ರಾಜ್ಯ ಕಾಂಗ್ರೆಸ್ ಉಸ್ತುವಾರಿಯನ್ನು ಬದಲಿಸಲು ಹೈಕಮಾಂಡ್ ನಿರ್ಧರಿಸುವುದನ್ನು ‘ಪ್ರತಿಧ್ವನಿ’ ಅನಾವರಣ ಮಾಡಿತ್ತು. ಈಗ ಕೆಪಿಸಿಸಿಗೆ ಲಿಂಗಾಯತ ನಾಯಕತ್ವ ತರಲು ಹೈಕಮಾಂಡ್ ಯೋಚಿಸಿದೆ ಎನ್ನಲಾಗಿದೆ. ಇದಕ್ಕೆ ಹಲವಾರು ಸಂಗತಿಗಳು ಕಾರಣವಾಗಿವೆ.
ಜೆಡಿಎಸ್ ಎಂದಿಗೂ ಒಕ್ಕಲಿಗ ನಾಯಕತ್ವದಲ್ಲೇ (ಅಧ್ಯಕ್ಷರು ಬೇರೆ ಸಮುದಾಯದವರು ಇದ್ದಾಗಲೂ ಕೂಡ) ಮುಂದುವರೆದಿದೆ. ಅದು ಒಕ್ಕಲಿಗರ ಪಕ್ಷ ಎಂಬ ಹಣೆಪಟ್ಟಿಯನ್ನೂ ಹಚ್ಚಿಕೊಂಡಿದೆ.
ಇನ್ನೊಂದು ಕಡೆ ಬಿಜೆಪಿ ನಳಿನಕುಮಾರ್ ಕಟೀಲರಿಗೆ ಅಧ್ಯಕ್ಷ ಸ್ಥಾನ ನೀಡಿದ್ದರೂ ಅದು ಲಿಂಗಾಯತ ವೋಟ್ ಬ್ಯಾಂಕ್ ಆಶ್ರಯಿಸಿರುವ ಕಾರಣ ಈ ಸಲ ಬೊಮ್ಮಾಯಿಯವರ ನಾಯಕತ್ವದಲ್ಲಿ ಚುನಾವಣೆ ಎದುರಿಸುವ ತಯಾರಿಯಲ್ಲಿದೆ.
ಇನ್ನೊಂದು ಕಡೆ ಕಾಂಗ್ರೆಸ್ ಈ ಸಲ ಕೆಪಿಸಿಸಿಗೆ ಲಿಂಗಾಯತರೊಬ್ಬರನ್ನು ನೇಮಕ ಮಾಡಲು ಹೊರಟಿದೆ. ನೆಹರು- ಇಂದಿರಾ ಆಡಳಿತ ಕಾಲದಲ್ಲಿ ಕಾಂಗ್ರೆಸ್ ಪಕ್ಷ ಲಿಂಗಾಯತ ನಾಯಕರಿಗೆ ವಿಫುಲ ಅವಕಾಶವನ್ನು ನೀಡಿತ್ತು. ನಿಜಲಿಂಗಪ್ಪ, ಕಂಠಿ, ಜತ್ತಿ, ಮತ್ತು ವಿರೇಂದ್ರ ಪಾಟೀಲ ಈ ನಾಲ್ಕು ಜನರನ್ನು ಕಾಂಗ್ರೆಸ್ ಪಕ್ಷ ರಾಜ್ಯದ ಮುಖ್ಯಮಂತ್ರಿಗಳನ್ನಾಗಿ ಮಾಡಿತ್ತು ಮತ್ತು ಜತ್ತಿಯವರಿಗೆ ಉಪರಾಷ್ಟ್ರಪತಿ/ಹಂಗಾಮಿ ರಾಷ್ಟ್ರಪತಿ ಹುದ್ದೆ ನೀಡಿತ್ತು. ಇಂದು ಬಹುತೇಕ ಈ ನಾಯಕರ ಮಕ್ಕಳು ಮತ್ತು ಕುಟುಂಬಸ್ಥರು ಬಿಜೆಪಿಯ ಬೆಂಬಲಿಗರಾಗಿದ್ದಾರೆ ಎನ್ನುವುದು ಬೇರೆ ವಿಷಯ.
ಇಂದಿರಾ ವಿರೋಧಿ ಅಲೆಯ ಸಂದರ್ಭದಲ್ಲಿ ಜನತಾ ಪರಿವಾರ ಹುಟ್ಟಿಕೊಂಡು ಲಿಂಗಾಯತರು ಕಾಂಗ್ರೆಸ್ ಪಕ್ಷದಿಂದ ವಿಮುಖರಾದರು. ಆನಂತರ ದೇವೇಗೌಡರ ಕುಟುಂಬ ಪ್ರೀತಿ ಮತ್ತು ಹೆಗಡೆಯವರ ಬಿಜೆಪಿ ಪರ ಒಲವುಗಳ ಕಾರಣದಿಂದ ಕರ್ನಾಟಕದಲ್ಲಿ ಜನತಾ ಪರಿವಾರ ವಿಭಜನೆಯಾಗಿತು. ಅಲ್ಲಿದ್ದ ಜಾತ್ಯಾತೀತ ಮನಸ್ಥಿತಿಯ ನಾಯಕರೆಲ್ಲ ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿದರೆ ಸಂಪ್ರದಾಯವಾದಿಗಳು ಮಾಮೂಲಿನಂತೆ ಬಿಜೆಪಿ ಸೇರಿದರು. ವಿರೇಂದ್ರ ಪಾಟೀಲರನ್ನು ಅಮಾನುಷವಾಗಿ ನಡೆಸಿಕೊಂಡ ಕಾರಣದಿಂದ ಲಿಂಗಾಯತರು ಬಿಜೆಪಿಯ ಯಡಿಯೂರಪ್ಪನವರನ್ನು ಭಾಗಶಃ ಅಪ್ಪಿಕೊಂಡರು.
ಆದರೆ ಯಡಿಯೂರಪ್ಪ ಎಂದೂ ಪೂರ್ಣ ಪ್ರಮಾಣದ ಲಿಂಗಾಯತ ನಾಯಕರಾಗಲಿಲ್ಲ. ಉತ್ತರ ಕರ್ನಾಟಕದಲ್ಲಿ ಲಿಂಗಾಯತರು ಯಡಿಯೂರಪ್ಪ ಕಾರಣದಿಂದಲೇ ಬಿಜೆಪಿ ಪರ ಒಲವು ತೋರಿಸುತ್ತ ಬಂದರೆಂಬುದು ಸತ್ಯ.
ಹಿಂದೆ ಕಾಂಗ್ರೆಸ್ ವಿರೋಂದ್ರ ಪಾಟೀಲರನ್ನು ಅಮಾನುಷವಾಗಿ ನಡೆಸಿಕೊಂಡಂತೆ ಈಗ ಬಿಜೆಪಿ ಯಡಿಯೂರಪ್ಪನವರನ್ನು ನಡೆಸಿಕೊಂಡಿದೆ ಎಂಬ ಭಾವ ಸಾಮಾನ್ಯ ಲಿಂಗಾಯತರಲ್ಲಿ ಮೂಡಿರುವಂತಿದೆ. ಖಾಲಿಯಾಗಿರುವ ಈ ಜಾಗ ತುಂಬಲು ನಿರ್ಧರಿಸಿರುವ ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿಗೆ ಲಿಂಗಾಯತ ನಾಯಕತ್ವ ನೀಡಲು ಮುಂದಾದಂತಿದೆ.
ಯಡಿಯುರಪ್ಪರನ್ನು ಕೆಳಗಿಳಿಸಿದ್ದು ಬಿಜೆಪಿಯೊಳಗಿನ ಹಲವಾರು ಲಿಂಗಾಯತ ನಾಯಕರಿಗೆ ನಿರಾಶೆ ಉಂಟುಮಾಡಿದೆ.
ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ಯಡಿಯೂರಪ್ಪನವರ ನಿರ್ಗಮನದ ತರುವಾಯ ಕಾಂಗ್ರೆಸ್ ಪಕ್ಷವು ಸೂಕ್ತ ಲಿಂಗಾಯತ ನಾಯಕತ್ವಕ್ಕೆ ಮನ್ನಣೆ ನೀಡಲು ಯೋಚಿಸಿರಬಹುದು. ಕಾಂಗ್ರೆಸ್ ಪಕ್ಷ ನೆಚ್ಚಿಕೊಂಡಿರುವ ಬಹುತೇಕ ಹಿಂದುಳಿದ ವರ್ಗದ ಮತದಾರರು (ಕುರುಬ ಸಮುದಾಯ ಹೊರತು ಪಡಿಸಿ) ಇಂದು ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ.
ಅದಲ್ಲದೆ ಬಹುತೇಕ ದಲಿತ ಎಡಗೈ ಪಂಗಡ, ಅರ್ಧದಷ್ಟು ದಲಿತ ಬಲಪಂಗಡ, ಬಹುತೇಕ ಭೋವಿ, ಲಂಬಾಣಿ, ಮುಂತಾದ ಪರಿಶಿಷ್ಠ ವರ್ಗಗಳೂ ಕೂಡ ಬಿಜೆಪಿಯೊಂದಿಗೆ ಹೋಗಿವೆ. ಅದು ಯಡಿಯೂರಪ್ಪನವರು ಮಾಡಿದ ಸೋಷಿಯಲ್ ಇಂಜಿನಿಯರಿಂಗ್ನ ಫಲ.
ಅಲ್ಪ ಸಂಖ್ಯಾತರ ಮತಗಳನ್ನು ಮಾತ್ರ ನೆಚ್ಚಿಕೊಂಡು ಕಾಂಗ್ರೆಸ್ ಗೆಲುವಿನ ದಡ ಸೇರುವುದು ಕಷ್ಟ. ಹಾಗಾಗಿ, ಲಿಂಗಾಯತ ನಾಯಕತ್ವವನ್ನು ಬೆಳೆಸಲು ಕಾಂಗ್ರೆಸ್ ಪಕ್ಷ ಉದ್ದೇಶಿಸಿದಂತಿದೆ. ಈಗ ಕಾಂಗ್ರೆಸ್ ಪಕ್ಷದಲ್ಲಿ ಇಡೀ ಲಿಂಗಾಯತ ಸಮುದಾಯವನ್ನು ಸೆಳೆಯಬಲ್ಲ ನಾಯಕತ್ವ ಸಧ್ಯಕಂತೂ ಇಲ್ಲ. ಆದರೆ ಇರುವವರಲ್ಲೆ ಕೆಲವರನ್ನು ಗುರುತಿಸುವ ಅನಿವಾರ್ಯತೆ ಕಾಂಗ್ರೆಸ್ ಪಕ್ಷಕ್ಕಿದೆ. ಈಗ ಕಾಂಗ್ರೆಸ್ ಪಕ್ಷದಲ್ಲಿ ಅನೇಕ ಜನ ಲಿಂಗಾಯತ ನಾಯಕರಿದ್ದಾರೆ. ಅವರಲ್ಲೇ ಪಕ್ಷ ಈಗ ಕೆಲವರನ್ನು ಮುಂಚೂಣಿಗೆ ತರಬಹುದೇನೋ?
ಈಶ್ವರ ಖಂಡ್ರೆ ಒಂದು ಸಾಧ್ಯತೆಯೇನೋ ನಿಜ. ಖಂಡ್ರೆ ಕುಟುಂಬವನ್ನು ವಿರೋಧಿಸುವ ಏಕೈಕ ಕಾರಣದಿಂದ ಇಡೀ ಬೀದರ ಜಿಲ್ಲೆಯ ಲಿಂಗಾಯತ ಸಮುದಾಯ, ಸಂಘ-ಸಂಸ್ಥೆಗಳು, ಮಠಗಳು ಮತ್ತು ಮತದಾರರು ಬಿಜೆಪಿಯೊಂದಿಗೆ ಗುರುತಿಸಿಕೊಂಡವು.
ಇನ್ನು ಮಧ್ಯ ಕರ್ನಾಟಕದ ಶಾಮನೂರು ಶಿವಶಂಕರಪ್ಪ ಕುಟುಂಬ. ಶಾಮನೂರು ಶಿವಶಂಕರಪ್ಪ ವೀರಶೈವ ಮಹಾಸಭೆಯ ಮುಖ್ಯಸ್ಥರು, ಬಸವ ತತ್ವ ಹಾಗು ಲಿಂಗಾಯತ ಧರ್ಮ ವಿರೋಧಿಗಳು ಎಂದು ಅವರೇ ಅನೇಕ ವೇಳೆ ತೋರಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಸರಕಾರ ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಶಿಫಾರಸ್ಸು ಮಾಡಿದಾಗ ಅದನ್ನು ಬಹಿರಂಗವಾಗಿ ವಿರೋಧಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಲಿಂಗಾಯತ ಸಮುದಾಯಕ್ಕೆ ಅಪಾರವಾಗಿ ಹಾನಿ ಮಾಡಿದವರು. ಶಿವಶಂಕರಪ್ಪ.ನವರಿಗೆ ವಯಸ್ಸಾಗಿದೆ, ಅವರಿಂದ ಹೆಚ್ಚಿನದನ್ನು ಅಂದರೆ ಸಂಘಟನೆಯನ್ನು ನಿರೀಕ್ಷಿಸಲಾಗದು.
ಉಳಿದಂತೆ ಮೊದಲಿಗೆ, ಸಿದ್ದರಾಮಯ್ಯನವರ ಸಮಕಾಲೀನರು, ಜೆಪಿ ಚಳುವಳಿ ಮತ್ತು ಜನತಾ ಪರಿವಾರದ ಹಿನ್ನೆಲೆಯ ಆಳಂದದ ಮಾಜಿ ಶಾಸಕರಾದ ಬಿ ಆರ್ ಪಾಟೀಲರಿದ್ದಾರೆ. ಎರಡನೇಯದಾಗಿ; ಸುಶಿಕ್ಷಿತರು, ಸಜ್ಜನರು ಆದ ಡಾ. ಶರಣಪ್ರಕಾಶ್ ಪಾಟೀಲರು ಮತ್ತು ಮೂರನೇಯವರು ದೈತ್ಯ ಕೆಲಸಗಾರರಾದ ಬಸವರಾಜ ರಾಯರೆಡ್ಡಿಯವರು. ಇವರಲ್ಲಿ ಬಿ ಆರ್ ಪಾಟೀಲರು ಎಪ್ಪತ್ತು ವಸಂತಗಳನ್ನು ದಾಟಿದ್ದಾರೆ. ಬಸವರಾಜ್ ರಾಯರಡ್ಡಿ ಮತ್ತು ಡಾ. ಶರಣಪ್ರಕಾಶ್ ಪಾಟೀಲರು ಇದರಲ್ಲಿ ವಿಶೇಷ ಆಸಕ್ತಿ ತೋರಿಸಿಲ್ಲ. ಪಕ್ಷ ಸಂಘಟನೆಯಲ್ಲೂ ಅವರು ಅಷ್ಟಾಗಿ ಭಾಗವಹಿಸಿಲ್ಲ. ಮಾಜಿ ಸಚಿವ, ಶಾಸಕ ಎಂ.ಬಿ ಪಾಟೀಲರು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಸಂದರ್ಭದಲ್ಲಿ ವೀರಶೈವ ಸ್ವಾಮಿಗಳನ್ನು ಹೀನಾಯವಾಗಿ ಟೀಕಿಸಿದ ಪರಿಣಾಮ ಆ ಸಮುದಾಯದ ಸಿಟ್ಟನ್ನು ಎದುರಿಸುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದ ಜಾತ್ಯಾತೀತ ಮತ ಬ್ಯಾಂಕ್ ಮರಳಿ ಕ್ರೂಢೀಕರೀಸಲು ಲಿಂಗಾಯತ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯಕ್ಕೆ ಕಾಂಗ್ರೆಸ್ ಹೈಕಮಾಂಡ್ ಯೋಚಿಸಿರಬಹುದು. ಹೀಗಾಗಿ ಹೈಕಮಾಂಡ್ ಸದ್ದಿಲ್ಲದೇ ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್. ಆರ್ ಪಾಟೀಲರನ್ನು ಮುನ್ನೆಲೆಗೆ ತರಲು ಯತ್ನಿಸುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ರಾಜ್ಯದ ಎಲ್ಲ ಲಿಂಗಾಯತ ಮಠಾಧೀಶರನ್ನು ಭೇಟಿ ಮಾಡಿ ಚರ್ಚಿಸಲು ಹೈಕಮಾಂಡ್ ಅವರಿಗೆ ಸೂಚಿಸಿದೆ. ಬಹುಷಃ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪಾಟೀಲರೇ ಆಯ್ಕೆಯಾಗಬಹುದು.
ಅವರು ಜನಪ್ರಿಯ ನಾಯಕರಲ್ಲ. ಆದರೆ ಕ್ರಿಯಾಶೀಲರು. 80ರ ದಶಕದ ವೇಳಗೆ ಹಿನ್ನೆಲೆಗೆ ಸರಿದಿದ್ದ ವೀರೇಂದ್ರ ಪಾಟೀಲರನ್ನು 1989ರಲ್ಲಿ ಮುನ್ನೆಲೆಗೆ ತಂದು ಕಾಂಗ್ರೆಸ್ ಭಾರಿ ಬಹುಮತ ಪಡೆದಿತ್ತು. ಈಗ ಎಸ್ಆೀರ್ ಪಾಟೀಲರ ಮೂಲಕ ಆ ಪ್ರಯೋಗವನ್ನು ಪುನರಾವರ್ತನೆ ಮಾಡಲು ಹೈಕಮಾಂಡ್ ಬಯಸಿದೆಯೇ?