ಒಂದಲ್ಲ ಒಂದು ರೀತಿಯಲ್ಲಿ ಬಿಜೆಪಿ ಪಕ್ಷಕ್ಕೆ ಹಾಗೂ ಮುಖಂಡರಿಗೆ ಮುಜುಗರ ಉಂಟು ಮಾಡುವ ರೀತಿಯಲ್ಲಿ ಹೇಳಿಕೆ ನೀಡುವ ಮೂಲಕ ಸದಾ ಸುದ್ದಿಯಲ್ಲಿರುವ ವಿಜಯಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಸಚಿವ ಶಿವರಾಮ್ ಹೆಬ್ಬಾರ ಅಸಮಾಧಾನ ಹೊರಹಾಕಿದ್ದು, ಯತ್ನಾಳ್ ಅವರ ಹೇಳಿಕೆ ಅವರ ಯೋಗ್ಯತೆ ಹಾಗೂ ಹಿರಿತನಕ್ಕೆ ಗೌರವ ತರುವಂತಹ ಹೇಳಿಕೆ ಅಲ್ಲ ಎಂದು ಹೇಳಿದ್ದಾರೆ.
ಶಿರಸಿಯ ಪರಿವೀಕ್ಷಣಾ ಮಂದಿರದಲ್ಲಿ ಪತ್ರಕರ್ತರೊಂದಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯ ರಾಷ್ಟ್ರೀಯ ನಾಯಕತ್ವದ ಬಗ್ಗೆ ಯಾರೆ ಆಗಿರಲಿ ಅಷ್ಟು ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.
ಯತ್ನಾಳ್, ವಿಜಯಪುರದಲ್ಲೊಂದು, ರಾಮದುರ್ಗದಲ್ಲೊಂದು, ಗೋಕಾಕ್ನಲ್ಲೊಂದು ಹೇಳಿಕೆ ನೀಡುತ್ತಾರೆ. ಅವರ ಈ ನಡೆ ಪಕ್ಷಕ್ಕೆ ಹಾಗೂ ಕಾರ್ಯಕರ್ತರಿಗೆ ಮುಜುಗರ ತರುತ್ತಿದೆ ಎಂದು ಹೆಬ್ಬಾರ ತೀವ್ರ ಅಸಮಾಧಾನ ಹೊರಹಾಕಿದರು.
ಪಿಎಸ್ಐ ಅಕ್ರಮ ನೇಮಕಾತಿ ಕುರಿತು ಕಾಂಗ್ರೆಸ್ ದಿನಕ್ಕೊಂದು ಸುಳ್ಳು ಹೇಳುತ್ತಿದ್ದು, ಕಾಂಗ್ರೆಸ್ ನಾಯಕರ ಹಸಿ ಸುಳ್ಳು ಬಹಳ ದಿನ ನಡೆಯುವುದಿಲ್ಲ ಎಂದು ಹೆಬ್ಬಾರ ಕಿಡಿಕಾರಿದರು.