ಮುಖ್ಯಮಂತ್ರಿಗಳಿಂದ ಮಹತ್ವಾಕಾಂಕ್ಷಿ ಸ್ತ್ರೀ ಸಾಮರ್ಥ್ಯ ಯೋಜನೆಗೆ ಚಾಲನೆ
ಬೆಂಗಳೂರು: ಸ್ತ್ರೀಶಕ್ತಿ ಸಂಘಗಳ ಉತ್ಪನ್ನಗಳಿಗೆ ಸ್ರ್ತಿ ಸಾಮಾರ್ಥ್ಯ ಬ್ರ್ಯಾಂಡ್ ಆಗಿ ಅಭಿವೃದ್ಧಿಗೊಳ್ಳಬೇಕು ಹಾಗೂ ಸ್ತ್ರೀ ಸಾಮರ್ಥ್ಯ ಯೋಜನೆಯಿಂದ ಗ್ರಾಮಿಣ ಪ್ರದೇಶದಲ್ಲಿ ಆರ್ಥಿಕ ಕ್ರಾಂತಿ ಆರಂಭವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ “ಸ್ತ್ರೀ ಸಾಮರ್ಥ್ಯ – ನಮೋ ಸ್ತ್ರೀ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
10 ಸಾವಿರ ಸ್ತ್ರೀ ಶಕ್ತಿ ಸಂಘಗಳಿಗೆ 100 ಕೋಟಿ ರೂ.ಗಳ ಆರ್ಥಿಕ ಸಹಾಯವನ್ನು ಡಿಬಿಟಿ ಮೂಲಕ ವಿತರಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಪ್ರತಿ ವಾರಕ್ಕೆ 10 ಸಾವಿರ ಸಂಘಕ್ಕೆ ಡಿಬಿಟಿ ಮೂಲಕ ಅನುದಾನ ನೀಡಿ, ಬ್ಯಾಂಕ್ ಗಳಿಗೆ ಜೋಡಿಸಿ, ಅಲ್ಲಿ ಸಾಲದ ಮಂಜೂರಾತಿ ಪಡೆದು, ಉತ್ಪನ್ನಗಳ ತಯಾರಿಕೆಗೆ ತರಬೇತಿ, ಯಂತ್ರಗಳ ಖರೀದಿ, ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ಈ ರೀತಿ ಸ್ವಾವಲಂಬಿ, ಸ್ವಾಭಿಮಾನದ ಬದುಕು ನಡೆಸಲು, ಆದಾಯ ಹೆಚ್ಚಿಳ ಹಾಗೂ ಜೀವನ ಗುಣಮಟ್ಟ ಸುಧಾರಿಸುವ ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದರು.
ಸರ್ಕಾರದಿಂದ 50 ಸಾವಿರ ಸ್ತೀ ಶಕ್ತಿ ಸಂಘಗಳಿಗೆ 500 ಕೋಟಿ ರೂ.:
ಇಡೀ ಕರ್ನಾಟಕ ರಾಜ್ಯಕ್ಕೆ ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ವಿಸ್ತರಿಸುವ ಮೂಲಕ 50 ಸಾವಿರ ಸ್ತೀ ಶಕ್ತಿ ಸಂಘಗಳಿಗೆ 500 ಕೋಟಿ ರೂ.ಗಳನ್ನು ವಿತರಿಸಲಾಗುವುದು. ಬ್ಯಾಂಕ್ ಗಳ ಸಹಾಯದಿಂದ ಸುಮಾರು 2 ರಿಂದ 3 ಸಾವಿರ ಕೋಟಿ ರೂ.ಗಳಷ್ಟು ಬಂಡವಾಳಕ್ಕೆ ನೆರವು ನೀಡಿ, 30 ಸಾವಿರ ಕೋಟಿಗಳ ವಹಿವಾಟಿಗೆ ಉತ್ತೇಜನ ನೀಡಲು ಸರ್ಕಾರ ಮುಂದಾಗಿದೆ. ರಾಜ್ಯದ ಜಿಡಿಪಿ ಗೆ ಸ್ತ್ರೀ ಶಕ್ತಿ ಸಂಘಗಳು ದೊಡ್ಡ ಕೊಡುಗೆಯನ್ನು ನೀಡುವಂತಾಗಬೇಕು ಎಂಬ ಚಿಂತನೆ ಸರ್ಕಾರದ್ದಾಗಿದೆ. ಮುಂದಿನ ತಿಂಗಳಿನಿಂದ ಉತ್ಪಾದನೆಯನ್ನು ಆರಂಭಿಸಬೇಕು. ಈ ಯೋಜನೆಯಿಂದ ಸುಮಾರು 5 ಲಕ್ಷ ಮಹಿಳೆಯರಿಗೆ ಸ್ವಯಂ ಉದ್ಯೋಗದ ಅವಕಾಶ ನೀಡಲಾಗಿದ್ದು, ಈ ಯೋಜನೆಯ ಸದುಪಯೋಗ ಎಲ್ಲರೂ ಪಡೆಯಬೇಕು ಎಂದರು.
ಸ್ತ್ರೀ ಶಕ್ತಿ ಸಂಘಕ್ಕೆ ಲಾಭ :
ರಾಜ್ಯ ಸರ್ಕಾರ ಶ್ರೀಮಂತ ಆಗುವ ಬದಲು ಜನರು ಶ್ರೀಮಂತ ಆಗಬೇಕು. ಸರ್ಕಾರದ ಆರ್ಥಿಕ ಶಕ್ತಿಹಾಗೂ ಜನರ ದುಡಿಮೆಯ ಬಂಡವಾಳ ಸೇರಿದರೆ ದೊಡ್ಡ ಮಟ್ಟದ ಬೆಳವಣಿಗೆ ಆಗುತ್ತದೆ.
ಎಲ್ಲ ಜಿಲ್ಲೆಗಳಲ್ಲಿ ಅತ್ಯಂತ ಕಡಿಮೆ ದರದಲ್ಲಿ ಸ್ಯಾನಿಟರಿ ನ್ಯಾಪ್ ಕಿನ್ ತಯಾರಿಕೆಯನ್ನು ಉತ್ಪಾದನೆ ಮಾಡುತ್ತಿದ್ದಾರೆ. ಇದು ನಮ್ಮ ಬಡ ಹೆಣ್ಣುಮಕ್ಕಳಿಗೆ ಆರೋಗ್ಯದ ದೃಷ್ಟಿಯಿಂದ ಅನುಕೂಲವಾಗಲಿದೆ. ಈ ರೀತಿ ಸ್ತ್ರೀ ಶಕ್ತಿ ಸಂಘಕ್ಕೂ ಲಾಭ ತರುವಂತಹ ಹಾಗೂ ಜನರ ಬಳಕೆಗೂ ಕಡಿಮೆ ದರದಲ್ಲಿ ಹಲವು ಉತ್ಪನ್ನಗಳನ್ನು ಇಂದು ಉತ್ಪಾದಿಸಲಾಗುತ್ತಿದೆ.ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರ ಆರ್ಥಿಕ ಹಾಗೂ ಸಾಮಾಜಿಕ ಕ್ರಾಂತಿ ಆಗುತ್ತಿದೆ.. ಅವರು ಸಮಾಜಕ್ಕೆ ಕೊಡುಗೆ ನಿಡುತ್ತಾರೆ. ಶ್ರಮಿಕರಾದ ಮಹಿಳೆಯರು ಸರ್ಕಾರದ ಯೋಜನೆಗಳ ಫಲಾನುಭವಿಗಳಲ್ಲ ಪಾಲುದಾರರು. ಮುಂದಿನ 2 ರಿಂದ 3 ವರ್ಷಗಳಲ್ಲಿ ಈ ಯೋಜನೆ ದೊಡ್ಡ ಮಟ್ಟದಲ್ಲಿ ಲಾಭವನ್ನು ತರಲಿದೆ ಎಂದರು.
50 ಸಾವಿರ ಸಂಘಗಳ ನೋಂದಣಿ:
ಸ್ತ್ರೀ ಸಾಮರ್ಥ್ಯ ಯೋಜನೆಯಡಿ ಈಗಾಗಲೇ 50 ಸಾವಿರ ಸಂಘಗಳು ನೊಂದಣಿಯಾಗಿವೆ . ಮಹಿಳೆಯರಿಗೆ ದುಡಿಯುವ ಶಕ್ತಿ ಇದ್ದು, ಅದೇ ಅವರ ಬಂಡವಾಳವಾಗಿದೆ. ಗ್ಯಾರಂಟಿ ಕಾರ್ಡ್ ಕೊಡಲಾಗುವುದು ಎಂದು ಘೋಷಿಸುತ್ತಾರೆ. ಯಾವುದೇ ಬಂಡವಾಳದ ಖಾತ್ರಿಯಿಲ್ಲದೇ ಗ್ಯಾರೆಂಟಿ ಕಾರ್ಡ್ ಕೊಟ್ಡು ಜನರನ್ನು ಯಾಮಾರಿಸುತ್ತಿದ್ದಾರೆ. ಜನರಿಗೆ ಅವರ ಭಿಕ್ಷೆ ಬೇಡ, ಅವಕಾಶ ಬೇಕು. ನಮ್ಮ ಸರ್ಕಾರ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಯೋಜನೆಗಳನ್ನು ಘೋಷಿಸಿದ್ದು, ಅದರಂತೆ ಜಾರಿಗೆ ತರಲಾಗಿದೆ. ತಾಯಂದರಿಗಾಗಿ ಪೌಷ್ಟಿಕ ಆಹಾರ ನೀಡಲು ಯೋಜನೆ ರೂಪಿಸಲಾಗಿದೆ. ಹೆಣ್ಣು ಮಕ್ಕಳು, ದುಡಿಯುವ ಮಹಿಳೆಯರಿಗೆ ಉಚಿತ ಬಸ್ ಪಾಸ್ ,ಪಿಯುಸಿಯಿಂದ ಡಿಗ್ರಿವರೆಗೂ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ ಎಂದರು.
ಐ.ಟಿ. ಬಿಟಿ, ಕೌಶಲ್ಯಾಭಿವೃದ್ದಿ ಸಚಿವ ಡಾ: ಸಿ.ಎನ್.ಅಶ್ವತ್ಥ್ ನಾರಾಯಣ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ: ಎಸ್.ಸೆಲ್ವಕುಮಾರ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.