ನಿನ್ನೆ ಪ್ರಕಟಗೊಂಡ ಎಂಎಲ್ಸಿ ಚುನಾವಣಾ ಫಲಿತಾಂಶ ನೋಡಿದರೆ, ವಿಧಾನ ಪರಿಷತ್ ಅಥವಾ ಮೇಲ್ಮನೆ ಈಗ ಹಿರಿಯರ, ಬುದ್ಧಿಜೀವಿಗಳ ಮನೆಯೋ ಅಥವಾ ಸ್ಥಾಪಿತ ವೃತ್ತಿ ರಾಜಕಾರಣಿಗಳ ʼಮರಿಗಳನ್ನುʼ ಪೋಷಿಸುವ ಕೇಂದ್ರವೋ ಎಂಬ ಸಂಶಯ ಮೂಡುತ್ತಿದೆ. ಇದೇನು ಮೊದಲ ಬಾರಿಯಲ್ಲ. ಕಳೆದ ಎರಡು ದಶಕಗಳಿಂದ ಈ ಅನಪೇಕ್ಷಣೀಯ ಬೆಳವಣಿಗೆ ಕಂಡು ಬರುತ್ತಿದೆ.
ಮಠಗಳಲ್ಲಿ ಮುಖ್ಯವಾಗಿ ಲಿಂಗಾಯತ, ವೀರಶೈವ ಮತ್ತು ಬ್ರಾಹ್ಮಣ ಮಠಗಳಲ್ಲಿ ಹಿರಿಯ ಸ್ವಾಮಿಯ ಉತ್ತರಾಧಿಕಾರಿ ಎಂದು ಬಾಲಕನೊಬ್ಬನನ್ನು ಘೋಷಿಸಲಾಗುತ್ತದೆ. ಹೀಗೆ ಘೋಷಿತ ಎಳೆಯರನ್ನು ಮರಿಗಳು ಅಥವಾ ಮರಿಸ್ವಾಮಿಗಳು ಎಂದೇ ಕರೆಯಲಾಗುತ್ತದೆ. ಅದೇ ಮಾದರಿಯಲ್ಲಿ ನಮ್ಮ ಸ್ಥಾಪಿತ ರಾಜಕಾರಣಿಗಳು ತಮ್ಮ ಕುಟುಂಬ ಸದಸ್ಯರನ್ನು ರಾಜಕೀಯಕ್ಕೆ ತರಲು ಮರಿಗಳನ್ನು ಬಿಡುತ್ತಿದ್ದಾರೆ. ಅದಕ್ಕೆ ವಿಧಾನ ಪರಿಷತ್ ಸುಲಭವಾಗಿ ಸಿಗುವ ವೇದಿಕೆಯಾಗಿ ಬಿಟ್ಟಿದೆ.
ಮಸೂದೆಗಳ ಬಗ್ಗೆ ವಿಸ್ಥೃತ ಚರ್ಚೆ ನಡೆದು ಸಮಾಜಮುಖಿ ಶಾಸನಗಳು ರೂಪುಗೊಳ್ಳಲಿ, ರಾಜ್ಯದ ಜನರ ಜ್ವಲಂತ ಸಮಸ್ಯೆಗಳಿಗೆ ಕನ್ನಡಿ ಹಿಡಿದು ಪರಿಹಾರ ರೂಪಿಸಲಿ ಎಂದು ವಿಧಾನ ಪರಿಷ್ತ್ಗಳು ಚಾಲ್ತಿಗೆ ಬಂದವು. ಇಲ್ಲಿ ಇತರ ರಂಗಗಳ ಮೇಧಾವಿಗಳನ್ನು ನಾಮ ನಿರ್ದೇಶನ ಮಾಡುವ ಮೂಲಕ ಸಮಾಜದ ಬಹುಮುಖ ಆಯಾಮಗಳನ್ನು ಚರ್ಚಿಸುವ ಉದ್ದೇಶವಿದೆ. ಆದರೆ, ಅಂತಹ ಉದ್ದೇಶಗಳು ಇತ್ತೀಚೆಗೆ ಕಣ್ಮರೆಯಾಗಿವೆ. ಪರಿಷತ್ ಸ್ಥಾನಗಳು ಈಗ ʼಗಣ್ಯʼ ರಾಜಕಾರಣಿಗಳ ಕುಟುಂಬಸ್ಥರಿಗೆ ರಾಜಕೀಯ ನೆಲೆ ಒದಗಿಸುವ ಆಶ್ರಯ ತಾಣಗಳಾಗುತ್ತಿವೆ.
ಇದೇ ಬೊಮ್ಮಾಯಿ ಪರಿಷತ್ ಸದಸ್ಯರಾಗಿ ಅತ್ಯುತ್ತಮವಾಗಿ ಮಾತನಾಡಿದ್ದಾರೆ. ನಜೀರ್ಸಾಬ್, ಎಚ್.ಕೆ. ಪಾಟೀಲ್, ಬಿ.ಎಲ್ ಶಂಕರ್, ವಿ. ಆರ್ ಸುದರ್ಶನ್, ಮೋಟಮ್ಮ, ಬಸವರಾಜ ಹೊರಟ್ಟಿ, ಎಸ್ ಆರ್ ಪಾಟೀಲ್….ಹೀಗೆ ಹಲವಾರು ಜನರು ತಮ್ಮ ಚರ್ಚೆ, ಸಾಂವಿಧಾನಿಕ ತಿಳುವಳಿಕೆ ಮೂಲಕ ಪರಿಷತ್ ಘನತೆ ಹೆಚ್ಚಿಸಿದ್ದರು.
ಈಗ ಲಖನ್ ಜಾರಕಿಹೊಳಿ ಅಲ್ಲಿ ಏನು ಮಾತನಾಡಬಲ್ಲರು? ಕಳೆದ ಅವಧಿಯಲ್ಲಿ ಮುಗುಮ್ಮಾಗಿಯೇ ಎಂಎಲ್ಸಿ ಅಧಿಕಾರ ಅನುಭವಿಸಿದ ಸುನಿಲ್ ಗೌಡ ಪಾಟೀಲ್ ಜೊತೆ ಲಖನ್ ಜಾರಕಿಹೊಳಿ ಸ್ನೇಹ ಬೆಳೆಸಿ ಪಟ್ಟಾಂಗ ಹೊಡೆಯಬಹುದು ಅಷ್ಟೇ.
ಇಲ್ಲಿ ಎಲ್ಲರಿಗೂ ಪರಿಷತ್ ಸದಸ್ಯರಾಗುವ ಹಕ್ಕು ಇದ್ದೇ ಇದೆ. ಆದರೆ ಪರಿಷತ್ ಉದ್ದೇಶಗಳಿಗೆ ಧಕ್ಕೆ ಆಗದಂತೆ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕಲ್ಲವೇ?
ಬೆಳಗಾವಿಯಿಂದ ಬೀದರ್ವರೆಗೆ ಮರಿಗಳ ಪ್ರಾಬಲ್ಯ
ರಾಜ್ಯದ ಎಲ್ಲ ಭಾಗಗಳಲ್ಲಿ, ಎಲ್ಲ ಪಕ್ಷಗಳಲ್ಲಿ ಈ ವಿದ್ಯಮಾನ ಕಂಡುಬರುತ್ತಿದೆ. ಬೆಳಗಾವಿಯಲ್ಲಿ ಪಕ್ಷೇತರರಾಗಿ ಜಾರಕಿಹೊಳಿ ಕುಟುಂಬದ ಲಖನ್ ಜಾರಕಿಹೊಳಿ, ಅದೇ ಕ್ಷೇತ್ರದಿಂದ ಕಾಂಗ್ರೆಸ್ನ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ ಪರಿಷತ್ ಪ್ರವೇಶಿಸುತ್ತಿದ್ದಾರೆ. ಜಾರಕಿಹೊಳಿ ಕುಟುಂಬ ಎಂಎಲ್ಎ, ಎಂಎಲ್ಸಿಗಳನ್ನು ಉತ್ಪಾದಿಸುವ ಫ್ಯಾಕ್ಟರಿಯೇ ಆಗಿದೆ! ಕಾಂಗ್ರೆಸ್ನಿಂದ ಸತೀಶ್ ಜಾರಕಿಹೊಳಿ, ಬಿಜೆಪಿಯಿಂದ ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಎಂಎಲ್ಎಗಳು, ಜೊತೆಗೆ ಈಗ ಇನ್ನೊಬ್ಬ ಸಹೋದರ ಲಖನ್ ಎಂಎಲ್ಸಿ! ಅಣ್ತಮ್ಮಾ… ಅಣ್ತಮ್ಮಾ…
ಧಾರವಾಡದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್ ಮೂರನೇ ಸಲ ಎಂಎಲ್ಸಿ. ವಿಜಯಪುರ-ಬಾಹಲಕೋಟೆ ಕ್ಷೇತ್ರದಲ್ಲಿ ಮಾಜಿ ಸಚಿವ, ಹಾಲಿ ಶಾಸಕ ಎಂ.ಬಿ ಪಾಟೀಲ್ ಸಹೋದರ ಸುನಿಲ್ ಗೌಡ ಪಾಟೀಲ್ ಈಗ ಎರಡನೇ ಸಲ ಎಂಎಲ್ಸಿ.
ಹೈದರಾಬಾದ್ ಕರ್ನಾಟಕದಲ್ಲೂ ಈ ಹಾವಳಿ ಜೋರಾಗಿಯೇ ಇದೆ. ಬೀದರ್ ಜಿಲ್ಲೆಯ ಕಾಂಗ್ರೆಸ್ ಶಾಸಕ ರಾಜಶೇಖರ್ ಪಾಟೀಲ ಹುಮ್ನಾಬಾದ್ ಸಹೋದರ ಭೀಮರಾವ್ ನಿನ್ನೆ ಎಂಎಲ್ಸಿ ಆಗಿದ್ದಾರೆ. ರಾಜಶೇಖರ್ ಪಾಟೀಲ್ ಅವರ ಇನ್ನೊಬ್ಬ ಸಹೋದರ ಚಂದ್ರಶೇಖರ್ ಪಾಟೀಲ್ ಈಗಾಗಲೇ ಪದವೀಧರ ಕ್ಷೇತ್ರದಿಂದ ಎಂಎಲ್ಸಿ ಆಗಿದ್ದಾರೆ! ಇಲ್ಲೂ ಅಣ್ತಮ್ಮಾ!
ರಾಯಚೂರು-ಕೊಪ್ಪಳದಿಂದ ಕಾಂಗ್ರೆಸ್ನಿಂದ ಗೆದ್ದಿರುವ ಶರಣೇಗೌಡ ಪಾಟೀಲ್ ಕುಷ್ಟಗಿ ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪುರ ಅವರ ಅಣ್ಣನ ಮಗ.
ಶಿವಮೊಗ್ಗದಲ್ಲಿ ಮಾಜಿ ಎಂಎಲ್ಸಿ ಮತ್ತು ಮಾಜಿ ಸಚಿವ ಬಿಜೆಪಿಯ ಡಿ.ಎಚ್.ಶಂಕರಮೂರ್ತಿಯವರ ಮಗ ಅರುಣ್ ಡಿ.ಎಸ್ ಈಗ ಮೇಲ್ಮನೆ ಸದಸ್ಯ.ತುಮಕೂರಿನಲ್ಲಿ ಕಾಂಗ್ರೆಸ್ನ ಮಾಜಿ ಶಾಸಕ ಕೆ.ಎನ್ ರಾಜಣ್ಣರ ಪುತ್ರ ರಾಜೆಂದ್ರ ಪರಿಷತ್ಗೆ ಪ್ರವೇಶ ಪಡೆದಿದ್ದಾರೆ.
ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ ಶಿವಕುಮಾರ್ ಸೋದರ ಸಂಬಂಧಿ ಎಸ್. ರವಿ ಮತ್ತೆ ಎಂಎಲ್ಸಿ. ಡಿ.ಕೆ. ಶಿವಕುಮಾರ್ ಸಹೋದರ ಡಿ.ಕೆ ಸುರೇಶ್ ಸಂಸದ!
ಒಂದು ಮನೆ, ಮೂವರು ಜನಪ್ರತಿನಿಧಿಗಳು!
ಹಾಸನದಲ್ಲಿ ಜೆಡಿಎಸ್ನ ಎಚ್.ಡಿ ರೇವಣ್ಣರ ಎರಡನೇ ಪುತ್ರ ಸೂರಜ್ಗೌಡ ಆಯ್ಕೆಯಾಗಿದ್ದಾರೆ. ರೇವಣ್ಣ ಎಂಎಲ್ಎ, ಹಿರಿಯ ಮಗ ಪ್ರಜ್ವಲ್ ರೇವಣ್ಣ ಸಂಸದ, ಈಗ ಕಿರಿಯ ಮಗ ಸೂರಜ್ ಎಂಎಲ್ಸಿ! ಸೂರಜ್ ತಾತ ರಾಜ್ಯಸಭಾ ಸದಸ್ಯರು, ಚಿಕ್ಕಪ್ಪ ಎಂಎಲ್ಎ…
ಕೊಡಗಿನಲ್ಲಿ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಅಣ್ಣ ಸುಜಾ ಕುಶಾಲಪ್ಪ ಈಗ ಮೇಲ್ಮನೆ ಸದಸ್ಯ. ಕಳೆದ ಸಲ ಅಪ್ಪಚ್ಚು ರಂಜನ್ ತಮ್ಮ ಸುಬ್ರಮಣ್ಯ ಎಂಎಲ್ಸಿ ಆಗಿದ್ದರು. ಬಪ್ಪರೆ ಅಣ್ತಮ್ಮಾ!
ನಜೀರ್ಸಾಬ್, ಚಂದ್ರಶೇಖರ್ ಕಂಬಾರ್, ಸಿದ್ದಲಿಂಗಯ್ಯ, ಎಚ್ಕೆ. ಪಾಟೀಲ್, ಎಸ್ ಆರ್ ಪಾಟೀಲ್ ಮುಂತಾದವರು ನಾಡು-ನುಡಿಯ ಬಗ್ಗೆ ನಡೆಸಿದ್ದ ಗಂಭೀರ ಚರ್ಚೆಗಳು ಇತ್ತೀಚಿನ ದಶಕದಲ್ಲಿ ಕಾಣೆಯಾಗಿರುವುದಕ್ಕೆ ಈ ಕುಟುಂಬ ರಾಜಕಾರಣವೇ ಕಾರಣ.
ತಮ್ಮ ಮನೆಯಲ್ಲಿರುವ ಅತೃಪ್ತಿಯನ್ನು ಸರಿದೂಗಿಸಲು ಸ್ಥಾಪಿತ ರಾಜಕಾರಣಿಗಳು ಮಕ್ಕಳನ್ನು, ತಮ್ಮಂದಿರನ್ನು ಮತ್ತು ಸಹೋದರರ ಮಕ್ಕಳನ್ನು ಅಧಿಕಾರಕ್ಕೆ ತರಲು ವಿಧಾನ ಪರಿಷತ್ ಅನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ರಾಜಕೀಯ ಪಕ್ಷಗಳು ಇದಕ್ಕೆ ಸೊಪ್ಪು ಹಾಕಿದ್ದೇ ಸಮಸ್ಯೆಯ ಮೂಲವಾಗಿದ್ದು, ಇದೇ ಮನೆ-MONEY ರಾಜಕಾರಣ!