ಅಮೇರಿಕಾ ಮೂಲದ ಸಂಶೋಧನಾ ಸಂಸ್ಥೆಯೊಂದು ಭಾರತದ ಮಾಲಿನ್ಯ ಕುರಿತು ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ. ಮುಂದಿನ 9 ವರ್ಷಗಳಲ್ಲಿ ಭಾರತೀಯರ ಸಾಮಾನ್ಯ ಜಿವಿತಾವಧಿ ಶೇ. 40ರಷ್ಟು ಕುಂಠಿತಗೊಳ್ಳಲಿದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.
ಭಾರತ ಪೂರ್ವ, ಮಧ್ಯ ಹಾಗೂ ಉತ್ತರ ಭಾಗದಲ್ಲಿ ವಾಸಿಸುವ 480 ಮಿಲಿಯನ್ ಜನರು ವಿವಿಧ ರೀತಿಯ ಮಾಲಿನ್ಯದಿಂದಾಗಿ ಬೇಗ ಸಾವಿಗಾಡುವ ಆತಂಕವಿದೆ. ಈ ಭಾಗದಲ್ಲಿ ದೇಶದ ಅತೀ ಹೆಚ್ಚು ಮಾಲಿನ್ಯಕಾರಿ ರಾಜ್ಯವಾದ ದೆಹಲಿಯೂ ಸೇರಿದೆ, ಎಂದು Energy Policy Institute at the University of Chicago (EPIC) ತನ್ನನ ವರದಿಯಲ್ಲಿ ತಿಳಿಸಿದೆ.
ಎಪಿಕ್ ವರದಿಯ ಪ್ರಕಾರ, ಮಹಾರಾಷ್ಟ್ರ ಹಾಗು ಮಧ್ಯಪ್ರದೇಶದಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದಿದೆ. ದುರದೃಷ್ಟವಶಾತ್ ದೇಶದ ವಾಯು ಮಾಲಿನ್ಯದ ಪ್ರಮಾಣ ಭೌತಿಕವಾಗಿ ತೀವ್ರಗತಿಯಲ್ಲಿ ಹಬ್ಬುತ್ತಿದೆ.
2019ರಲ್ಲಿ ದೇಶದಲ್ಲಿ ಜಾರಿಯಾದ ರಾಷ್ಟ್ರೀಯ ಶುದ್ಧ ಗಾಳಿ ಯೋಜನೆ (NCAP)ಯನ್ನು ಹೊಗಳಿರುವ ಎಪಿಕ್, ಈ ಯೋಜನೆಯ ಗುರಿಯನ್ನು ಸಾಧಿಸುವುದು ಮಾತ್ರವಲ್ಲ ಇದನ್ನು ಉಳಿಸಿ ಮುಂದುವರೆಸಿಕೊಂಡು ಹೋಗುವುದು ಕೂಡಾ ಮುಖ್ಯ, ಎಂದು ಹೇಳಿದೆ. ಈ ಯೋಜನೆ ಜಾರಿ ಮಾಡಿದ್ದರಿಂದ ದೇಶದ ಸಾಮಾನ್ಯ ಜೀವಿತಾವಧಿಯು 1.7 ವರ್ಷಗಳಷ್ಟು ವೃದ್ದಿಸಿದೆ. ದೆಹಲಿ ಭಾಗದ ಜನರ ಸಾಮಾನ್ಯ ಜೀವಿತಾವಧಿಯು 3.1 ವರ್ಷಗಳಷ್ಟು ಏರಿಕೆಯಾಗಿದೆ, ಎಂದು ಹೇಳಿದೆ.
NCAP ಯೋಜನೆಯು ದೇಶದ 102 ಅತೀ ಹೆಚ್ಚು ಮಾಲಿನ್ಯ ಹೊಂದಿರುವ ನಗರಗಳಲ್ಲಿ ಜಾರಿಯಾಗಿದೆ. ಈ ನಗರಗಳ ಮಾಲಿನ್ಯ ಪ್ರಮಾಣವನ್ನು 2024ರ ವೇಳೆಗೆ 20%-30%ದಷ್ಟು ಕಡಿಮೆಗೊಳಿಸಬೇಕು ಎಂಬ ಧ್ಯೇಯವನ್ನು NCAP ಯೋಜನೆ ಹೊಂದಿದೆ. ಉತ್ತಮವಾದ ಮೌಲ್ಯಮಾಪನಾ ವ್ಯವಸ್ಥೆಯನ್ನು ಬಳಸಿಕೊಂಡು, ಸಾರಿಗೆ ಇಂಧನ, ಬೃಹತ್ ರಾಶಿಗಳ ಉರಿಸುವಿಕೆ ಹಾಗೂ ಧೂಳಿನ ಪ್ರಮಾಣವನ್ನು ತಡೆಗಟ್ಟುವತ್ತ ಚಿತ್ತ ಹರಿಸಿದೆ.
2020ರಲ್ಲಿ ದೆಹಲಿಯು ಪ್ರಪಂಚದ ಅತ್ಯಂತ ಹೆಚ್ಚು ಮಾಲಿನ್ಯಕಾರಿ ರಾಜಧಾನಿ ಎಂಬ ಅಪಕೀರ್ತಿಗೆ ಒಳಗಾಗಿತ್ತು. ಇದು 2020ರಲ್ಲಿ ಮಾತ್ರವಲ್ಲ ಬದಲಾಗಿ ಅದರ ಹಿಂದಿನ ಎರಡು ವರ್ಷಗಳಲ್ಲಿಯೂ ಈ ಅಪಖ್ಯಾತಿ ದೆಹಲಿಗೆ ಲಭಿಸಿತ್ತು. ಆರೋಗ್ಯವಂತ ಜನರ ಶ್ವಾಸಕೋಶಕ್ಕೆ ಆಪತ್ತು ತಂದೊಡ್ಡುವ ಕಣಗಳ ಅಂದರೆ PM2.5 ಸಾಂದ್ರತೆಯನ್ನು ಕೇಂದ್ರೀಕರಿಸಿ ಈ ಅಧ್ಯಯನವನ್ನು ನಡೆಸಲಾಗಿತ್ತು.
ಕಳೆದ ವರ್ಷ ಕರೋನಾ ಪ್ರೇರಿತ ಲಾಕ್ಡೌನ್’ನಿಂದಾಗಿ ದೆಹಲಿಯ 20 ಮಿಲಿಯನ್ ಜನರು ಶುದ್ಧ ಗಾಳಿ ಸೇವಿಸುವ ‘ಭಾಗ್ಯ’ ಪಡೆದಿದ್ದರು. ಆದರೆ, ನವೆಂಬರ್ ಬಳಿಕ ನೆರೆಯ ರಾಜ್ಯಗಳಾದ ಪಂಜಾಬ್ ಹಾಗೂ ಹರಿಯಾಣದಲ್ಲಿ ಬೃಹತ್ ಕೃಷಿ ತ್ಯಾಜ್ಯಗಳಿಗೆ ಬೆಂಕಿ ಹಚ್ಚಿದ ಕಾರಣ ಮತ್ತೆ ವಾಯು ಮಾಲಿನ್ಯದ ಸಮಸ್ಯೆ ಬಂದೊದಗಿತ್ತು.
ಎಪಿಕ್ ವರದಿಯ ಪ್ರಕಾರ, ಬಾಂಗ್ಲಾದೇಶವು ತನ್ನ ಜನರ ಸಾಮಾನ್ಯ ಜೀವಿತಾವಧಿಯನ್ನು 5.4 ವರ್ಷಗಳಷ್ಟು ಹೆಚ್ಚಿಸುವ ಅವಕಾಶವನ್ನು ಹೊಂದಿದೆ. ಇದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯು ನಿಡಿರುವ ನಿರ್ದೇಶನಗಳನ್ನು ಪಾಲಿಸಬೇಕಾಗಿದೆ.
ಭಾರತದ ಸಾಮಾನ್ಯ ಜೀವಿತಾವಧಿಯ ಕುರಿತು ಅಧ್ಯಯನ ನಡೆಸಲು ಹಲವು ವಿಧಧ ವಾಯು ಮಾಲಿನ್ಯಕ್ಕೆ ತುತ್ತಾದ ವಿವಿಧ ಪ್ರದೇಶದ ಜನರ ಅಧ್ಯಯನವನ್ನು ಎಪಿಕ್ ನಡೆಸಿತ್ತು.