ಗುಜರಾತ್ ಚುನಾವಣಾ ಫಲಿತಾಂಶದ ಬಗ್ಗೆ ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಗುಜರಾತ್ ಸಾಕಷ್ಟು ಅಭಿವೃದ್ಧಿಯಾಗಿದೆ. ಗುಜರಾತ್ ದೇಶಕ್ಕೆ ಮಾದರಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಕ್ಕೆ ಮಾದರಿಯಾಗಿದ್ದಾರೆ
ಶಿವಮೊಗ್ಗ: ಗುಜರಾತ್ ರೀತಿಯಲ್ಲಿ ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲೂ ಸಹ ನಾವು ಗೆಲ್ಲುತ್ತೇವೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಗುಜರಾತ್ ಚುನಾವಣಾ ಫಲಿತಾಂಶದ ಬಗ್ಗೆ ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಗುಜರಾತ್ ಸಾಕಷ್ಟು ಅಭಿವೃದ್ಧಿಯಾಗಿದೆ. ಗುಜರಾತ್ ದೇಶಕ್ಕೆ ಮಾದರಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಕ್ಕೆ ಮಾದರಿಯಾಗಿದ್ದಾರೆ. ಗುಜರಾತ್ ಹೋಗಿ ನೋಡಿದರೆ ಅಲ್ಲಿನ ಅಭಿವೃದ್ಧಿ ಏನು ಎಂಬುದು ಗೊತ್ತಾಗುತ್ತದೆ. ಕೈಗಾರಿಕೆಗಳಿಗೆ ನಿರಂತರ ವಿದ್ಯುತ್, ರೈತರ ಜಮೀನಿಗೆ ನೀರು ಒದಗಿಸಿ ಮಾದರಿಯಾಗಿದೆ ಎಂದರು.

ಅದೇ ರೀತಿಯಲ್ಲಿ ನಾವು ನಮ್ಮ ರಾಜ್ಯದಲ್ಲೂ ಅಭಿವೃದ್ಧಿ ಮಾಡಿದ್ದೇವೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಗುಜರಾತ್ ರೀತಿಯಲ್ಲಿ ನಾವು ಸಹ ಗೆಲ್ಲುತ್ತೇವೆ. ಗುಜರಾತ್‌ನಲ್ಲಿ ಪೇಜ್ ಪ್ರಮುಖ ರಚನೆ ಯಶಸ್ವಿಯಾಗಿದ್ದು, ನಮ್ಮ ರಾಜ್ಯದಲ್ಲೂ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಪೇಜ್ ಪ್ರಮುಖ ರಚಿಸಿದ್ದೇವೆ. ಹೀಗಾಗಿ ಕರ್ನಾಟಕದಲ್ಲೂ ಬಿಜೆಪಿಗೆ ಪೂರ್ಣ ಬಹುಮತ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗುಜರಾತ್ ಚುನಾವಣೆಯ ಫಲಿತಾಂಶದಿಂದ ಇಡೀ ದೇಶಕ್ಕೆ ಸಂತೋಷವಾಗಿದೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ಇದ್ದು, ಅಲ್ಲೂ ಗೆಲುವು ಸಾಧಿಸಲು ಈ ಫಲಿತಾಂಶ ದಿಕ್ಸೂಚಿ ಆಗಲಿದೆ. ಅಲ್ಲದೇ ಯಡಿಯೂರಪ್ಪ, ಬೊಮ್ಮಾಯಿ, ಕಟೀಲ್ ನೇತೃತ್ವದಲ್ಲಿ ಮುಂದಿನ ಚುನಾವಣೆಗೆ ಹೋಗುತ್ತೇವೆ ಎಂದು ತಿಳಿಸಿದರು.
ಇದೇ ವೇಳೆ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಈಶ್ವರಪ್ಪ, ಅಧಿಕಾರಕ್ಕಾಗಿ ಕಾಂಗ್ರೆಸ್ ಮುಖಂಡರು ಜಗಳ ಆಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ 150 ಅಲ್ಲ 15 ಸೀಟು ಗೆಲುವು ಸಾಧಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ನಾಯಕರಿಗೆ ದೇಶದೆಲ್ಲೆಡೆ ಸೋತು ಸಾಕಾಗಿದ್ದು, ಹೀಗಾಗಿ ಈ ಸೋಲಿನ ಹೊಣೆ ತಮ್ಮ ಮೇಲೆ ಬರಬಾರದೆಂದು ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಮುಂದೆ ಅವರಿಂದಲೇ ಕಾಂಗ್ರೆಸ್ ಸೋತಿದೆ ಎಂದು ಆರೋಪ ಹೊರಿಸುತ್ತಾರೆ ಎಂದು ಅವರು, ಆಮ್ ಆದ್ಮಿ ಪ್ರಾದೇಶಿಕ ಪಕ್ಷದಂತೆ ಅಲ್ಲೊಂದು ಇಲ್ಲೊಂದು ಗೆದ್ದಿದೆ. ದೆಹಲಿ ಬಿಟ್ಟರೆ ಬೇರೆಲ್ಲೂ ಅವರಿಗೆ ಅಧಿಕಾರ ಸಿಕ್ಕಿಲ್ಲ ಎಂದರು.