ಬೆಂಗಳೂರು: ಬೆಂಗಳೂರಿನ ಕೆ.ಆರ್.ಸರ್ಕಲ್ ಅಂಡರ್ ಪಾಸ್‌ನಲ್ಲಿ ಕಾರು ಮುಳುಗಿ ಯುವತಿ ಸಾವು ದುರಂತಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ ತಂಡ ಇಂದು ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಲೋಕಾಯುಕ್ತ ಐಜಿಪಿ ಸುಬ್ರಹ್ಮಣ್ಯೇಶ್ವರ್ ರಾವ್, ಬಿಬಿಎಂಪಿ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದ್ದಾರೆ. ಘಟನೆಗೆ ಕಾರಣವೇನು? ಏನೆಲ್ಲಾ ಸಮಸ್ಯೆ ಇತ್ತು ಎಂಬ ಬಗ್ಗೆ ಮಾಹಿತಿ ಪಡೆದಿದ್ದಾರೆ. ಘಟನಾ ಸ್ಥಳದಲ್ಲಿ ಟ್ಯಾಂಕರ್ ತರಿಸಿ ನೀರು ಹರಿಸುವ ಮೂಲಕ ನೀರು ರಾಜಕಾಲುವೆಗೆ ಸರಾಗವಾಗಿ ಹರಿದು ಹೋಗುತ್ತದೆಯೇ ಎಂದು ಪರಿಶೀಲನೆ ನಡೆಸಲಾಗಿದೆ.

ಪರಿಶೀಲನೆ ಬಳಿಕ ಮಾತನಾಡಿದ ಐಜಿಪಿ ಸುಬ್ರಹ್ಮಣ್ಯೇಶ್ವರ್ ರಾವ್, “ಮಾನ್ಯ ಲೋಕಾಯುಕ್ತರ ನಿರ್ದೇಶನದನ್ವಯ ಲೋಕಾಯುಕ್ತ ಪೊಲೀಸ್ ಘಟಕದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ತನಿಖೆಯ ಭಾಗವಾಗಿ ಲೋಕಾಯುಕ್ತ ಎಂಜಿನಿಯರಿಂಗ್ ಡಿವಿಷನ್ ಅಧಿಕಾರಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳು ಇಂದು ಸ್ಥಳಕ್ಕೆ ಭೇಟಿ ನೀಡಿದ್ದೇವೆ. ಮೇಲ್ನೋಟಕ್ಕೆ ಇಲ್ಲಿರುವ ಒಳಚರಂಡಿ ವ್ಯವಸ್ಥೆಯಲ್ಲಿ ನೀರಿನ ಹರಿವು ಅಧಿಕವಾದ ಕಾರಣದಿಂದ ಅವಘಡ ಸಂಭವಿಸಿರುವುದು ಕಂಡು ಬಂದಿದೆ.

ಈ ಸಂದರ್ಭದಲ್ಲಿ ಇಲ್ಲಿರುವ ಸಮಸ್ಯೆಗಳನ್ನ ಪತ್ತೆಹಚ್ಚಿ, ನಗರದಲ್ಲಿರುವ ಬೇರೆ ಅಂಡರ್ ಪಾಸ್ ನಲ್ಲಿರುವ ಸಮಸ್ಯೆಗಳಿಗೂ ಸಹ ಜಂಟಿಯಾಗಿ ಪರಿಹಾರ ಕಂಡುಕೊಳ್ಳಬೇಕಿದೆ. ಜತೆಗೆ ಅವಘಡಕ್ಕೆ ಯಾರದ್ದಾದರೂ ನಿರ್ಲಕ್ಷ್ಯ ಕಾರಣವಾಗಿದ್ದರೆ ಅವರ ವಿರುದ್ಧ ಲೋಕಾಯುಕ್ತರಿಗೆ ವರದಿ ಸಲ್ಲಿಸುತ್ತೇವೆ” ಎಂದರು.ಮೇ 21ರಲ್ಲಿ ನಗರದಲ್ಲಿ ಸುರಿದ ಭಾರಿ ಮಳೆಗೆ ಕೆ.ಆರ್.ಸರ್ಕಲ್ ಅಂಡರ್ ಪಾಸ್‌ನಲ್ಲಿ ಕಾರು ಮುಳುಗಿದ ಪರಿಣಾಮ ಇನ್ಫೋಸಿಸ್ ಉದ್ಯೋಗಿ ಭಾನುರೇಖಾ ಸಾವನ್ನಪ್ಪಿದ್ದರು. ಘಟನೆಯನ್ನ ಗಂಭೀರವಾಗಿ ಪರಿಗಣಿಸಿ ಪ್ರಕರಣ ದಾಖಲಿಸಿಕೊಂಡು ಪ್ರತಿಕ್ರಿಯೆ ನೀಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ನೋಟಿಸ್ ಜಾರಿ ಮಾಡಿದ್ದರು.