ಪಶ್ಚಿಮ ಬಂಗಾಳದ 178 ಸಫಾಯಿ ಕರ್ಮಾಚಾರಿಗಳು ಅಥವಾ ನೈರ್ಮಲ್ಯ ಕಾರ್ಮಿಕರನ್ನು ಸ್ಮಶಾನಗಳಲ್ಲಿ ಮಾನವ ಮೂಳೆಗಳನ್ನು ಆಯುವ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಆಘಾತಕಾರಿ ಅಂಶವನ್ನು ವರ್ಲ್ಡ್ ಸ್ಯಾನಿಟೇಶನ್ ವರ್ಕರ್ಸ್ ಅಲೈಯನ್ಸ್, ಸೌತ್ ಏಷ್ಯನ್ ಸ್ಯಾನಿಟೇಶನ್ ಲೇಬರ್ ನೆಟ್‌ವರ್ಕ್ (ಎಸ್‌ಎಎಸ್‌ಎಲ್‌ಎನ್) ಮತ್ತು ಪಶ್ಚಿಮ ಬಂಗಾಳದ ಸಫಾಯಿ ಕರ್ಮಾಚಾರಿ ಏಕ್ತಾ ಮಂಚ್‌ನ ಜಂಟಿ ಸಂಶೋಧನಾ ಅಧ್ಯಯನವು ಬಹಿರಂಗಪಡಿಸಿದೆ. ಪಶ್ಚಿಮ ಬಂಗಾಳದ ಬಿರ್ಭುಮ್, ಸಿಲಿಗುರಿ ಮತ್ತು ಕೂಚ್ ಬೆಹಾರ್ ಜಿಲ್ಲೆಗಳ ಸ್ಮಶಾಣಗಳಲ್ಲಿ, ಮಾನವ ಮೂಳೆಗಳನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡಿ, ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ಪೋಷಿಸಲು ಅಗತ್ಯವಿರುವ ಹಣವನ್ನು ಅವರು ಸಂಪಾದಿಸುತ್ತಿದ್ದಾರೆ ಎಂದು ವರದಿ ಹೇಳಿದೆ.
ಹೀಗೆ ಮೂಳೆಗಳನ್ನು ಅಕ್ರಮವಾಗಿ ಸಂಗ್ರಹಿಸಿ ಮಾನವ ಮೂಳೆ ವ್ಯಾಪಾರಿಗಳಿಗೆ ಅದನ್ನು ಮಾರಾಟ ಮಾಡುತ್ತಾರೆ. ವ್ಯಾಪಾರಿಗಳು ಅವುಗಳನ್ನು ಕ್ಯಾಲ್ಸಿಯಂ ಉತ್ಪಾದನಾ ಫ್ಯಾಕ್ಟರಿಗಳಿಗೆ ಹಾಗೂ ಸೌಂದರ್ಯ ಸಾಧನಗಳನ್ನು ಉತ್ಪಾದಿಸುವ ಕಿರುಘಟಕಗಳಿಗೆ ಮಾರಾಟ ಮಾಡುತ್ತಾರೆ. ಕೆಲವು ಪ್ರಕರಣಗಳಲ್ಲಿ ಮೂಳೆ ಆಯುವವರೇ ಮೂಳೆಗಳ ಅಗತ್ಯವಿರುವವರಿಗೆ ತಾವೇ ನೇರವಾಗಿ ಮಾರಾಟ ಮಾಡುತ್ತಾರೆ.
ಪಶ್ಚಿಮ ಬಂಗಾಳವು ದೇಶದಲ್ಲಿ ಮೂಳೆ ಆಯುವವರಾಗಿ ದುಡಿಯುತ್ತಿರುವ ಅತ್ಯಂತ ಹೆಚ್ಚಿನ ಸಫಾಯಿ ಕರ್ಮಾಚಾರಿಗಳನ್ನು ಹೊಂದಿರುವ ರಾಜ್ಯ ಎನ್ನುವುದನ್ನು ಈ ವಾರ ಬಿಡುಗಡೆಗೊಂಡ ‘ಟಾಯ್ಲೆಟ್ ಸ್ಟೋರೀಸ್ ಆಫ್ ಇಂಡಿಯಾ’ ಹೆಸರಿನ ಅಧ್ಯಯನ ವರದಿಯು ಬಹಿರಂಗಪಡಿಸಿದೆ. ಪಶ್ಚಿಮ ಬಂಗಾಳ ಮಾತ್ರವಲ್ಲದೆ, ಒಡಿಶಾ ಮತ್ತು ರಾಜಸ್ಥಾನಗಳಲ್ಲೂ ಈ ದಂಧೆಯಲ್ಲಿ ಸಫಾಯಿ ಕರ್ಮಾಚಾರಿಗಳು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಒಡಿಶಾ ಮತ್ತು ರಾಜಸ್ಥಾನ ದಲ್ಲಿ ಕ್ರಮವಾಗಿ 65 ಮತ್ತು 61 ಸಫಾಯಿ ಕರ್ಮಾಚಾರಿಗಳು ಮೂಳೆ ಆಯುವವರಾಗಿ ತಮ್ಮ ವೃತ್ತಿ ಆಯ್ದುಕೊಂಡಿದ್ದಾರೆ. ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾದಲ್ಲಿ ಅಕ್ರಮ ಮೂಳೆ ಮಾರಾಟಗಾರರು ಸ್ಮಶಾನಗಳಿಂದ ಮೂಳೆಗಳನ್ನು ಸಂಗ್ರಹಿಸಲು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಸ್ವಚ್ಛತಾ ಕಾರ್ಮಿಕರನ್ನು ನೇಮಿಸಿಕೊಂಡಿದ್ದು, ಅವರಿಗೆ ಪ್ರತಿ ವಹಿವಾಟಿಗೆ ಕೇವಲ 200 ರೂ.ಗಳಷ್ಟು ಅತ್ಯಲ್ಪ ಹಣವನ್ನು ನೀಡಲಾಗುತ್ತಿದೆ ಎಂದು ದಿ ವೈರ್ ವರದಿ ಮಾಡಿದೆ.

ಸಣ್ಣ ಪ್ರಮಾಣದ ವ್ಯಾಪಾರ ಮಾದರಿಗಳು
ಮೂಳೆಗಳನ್ನು ಸಂಗ್ರಹಿಸುವುದನ್ನು ಜೀವನೋಪಾಯವಾಗಿ ಆಯ್ಕೆ ಮಾಡಬಹುದು ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ, ಆದರೆ ಬದುಕಲು ಕೂಡಾ ಪರದಾಡುತ್ತಿರುವ ಭಾರತದ ಅನೇಕ ನೈರ್ಮಲ್ಯ ಕಾರ್ಮಿಕರಿಗೆ ಇದು ಬದುಕಲು ಸಾಕಾಗುವಷ್ಟು ಹಣವನ್ನು ಗಳಿಸುವ ಉದ್ಯೋಗವಾಗಿದೆ.
PEMSR ಕಾಯಿದೆ, 2013 ಪ್ರಕಾರ ದೇಶದಲ್ಲಿ ಮ್ಯಾನ್ಯುವಲ್ ಸ್ಕಾವೆಂಜಿಂಗ್ ಅಥವಾ ಕಾರ್ಮಿಕರು ಮಲವನ್ನು ಹೊರುವ ವೃತ್ತಿಯನ್ನು ನಿಷೇಧಿಸಲಾಗಿದೆ. ಆದಾಗ್ಯೂ, ದೇಶದಲ್ಲಿ ಒಣ ಶೌಚಾಲಯಗಳು (ನೀರು ಪೂರೈಕೆಯಿಲ್ಲದ ಶೌಚಾಲಯಗಳು) ಮುಂದುವರಿದಿರುವುದರಿಂದ ಈ ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಅವಶ್ಯಕತೆಯಿದೆ.
ಸ್ಮಶಾನಗಳಿಂದ ಅಕ್ರಮವಾಗಿ ಮಾನವ ಮೂಳೆಗಳನ್ನು ಆಯ್ದು ಮಾರಾಟ ಮಾಡುವ ವೃತ್ತಿ ಕಳೆದ ಎರಡು ದಶಕಗಳಿಂದಲೂ ಅಸ್ತಿತ್ವದಲ್ಲಿದೆಯಾದರೂ, ಕೋವಿಡ್ ಕಾಲಘಟ್ಟದಲ್ಲಿ ಪಶ್ಚಿಮ ಬಂಗಾಳದಲ್ಲಿ ಮೂಳೆ ಆಯುವವರ ಸಂಖ್ಯೆ ಶೇ.90ರಷ್ಟು ಏರಿಕೆಯಾಗಿದೆ.
ಮಾರ್ಚ್ 2020ರಲ್ಲಿ ದೇಶಾದ್ಯಂತ ಲಾಕ್ಡೌನ್ ಹೇರಲ್ಪಟ್ಟಾಗ ಸಫಾಯಿ ಕರ್ಮಾಚಾರಿಗಳು ತಮ್ಮ ಕೆಲಸವನ್ನು ಕಳೆದುಕೊಂಡಿದ್ದರು. ದೀರ್ಘಕಾಲಿನ ಹಸಿವು, ಬಡತನ ಹಾಗೂ ಪರ್ಯಾಯ ಜೀವನೋಪಾಯದ ಕೊರತೆಯಿಂದಾಗಿ ಅವರಿಗೆ ಸಾಮೂಹಿಕ ಶವಸಂಸ್ಕಾರದ ಸ್ಥಳಗಳಿಂದ ಮತ್ತು ದಫನ ಸ್ಥಳಗಳಿಂದ ಮಾನವ ಮೂಳೆಗಳನ್ನು ಸಂಗ್ರಹಿಸಿ ಮೂಳೆ ವ್ಯಾಪಾರಿಗಳಿಗೆ ಮಾರುವುದನ್ನು ಬಿಟ್ಟರೆ ಅನ್ಯ ಮಾರ್ಗವಿರಲಿಲ್ಲ.
ಲಾಕಡೌನ್ ಹಿಂದೆಗೆದುಕೊಂಡ ಬಳಿಕ ಮತ್ತು ಜನಜೀವನವು ಸಹಜ ಸ್ಥಿತಿಗೆ ಮರಳುತ್ತಿದ್ದಾಗ ಹೆಚ್ಚಿನ ಸಫಾಯಿ ಕರ್ಮಾಚಾರಿಗಳು ತಮ್ಮ ಎಂದಿನ ಕೆಲಸದ ಜೊತೆಗೆ ಹೆಚ್ಚುವರಿ ಆದಾಯವನ್ನು ಗಳಿಸಲು ಮೂಳೆಗಳನ್ನು ಸಂಗ್ರಹಿಸುವುದನ್ನು ಮುಂದುವರಿಸಿದ್ದರು. ಅವರು ರಾತ್ರಿಯಲ್ಲಿ ಈ ಕೆಲಸ ಮಾಡುವುದರಿಂದ ತಾವು ಸಂಗ್ರಹಿಸಿದ ಮಾನವ ಮೂಳೆಗಳನ್ನು ಬಚ್ಚಿಡಲು ಮತ್ತು ಬಳಿಕ ವ್ಯಾಪಾರಿಗಳಿಗೆ ಅವುಗಳ ಮಾರಾಟ ಮಾಡಲು ಸುಲಭವಾಗುತ್ತದೆ.
ಟಾಯ್ಲೆಟ್ ಸ್ಟೋರೀಸ್ ಆಫ್ ಇಂಡಿಯಾ ಅಧ್ಯಯನದ ಪ್ರಕಾರ, ಮೂಳೆ ಸಂಗ್ರಹ ವೃತ್ತಿ ತೀವ್ರವಾಗದ ಒಂದು ವರ್ಷದೊಳಗೇ ದೊಡ್ಡ ಮೂಳೆ ಕಳ್ಳಸಾಗಣೆದಾರರು ಈ ಅಕ್ರಮ ಮೂಳೆ ಮಾರಾಟ ಜಾಲವನ್ನು ‘ಭೂಗತ ಮತ್ತು ಸಣ್ಣ ಪ್ರಮಾಣದ ಉದ್ಯಮ ಮಾದರಿ’ಯನ್ನಾಗಿ ಅಭಿವೃದ್ಧಿಪಡಿಸಿದ್ದರು. ಇಲ್ಲಿ ಸೂತ್ರವು ಸರಳವಾಗಿದೆ. ಒಣ ಶೌಚಾಲಯಗಳನ್ನು ಸ್ವಚ್ಛಗೊಳಿಸಿದ್ದಕ್ಕಾಗಿ ಕೂಲಿ ಹಣಕ್ಕೆ ತಿಂಗಳುಗಳ ಅಥವಾ ಕೆಲವೊಮ್ಮೆ ಅದಕ್ಕೂ ಹೆಚ್ಚು ಕಾಲ ಕಾಯುವ ಬದಲು ತಮ್ಮಿಂದ ಸಾಧ್ಯವಿದ್ದಷ್ಟು ಮಾನವ ಮೂಳೆಗಳನ್ನು ಸಂಗ್ರಹಿಸಿ, ಮುಸುಕುಧಾರಿ ವ್ಯಕ್ತಿಗಳಿಗೆ ಮಾರಾಟ ಮಾಡಿ ತಕ್ಷಣ ನಗದು ಹಣವನ್ನು ಕೈಯಲ್ಲಿ ಪಡೆಯುತ್ತಾರೆ. ಇದು ಅವರನ್ನು ಈ ವೃತ್ತಿಯನ್ನು ಮುಂದುವರೆಸುವಂತೆ ಮಾಡಿದೆ.
ವ್ಯಾಪಾರದ ಇನ್ನೊಂದು ಮಾದರಿಯಿದೆ: ಆಸ್ಪತ್ರೆಗಳಲ್ಲಿ ಖಾಯಂ ಉದ್ಯೋಗದಲ್ಲಿರುವ ಮತ್ತು ಮೂಳೆ ವ್ಯಾಪಾರಿಗಳಿಗೆ ತಮ್ಮ ಗುರುತನ್ನು ಬಹಿರಂಗಪಡಿಸಲು ಇಚ್ಚಿಸದ ನೈರ್ಮಲ್ಯ ಕೆಲಸಗಾರರಿಂದ ಮೂಳೆ ಸಂಗ್ರಹಕರು ಅಕ್ರಮವಾಗಿ ಮೂಳೆಗಳನ್ನು ಪಡೆಯುತ್ತಾರೆ. ಟಾಯ್ಲೆಟ್ ಸ್ಟೋರೀಸ್ ಆಫ್ ಇಂಡಿಯಾ ಅಧ್ಯಯನದ ಪ್ರಕಾರ ಮೂಳೆ ಆಯುವವರು ಗಳಿಸಿದ ನಗದಿನ ಒಂದು ಭಾಗವನ್ನು ಆಸ್ಪತ್ರೆಯ ನೈರ್ಮಲ್ಯ ಕಾರ್ಯಕರ್ತರಿಗೆ ನೀಡಲಾಗುತ್ತದೆ, ಅವರು “ತೀವ್ರವಾಗಿ ಕಡಿಮೆ ವೇತನ” ಹೊಂದಿದವರಾಗಿರುತ್ತಾರೆ.
ಮೂಳೆ ಆಯುವವರು ಮಾನವ ಅಂಗಾಂಶಗಳು ಮತ್ತು ಮೂಳೆಗಳನ್ನು ಆಸ್ಪತ್ರೆಗಳ ಸ್ವಚ್ಛತಾ ಸಿಬ್ಬಂದಿಗಳಿಗೆ ಮಾರಾಟ ಮಾಡುವುದು ಮೂರನೇ ವಿಧಾನವಾಗಿದೆ. ಈ ಸ್ವಚ್ಛತಾ ಕಾರ್ಮಿಕರು ಬಳಿಕ ಅವುಗಳನ್ನು ಸಂಶೋಧನೆಗಾಗಿ ಅಗತ್ಯವಿರುವ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಾರೆ ಎಂದು ವರದಿಯು ಹೇಳಿದೆ.
ಹಲವಾರು ಮೂಳೆ ಕಳ್ಳಸಾಗಣೆದಾರರು ಈಗ ವ್ಯಾಪಾರಿಗಳನ್ನು ದೂರವಿಟ್ಟು ಸಮಾಧಿಗಳನ್ನು ಅಗೆದು ಮೂಳೆಗಳನ್ನು ಸಂಗ್ರಹಿಸುವ ಕಠಿಣ ಮತ್ತು ಅಪಾಯಕಾರಿ ಕೆಲಸಕ್ಕೆ ಮೂಳೇ ಆಯುವವರನ್ನೇ ನೇರವಾಗಿ ನೇಮಕ ಮಾಡಿಕೊಳ್ಳುತ್ತಿರುವುದು ಈ ವೃತ್ತಿ ಇನ್ನೂ ಮುಂದುವರಿಯಲು ಕಾರಣವಾಗಿದೆ.
ಮೂಳೆ ದಂಧೆಕೋರರು ಇದಕ್ಕೆ ವ್ಯವಸ್ಥಿತ ಜಾಲ ನಿರ್ಮಿಸಿದ್ದು ಮೂಳೆಗಳ ಪ್ಯಾಕಿಂಗ್, ಸಾಗಾಟ ಇತ್ಯಾದಿ ಕೆಲಸಗಳಿಗೆ ಸ್ಥಳೀಯ ಬಡಾವಣೆಗಳ ಇತರ ಸ್ವಚ್ಛತಾ ಕಾರ್ಮಿಕರನ್ನೂ ಈ ಮೂಳೆ ಕಳ್ಳಸಾಗಣೆದಾರರು ಬಳಸಿಕೊಳ್ಳುತ್ತಿದ್ದಾರೆ. ಮೂಳೆಗಳನ್ನು ಗೋಣಿಚೀಲಗಳಲ್ಲಿ ಪ್ಯಾಕ್ ಮಾಡಲು ಮತ್ತು ಅವುಗಳನ್ನು ಹತ್ತಿರದ ಡಂಪಿಂಗ್ ಸೈಟ್ಗಳಲ್ಲಿ ಬಿಡುತ್ತಾರೆ. ಈ ಚೀಲಗಳು ನಿರ್ದಿಷ್ಟ ಗುರುತುಗಳನ್ನು ಹೊಂದಿರುತ್ತವೆ ಅಥವಾ ವಿವಿಧ ಬಣ್ಣದ ದಾರದಿಂದ ಕಟ್ಟಲ್ಪಟ್ಟಿರುತ್ತವೆ ಆದ್ದರಿಂದ ಈ ಜಾಲದಲ್ಲಿರುವವರು ಅವುಗಳನ್ನು ಸುಲಭವಾಗಿ ಗುರುತಿಸಬಹುದು. ಸಾಕಷ್ಟು ಗಮನಕ್ಕೆ ಬರಬಾರೆಂದು ಅವುಗಳನ್ನು ಸಾಮಾನ್ಯವಾಗಿ ಅನೇಕ ಚೀಲಗಳ ಮತ್ತು ಕಸದ ರಾಶಿಗಳ ಕೆಳಗೆ ಇರಿಸಲಾಗುತ್ತದೆ.

ಉಳಿದ ಮಾಂಸ ಮತ್ತು ಪ್ರಾಣಿಗಳ ಮೃತದೇಹಗಳನ್ನು ಸಂಗ್ರಹಿಸಲು ಕಸಾಯಿಖಾನೆಗಳಲ್ಲಿ ಅನೇಕ ನೈರ್ಮಲ್ಯ ಕಾರ್ಮಿಕರನ್ನು ಅಕ್ರಮವಾಗಿ ನೇಮಿಸಿಕೊಳ್ಳಲಾಗುತ್ತದೆ. ಶೌಚಾಲಯಗಳನ್ನು ಸ್ವಚ್ಛಗೊಳಿಸುವುದರ ಜೊತೆಗೆ, ಅವರು ಶವಗಳ ಅವಶೇಷಗಳ ಪ್ರತಿ ಅವಶೇಷಗಳನ್ನು ಡಂಪಿಂಗ್ ಮಾಡುವ ಸ್ಥಳಕ್ಕೆ ತೆಗೆದುಕೊಂಡು ಹೋಗುತ್ತಾರೆ, ಅಲ್ಲಿ ಕೆಲವರು ಅವುಗಳನ್ನು ತ್ಯಾಜ್ಯ ಕೆಲಸಗಾರರಿಗೆ ಮಾರಾಟ ಮಾಡುತ್ತಾರೆ, ನಂತರ ಅವುಗಳನ್ನು ಪಶು ಆಹಾರ ಕಾರ್ಖಾನೆಗಳು ಅಥವಾ ಮೂಳೆ ಪುಡಿ ಮಾಡಿ ಗೊಬ್ಬರ ತಯಾರಿಸುವ ಘಟಕಗಳಿಗೆ ಮಾರಾಟ ಮಾಡುತ್ತಾರೆ.
ಅಧ್ಯಯನವು ಮತ್ತೊಂದು ಕಾನೂನುಬಾಹಿರ ಕೃತ್ಯವನ್ನು ಎತ್ತಿ ತೋರಿಸಿದೆ; ಈ ಅಧ್ಯಯನದಲ್ಲಿ ಪತ್ತೆಯಾವರಲ್ಲಿ ಬಹುತೇಕರು 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಈ ಯುವ ಬಂಧಿತ ಕಾರ್ಮಿಕರು ಕಸಾಯಿ ಖಾನೆಗಳ ಬಳಿ ವಾಸಿಸುತ್ತಿದ್ದಾರೆ ಮತ್ತು ಪ್ರತಿ ದಿನವೂ ಮೂಳೆ ಶುಚಿಗೊಳಿಸುವ ಕೆಲಸವನ್ನು ಮಾಡಲು ಒತ್ತಾಯಿಸಲಾಗುತ್ತದೆ.
ಬಹುತೇಕ ನೈರ್ಮಲ್ಯ ಕಾರ್ಮಿಕರಿಗೆ ಜೀವಕ್ಕೆ ಅಪಾಯವನ್ನುಂಟು ಮಾಡುವ ಸೆಪ್ಟಿಕ್ ಟ್ಯಾಂಕ್ ಗಳ ಸ್ವಚ್ಛತೆ ಕೆಲಸಕ್ಕಿಂತ ಇಂತಹ ಕೆಲಸವೇ ಸುಲಭವಾಗಿದೆ. ಜಾತಿಯ ಕಾರಣಕ್ಕೆ ಮಲ ಹೊರುವ ಹಾಗೂ ಅಂತಹ ಇತರೆ ವೃತ್ತಿಯನ್ನು ಬಲವಂತವಾಗಿ ಹೇರಲ್ಪಟ್ಟ ಸಮುದಾಯದ ಪುರುಷ ಮತ್ತು ಮಹಿಳೆಯರು ಇಂದು ಮೂಳೆ ಸಂಗ್ರಹಿಸುವಂತಹ ಅನಿವಾರ್ಯತೆಯಲ್ಲಿದ್ದಾರೆ. ಅದು ಮಲಮೂತ್ರ, ಪ್ರಾಣಿಗಳ ಶವಗಳು ಅಥವಾ ಮೂಳೆಗಳ ಸಂಗ್ರಹವಾಗಲಿ, ಆ ಸಮುದಾಯದ ಜನರು ಇನ್ನೂ ಅಂತಹ ವೃತ್ತಿಗಳನ್ನು ತಮ್ಮ ಜೀವನೋಪಾಯವಾಗಿ ಆಯ್ಕೆ ಮಾಡುವ ವ್ಯವಸ್ಥೆಯಲ್ಲಿದ್ದಾರೆ.
ಇದಕ್ಕಾಗಿಯೇ PEMSR ಕಾಯಿದೆಯ ಆಚೆಗೆ ಇರುವ ಮ್ಯಾನ್ಯುವಲ್ ಸ್ಕ್ಯಾವೆಂಜರ್‌ಗಳ ಹಲವು ವರ್ಗಗಳಿಗೆ ಮೂಳೆ ಆಯುವುದನ್ನು ಸೇರಿಸುವುದು ಮುಖ್ಯವಾಗಿದೆ, ಇಲ್ಲದಿದ್ದರೆ ಇದು ಮಲ ಹೊರುವ ಪದ್ಧತಿಯನ್ನು ಬಹಳ ಸಂಕುಚಿತವಾಗಿ ವ್ಯಾಖ್ಯಾನಿಸಿದಂತಾಗುತ್ತದೆ. ಮತ್ತು ಮಲ ಹೊರುವುದನ್ನು ನಿಷೇಧಿಸಿ ಪರ್ಯಾಯ ವ್ಯವಸ್ಥೆಯನ್ನು ಸರಿಯಾಗಿ ಕಟ್ಟಿ ಕೊಡದಿದ್ದರೆ ಅಂತಹ ಬೇರೆ ವೃತ್ತಿಯಲ್ಲಿ ಅವರು ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ಹಾಗೇ ಉಳಿದುಬಿಡುತ್ತದೆ.












