ಬೆಂಗಳೂರು: ಪೊಲೀಸ್ ಇಲಾಖೆಯ (Police Department) ಕೆಲ ಅಧಿಕಾರಿ ಮತ್ತು ಸಿಬ್ಬಂದಿ ತಮ್ಮ ನೈಜ ಗುರುತನ್ನು ಮರೆಮಾಚಿ, ಸ್ವಾತಂತ್ರ್ಯ ಹೋರಾಟಗಾರರ ಹೆಸರಿನಲ್ಲಿ ಹಾಗೂ ಇತರೆ ನಕಲಿ ಹೆಸರುಗಳಲ್ಲಿ (Fake Name) ಸಾಮಾಜಿಕ ಜಾಲತಾಣಗಳಲ್ಲಿ ಅನಾಮಧೇಯ ಖಾತೆಗಳನ್ನು ತೆರೆದು ದುರುದ್ದೇಶಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಗಂಭೀರ ಆಕ್ಷೇಪ ವ್ಯಕ್ತವಾಗಿದೆ. ಇಂತಹ ಸಿಬ್ಬಂದಿಗಳ ಮೇಲೆ ತೀವ್ರ ನಿಗಾವಹಿಸಿ, ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರಿಗೆ (DG&IGP) ಪತ್ರ ಬರೆದು ಆಗ್ರಹಿಸಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಅತ್ಯಂತ ಜವಾಬ್ದಾರಿಯುತ ಹಾಗೂ ಶಿಸ್ತಿನ ಇಲಾಖೆಯಾಗಿರುವ ಪೊಲೀಸ್ ಇಲಾಖೆಯ ಸಿಬ್ಬಂದಿ ಕರ್ತವ್ಯದ ವೇಳೆಯಷ್ಟೇ ಅಲ್ಲದೆ, ಸಾರ್ವಜನಿಕವಾಗಿ ಹಾಗೂ ಡಿಜಿಟಲ್ ವೇದಿಕೆಗಳಲ್ಲಿಯೂ ಇಲಾಖೆಯ ಘನತೆ, ಗೌಪ್ಯತೆ ಮತ್ತು ನಿಷ್ಪಕ್ಷಪಾತತೆಯನ್ನು ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲ ಸಿಬ್ಬಂದಿ ಅಧಿಕೃತ ಖಾತೆಗಳ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದರೆ ಇಲಾಖಾ ಕ್ರಮ ಎದುರಿಸಬೇಕಾಗುತ್ತದೆ ಎಂಬ ಭೀತಿಯಿಂದ, ಕೃತಕ ಗುರುತುಗಳ ಮೂಲಕ ಅನಾಮಧೇಯ ಖಾತೆಗಳನ್ನು ಸೃಷ್ಟಿಸಿಕೊಂಡು ಇಲಾಖಾ ನಡತೆ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ ಎಂದು ಪತ್ರದಲ್ಲಿ ವಿಷಾದ ವ್ಯಕ್ತಪಡಿಸಲಾಗಿದೆ.

ಸರ್ಕಾರ ಮತ್ತು ಹಿರಿಯ ಅಧಿಕಾರಿಗಳ ವಿರುದ್ಧ ಅವಹೇಳನಕಾರಿ ಪೋಸ್ಟ್
ಇಂತಹ ನಕಲಿ ಖಾತೆಗಳ ಮೂಲಕ ಸರ್ಕಾರದ ಆಡಳಿತಾತ್ಮಕ ನಿರ್ಧಾರಗಳು, ಇಲಾಖಾ ಸುತ್ತೋಲೆಗಳು ಹಾಗೂ ಹಿರಿಯ ಅಧಿಕಾರಿಗಳ ಅಧಿಕೃತ ನಿರ್ದೇಶನಗಳನ್ನು ಬಹಿರಂಗವಾಗಿ ಟೀಕಿಸಲಾಗುತ್ತಿದೆ. ಅಷ್ಟೇ ಅಲ್ಲದೆ ಮುಖ್ಯಮಂತ್ರಿಗಳು, ಸಚಿವರು ಮತ್ತು ಜನಪ್ರತಿನಿಧಿಗಳ ಅಧಿಕೃತ ಪೋಸ್ಟ್ಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಆಕ್ಷೇಪಾರ್ಹ ಕಾಮೆಂಟ್ಗಳನ್ನು ಹಾಕುವುದು ಹಾಗೂ ಇಲಾಖೆಯ ಆಂತರಿಕ ವಿಷಯಗಳನ್ನು ಸಾರ್ವಜನಿಕವಾಗಿ ಚರ್ಚಿಸಿ ತೇಜೋವಧೆ ಮಾಡುವಂತಹ ಕಾನೂನುಬಾಹಿರ ಕೃತ್ಯಗಳು ಎಗ್ಗಿಲ್ಲದೆ ನಡೆಯುತ್ತಿವೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಎಸ್.ಎಂ.ಎಂ. ಸೆಲ್ ಮೂಲಕ ನಿಗಾ ಹಾಗೂ ಕಾನೂನು ಕ್ರಮಕ್ಕೆ ಸೂಚನೆ
ಈ ಎಲ್ಲಾ ಅಕ್ರಮ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲು ರಾಜ್ಯದ ಎಲ್ಲಾ ಘಟಕ ಮತ್ತು ವಿಭಾಗಗಳ ಸಿಬ್ಬಂದಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕೆಂದು ಪತ್ರದಲ್ಲಿ ಒತ್ತಾಯಿಸಲಾಗಿದೆ. ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ (SMM Cell) ಮೂಲಕ ಇಂತಹ ನಕಲಿ ಖಾತೆಗಳ ಮೇಲೆ ನಿರಂತರ ನಿಗಾವಹಿಸಿ, ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು. ನಿಯಮ ಉಲ್ಲಂಘಿಸಿ ಸರ್ಕಾರದ ವಿರುದ್ಧ ಹಾಗೂ ಗಣ್ಯರ ವಿರುದ್ಧ ನಿಂದನೀಯ ಬರಹಗಳನ್ನು ಹಂಚಿಕೊಳ್ಳುವ ಸಿಬ್ಬಂದಿಯ ವಿರುದ್ಧ ಮಾಹಿತಿ ತಂತ್ರಜ್ಞಾನ (IT) ಕಾಯ್ದೆ ಹಾಗೂ ಸೇವಾ ನಡತೆ ನಿಯಮಾವಳಿಗಳ ಅಡಿಯಲ್ಲಿ ನಿರ್ದಾಕ್ಷಿಣ್ಯವಾಗಿ ಕಠಿಣ ಶಿಸ್ತು ಕ್ರಮ ಕೈಗೊಳ್ಳುವಂತೆ ಪ್ರಾಧಿಕಾರದ ಸದಸ್ಯರು ಡಿಜಿಪಿಯವರನ್ನು ಕೋರಿದ್ದಾರೆ.
75 ವರ್ಷದ ವೃದ್ಧನ ಜೊತೆಗೆ 30ರ ಯುವತಿ ನಿಶ್ಚಿತಾರ್ಥ, ನವರಾತ್ರಿ ಮುಗಿದ ಬೆನ್ನಲ್ಲೇ ಕಂಕಣ ಭಾಗ್ಯ!






