
BENGALURU: 09-06-2025
ಶನಿವಾರ, ವಿಧಾನಪರಿಷತ್ತಿಗೆ ನಾಮಕರಣ ಸದಸ್ಯರ ನೇಮಕದ ಬಗ್ಗೆ ಪೋಸ್ಟ್ ಹಾಕಿದ್ದೆ. ಇಂದು ಬೆಳಗಾಗುವ ಹೊತ್ತಿಗೆ, ಪರಿಸ್ಥಿತಿ ಬದಲಾಯಿಸಿರುವಂತಿದೆ. ರಾಜ್ಯಪಾಲರ ಅಂಕಿತಕ್ಕಾಗಿ ಮುಖ್ಯಮಂತ್ರಿಗಳ ಕಚೇರಿಯಿಂದ ಹೊರಟ ನಾಲ್ವರು ಸದಸ್ಯರ “ಶಿಫಾರಸು ಪತ್ರ”ಕ್ಕೆ ತಡೆ ಬಿದ್ದಿದೆ ಎಂಬ ಸುದ್ದಿ ಕೇಳಿದೆ.
ಅದು ಸರ್ಕಾರ ನಡೆಸುವವರ ತೀರ್ಮಾನ. ಆದರೆ, ಈ ತಡೆಗೆ ಕಾರಣ ಏನು ಎಂದು ಗಮನಿಸಿದಾಗ “ಪಕ್ಷದ ಕಾರ್ಯಕರ್ತರಿಗೆ ಮಣೆ ಹಾಕದೇ ಬೇರೆಯವರಿಗೆ ಅವಕಾಶ ನೀಡಲಾಗುತ್ತಿದೆ” ಎಂಬ ದೂರು ತಳಮಟ್ಟದಿಂದೆಲ್ಲೋ ಎದ್ದು ನಿಂತಿರುವುದು ಕಾಣಿಸಿತು. ಯಾರಿಗೂ ಮೇಲು ನೋಟಕ್ಕೆ ಅರೆರೆ ಹೌದಲ್ಲ… ಅನ್ನಿಸಲೇಬೇಕು. ತಮಾಷೆ ಎಂದರೆ, ಇದು “ಆಟದ ನಿಯಮಗಳ ಅರಿವು ಇಲ್ಲದವರ ಪರದಾಟ” ಅಷ್ಟೇ.

ಹಾಗಿದ್ದರೆ ವಾಸ್ತವ ಏನು?
ವಿಧಾನ ಪರಿಷತ್ತು ಹೇಗಿರಬೇಕೆಂಬುದನ್ನು ಸಂವಿಧಾನದ 171ನೇ ವಿಧಿ ಹೀಗೆ ವಿವರಿಸುತ್ತದೆ:
೧. ರಾಜ್ಯ ವಿಧಾನ ಸಭೆಯಲ್ಲಿರುವ ಒಟ್ಟು ಸದಸ್ಯರ ಸಂಖ್ಯೆಯ ನಾಲ್ಕನೇ ಒಂದು ಭಾಗವನ್ನು ಈ ಸದನ ಮೀರಬಾರದು.
೨. ಸದನದ ಸದಸ್ಯರಲ್ಲಿ ಮೂರನೇ ಒಂದು ಭಾಗ ಸ್ಥಳೀಯಾಡಳಿತ ಸಂಸ್ಥೆಗಳಿಂದ (ನಗರ ಪಾಲಿಕೆ,ನಗರ ಸಭೆ, ಗ್ರಾಮ ಪಂಚಾಯತ್ ಇತ್ಯಾದಿ) ನೇಮಕ ಆಗಬೇಕು – (ಇದು ಸಾಮಾನ್ಯವಾಗಿ ರಾಜಕೀಯ ಕಾರ್ಯಕರ್ತರ ಕೋಟಾ.)
೨. 12 ರಲ್ಲಿ ಒಂದು ಭಾಗ ಪದವೀಧರ-ಶಿಕ್ಷಣ ಕ್ಷೇತ್ರಗಳಿಂದ ನೇಮಕ ಆಗಬೇಕು. (ಇದನ್ನು ಪಕ್ಷಗಳು ತಮ್ಮ ಕಾರ್ಯಕರ್ತರಲ್ಲಿ ಅಕಾಡೆಮಿಕ್ ಸಾಮರ್ಥ್ಯ ಇರುವವರಿಂದ ಆರಿಸಿಕೊಳ್ಳುತ್ತವೆ)
೩. ಮೂರನೇ ಒಂದು ಭಾಗವನ್ನು ವಿಧಾನ ಸಭೆಯ ಸದಸ್ಯರು ಆಯಾಪಕ್ಷಗಳ ಸೀಟು ಸಾಮರ್ಥ್ಯಕ್ಕೆಅನುಗುಣವಾಗಿ ಆಯ್ಕೆ ಮಾಡುತ್ತಾರೆ. (ಇದು ಕೂಡ ರಾಜಕೀಯ ಕಾರ್ಯಕರ್ತರ ಕೋಟಾ.)
೪. ರಾಜ್ಯಪಾಲರಿಗೆ ರಾಜ್ಯದಲ್ಲಿ ವಿಶೇಷ ಜ್ಞಾನ ಇರುವ, ಪ್ರಾಯೋಗಿಕ ಅನುಭವ ಇರುವ “ಸಾಹಿತ್ಯ, ವಿಜ್ಞಾನ, ಕಲೆ, ಸಹಕಾರ, ಸಮಾಜ ಸೇವಾ” ಕ್ಷೇತ್ರಗಳಿಂದ ಉಳಿದ ಸದಸ್ಯರನ್ನು ನಾಮಕರಣ ಮಾಡುವ ಅಧಿಕಾರ ಇರುತ್ತದೆ.
ಕರ್ನಾಟಕ ವಿಧಾನ ಪರಿಷತ್ತಿನಲ್ಲಿ 75 ಸದಸ್ಯ ಬಲ ಇದೆ. ಇವರಲ್ಲಿ 25 ಮಂದಿಯನ್ನು ವಿಧಾನ ಸಭಾ ಸದಸ್ಯರು ಆಯ್ಕೆ ಮಾಡುತ್ತಾರೆ, 25 ಮಂದಿಯನ್ನು ಸ್ಥಳೀಯಾಡಳಿತ ಸಂಸ್ಥೆಗಳು ಆಯ್ಕೆ ಮಾಡುತ್ತವೆ, ತಲಾ ಏಳು ಮಂದಿಯನ್ನು (ಒಟ್ಟು 14) ಪದವೀಧರ, ಶಿಕ್ಷಣ ಕ್ಷೇತ್ರಗಳಿಂದ ಆಯ್ಕೆ ಮಾಡಲಾಗುತ್ತದೆ. 11 ಮಂದಿ ನಾಮಕರಣ ಸದಸ್ಯರು.
ಈಗ ಕರ್ನಾಟಕದಲ್ಲಿ ಸನ್ನಿವೇಶ ಏನಿದೆ?
ರಾಜ್ಯ ವಿಧಾನಪರಿಷತ್ತಿನಲ್ಲೀಗ ಗವರ್ನರ್ ಕೋಟಾದ ನಾಲ್ವರು ಸದಸ್ಯರನ್ನು ಭರ್ತಿ ಮಾಡುವ ಪ್ರಕ್ರಿಯೆ ನಡೆದಿದೆ. ಇವರು ನಾಲ್ವರೂ ಮೇಲೆ ಹೇಳಿದ “ಸಾಹಿತ್ಯ, ವಿಜ್ಞಾನ, ಕಲೆ, ಸಹಕಾರ, ಸಮಾಜ ಸೇವಾ” ಕ್ಷೇತ್ರಗಳಿಂದ ಸದನಕ್ಕೆ ನಾಮಕರಣ ಆಗಬೇಕೇ ಹೊರತು, ಪಕ್ಷದ ಕಾರ್ಯಕರ್ತರೆಂಬ/ಸದಸ್ಯರೆಂಬ ಕಾರಣಕ್ಕೆ ಅಲ್ಲ. ಈ ನಿಟ್ಟಿನಲ್ಲಿ ಯಾರು ಎಷ್ಟೇ ತಲೆಹೊಡೆದುಕೊಂಡರೂ, ಅಂತಿಮ ತೀರ್ಮಾನ ಗವರ್ನರ್ ಅವರದು. ಶಿಫಾರಸು ಆಗಿರುವ ಯಾರೇ ವ್ಯಕ್ತಿ ಮೇಲೆ ಹೇಳಲಾಗಿರುವ ವಿಶೇಷ ಕೆಟಗರಿಯ ಭಾಗ ಎಂದು ಗವರ್ನರ್ ಅವರಿಗೆ ಕನ್ವಿನ್ಸ್ ಮಾಡುವ ಹೊಣೆ ಕರ್ನಾಟಕ ಸರ್ಕಾರದ್ದು.
ಹಾಗಂತ ಈ ನಿಯಮಗಲನ್ನೆಲ್ಲ ಯಾವತ್ತೂ ಪಾಲಿಸಲಾಗಿದೆಯೇ? ಎಂದು ಕೇಳಿದರೆ, “ದುಡ್ಡಿನ ಥೈಲಿ” ಮಾತನಾಡಿದಾಗಲೆಲ್ಲ, ಈ ನಿಯಮಗಳು ಏರುಪೇರಾದದ್ದಿದೆ. ಅದರ ಫಲವಾಗಿಯೇ ಮೇಲ್ಮನೆ “ನಿರುಪಯುಕ್ತ” ಎಂದೆಲ್ಲ ಚರ್ಚೆ ಹುಟ್ಟಿದ್ದಿದೆ. ಈ ಅಪರಾಧಕ್ಕೆ ಯಾವ ಪಕ್ಷವೂ ಹೊರತಲ್ಲ.
ಸರ್ಕಾರ ತನ್ನ ಲಭ್ಯ ಕೆಟಗರಿಗಳಲ್ಲಿ ತನ್ನ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡಲಿ. ಆದರೆ, “ಪರಿಣತ” ನಾಮಕರಣ ಸೀಟುಗಳಿಗೂ ಕಾರ್ಯಕರ್ತರೇ ಬೇಕು ಎಂದು ಹೊರಡುವುದಕ್ಕೆ ಅರ್ಥ ಇಲ್ಲ. ಹೀಗೆ, ಅನಗತ್ಯವಾಗಿ ಏಳುವ ತಕರಾರುಗಳು ಮೇಲ್ಮನೆಯ “ಹಿರಿಯರ ಸದನ” ಎಂಬ ಗೌರವವನ್ನು ಕೆಡಿಸುವುದಷ್ಟೇ ಮಾಡುತ್ತದೆ ಹೊರತು ಬೇರೆ ಏನೂ ಮಾಡದು. ನಮ್ಮ ಮಾಧ್ಯಮಗಳೂ ಕೂಡ ನಿಯಮ ಗೊತ್ತಿಲ್ಲದವರಂತೆ, ಪಕ್ಷದ ಕಾರ್ಯಕರ್ತರನ್ನು ಪರಿಗಣಿಸಬಹುದಿತ್ತು ಎಂಬಿತ್ಯಾದಿ ನೆರೇಟಿವ್‌ಗಳಲ್ಲಿ ತೊಡಗಿಕೊಂಡಿರುವುದು ಅವರ ಅಜ್ಞಾನವನ್ನಷ್ಟೇ ತೋರಿಸುತ್ತದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು.





