ರಾತ್ರಿ ವೇಳೆ ಮನೆಯ ಮುಂಭಾಗದಲ್ಲಿ ಮಲಗಿದ್ದ ನಾಯಿಯ ಮೇಲೆ ಚಿರತೆ (Leapord) ದಾಳಿ ನಡೆಸಿ, ಹೊತ್ತೊಯ್ದ ಘಟನೆ ಬೈಂದೂರು ತಾಲೂಕಿನ ದೇವಳಕುಂದ ಎಂಬಲ್ಲಿ ನಡೆದಿದೆ.
ಹೀಗೆ ರಾತ್ರಿ ಚಿರತೆ ನಾಯಿಯನ್ನು ಹೊತ್ತೊಯ್ಯುವ ಭಯಾನಕ ದೃಶ್ಯ ಮನೆಯ ಸಿಸಿಟಿವಿ (CCTV) ಕ್ಯಾಮರಾದಲ್ಲಿ ಸೆರೆಯಾಗಿದೆ. ದೇವಳಕುಂದ ಗ್ರಾಮದ ಜಾಡಿಕ್ರಾಸ್ನ ಸುಧೀರ್ ಶೆಟ್ಟಿ (Sudheer Shetty) ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಸಿಸಿಟಿವಿ ದೃಶ್ಯದಲ್ಲಿ ಹೊಂಚು ಹಾಕಿಕೊಂಡು ಬರುವ ಚಿರತೆ ಅಂಗಳದಲ್ಲಿ ಮಲಗಿದ್ದ ನಾಯಿ ಮೇಲೆ ಏಕಾಏಕಿ ದಾಳಿ ನಡೆಸಿದೆ.
ಇದೇ ವೇಳೆ ನಿದ್ದೆಯಲ್ಲಿದ್ದ ನಾಯಿಗೆ ಚಿರತೆಯ ಬಾಯಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಕ್ಷಣಾರ್ಧದಲ್ಲಿ ಚಿರತೆ ನಾಯಿಯನ್ನು ಹೊತ್ತುಕೊಂಡು ಕಾಡಿನೊಳಗೆ ಓಡಿ ಹೋಗಿರುವುದು ಸೆರೆಯಾಗಿದೆ.
ರಾತ್ರಿ ವೇಳೆ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡ ಕಾರಣ ದೇವಳಕುಂದ ಗ್ರಾಮಸ್ಥರಿಗೆ ಆತಂಕ ಶುರುವಾಗಿದೆ. ತಕ್ಷಣವೇ ಅಧಿಕಾರಿಗಳು ಬೋನ್ ಇಟ್ಟು ಚಿರತೆ ಸೆರೆ ಹಿಡಿಯಬೇಕು ಎಂದು ಮನವಿ ಮಾಡಿದ್ದಾರೆ.