ದೇಶದಲ್ಲಿ ಪ್ರತಿದಿನ ಬೆಳಗಾದರೆ ಸಾಕು ಬೆಲೆ ಹೆಚ್ಚಳ, ಬೆಲೆ ಹೆಚ್ಚಳ ಅನ್ನೋದನ್ನು ಕಾಣುತ್ತೇವೆ. ಅಡಿಗೆ ಎಣ್ಣೆಯಿಂದ ಹಿಡಿದು ಅಗತ್ಯ ವಸ್ತುಗಳ ಬೆಲೆ ಗಗನಕ್ಕೆರುತ್ತಿವೆ. ಇದೀಗ ಬೆಲೆ ಏರಿಕೆ ಸಾಲಿಗೆ ನಿಂಬೆ ಹಣ್ಣು ಸೇರ್ಪಡೆಯಾಗಿದೆ. ಈ ಹಿಂದೆ 50 ಪೈಸೆಗೆ ಒಂದು ನಿಂಬೆ ಮಾರಾಟವಾಗುತ್ತಿತ್ತು. ಆದರೆ ಇದೀಗ ಒಂದು ನಿಂಬೆ ಹಣ್ಣಿನ ಬೆಲೆ 8 ರಿಂದ 10 ರೂಪಾಯಿ ತಲುಪಿದ್ದು, ಬೇಸಿಗೆ ಕಾಲದಲ್ಲಿ ಜನ ಮತ್ತಷ್ಟು ಬೆವರುವಂತಾಗಿದೆ. ಜನರಿಗೆ ಇದು ಹೊರೆಯಾದರೆ ರೈತಾಪಿ ವರ್ಗ ಸಂತಸ ವ್ಯಕ್ತಪಡಿಸಿದೆ.
ರಾಜ್ಯದಲ್ಲಿ ಅತೀ ಹೆಚ್ಚು ನಿಂಬೆ ಬೆಳೆಯುವ ಪ್ರದೇಶವಾದ ವಿಜಯಪುರ ಜಿಲ್ಲೆ ನಿಂಬೆ ಬೆಳೆಗಾರರಿಗೆ ಅದೃಷ್ಟ ಖುಲಾಯಿಸಿದೆ. ಕಳೆದ 15 ದಿನಗಳಿಂದ ಉತ್ತಮ ದರ ಕಾಣುತ್ತಿದೆ. ಕಳೆದ ವಾರ ಒಂದು ಮೂಟೆ ಉತ್ತಮ ಗುಣಮಟ್ಟದ ನಿಂಬೆಗೆ 10 ಸಾವಿರ ರೂಪಾಯಿಗೆ ಮಾರಾಟವಾಗಿದೆ. ವಿಜಯಪುರ ನಗರದ ಎಪಿಎಂಸಿ ಮಾರುಕಟ್ಟೆಗಳಲ್ಲಿ, ರೈತರ ಜಮೀನಿಗೆ ತೆರಳಿ ಅಲ್ಲಿಯೇ ನಿಂಬೆ ಖರೀಧಿ ಮಾಡುವವರು ನಿಂಬೆಗೆ ಹೆಚ್ಚಿನ ಬೆಲೆ ನೀಡುತ್ತಿದ್ದಾರೆ. ಇಂದು ಎಪಿಎಂಸಿಯ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯಲ್ಲಿ ನಡೆದ ಬಹಿರಂಗ ಹರಾಜಿನಲ್ಲಿ 1000 ನಿಂಬೆಯಿರೋ ಒಂದು ಮೂಟೆಗೆ 8 ಸಾವಿರ ರೂಪಾಯಿಗೆ ಮಾರಾಟವಾಯಿತು. ಅಂದರೆ ಒಂದು ನಿಂಬೆ ಹಣ್ಣಿನ ಬೆಲೆ 8 ರೂಪಾಯಿಗೆ ಮಾರಾಟವಾಯಿತು. ಇದು ಗ್ರಾಹಕರ ಕೈ ಸೇರಬೇಕಾದರೆ 12 ರಿಂದ 14 ರೂಪಾಯಿ ಆಗುತ್ತೆ.
ವಿಜಯಪುರ ಜಿಲ್ಲೆ ಇಂಡಿ, ಚಡಚಣ, ಸಿಂದಗಿ, ದೇವರ ಹಿಪ್ಪರಗಿ, ಬಸವನಬಾಗೇವಾಡಿ ಸೇರಿದಂತೆ ಇತರೆ ಭಾಗಗಳಲ್ಲಿ ನಿಂಬೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ರಾಜ್ಯದಲ್ಲಿ ಒಟ್ಟು 40 ಸಾವಿರ ನಿಂಬೆ ಬೆಳೆಗಾರರು ಇದ್ದಾರೆ. ಅದರಲ್ಲಿ ವಿಜಯಪುರ ಜಿಲ್ಲೆಯಯವರೇ 25,000 ರೈತರಿದ್ಧಾರೆ. ರಾಜ್ಯದಲ್ಲಿ 21,000 ಹೆಕ್ಟೇರ್ ಪ್ರದೇಶದಲ್ಲಿ ನಿಂಬೆ ಬೆಳೆಯಲಾಗುತ್ತಿದ್ದರೆ, ಇದರಲ್ಲಿ ವಿಜಯಪುರ ಜಿಲ್ಲೆಯಲ್ಲೇ 16,000 ಹೆಕ್ಟೇರ್ ಪ್ರದೇಶದಲ್ಲಿ ನಿಂಬೆ ಬೆಳೆಯಿದೆ. ಸದ್ಯ ಇಡೀ ರಾಜ್ಯದಲ್ಲಿ ನಿಂಬೆ ಬೇಡಿಕೆಗಿಂತ ಪೂರೈಕೆ ಕಡಿಮೆಯಿರೋ ಕಾರಣ ಬೆಲೆಯಲ್ಲಿ ಏರಿಕೆಯಾಗಿದೆ. ಜೊತೆಗೆ ಈ ಹಿಂದೆ ಹವಾಮಾನ ವೈಪ್ಯರಿತ್ಯ, ಅಕಾಲಿಕ ಮಳೆ ಹಾಗೂ ರೋಗಬಾಧೆಗೂ ನಿಂಬೆ ಈಡಾಗಿದ್ರದಿಂದ ಈಗಾ ಇಳುವರಿ ಕಡಿಮೆಯಾಗಿದೆ. ಈ ಭಾಗದಲ್ಲಿ ಬೆಳೆಯುವ ನಿಂಬೆಗೆ ಗುಜರಾತ್, ಮಹಾರಾಷ್ಟ್ರ ಹಾಗೂ ಇತರೆ ರಾಜ್ಯಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಬೇಸಿಗೆ ಕಾಲ ಆರಂಭವಾಗಿದ್ದು ತಂಪು ಪಾನೀಯ ಹಾಗೂ ಆಹಾರದಲ್ಲಿ ಹೆಚ್ಚಾಗಿ ನಿಂಬೆಯನ್ನು ಬಳಕೆ ಮಾಡುತ್ತಿರೋದಕ್ಕೆ, ಬೇಡಿಕೆಯೂ ಹೆಚ್ಚಾಗಿದೆ. ಈ ಕಾರಣದಿಂದ ನಿಂಬೆಗೆ ಬೆಲೆ ಏರಿಕೆಯಾಗಿದೆ.

ಕಳೆದ ವರ್ಷ ನಿಂಬೆ ಬೆಳಗಾರರು ಅಕ್ಷರಸಹ ಕಣ್ಣಿರು ಹಾಕುವ ಪರಿಸ್ಥಿತಿ ಇತ್ತು. ಅಕಾಲಿಕ ಮಳೆ, ಕರೋನಾ ಲಾಕಡೌನ್ ದಿಂದಾಗ ರಸ್ತೆಯ ಮೇಲೆ ನಿಂಬೆ ಹಣ್ಣು ಚಲ್ಲಿದ್ದರು. ತೋಟದಿಂದ ಮಾರುಕಟ್ಟೆಗೆ ನಿಂಬೆ ತಂದರೆ ಅದರ ಬಾಡಿಗೆ ಹಣ ಸಹ ಬರೋದಿಲ್ಲ ಎಂದು ಎಷ್ಟೋ ರೈತರ ನಿಂಬೆಯನ್ನು ಕಿತ್ತಿ ಬಿಸಾಡಿದ್ದರು. ಆದರೆ ಈ ಸಲ ಪರಿಸ್ಥಿತಿ ಭಿನ್ನವಾಗಿದ್ದು, ಐದು ಚಿಲ ನಿಂಬೆಹಣ್ಣನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡಿ ಆ ಹಣದಿಂದ ಒಂದು ಗ್ರಾಂ ಬಂಗಾರ ತೆಗೆದುಕೊಂಡು ಮನೆಗೆ ಹೋಗುತ್ತಿದ್ದಾರೆ. ಬೆಳೆಗಾರರ ಪಾಲಿಗೆ ಬೆಲೆ ಹೆಚ್ಚಳ ವರವಾದರೆ ಗ್ರಾಹಕರ ಪಾಲಿಕೆ ಸಂಕಷ್ಟ ತಂದಿದೆ.