ನಿರಂತರವಾಗಿ ಏರಿಕೆಯಾಗುತ್ತಿರುವ ಕೋವಿಡ್ ಸೋಂಕಿನ ಕಾರಣಕ್ಕೆ ದೇಶದ ವಿವಿದೆಡೆಗಳಲ್ಲಿ ʼಅರೆ-ಲಾಕ್‌ಡೌನ್ʼ ನಿಯಮಗಳನ್ನು ವಿಧಿಸುತ್ತಿರುವುದು ಈಗ ಟೀಕೆಗೆ ಗುರಿಯಾಗುತ್ತಿದೆ. ಈ ಲಾಕ್‌ಡೌನ್ ನಿಯಮಗಳ ವಿರುದ್ದವಾಗಿ ದನಿ ಎತ್ತಿರುವ ಉದ್ಯಮಿ ಅನಿಲ್ ಅಂಬಾನಿ ಮಗ ಅನ್ಮೋಲ್ ಅಂಬಾನಿ ಅವರು, ಲಾಕ್‌ಡೌನ್ ನಿಯಮಗಳನ್ನು ರೂಪಿಸುತ್ತಿರುವ ಸರ್ಕಾರಗಳ ವಿರುದ್ದ ಕಿಡಿಕಾರಿದ್ದಾರೆ. ಈ ನಿಯಮಗಳು ಸಮಾಜ ಮತ್ತು ಆರ್ಥಿಕತೆಯ ಬೆನ್ನೆಲುಬನ್ನು ಮುರಿಯುತ್ತವೆಯೇ ಹೊರತು, ಆರೋಗ್ಯವನ್ನು ವೃದ್ದಿಸುವುದಿಲ್ಲ ಎಂದು ಹೇಳಿದ್ದಾರೆ.
ಲಾಕ್‌ಡೌನ್ ಹಿಂದೆ ಇರುವುದು ಮಧ್ಯಮವರ್ಗದ ಬೆನ್ನು ಮುರಿಯುವ ಹುನ್ನಾರ, ಆ ಮೂಲಕ ಇ-ಕಾಮರ್ಸ್ ಅನ್ನು ಉತ್ತೇಜಿಸುವುದು ಇದರ ಹಿಂದಿರುವ ಷಡ್ಯಂತ್ರ. ಸಾಂಕ್ರಾಮಿಕ ರೋಗಕ್ಕೂ ಲಾಕ್‌ಡೌನ್‌ಗೂ ಒಂದಕ್ಕೊಂದು ಸಂಬಂಧವಿಲ್ಲ. ವಾಸ್ತವಿಕವಾಗಿ, ಚೀನಾದಂತಹ ಸರ್ವಾಧಿಕಾರಿ ಫ್ಯಾಸಿಸ್ಟ್ ದೇಶದ ನಿರ್ಮಾಣವೇ ಲಾಕ್‌ಡೌನ್‌ನ ಮೂಲ ಉದ್ದೇಶ ಎಂದು ಅನ್ಮೋಲ್ ಅಂಬಾನಿ ಗಂಭೀರ ಆರೋಪ ಹೊರಿಸಿದ್ದಾರೆ.
ಈ ಲಾಕ್‌ಡೌನ್ ನಿಯಮಗಳಿಂದಾಗಿ ಮಧ್ಯಮ ವರ್ಗದ ಉದ್ಯಮಗಳು ಹಾಗೂ ದಿನಗೂಲಿ ಮೇಲೆ ಬದುಕು ನಡೆಸುವವರು ತೊಂದರೆಗೆ ಒಳಗಾಗುತ್ತಿದ್ದಾರೆ ಎಂದು ಅನ್ಮೋಲ್ ಹೇಳಿದ್ದಾರೆ.
“ವೃತ್ತಿಪರ ʼನಟರುʼ ಶೂಟಿಂಗ್ ನಡೆಸಬಹುದು. ವೃತ್ತಿಪರ ʼಕ್ರಿಕೆಟಿಗರುʼ ತಡರಾತ್ರಿಯವರೆಗೆ ಆಟವಾಡಬಹುದು. ವೃತ್ತಿಪರ ʼರಾಜಕಾರಣಿಗಳುʼ ಬೃಹತ್ ಸಮಾವೇಶ ನಡೆಸಬಹುದು. ಆದರೆ ನೀವು ಮತ್ತು ನಿಮ್ಮ ಉದ್ಯಮ ಅವಶ್ಯಕವಲ್ಲ. ಇನ್ನೂ ನಿಮಗೆ ತಿಳಿದಿಲ್ಲವೇ?” ಎಂದು ಅವರು ಹೇಳಿದ್ದಾರೆ. ಈ ಹಿಂದೆಯೂ ಲಾಕ್‌ಡೌನ್ ನಿಯಮಗಳ ಕುರಿತಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.
#Scandemic ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು, ʼಅವಶ್ಯಕʼ ಎಂದರೆ ಅರ್ಥವೇನು? ಪ್ರತಿಯೊಬ್ಬ ವ್ಯಕ್ತಿಯ ಕೆಲಸ ಅವರಿಗೆ ಅವಶ್ಯಕವಾದದ್ದು. ಲಾಕ್‌ಡೌನ್ ಎನ್ನುವುದು ಆದಾಯ ವರ್ಗಾವಣೆಯ ಪ್ರಮುಖ ಅಸ್ತ್ರ. ಇದು ಸರ್ಕಾರದ ವೈಫಲ್ಯತೆ ಎಂದು ಜನರು ಅಂದುಕೊಂಡಿದ್ದಾರೆ. ಅಲ್ಲ, ಇದು ಹೊಸ ಜಾಗತಿಕ ವ್ಯವಸ್ಥೆಯನ್ನು ರೂಪಿಸುವ ವ್ಯವಸ್ಥಿತ ನೀತಿ, ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿ ʼಅವಶ್ಯಕವಲ್ಲದʼ ಸೇವೆಗಳಿಗೆ ನಿರ್ಬಂಧ ಹೇರಿ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಇದರಿಂದಾಗಿ ಸ್ಥಳೀಯ ಉದ್ಯಮಿಗಳು ನಷ್ಟ ಅನುಭವಿಸುವಂತಾಗಿದೆ. ಈ ಕುರಿತಾಗಿ ಮಾತನಾಡಿರುವ ಅನ್ಮೋಲ್, ಲಾಕ್‌ಡೌನ್‌ಗಳು ಯಾವತ್ತೂ ಆರೋಗ್ಯ ಸುಧಾರಣೆಗೆ ಬಳಕೆಯಾಗಲಿಲ್ಲ. ಇದು ನಮ್ಮ ಸಮಾಜ ಹಾಗೂ ಆರ್ಥಿಕತೆಯ ಬೆನ್ನೆಲುಬನ್ನು ಮುರಿಯುತ್ತದೆ. ದಿನಗೂಲಿ ನೌಕರರಿಂದ ಹಿಡಿದು, ಸ್ವ-ಉದ್ಯಮಿಗಳು, ಸಣ್ಣ ಮತ್ತು ಮಧ್ಯಮ ಉದ್ಯಮಿಗಳು, ರೆಸ್ಟೋರೆಂಟ್‌ಗಳು, ಢಾಬಾ ಮತ್ತು ಫ್ಯಾಷನ್ ಜಗತ್ತಿನವರೆಗೆ ಎಲ್ಲರಿಗೂ ತೊಂದರೆ ನೀಡುತ್ತದೆ, ಎಂದು ಅಭಿಪ್ರಾಯಪಟ್ಟಿದ್ದಾರೆ.
“ಲಾಕ್‌ಡೌನ್ ಎಂಬುದೇ ಸಾಮಾನ್ಯ ಪರಿಸ್ಥಿತಿ ಎಂದು ಬೆಳೆಯುವ ಮಕ್ಕಳ ಮೇಲೆ ಇದು ಮಾನಸಿಕವಾಗಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಜಿಮ್, ಆಟದ ಮೈದಾನಗಳು, ವ್ಯಾಯಾಮ ಸ್ಥಳಗಳು, ತಾಜಾ ಗಾಳಿ ಮತ್ತು ಸೂರ್ಯನ ಕಿರಣ ನಿಜಕ್ಕೂ ಆರೋಗ್ಯದ ಆಧಾರ ಸ್ಥಂಬಗಳು,” ಎಂದಿದ್ದಾರೆ.