ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ದರ್ಶನ್ ಆಂಡ್ ಟೀಮ್ ಪೊಲೀಸರ ವಶದಲ್ಲಿದ್ದಾರೆ. ಕೊಲೆಗೂ ಮುನ್ನ ದರ್ಶನ್ ಮತ್ತು ಗ್ಯಾಂಗ್‌ನ ಸದಸ್ಯರು ಪಾರ್ಟಿ ಮಾಡಿದ್ದರು ಎನ್ನಲಾದ ಆರ್ ಆರ್ ನಗರದ ಸ್ಟೋನಿ ಬ್ರೂಕ್ ಪಬ್ ನಲ್ಲಿ (Stonny Brook Pub) ಪೊಲೀಸರು ಮಹಜರು ನಡೆಸಿದ್ದಾರೆ.
ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು (Annapurneshwari Nagar Police) ನಟ ದರ್ಶನ್, ರೆಸ್ಟೊರೆಂಟ್ ಮಾಲೀಕ ವಿನಯ್, ಪ್ರದೂಶ್, ಪವನ್ ಸೇರಿದಂತೆ ಆರೋಪಿಗಳಿಂದ ಸ್ಥಳ ಮಹಜರು ನಡೆಸಿದ್ದಾರೆ. ಆರೋಪಿಗಳನ್ನು ಎಸಿಪಿ ಭರತ್ ರೆಡ್ಡಿ ನೇತೃತ್ವದಲ್ಲಿ ಸ್ಥಳ ಮಹಜರಿಗಾಗಿ ಕರೆತರಲಾಗಿತ್ತು. ಕಾಮಿಡಿ ನಟ ಚಿಕ್ಕಣ್ಣ ಪಾರ್ಟಿ ವೇಳೆ ಇದ್ದರು ಎಂಬ ಕಾರಣಕ್ಕೆ ಕರೆತಂದು ಸ್ಥಳ ಮಹಜರು ನಡೆಸಲಾಯಿತು.
ಈ ವೇಳೆ ಪಬ್ ನ ಮೂಲೆ ಮೂಲೆಯಿಂದಲೂ ಮಾಹಿತಿ ಕಲೆ ಹಾಕಲಾಯಿತು. ದರ್ಶನ್ ಮತ್ತು ಗ್ಯಾಂಗ್ ಆರೋಪಿಗಳ ಜೊತೆಗೆ ಹಾಸ್ಯನಟ ಚಿಕ್ಕಣ್ಣ (Chikkanna) ರಿಂದಲೂ ಪೊಲೀಸರು ಮಾಹಿತಿ ಕಲೆ ಹಾಕಿದರು. ದರ್ಶನ್ ಮತ್ತು ಗ್ಯಾಗ್ ಅವರನ್ನು ಪೊಲೀಸರು ಸ್ಟೋನಿ ಬ್ರೂಕ್ ಪಬ್‌ಗೆ ಕರೆತರುವ 2 ಗಂಟೆಗೂ ಮುನ್ನವೇ ಪೊಲೀಸರು, ಚಿಕ್ಕಣ್ಣ ಕರೆತಂದು ಸ್ಥಳ ಮಹಜರು ನಡೆಸಿದ್ದರು ಎನ್ನಲಾಗಿದೆ. ಈ ವೇಳೆ ಪಬ್ ಸುತ್ತಲೂ ಬಿಗಿ ಭದ್ರತೆ ನಿಯೋಜಿಸಲಾಗಿತ್ತು.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy Murder Case) ದರ್ಶನ್ (Darshan) ಗ್ಯಾಂಗ್ ಬಂಧನವಾದ ನಂತರ ವಿಚಾರಣೆಗೆ ಹಾಜರಾಗುವಂತೆ ಸ್ಯಾಂಡಲ್‌ವುಡ್ (Sandalwood) ಖ್ಯಾತ ಹಾಸ್ಯನಟ ಚಿಕ್ಕಣ್ಣಗೆ (Chikkanna) ಪೊಲೀಸರು ನೋಟಿಸ್ ನೀಡಿದ್ದರು. ಹೀಗಾಗಿ ಚಿಕ್ಕಣ್ಣ ವಿಚಾರಣೆಗೆ ಹಾಜರಾಗಿದ್ದರು. ರೇಣುಕಾಸ್ವಾಮಿ ಕೊಲೆಯಾಗುವುದಕ್ಕೂ ಮುನ್ನ ದರ್ಶನ್ ಹಾಗೂ ಚಿಕ್ಕಣ್ಣ ಸೇರಿದಂತೆ ಹಲವರು ಇದೇ ಪಬ್ ನಲ್ಲಿ ಪಾರ್ಟಿ ಮಾಡಿದ್ದರು ಎನ್ನಲಾಗಿದೆ.