ಭಾಗ-೨:
~ಡಾ. ಜೆ ಎಸ್ ಪಾಟೀಲ
ಶಾಮನೂರೂ ಕುಟುಂಬ
ಇನ್ನು ಮಧ್ಯ ಕರ್ನಾಟಕದ ಶಾಮನೂರು ಶಿವಶಂಕರಪ್ಪ ಕುಟುಂಬ ಕೂಡ ವೀರಶೈವ ಮಹಾಸಭೆಯೊಂದಿಗಿದೆ, ತಾವು ಬಸವ ತತ್ವ ಹಾಗು ಲಿಂಗಾಯತ ಧರ್ಮ ವಿರೋಧಿಗಳು ಎಂದು ಶಿವಶಂಕರಪ್ಪನವರೆ ಅನೇಕ ವೇಳೆ ತೋರಿಸಿಕೊಂಡಿದ್ದಾರೆ. ಕಾಂಗ್ರೆಸ್ ಸರಕಾರ ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಶಿಫಾರಸ್ಸು ಮಾಡಿದಾಗ ಅದನ್ನು ಬಹಿರಂಗವಾಗಿ ವಿರೋಧಿಸುವ ಮೂಲಕ ಶಿವಶಂಕರಪ್ಪನವರು ಕಾಂಗ್ರೆಸ್ ಪಕ್ಷಕ್ಕೆ ಮತ್ತು ಲಿಂಗಾಯತ ಸಮುದಾಯಕ್ಕೆ ಅಪಾರವಾಗಿ ಹಾನಿ ಮಾಡಿದ್ದಾರೆನ್ನುವ ಜನಾಭಿಪ್ರಾಯ ಲಿಂಗಾಯತರಲ್ಲಿದೆ. ಇವರು ವೀರಶೈವವಾದಿಗಳಿಗೆ ಮೆಚ್ಚಿಸಲು ಬಸವ ಜಯಂತಿಯನ್ನು ದನಗಳ ಪೂಜೆ ಮಾಡುವ ಮೂಲಕ ಬೇಕೆಂತಲೇ ಆಚರಿಸಿ ಬಸವ ತತ್ವವನ್ನು ಅವಮಾನಿಸುತ್ತಾರೆ ಎನ್ನುವ ನಂಬಿಕೆ ಬಹುತೇಕ ಬಸವಾನುಯಾಯಿ ಲಿಂಗಾಯತರಲ್ಲಿ ಬೇರೂರಿದೆ. ಹಾಗೆಯೆ ಶಿವಶಂಕರಪ್ಪ ಅನೇಕ ವೇಳೆ ಕಾಂಗ್ರೆಸ್ ನಾಯಕತ್ವದ ವಿರುದ್ಧ ಮಾತನಾಡುತ್ತಾರೆ.
ಅದಷ್ಟೇ ಅಲ್ಲದೆ ತಮ್ಮ ಮತ್ತು ತಮ್ಮ ಮಗನ ಕ್ಷೇತ್ರಗಳನ್ನು ಹೊರತುಪಡಿಸಿ ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿಗೆ ಪರೋಕ್ಷವಾಗಿ ಪೂರಕ ವಾತಾವರಣ ಶಾಮನೂರು ಕುಟುಂಬ ಸೃಷ್ಟಿಸಿದೆ ಎನ್ನುವ ಅಪಾದನೆ ಕೂಡ ಅವರ ಮೇಲಿದೆ. ಅದಲ್ಲದೆ ಈಶ್ವರ ಖಂಡ್ರೆ ಹಾಗು ಶಾಮನೂರು ಶಿವಶಂಕರಪ್ಪ ಇಬ್ಬರೂ ಕ್ಯಾಪಿಟೇಷನ್ ಕುಳಗಳು. ದುಬಾರಿ ಶುಲ್ಕದ ವೈದ್ಯಕೀಯ ಮತ್ತಿತರ ತಾಂತ್ರಿಕ ಹಾಗು ವೃತ್ತಿಪರ ಶಿಕ್ಷಣ ಸಂಸ್ಥೆಗಳು ನಡೆಸುವ ರಾಜಕೀಯ ನಾಕಯರು ತಮ್ಮ ಸಮುದಾಯದ ಬಡವರ ಸೇವೆ ಮಾಡುವುದಿಲ್ಲ ಎನ್ನುವುದು ಸಾರ್ವತ್ರಿಕ ಅಭಿಪ್ರಾಯವಾಗಿದೆ. ಹಾಗಾಗಿ ಈ ಶಿಕ್ಷಣ ಸಂಸ್ಥೆ ನಡೆಸುವ ಕಾಂಗ್ರೆಸ್ ನಾಯಕರಿಂದ ಪಕ್ಷಕ್ಕಾಗಲಿ, ಸಮುದಾಯಕ್ಕಾಗಲಿ ಲಾಭಕ್ಕಿಂತ ನಷ್ಟವೇ ಹೆಚ್ಚು. ಲಿಂಗಾಯತರಿಗೆ ಅಲ್ಪಸಂಖ್ಯಾತರ ಸೌಲಭ್ಯ ಸಿಕ್ಕರೆ ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಲಿಂಗಾಯತರಿಗೆ ೫೦% ಸೀಟುಗಳು ಕೊಡಬೇಕಾಗುತ್ತದೆ ಎನ್ನುವ ಕಾರಣದಿಂದಲೆ ಇವರು ಅದನ್ನು ವಿರೋಧಿಸುತ್ತಾರೆ ಎನ್ನುವ ಅಪಾದನೆಗಳಿವೆ. ಈ ಸಂಗತಿ ಕಾಂಗ್ರೆಸ್ ಪಕ್ಷ ಗಮನಿಸಲೇಬೇಕಾಗಿದೆ.

ಕಾಂಗ್ರೆಸ್ ಪಕ್ಷದಲ್ಲಿರುವ ಲಿಂಗಾಯತ ನಾಯಕರು ಉಪಜಾತಿಗಳಿಂದ ಗುರುತಿಸಿಕೊಳ್ಳುವಂತವರಾಗಿರಬಾರದು. ಎಲ್ಲರೊಂದಿಗೆ ಸೌಹಾರ್ದ ಸಂಬಂಧ ಹೊಂದಿರಬೇಕು. ಸೈದ್ಧಾಂತಿಕ ಹಿನ್ನೆಲೆ ಇರಬೇಕು. ಅವರು ತಮ್ಮ ಸುತ್ತಮುತ್ತ ಉಪಜಾತಿಯ ಜನರು, ಸಂಘ ಪರಿವಾರದ ನಂಟುಳ್ಳವರು, ಮತ್ತು ಹೊಗಳುಭಟ್ಟರನ್ನು ಹೊಂದಿರಬಾರದು. ಇವೆಲ್ಲವನ್ನು ಪರಿಗಣಿಸಿದಾಗ ಕಾಂಗ್ರೆಸ್ ಪಕ್ಷದಲ್ಲಿ ಸೂಕ್ತ ಲಿಂಗಾಯತ ನಾಯಕತ್ವವುಳ್ಳ ಮೂರು ಜನ ರಾಜಕಾರಣಿಗಳು ಸಿಗುತ್ತಾರೆ. ಮೊದಲನೇಯದಾಗಿ; ಸಿದ್ದರಾಮಯ್ಯನವರ ಸಮಕಾಲೀನರು, ಜೆಪಿ ಚಳುವಳಿ ಮತ್ತು ಜನತಾ ಪರಿವಾರದ ಹಿನ್ನೆಲೆಯುಳ್ಳವರು ಹಾಗೂ ಹಿರಿಯರುˌ ಆಳಂದ ಮಾಜಿ ಶಾಸಕರಾದ ಬಿ ಆರ್ ಪಾಟೀಲರು. ಲಕ್ಷ್ಮಣ ಸೌದಿಯವರು ಕೂಡ ಲಿಂಗಾಯತ ಸಮುದಾಯದ ನಾಯಕರಾಗಲು ಯೋಗ್ಯರಾಗಿದ್ದಾರೆ.
ಎರಡನೇಯದಾಗಿ; ದಕ್ಷರು, ಸುಶಿಕ್ಷಿತರು, ಸಜ್ಜನರು ಆದ ಡಾ. ಶರಣಪ್ರಕಾಶ್ ಪಾಟೀಲರು ಮತ್ತು ಮೂರನೇಯವರು ದೈತ್ಯ ಕೆಲಸಗಾರರಾದ ಬಸವರಾಜ ರಾಯರೆಡ್ಡಿಯವರುˌ ಮತ್ತು ನಾಲ್ಕನೇಯದಾಗಿ ಸರಳ ಸಜ್ಜನ ರಾಜಕಾರಣಿ ಎಸ್ ಆರ್ ಪಾಟೀಲರು. ಇವರಲ್ಲಿ ಬಿ ಎರ್ ಪಾಟೀಲರು ಎಪ್ಪತ್ತು ವಸಂತಗಳನ್ನು ದಾಟಿದ್ದಾರೆ. ಅವರ ವಯಸ್ಸು ನಾಯಕತ್ವ ಹೊತ್ತುಕೊಂಡು ಪಕ್ಷ ಸಂಘಟಿಸಲು ಅನುಮತಿಸುವುದಿಲ್ಲ. ಎಸ್ ಆರ್ ಪಾಟೀಲರಿಗೆ ಪಕ್ಷ ವಿಧಾನ ಪರಿಷತ್ ಟಿಕೇಟ್ ತಪ್ಪಿಸಿ ಮಹಾ ಅನ್ಯಾಯ ಮಾಡಿಬಿಟ್ಟಿದೆ. ಅವರು ಈಗ ಪಕ್ಷದಲ್ಲಿ ಮೊದಲಿನಂತೆ ಸಕ್ರೀಯರಾಗಿಲ್ಲ. ಇನ್ನು ಬಸವರಾಜ್ ರಾಯರಡ್ಡಿ ಮತ್ತು ಡಾ. ಶರಣಪ್ರಕಾಶ್ ಪಾಟೀಲರಲ್ಲಿ ಡಾ. ಪಾಟೀಲರು ಅತ್ಯಂತ ಕ್ರೀಯಾಶೀಲ ವ್ಯಕ್ತಿತ್ವವುಳ್ಳವರು.
ಡಾ. ಶರಣಪ್ರಕಾಶ್ ಪಾಟೀಲ

ಡಾ. ಶರಣಪ್ರಕಾಶ ಪಾಟೀಲರ ಕುಟುಂಬ ಯಾವುದೇ ರಾಜಕೀಯ ಹಿನ್ನೆಲೆ ಹೊಂದಿಲ್ಲ. ಅವರ ತಂದೆ, ತಾತ ಯಾರೂ ಶಾಸಕ, ಮಂತ್ರಿಗಳಾಗಿರಲಿಲ್ಲ. ತಮ್ಮ ಸ್ವಂತ ಪ್ರತಿಭೆ ಮತ್ತು ವರ್ಚಸ್ಸಿನ ಮೂಲಕ ಜಿಲ್ಲಾ ಪಂಚಾಯತಿ ಸದಸ್ಯರಾಗಿ, ಜಿಲ್ಲಾ ಪಂಚಾಯ್ತಿಯ ಉಪಾದ್ಯಕ್ಷರಾಗಿ ತಳ ಮಟ್ಟದಿಂದ ಜನ ಸಂಪರ್ಕ ಮತ್ತು ರಾಜಕೀಯ ಸಂಘಟನೆಯ ಸಾಮರ್ಥ್ಯ ಹೊಂದಿದ್ದಾರೆ. ಕುಟುಂಬದ ಹೆಸರು, ಅಥವಾ ಪ್ರತಿಷ್ಠಿತ ಉದ್ಯಮ, ಮತ್ತು ಬೇನಾಮಿ ರಿಯಲ್ ಎಸ್ಟೇಟ್ ದಂಧೆಗಳ ಹಿನ್ನೆಲೆ ಡಾ. ಶರಣಪ್ರಕಾಶ್ ಪಾಟೀಲರಿಗೆ ಇಲ್ಲ. ಡಾ. ಪಾಟೀಲರು ಸುಶಿಕ್ಷಿತರು, ಸಜ್ಜನರು, ಸರಳರು ಹಾಗು ಅಧುನಿಕ ವೈಧ್ಯ ವಿಜ್ಞಾನದ ಪದವಿಧರರಾಗಿದ್ದು ಜನರಿಂದ ಸದಾ ಅಂತರ ಕಾಯ್ತುಕೊಳ್ಳುವ ಒಣ ಪ್ರತಿಷ್ಠೆಯ ವೈಟ್ ಕಾಲರ್ ರಾಜಕಾರಣಿಯಲ್ಲ.
ವಿರೇಂದ್ರ ಪಾಟೀಲರಷ್ಟೇ ದಕ್ಷ ಮತ್ತು ವಿವಾದಾತೀತ ವ್ಯಕ್ತಿತ್ವ ಹೊಂದಿರುವ ಡಾ. ಶರಣಪ್ರಕಾಶ್ ಪಾಟೀಲರು ಲಿಂಗೈಕ್ಯ ವಿರೇಂದ್ರ ಪಾಟೀಲರ ನೈಜ ವಾರಸುದಾರರೆಂದರೆ ತಪ್ಪಲ್ಲ. ಸಿದ್ಧರಾಮಯ್ಯನವರ ಸಂಪುಟದಲ್ಲಿದ್ದು ಅದ್ಭುತವಾಗಿ ಅಭಿವೃದ್ಧಿ ಕಾರ್ಯಗಳು ಮಾಡಿದ ಬೆರಳೆಣಿಕೆಯ ಸಚಿವರಲ್ಲಿ ಡಾ. ಶರಣಪ್ರಕಾಶ್ ಪಾಟೀಲರೂ ಒಬ್ಬರು. ಬಿಜೆಪಿ ಸರಕಾರದಲ್ಲಿ ಅಂದು ವೈದ್ಯಕೀಯ ಶಿಕ್ಷಣ ಖಾತೆಯ ಮಂತ್ರಿಯಾಗಿದ್ದ ರಾಮಚಂದ್ರೇಗೌಡ ಮತ್ತು ಇಂದು ಡಾ. ಸುಧಾಕರ್ ಮಾಡಿರುವ ಅವಾಂತರಗಳು ನಾವು ನೋಡಿದ್ದೇವೆ. ಡಾ. ಪಾಟೀಲರು ರಾಜ್ಯಾದ್ಯಂತ ಯಶಸ್ವಿಯಾಗಿ ೫-೬ ಸರಕಾರಿ ವೈದ್ಯಕೀಯ ಕಾಲೇಜುಗಳನ್ನು ಸಂಪೂರ್ಣ ಸುಸಜ್ಜಿತ ಸೌಲಭ್ಯಗಳೊಂದಿಗೆ ಸ್ಥಾಪಿಸುವ ಮೂಲಕ ರಾಜ್ಯದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ವಿಜ್ಞಾನ ಓದುವ ಅವಕಾಶದ ಬಾಗಿಲನ್ನು ತೆರೆದವರು.
ಅಷ್ಟೇ ಅಲ್ಲದೆ ತವರು ಜಿಲ್ಲೆ ಕಲಬುರಗಿಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು, ಜಯದೇವ ಹೃದ್ರೋಗ ಆಸ್ಪತ್ರೆ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಮತ್ತು ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಗೆ ಅನುಪಮ ಕಾಣಿಕೆ ನೀಡಿದವರು. ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯನವರು ಇವರನ್ನು ಪ್ರೋತ್ಸಾಹಿಸಿದ್ದು ಮರೆಯುವಂತಿಲ್ಲ. ಇಷ್ಟೆಲ್ಲ ಮಾಡಿದರೂ ಉಳಿದವರಂತೆ ಎಂದೂ ಪ್ರಚಾರ ಪಡೆಯುವ ಕೆಲಸ ಡಾ. ಪಾಟೀಲರು ಮಾಡಿದವರಲ್ಲ. ಕನಿಷ್ಟ ಪಕ್ಷ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬಗ್ಗೆ ಸದಾ ಪ್ರಚಾರ ಮಾಡುವ ಭಟ್ಟಂಗಿ ಹಿಂಬಾಲಕರನ್ನೂ ಹೊಂದದˌ ಹಾಗು ಆತುರಗಾರರಲ್ಲದ ಪಾಟೀಲರು ಈ ಕಾಲದ ಅಪರೂಪದ ಸಜ್ಜನ, ಸರಳ, ಮತ್ತು ನೇರ ಮಾತಿನ ರಾಜಕಾರಣಿ ಎಂದರೆ ತಪ್ಪಾಗಲಿಕ್ಕಿಲ್ಲ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಗರಡಿಯಲ್ಲಿ ಬೆಳೆದ ಡಾ. ಶರಣಪ್ರಕಾಶ್ ಪಾಟೀಲರು ಕಾಂಗ್ರೆಸ್ ಪಕ್ಷದ ಯಾವುದೇ ಗುಂಪಿಗೆ ಸೇರಿದವರಲ್ಲ.
ಜಿಲ್ಲೆ ಅಥವಾ ರಾಜ್ಯ ಮಟ್ಟದ ಎಲ್ಲಾ ನಾಯಕರೊಂದಿಗೆ ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ಸಿದ್ಧರಾಮಯ್ಯನವರ ಸೈದ್ಧಾಂತಿಕ ನಿಲುವುಗಳಿಗೆ ಅತ್ಯಂತ ಹತ್ತಿರದ ವ್ಯಕ್ತಿತ್ವವುಳ್ಳವರು. ಬಿಜೆಪಿಯೊಂದಿಗೆ ಒಳ ಒಪ್ಪಂದ ಹೊಂದಿದವರಲ್ಲ. ಡಾ. ಪಾಟೀಲರು ಯಾವುದೇ ಬಗೆಯ ಉದ್ಯಮˌ ಶಿಕ್ಷಣ ಸಂಸ್ಥೆಗಳು ಹೊಂದಿಲ್ಲ, ಬೇನಾಮಿ ರಿಯಲ್ ಎಸ್ಟೇಟ್ ದಂಧೆ ನಡೆಸುವುದಿಲ್ಲ, ಹಾಗು ತಮ್ಮ ಉಪಜಾತಿಯ ಜನರೊಂದಿಗೆ ಗುರುತಿಸಿಕೊಂಡವರಲ್ಲ. ತಮ್ಮ ಕುಟುಂಬ ಸದಸ್ಯರು ಮತ್ತು ಹತ್ತಿರದ ಸಂಬಂಧಿಗಳನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುವುದಿಲ್ಲ ಎನ್ನುವ ಆರೋಪ ಡಾ. ಶರಣಪ್ರಕಾಶ್ ಪಾಟೀಲರ ಮೇಲಿದೆ. ಡಾ.ಶರಣಪ್ರಕಾಶ್ ಪಾಟೀಲರ ಮತ್ತೊಂದು ವಿಶಿಷ್ಠ ಗುಣವೆಂದರೆ ಅವರು ಸಂಘ ಪರಿವಾರದ ಹಿನ್ನೆಲೆಯ ಜನರನ್ನು ಹತ್ತಿರಕ್ಕೆ ಸೇರಿಸಿಕೊಳ್ಳುವುದಿಲ್ಲ, ಅರ್ಥಾತ್ ಅಂತವರ ಸಲಹೆ ಸೂಚನೆ ಕೇಳುವುದಿಲ್ಲ.
ಸಂಘ ಪರಿವಾರಕ್ಕೆ ಗುಪ್ತವಾಗಿ ಆರ್ಥಿಕ ನೆರವು ನೀಡುವವರಲ್ಲ. ಮಠಾಧೀಶರನ್ನು ಓಲೈಸುವುದಿಲ್ಲ ಹಾಗು ಪಾಳೇಗಾರಿಕೆ ಮನಸ್ಥಿತಿ ಹೊಂದಿಲ್ಲ. ಚುನಾವಣಾ ಪೂರ್ವದಲ್ಲಾಗಲಿ ಅಥವಾ ಚುನಾವಣಾ ಸಮಯದಲ್ಲಾಗಲಿ ಮತದಾರರಿಗೆ ಹಣ ಹಂಚುವ ಜಾಯಮಾನ ಡಾ. ಶರಣಪ್ರಕಾಶ್ ಪಾಟೀಲರದಲ್ಲ. ಕುಟುಂಬದ ಹೆಸರಿನಲ್ಲಿ ತಮ್ಮ ರಾಜಕೀಯಕ್ಕೆ ಪೂರಕವಾಗುವಂತೆ ಪ್ರತಿಷ್ಠಾನಗಳನ್ನು ರಚಿಸಿಕೊಂಡು ಆ ಮೂಲಕ ಕ್ಷೇತ್ರದ ಜನರಿಗೆ ಆಮೀಷವೊಡ್ಡುವ ಕಾರ್ಯಗಳು ಡಾ. ಪಾಟೀಲರು ಮಾಡುವುದಿಲ್ಲ. ಲಿಂಗಾಯತ ಧರ್ಮದ ಎಲ್ಲ ಉಪಪಂಗಡಗಳೊಂದಿಗೆ ಅನ್ಯೋನ್ಯ ಸಂಬಂಧ ಹೊಂದಿದ್ದಾರೆ. ಯಾವುದೇ ನಿರ್ಧಿಷ್ಟ ಪಂಗಡ ಅಥವಾ ಉಪಪಂಗಡದವರ ಬಗ್ಗೆ ದ್ವೇಷ, ಹಗೆ, ಅಥವಾ ಭಯ ಹೊಂದಿಲ್ಲ. ಉಳಿದವರಂತೆ ಇವರು ಸಂಘ-ಪರಿವಾರ ಮತ್ತು ಬಿಜೆಪಿಯೊಂದಿಗೆ ಹೊಂದಾಣಿಕೆ ರಾಜಕೀಯ ಮಾಡಿದವರಲ್ಲ.
ಕುಟುಂಬ ರಾಜಕೀಯದಿಂದ ಇವರು ಬಹುದೂರ. ಮೊದಲ ಬಾರಿ ಮಂತ್ರಿಗಳಾದವರು ಸಾವಿರಾರು ಎಕರೆ ಬೇನಾಮಿ ರಿಯಲ್ ಎಸ್ಟೇಟ್ ದಂಧೆ ಮಾಡಿರುವ ಈ ಕಾಲದಲ್ಲಿ ಡಾ. ಶರಣಪ್ರಕಾಶ್ ಪಾಟೀಲರ ವ್ಯಕ್ತಿತ್ವ ಸ್ಪಟಿಕದಷ್ಟೇ ಪಾರದರ್ಶಕವಾಗಿದೆ. ಆದ್ದರಿಂದ, ಬದಲಾದ ರಾಜಕೀಯ ಸ್ಥಿತಿಗತಿಗಳನ್ನು ಅವಲೋಕಿಸಿ ಹಿರಿಯ ನಾಯಕರಾದ ಸಿದ್ಧರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ನಾಯಕರು ಒಟ್ಟಿಗೆ ಕುಳಿತುಕೊಂಡು ಆಪ್ತ ಸಮಾಲೋಚನೆಯ ಮೂಲಕ ಕಾಂಗ್ರೆಸ್ ಪಕ್ಷವನ್ನು ಸದೃಢವಾಗಿ ಕಟ್ಟಲು ಅಲ್ಪಸಂಖ್ಯಾತರು, ದಲಿತರು, ಕುರುಬರಾದಿಯಾಗಿ ಕೈಬಿಟ್ಟು ಹೋಗಿರುವ ಲಿಂಗಾಯತ ಮತ್ತು ಇತರ ಹಿಂದುಳಿದ ವರ್ಗಗಳ ಬೆಂಬಲವನ್ನು ಗಳಿಸಲು ಡಾ. ಶರಣಪ್ರಕಾಶ್ ಪಾಟೀಲರನ್ನು ಮುನ್ನೆಲೆಗೆ ತರುವ ಅಗತ್ಯವಿದೆ. ಡಾ. ಶರಣಪ್ರಕಾಶ್ ಪಾಟೀಲರು ಜಾತ್ಯಾತೀತ ಮನೋಭಾವ ಹೊಂದಿರುವ ವ್ಯಕ್ತಿ.
ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತ ನಾಯಕತ್ವದ ಮಹಾತಾಕಾಂಕ್ಷಿಗಳು ಬಹಳಷ್ಚು ಜನರಿದ್ದಾರೆ. ಅವರೆಲ್ಲರ ಗುಣಾವಗುಣಗಳನ್ನು ತಮ್ಮದೇ ಮೂಲಗಳಿಂದ ಕಾಂಗ್ರೆಸ್ ಹೈಕಮಾಂಡ್ ಮಾಹಿತಿ ಪಡೆಯಬೇಕಿದೆ. ಈಗಿರುವ ಎಲ್ಲರೊಳಗೆ ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ವಾಸರಸುದಾರರಾಗಲು ಡಾ. ಶರಣಪ್ರಕಾಶ್ ಪಾಟೀಲರು ಸೂಕ್ತ ಎನ್ನುವುದು ಮೇಲ್ನೋಟಕ್ಕೆ ಕಂಡುಬರುವ ಸಂಗತಿ. ಈ ದಿಶೆಯಲ್ಲಿ ಕಾಂಗ್ರೆಸ್ ಪಕ್ಷ ಕೂಲಂಕುಶವಾಗಿ ಚಿಂತಿಸಿ ಹೆಜ್ಜೆ ಇಡಬೇಕು. ದೇವೇಗೌಡರ ಪಕ್ಷ ಅಸ್ತಿತ್ವದಲ್ಲಿರುವ ತನಕ ಹಳೆ ಮೈಸೂರು ಪ್ರಾಂತ್ಯದಲ್ಲಿ ವಕ್ಕಲಿಗರ ಮತಗಳು ಕಾಂಗ್ರೆಸ್ ಪಕ್ಷಕ್ಕೆ ದಕ್ಕಲಾರವು. ಡಿ ಕೆ ಶಿವಕುಮಾರ ಆ ಸಮುದಾಯದ ಮತ ಸೆಳೆಯುವಲ್ಲಿ ಯಶಸ್ವಿಯಾಗಲಾರರು. ಡಿಕೆಶಿ ನಾಯಕತ್ವ ಉತ್ತರ ಕರ್ನಾಟಕದ ಲಿಂಗಾಯತ ಮತದಾರರನ್ನು ಆಕರ್ಶಿಸಲಾರದು.

ಮೇಲಿನ ಅಂಶಗಳನ್ನೆಲ್ಲ ಪರಿಗಣಿಸಿ ಈ ಚುನಾವಣೆಗೆ ಮೊದಲು ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ದಿವಂಗತ ಬಂಗಾರಪ್ಪನವರ ದೆಸೆಯಿಂದ ಬಿಜೆಪಿಗೆ ಚದುರಿ ಹೋಗಿರುವ ಹಿಂದುಳಿದ ವರ್ಗಗಳ ಅದರಲ್ಲೂ ವಿಶೇಷವಾಗಿ ಬಿಲ್ಲವರು/ಈಡಿಗ ಸಮುದಾಯದ ಮತಗಳನ್ನು ಮರಳಿ ಕಾಂಗ್ರೆಸ್ ತೆಕ್ಕೆಗೆ ತರಲು ಮಧು ಬಂಗಾರಪ್ಪ ಮತ್ತು ಬಿ. ಕೆ ಹರಿಪ್ರಸಾದ್ ಅವರನ್ನು ಕಾಂಗ್ರೆಸ್ ಪಕ್ಷ ಸೂಕ್ತವಾಗಿ ಬಳಸಿಕೊಳ್ಳಬೇಕಿದೆ. ಅದಷ್ಟೇ ಅಲ್ಲದೆ, ಸಿದ್ಧರಾಮಯ್ಯನವರ ನಂತರ ಸಂಘ ಪರಿವಾರವನ್ನು ಗಟ್ಟಿಯಾಗಿ ಎದುರಿಸುವ ಶಕ್ತಿ, ಸಾಮರ್ಥ್ಯ, ಸಿದ್ಧಾಂತ, ಸಂಘಟನಾ ಚಾತುರ್ಯ ಇರುವುದು ಉತ್ತರ ಕರ್ನಾಟಕದ ಇನ್ನೊಬ್ಬ ಹಿಂದುಳಿದ ವರ್ಗದ ನಾಯಕ ಸತೀಶ್ ಜಾರಕಿಹೊಳಿಯವರಿಗೆ. ಕಾಂಗ್ರೆಸ್ ಪಕ್ಷ ಸತೀಶ್ ಅವರನ್ನು ಕೂಡ ಸೂಕ್ತವಾಗಿ ಬಳಸಿಕೊಂಡು ಮುನ್ನೆಲೆಗೆ ತರುವ ಮೂಲಕ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಪ್ರಯತ್ನ ಮಾಡಬೇಕಿದೆ.
ಅಷ್ಟೇ ಅಪರೂಪದ ನಾಯಕತ್ವದ ಗುಣ ಹೊಂದಿರುವ ಪ್ರೀಯಾಂಕ ಖರ್ಗೆಯವರಂತ ಯುವ ನಾಯಕತ್ವವನ್ನು ಪಕ್ಷ ಸೂಕ್ತವಾಗಿ ಬಳಸಿಕೊಳ್ಳಬೇಕಿದೆ. ಹಾಗಾದಲ್ಲಿ ಮಾತ್ರ ಬಿಜೆಪಿಯನ್ನು ಹಿಂದಿಕ್ಕಿ ಭವಿಷತ್ತಿನಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯಬಲ್ಲದು. ೨೦೨೩ ರ ಚುನಾವಣೆ ಹೇಗೊ ಕಾಂಗ್ರೆಸ್ ಗೆಲ್ಲಬಹುದು. ಏಕೆಂದರೆ ಸಾಮಾನ್ಯವಾಗಿ ಬಿಜೆಪಿಯ ದುರಾಡಳಿತ ಮತ್ತು ಆಡಳಿತ ವಿರೋಧಿ ಅಲೆ ಈಗ ಸಧ್ಯಕ್ಕೆ ಸಹಕಾರಿ. ಆದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢವಾಗಿ ಕಟ್ಟಲು ಮೇಲಿನ ಅಂಶಗಳನ್ನು ಪರಿಗಣಿಸುವ ಅಗತ್ಯವಿದೆ.
~ಡಾ. ಜೆ ಎಸ್ ಪಾಟೀಲ.