ಸಿದ್ದರಾಮಯ್ಯ ಪತ್ನಿ ಮುಡಾದಿಂದ ಪಡೆದಿದ್ದ 14 ಸೈಟ್ ವಾಪಸ್ ಮಾಡಿದ ಬೆನ್ನಲ್ಲೇ ಮಲ್ಲಿಕಾರ್ಜುನ ಖರ್ಗೆ ಪುತ್ರ ರಾಹುಲ್ ಖರ್ಗೆಗೆ ಕೊಟ್ಟಿದ್ದ ಸೈಟ್ನಲ್ಲೂ ಅಕ್ರಮ ನಡೆದಿದೆ ಎನ್ನುವ ಆರೋಪವನ್ನು ಬಿಜೆಪಿ ನಾಯಕರು ಮಾಡಿದ್ದರು. ಮೊದಲಿಗೆ ಪ್ರಿಯಾಂಕ್ ಖರ್ಗೆ ಕಾನೂನು ಪ್ರಕಾರವೇ ಸೈಟ್ ಪಡೆದಿದ್ದೇವೆ. ಯಾವುದೇ ಅಕ್ರಮ, ಸ್ವಹಿತಾಸಕ್ತಿ ನಡೆದಿಲ್ಲ ಎಂದಿದ್ದರು. ಸಚಿವ ಎಂಬಿ ಪಾಟೀಲ್ ಸೇರಿದಂತೆ ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ನೀಡಿದ್ದ ಸೈಟ್ ಕಾನೂನು ಬದ್ಧ ಎಂದು ಸಾಕಷ್ಟು ಮಂತ್ರಿಗಳು ಠಸ್ಸೆ ಹೊತ್ತಿದ್ದರು. ಆದರೆ ಇದೀಗ ಕಾನೂನು ಸಂಘರ್ಷಕ್ಕೂ ಮೊದಲೇ ಸೈಟ್ ವಾಪಸ್ ಮಾಡುವ ಮೂಲಕ ಜಾಣತನ ಮೆರೆದಿದ್ದಾರೆ.
ಸಿದ್ದಾರ್ಥ ವಿಹಾರ ಟ್ರಸ್ಟ್ ವಿವಾದ ಜೋರಾಗುವ ಮೊದಲೇ ಮಲ್ಲಿಕಾರ್ಜುನ ಖರ್ಗೆ ಕುಟುಂಬ ಸೈಟ್ ವಾಪಸ್ ಮಾಡಿರುವ ಬಗ್ಗೆ ಪ್ರಿಯಾಂಕ್ ಖರ್ಗೆ ಮಾತನಾಡಿ ಈಗಲೂ ಸಮರ್ಥನೆ ಹಾದಿಯಲ್ಲೇ ಇದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ್ದು, ತರಾತುರಿ ಹಾಗೂ ಕಾನೂನು ಬಾಹಿರವಾಗಿ ಸೈಟ್ ಹಂಚಿಕೆಯಾಗಿದೆ ಎಂಬ ಆರೋಪ ಇತ್ತು. ಆದ್ರೆ ಇಲ್ಲಿ ಹಾಗೆ ಆಗಿಲ್ಲ. ಟ್ರಸ್ಟ್ ಅಧ್ಯಕ್ಷ ರಾಹುಲ್ ಖರ್ಗೆ ಅವರಿಗೆ ಹೆಚ್ಚು ಅರಿವು ಇರಲಿಲ್ಲ. ಅವರಿಗೆ ಕೇಂದ್ರದಿಂದ ಸಾಕಷ್ಟು ಅವಾರ್ಡ್ ಸಿಕ್ಕಿದೆ. ಯುಪಿಎಸ್ಇನಲ್ಲೂ ರ್ಯಾಂಕ್ ಬಂದಿದ್ರು. ನಮ್ಮ ಕುಟುಂಬದಲ್ಲಿ ಮೂವರು ಅಷ್ಟೇ ರಾಜಕೀಯದಲ್ಲಿ ಇದ್ದೇವೆ. ರಾಹುಲ್ ಖರ್ಗೆ ಯುರೋಸ್ಪೇಸ್ನಲ್ಲಿ ಜಾಗ ಬೇಕು ಅಂತ ಅರ್ಜಿ ಹಾಕ್ತಾರೆ. ಅದರ ಅನ್ವಯ ಅವರಿಗೆ ಸೈಟ್ ಅಲಾಟ್ ಆಗಿದೆ. ಸಂಪೂರ್ಣ ದಾಖಲೆ ಆಧಾರದ ಮೇಲೆ ಸೈಟ್ ಸಿಕ್ಕಿದೆ ಎಂದಿದ್ದಾರೆ.
ಆ ಬಳಿಕ ಸೈಟ್ ವಾಪಸ್ ಬಗ್ಗೆ ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ನಮ್ಮ ಅಣ್ಣ ಅವರು ಮೃದು ಸ್ವಭಾವದವರು. ಅವರಿಂದ ಕುಟುಂಬದ ಸದಸ್ಯರರಿಗೆ ಹಿಂಸೆ ಆಗ್ತಿದೆ ಎಂದು ನೊಂದಿದ್ದಾರೆ. ಸೆಪ್ಟೆಂಬರ್ 20ರಂದು KIADBಗೆ ಪತ್ರ ಬರೆದಿದ್ದಾರೆ. ನಿವೇಶನಗಳನ್ನು ಕಾನೂನಾತ್ಮಕ ವಾಗಿ ಮರಳಿ ನೀಡುತ್ತಿದ್ದೇವೆ ಎಂದು ಪತ್ರ ಬರೆದಿದ್ದಾರೆ. ಎರಡ್ಮೂರು ಕಾರಣ ಕೊಟ್ಟು ಸೈಟ್ ಮರಳಿ ನೀಡಿದ್ದಾರೆ. ಖಾಸಗಿ ಟ್ರಸ್ಟ್ ಅಲ್ಲ ಪಬ್ಲಿಕ್ ಟ್ರಸ್ಟ್ ಎಂದು ನಮೂದಿಸಿದ್ದಾರೆ. ಟ್ರಸ್ಟ್ಗೆ ಬಂದ ಹಣವನ್ನು ಯಾವುದೇ ಕಾರಣಕ್ಕೆ ದುರುಪಯೋಗ ಮಾಡಿಕೊಳ್ಳಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಸಿಎ ಸೈಟ್ನಲ್ಲಿ ಯಾವುದೇ ರೀತಿಯ ರಿಯಾಯಿತಿ ಕೋಡೋದಕ್ಕೆ ಬರೋದಿಲ್ಲ. ಇದು ತರಬೇತಿಗೆ ಅಂತ ಸಿಎ ಸೈಟ್ ಪಡೆಯಲಾಗಿತ್ತು. ಆದ್ರೆ ಯಾವುದೇ ಲಾಭದ ಉದ್ದೇಶ ಇರಲಿಲ್ಲ. ಆದ್ರೆ ಬಿಜೆಪಿ ನಾಯಕರು ಹಲವು ರೀತಿಯ ಆರೋಪ ಮಾಡಿದರು. ರಾಜಕೀಯ ಆರೋಪದಿಂದ ಬೇಸರವಾಗಿ ಸೈಟ್ ವಾಪಸ್ ಮಾಡಿದ್ದಾರೆ ಎಂದಿದ್ದಾರೆ.
ಕೆಐಎಡಿಬಿಗೆ ಧನ್ಯವಾದ ಸಲ್ಲಿಸಿ ಸಿಎ ಸೈಟ್ ಮರಳಿ ನೀಡಿದ್ದಾರೆ. ಬಿಜೆಪಿಯವರು ದೊಡ್ಡ ಸಾಧನೆ ಎಂದು ಹೇಳುತ್ತಾ ಹೊರಟಿದರು. ಆದ್ರೆ ರಾಜಕೀಯ ಅರೋಪದಿಂದ ನೊಂದು ಸಿಎ ಸೈಟ್ ವಾಪಸ್ ನೀಡಿದ್ದಾರೆ. ರಾಹುಲ್ ಖರ್ಗೆ ಅವರಿಗೆ ಇಂತಹ ವಾತಾವರಣದಲ್ಲಿ ಕೆಲಸ ಮಾಡೋದಕ್ಕೆ ಆಗಲ್ಲ ಎಂದು ಮರಳಿಸಿದ್ದಾರೆ. ಇದರಲ್ಲಿ ಅಕ್ರಮ ಇದ್ದಿದ್ರೆ ಮೋದಿ, ಅಮಿತ್ ಶಾ ಬಿಡುತ್ತಿದ್ರಾ..? ವಿಜಯೇಂದ್ರ ಅವರು ಕಲಬುರಗಿ ತನಕ ಪಾದಯಾತ್ರೆ ಮಾಡುತ್ತಿದ್ದರು. ಇಲ್ಲಿ ಸಮಸ್ಯೆ ಅಂದ್ರೆ ನಾವು ಸಿಎ ಸೈಟ್ ಪಡೀಬಾರದು ಅನ್ನೋದು ಅಷ್ಟೆ. ಖರ್ಗೆ ಕುಟುಂಬದವರು ಸೈಟ್ ತೆಗೆದುಕೊಳ್ಳಬಾರದು ಅನ್ನೋದು ಅಷ್ಟೇ ಅವರ ಉದ್ದೇಶ. ಛಲವಾದಿ ನಾರಾಯಣಸ್ವಾಮಿ ಬಿರಿಯಾನಿ ಶಾಪ್ ಮಾಡೋದಕ್ಕೆ ಸಿಎ ಸೈಟ್ ಪಡೆದಿದ್ದರು ಅಲ್ವಾ..? ಎಂದು ಕುಟುಕಿದ್ದಾರೆ.