ಏನೇ ತೀರ್ಮಾನ ತೆಗೆದುಕೊಂಡರು ಅದಕ್ಕೆ ನಾನು ಬದ್ದ, ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ.
#karnataka #bengaluru #loksabhaelection #bjp