ಕೋವಿಡ್ ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆ ಇರುವ 16 ಜಿಲ್ಲೆಗಳಲ್ಲಿ ಲಾಕ್ ಡೌನ್ ಬಹುತೇಕ ಸಡಿಲಿಕೆ, ಶೇ. 5ಕ್ಕಿಂತ ಹೆಚ್ಚಿರುವ 13 ಜಿಲ್ಲೆಗಳಲ್ಲಿ ಮತ್ತಷ್ಟು ಸಡಿಲಿಕೆಯೊಂದಿಗೆ ಅನ್ ಲಾಕ್ ಮೊದಲ ಹಂತ ಜಾರಿ ಮತ್ತು ಅತಿ ಹೆಚ್ಚು ಪಾಸಿಟಿವಿಟಿ ದರ ಇರುವ ಮೈಸೂರಿನಲ್ಲಿ ಬಿಗಿ ಲಾಕ್ ಡೌನ್ ಮುಂದುವರಿಕೆ. ಇದು ಜೂ.21ರಿಂದ ಜಾರಿಗೆ ಬರುವ ಹೊಸ ಕೋವಿಡ್ ಲಾಕ್ ಡೌನ್ ಮಾರ್ಗಸೂಚಿಯ ವಿಶೇಷ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ, 16 ಜಿಲ್ಲೆಗಳಲ್ಲಿ ಶೇಕಡಾ 5 ರಷ್ಟು ಪಾಸಿಟಿವಿಟಿ ದರ ಇರುವ ಕಾರಣದಿಂದಾಗಿ, ಆ ಜಿಲ್ಲೆಗಳಲ್ಲಿ ನಿರ್ಬಂಧಗಳನ್ನು ಸಡಿಲಿಕೆ ಮಾಡಲಾಗಿದೆ. ಉಳಿದಂತೆ 13 ಜಿಲ್ಲೆಗಳಲ್ಲಿ ಸೋಂಕಿನ ಪ್ರಕರಣಗಳು ಕಡಿಮೆಯಾಗದ್ದು ಹಿನ್ನೆಲೆಯಲ್ಲಿ 11-06-2021ರ ಅನ್ ಲೌಕ್ 0.1 ಅನ್ವಯವಾಗುಂತೆ ಸಡಿಲಿಕೆ ನೀಡಲಾಗಿದ್ದು ಮಧ್ಯಾಹ್ನ 2ರವರೆಗೆ ವ್ಯವಹಾರಕ್ಕೆ ಅವಕಾಶ ಇರುತ್ತದೆ ಎಂದು ಹೇಳಿದ್ದಾರೆ.
ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಬೆಂಗಳೂರು, ಗದಗ, ರಾಯಚೂರು, ಬಾಗಲಕೋಟೆ, ಕಲಬುರಗಿ, ಹಾವೇರಿ, ರಾಮನಗರ, ಯಾದಗಿರಿ, ಬೀದರ್ ಜಿಲ್ಲೆಗಳಿಗೆ ಸಡಿಲಿಕೆ ಮಾಡಲು ತೀರ್ಮಾನಿಸಲಾಗಿದೆ.
ಏನಿರತ್ತೆ? ಏನಿರಲ್ಲ? ಸಿಎಂ ಯಡಿಯೂರಪ್ಪ ಹೇಳಿದ ಪ್ರಮುಖ ಅಂಶಗಳು:
ಎಲ್ಲಾ ಅಂಗಡಿಗಳನ್ನು ಬೆಳಗ್ಗೆಯಿಂದ ಸಂಜೆ 5 ಗಂಟೆವರೆಗೆ ತೆರೆಯಲು ಅವಕಾಶ. ಎಸಿ ಚಾಲನೆ ಇಲ್ಲದೇ ಹೋಟೆಲ್, ಕ್ಲಬ್, ರೆಸ್ಟೊರೆಂಟ್ ಓಪನ್ -ಮದ್ಯಪಾನ ಹೊರತುಪಡಿಸಿ ಶೇಕಡ 50 ಸಾಮರ್ಥ್ಯದೊಂದಿಗೆ ಕುಳಿತು ತಿನ್ನಲು ಅವಕಾಶ.
ಹೊರಾಂಗಣ ಚಿತ್ರೀಕರಣಕ್ಕೆ ಅನುಮತಿ, ಬಸ್, ಮೆಟ್ರೋ ಸಂಚಾರಕ್ಕೆ ಅವಕಾಶ. ಸರ್ಕಾರಿ, ಖಾಸಗಿ ಕಚೇರಿ ಶೇಕಡ 50 ರಷ್ಟು ಸಿಬ್ಬಂದಿ ಕಾರ್ಯನಿರ್ವಹಣೆ. ಲಾಡ್ಜ್, ರೆಸಾರ್ಟ್ ಗಳಲ್ಲಿ ಶೇಕಡ 50 ಸಾಮರ್ಥ್ಯಕ್ಕೆ ಅವಕಾಶ. ಜಿಮ್ ಗಳಲ್ಲಿ ಎಸಿ ಇಲ್ಲದೇ ಶೇಕಡ 50 ಸಾಮರ್ಥ್ಯಕ್ಕೆ ಅವಕಾಶ. ವೀಕ್ಷಕರಿಲ್ಲದೇ ಹೊರಾಂಗಣ ಕ್ರೀಡೆಗೆ ಅನುಮತಿ.
ವಾರಾಂತ್ಯದ ಕರ್ಫ್ಯೂ ಮುಂದುವರಿಕೆ ಮತ್ತು ಸಿನೆಮಾ ಮಂದಿರ ಹಾಗೂ ದೇವಾಲಯಗಳಲ್ಲಿ ನಿರ್ಬಂಧ ಮುಂದುವರಿಕೆ.
ಶೇಕಡ 5 ಕ್ಕಿಂತ ಪಾಸಿಟಿವಿಟಿದ ದರ ಜಾಸ್ತಿ ಇರುವ ಹಾಸನ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಾಮರಾಜನಗರ, ದಾವಣಗೆರೆ, ಕೊಡಗು, ಧಾರವಾಡ, ಬಳ್ಳಾರಿ, ವಿಜಯಪುರ ಜಿಲ್ಲೆಗಳಲ್ಲಿ 11-06-2021 ಆದೇಶ ಅನ್ವಯವಾಗುಂತೆ ಸಡಿಲಿಕೆ ನೀಡಲಾಗಿದೆ, ಮೈಸೂರು ಜಿಲ್ಲೆಯಲ್ಲಿ ಯಾವುದೆ ವ್ಯತ್ಯಾಸ ಇಲ್ಲದೇ ಲಾಕ್ ಡೌನ್ ಮುಂದುವರೆದಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.