ಕರೋನಾ ಎರಡನೆಯ ಅಲೆ ತಡೆಗಟ್ಟಲು ರಾಜ್ಯ ಸರ್ಕಾರ ಹೇರಿದ ಲಾಕ್‌ಡೌನ್ ಅವಧಿಯನ್ನು ಮತ್ತೆ ವಿಸ್ತರಣೆಗೊಳಿಸಲಾಗಿದೆ. ಕರೋನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಈಗ ಇರುವ ನಿಯಮಗಳು ಜೂ.14 ರ ಬೆಳಿಗ್ಗೆ 6 ವರೆಗೆ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಲಾಕ್ ಡೌನ್ ವಿಸ್ತರಣೆ ಹಾಗೂ ಕರೋನಾ ಪ್ಯಾಕೇಜ್ ಬಗ್ಗೆ ಜೂ.03 ರಂದು ಸಂಜೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, ಕರೋನಾ ನಿಯಂತ್ರಣಕ್ಕಾಗಿ ವಿಧಿಸಲಾಗಿಸಲಾಗಿರುವ ನಿಯಮಗಳಲ್ಲಿ ಸದ್ಯಕ್ಕೆ ಯಾವುದೇ ಗಣನೀಯ ಸಡಿಲಿಕೆ ಹಾಗೂ ಬದಲಾವಣೆಗಳೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ಲಾಕ್‌ಡೌನ್ ವಿಸ್ತರಣೆ ಸುತ್ತ ಹುಟ್ಟಿಕೊಂಡ ಗೊಂದಲಗಳಿಗೆ ಅಧಿಕೃತವಾಗಿ ತೆರೆ ಎಳೆದಿದ್ದಾರೆ.
ಅದಾಗ್ಯೂ, ಕೆಲವು ನಿರ್ಬಂಧಗಳನ್ನು ಸಡಿಲಿಸಲಾಗಿದ್ದು, ಹೊಟೆಲ್ ಗಳಿಂದ ಪಾರ್ಸಲ್ ಪಡೆಯುವುದಕ್ಕೆ, ರಫ್ತು ಮಾಡುವುದಕ್ಕೆ ಅಗತ್ಯವಿರುವ ಚಟುವಟಿಕೆಗಳಿಗೆ ನಿರ್ಬಂಧವನ್ನು ಸಡಿಲಿಸಲಾಗಿದೆ ಎಂದು ತಿಳಿಸಿದ್ದಾರೆ.
500 ಕೋಟಿ ರೂಪಾಯಿ ಪರಿಹಾರ ಪ್ಯಾಕೇಜ್ ಘೋಷಿಸಿದ ಸಿಎಂ
ಕೋವಿಡ್-19 ನಿಂದ ಸಂಕಷ್ಟಕ್ಕೀಡಾಗಿರುವ ವಿವಿಧ ವಲಯಗಳಿಗೆ ಒಟ್ಟು 500 ಕೋಟಿ ರೂಪಾಯಿ ಪರಿಹಾರ ಪ್ಯಾಕೇಜ್ ನ್ನೂ ಸಿಎಂ ಘೋಷಣೆ ಮಾಡಿದ್ದಾರೆ. ಅದರ ವಿವರ ಈ ಕೆಳಗಿನಂತಿದೆ.
• ಪವರ್ ಲೂಮ್ ನೇಕಾರರು: 3,000 ರೂಪಾಯಿ
• ಚಲನಚಿತ್ರ ಮತ್ತು ದೂರದರ್ಶನ ಮಾಧ್ಯಮದ ಅಸಂಘಟಿತ ಕಾರ್ಮಿಕರು: 3,000 ರೂಪಾಯಿ
• ಮೀನುಗಾರರು: 3000 ರೂಪಾಯಿ
• ಮುಜರಾಯಿ ದೇವಸ್ಥಾನದ ಅರ್ಚಕರು, ಸಿಬ್ಬಂದಿಗಳು: 3000 ರುಪಾಯಿ
• ಆಶಾ ಕಾರ್ಯಕರ್ತೆಯರು: 3,000 ರೂಪಾಯಿಗಳು
ಶಾಲಾ ಮಕ್ಕಳಿಗೆ ಆಹಾರ ಧಾನ್ಯಗಳ ಜೊತೆಗೆ ಹಾಲಿನ ಪುಡಿಯನ್ನು ಹೆಚ್ಚುವರಿಯಾಗಿ ವಿತರಿಸಲು ನಿರ್ಧರಿಸಲಾಗಿದ್ದು, ಆ ಮೂಲಕ ಹೈನುಗಾರಿಕೆಯಲ್ಲಿ ತೊಡಗಿಕೊಂಡ ರೈತರ ಸಮಸ್ಯೆಗಳ ಕಡೆಗೂ ಗಮನಹರಿಸಲಾಗಿದೆ. ಇನ್ನು ಕೈಗಾರಿಕೆಗಳಿಗೆ ಮೇ ಮತ್ತು ಜೂನ್ ತಿಂಗಳ ವಿದ್ಯುತ್ ಶುಲ್ಕ ಪಾವತಿಸುವುದರಿಂದ ವಿನಾಯಿತಿ ನೀಡಲಾಗಿದೆ.
ಒಟ್ಟಾರೆ, ಪ್ಯಾಕೇಜ್ನಿಂದ 62,22,335 ಮಂದಿ ಫಲಾನುಭವಿಗಳಾಗಲಿದ್ದು, 323 ಕೋಟಿ ವೆಚ್ಚವಾಗಲಿದೆ ಎಂದು ಸರ್ಕಾರ ಹೊರಡಿಸಿರುವ ಪ್ರಕಟನೆ ತಿಳಿಸಿದೆ.