ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಒಂದು ಕಡೆ ಬೆಳಗಾವಿ ಸುವರ್ಣ ಸೌಧದ ಒಳಗೆ ಭಾರೀ ವಾಗ್ವಾದ, ಹೋರಾಟ ನಡೆಯುತ್ತಿದ್ದರೆ, ಕುಂದಾ ನಗರಿಯ ರಾಜಕೀಯ ಬಯಲಲ್ಲಿ ಕೂಡ ಕೇಸರಿ ಪಡೆ ಮತ್ತು ಕೈಪಡೆಯ ನಡುವೆ ಜಂಗೀಕುಸ್ತಿ ಬಿರುಸುಗೊಂಡಿದೆ.
ಬೆಳಗಾವಿಯ ಸಕ್ಕರೆ ಲಾಭಿಯ ರಾಜಕೀಯ ಹಿಡಿತದ ಮೇಲಾಟ ಕಳೆದ ಒಂದು ದಶಕದಿಂದ ರಾಜ್ಯ ರಾಜಕಾರಣವನ್ನು ನಿಯಂತ್ರಿಸುವ ಮಟ್ಟಿಗೆ ಪ್ರಭಾವಶಾಲಿಯಾಗಿ ಬೆಳೆದುನಿಂತಿದೆ. ಈ ಹಿಂದಿನ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನೇ ಉರುಳಿಸುವ ಮಟ್ಟಿಗೆ ಬೆಳಗಾವಿಯ ಸಕ್ಕರೆ ಲಾಭಿಯ ಪ್ರಭಾವ ವಿಸ್ತರಿಸಿದೆ ಎಂಬುದೇ ರಾಜ್ಯ ರಾಜಕಾರಣದ ಮೇಲೆ ಅದು ಹೊಂದಿರುವ ಹಿಡಿತಕ್ಕೆ ತಾಜಾ ಸಾಕ್ಷಿ.
ಆ ಹಿನ್ನೆಲೆಯಲ್ಲಿ ಬೆಳಗಾವಿಯ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಭವಿಷ್ಯದ ರಾಜ್ಯ ರಾಜಕಾರಣದ ಮೇಲೆ ಬೀರಲಿರುವ ಪರಿಣಾಮಗಳ ಹಿನ್ನೆಲೆಯಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿವೆ. ಮುಖ್ಯವಾಗಿ ಇತ್ತೀಚಿನ ವಿಧಾನಪರಿಷತ್ ಚುನಾವಣೆ ಮತ್ತು ಕಳೆದ ವಿಧಾನಸಭಾ ಉಪ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಇದೀಗ ಪ್ರಮುಖ ಜೆಡಿಎಸ್ ನಾಯಕರು ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿರುವುದು ಬಿಜೆಪಿಯ ಭದ್ರಕೋಟೆ ಎನಿಸಿರುವ ಬೆಳಗಾವಿಯ ನೆಲದಿಂದಲೇ ಕಾಂಗ್ರೆಸ್ಸಿನ ಹೊಸ ಪರ್ವಕ್ಕೆ ನಾಂದಿ ಹಾಡಲಾಗುತ್ತಿದೆ ಎಂಬ ವಿಶ್ಲೇಷಣೆಗಳಿಗೆ ಎಡೆಮಾಡಿದೆ.
ಬೆಳಗಾವಿ, ಹುಬ್ಬಳ್ಳಿ ಧಾರವಾಡ, ವಿಜಯಪುರ, ಗದಗ, ಹಾವೇರಿ, ಕೊಪ್ಪಳ, ಉತ್ತರಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಳೆದ ಎರಡು ದಶಕದಿಂದಲೂ ಬಿಜೆಪಿ ಸಾಕಷ್ಟು ಪ್ರಭಾವ ಬೆಳೆಸಿಕೊಂಡಿದೆ. ಅದರಲ್ಲೂ ಬೆಳಗಾವಿಯಲ್ಲಂತೂ ಹಿಂದುತ್ವ ಮತ್ತು ಲಿಂಗಾಯತ ಬಲದ ಮೇಲೆ ಭದ್ರ ಕೋಟೆಯನ್ನೇ ಕಟ್ಟಿಕೊಂಡಿತ್ತು. ಅಂಗಡಿ, ಕತ್ತಿ ಮತ್ತು ಜಾರಕಿಹೊಳಿ ಕುಟುಂಬಗಳ ಬಲದ ಮೇಲೆ ಭದ್ರವಾಗಿ ನೆಲೆಯೂರಿತ್ತು. ಆದರೆ, ಜಾರಕಿಹೊಳಿ ಮತ್ತು ಅಂಗಡಿ ಕುಟುಂಬದ ಆಂತರಿಕ ಬೆಳವಣಿಗೆಗಳು ಮತ್ತು ಕತ್ತಿ ಕುಟುಂಬವನ್ನು ರಾಜಕೀಯವಾಗಿ ಬದಿಗೆ ಸರಿಸುವ ಯತ್ನಗಳು ಇನ್ನುಳಿದ ಎರಡು ಕುಟುಂಬಗಳ ನಡುವೆ ಪೈಪೋಟಿಯ ವಿಷಯವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಬಲ ಕಳೆದ ಮೂರ್ನಾಲ್ಕು ವರ್ಷಗಳಿಂದ ಇಳಿಮುಖವಾಗುತ್ತಿದೆ.

ಅದಕ್ಕೆ ಲಿಂಗಾಯತ ನಾಯಕ ಬಿ ಎಸ್ ಯಡಿಯೂರಪ್ಪ ಅವರನ್ನು ಏಕಾಏಕಿ ಹೀನಾಯವಾಗಿ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ ಬಿಜೆಪಿಯ ವರಿಷ್ಠರ ನಡೆ ಕೂಡ ಈಗ ಮತ್ತೊಂದು ಪೆಟ್ಟು ಕೊಟ್ಟಿದೆ. ಲಿಂಗಾಯತ ಬಾಹುಳ್ಯದ ಮುಂಬೈ ಕರ್ನಾಟಕದ ಪ್ರಾಂತದಲ್ಲಿ ಯಡಿಯೂರಪ್ಪ ಅವರ ಪದಚ್ಯುತಿಗೆ ಬಿಜೆಪಿ ಬೆಲೆ ತೆರುತ್ತಿದೆ ಎಂಬುದು ಕಳೆದ ವಿಧಾನಸಭಾ ಉಪ ಚುನಾವಣೆಯ ಹಾನಗಲ್ ಕ್ಷೇತ್ರದ ಫಲಿತಾಂಶ ಮತ್ತು ಮೊನ್ನೆಯ ವಿಧಾನಪರಿಷತ್ ಬೆಳಗಾವಿಯ ಫಲಿತಾಂಶಗಳು ತೋರಿಸಿಕೊಟ್ಟಿವೆ. ಹಾಗೆ ನೋಡಿದರೆ, ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಕೂಡ ಬಿಜೆಪಿಯ ಗೆಲುವು ಗೆಲುವಲ್ಲ ಎಂಬಷ್ಟರ ಮಟ್ಟಿಗೆ ಅದು ಬಲಹೀನಗೊಂಡಿದೆ. ಲೋಕಸಭಾ ಉಪ ಚುನಾವಣೆಯಲ್ಲಿ ಕೇವಲ ನಾಲ್ಕೈದು ಸಾವಿರ ಮತಗಳ ಅಂತರದ ಪ್ರಾಯಾಸಕರ ಜಯ ಪಡೆದಿದ್ದ ಬಿಜೆಪಿ ವಿಧಾನಪರಿಷತ್ ಚುನಾವಣೆಯಲ್ಲಿ ಸೋಲು ಕಂಡಿದೆ.
ಅದೇ ಹೊತ್ತಿಗೆ ಜೆಡಿಎಸ್ ಕೂಡ ಬೆಳಗಾವಿ ಮತ್ತು ಮುಂಬೈ ಕರ್ನಾಟಕದ ಭಾಗದಲ್ಲಿ ಬಲಗುಂದಿದೆ. ಅದರಲ್ಲೂ ಬಿಜೆಪಿ ವಿರುದ್ಧದ ಹೋರಾಟದ ಮೂಲಕವೇ ಅಸ್ತಿತ್ವ ಉಳಿಸಿಕೊಳ್ಳಬೇಕಾದ ಜೆಡಿಎಸ್ ಸ್ಥಳೀಯ ನಾಯಕರಿಗೆ, ಇತ್ತೀಚಿನ ದಿನಗಳಲ್ಲಿ ರಾಜ್ಯ ಜೆಡಿಎಸ್ ವರಿಷ್ಠರು ಮತ್ತು ಬಿಜೆಪಿ ವರಿಷ್ಠರ ನಡುವಿನ ತೆರೆಮರೆಯ ಒಪ್ಪಂದಗಳು, ದೇವೇಗೌಡರು ಮತ್ತು ಪ್ರಧಾನಿ ಮೋದಿಯವರ ಆಪ್ತ ಭೇಟಿ ಮತ್ತು ಮಾತುಕತೆಗಳು ಬೇರೆಯದೇ ಆತಂಕ ಮೂಡಿಸಿವೆ. ಈಗಾಗಲೇ ವಿಧಾನಪರಿಷತ್ ಚುನಾವಣೆಯ ಕಣದಲ್ಲಿಯೇ ಬಿಜೆಪಿ ಮತ್ತು ಜೆಡಿಎಸ್ ನಡುವೆ ಬಹಿರಂಗ ಹೊಂದಾಣಿಕೆಯ ಮಾತುಗಳು ಕೇಳಿಬಂದಿದ್ದವು. ಮುಂದೆ 2023ರ ವಿಧಾನಸಭಾ ಚುನಾವಣೆಯ ಹೊತ್ತಿಗೆ ಕೂಡ ಬಿಜೆಪಿ ಮತ್ತು ಜೆಡಿಎಸ್ ನಡುವೆ ಚುನಾವಣಾಪೂರ್ವ ಹೊಂದಾಣಿಕೆಯ ಸೂಚನೆಗಳನ್ನೂ ಇತ್ತೀಚಿನ ವಿದ್ಯಮಾನಗಳು ನೀಡಿವೆ.
ಆ ಹಿನ್ನೆಲೆಯಲ್ಲಿಯೇ ಪ್ರಮುಖವಾಗಿ ಜೆಡಿಎಸ್ ನಾಯಕರು ರಾಜ್ಯಾದ್ಯಂತ ಪರ್ಯಾಯ ನೆಲೆಗಳತ್ತ ಮುಖ ಮಾಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಬಿಜೆಪಿಯ ಪ್ರಬಲವಾಗಿರುವ ಮತ್ತು ಬಿಜೆಪಿಯ ವಿರುದ್ಧದ ಹೋರಾಟದ ಮೂಲಕವೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳಬೇಕಾದ ಅನಿವಾರ್ಯತೆ ಇರುವ ಜಿಲ್ಲೆಗಳಲ್ಲಂತೂ ಜೆಡಿಎಸ್ ನಾಯಕರು ಗಂಭೀರ ಚಿಂತನೆಯಲ್ಲಿ ಮುಳುಗಿದ್ದಾರೆ. ತಮ್ಮ ನಾಯಕರು ಪಕ್ಷದ ಜಿಲ್ಲಾ ಮತ್ತು ಸ್ಥಳೀಯ ಮುಖಂಡರ ಆತಂಕ ಮತ್ತು ಅನಿವಾರ್ಯತೆಗಳಿಗೆ ಕಿವಿಯಾಗುವುದಿಲ್ಲ. ಅವರು ತಮ್ಮ ಕುಟುಂಬದ ರಾಜಕೀಯ ಲಾಭವನ್ನು ಮಾತ್ರ ಪರಿಗಣಿಸಿ ಉಳಿದೆಲ್ಲಾ ಮುಖಂಡರು, ಕಾರ್ಯಕರ್ತರ ಹಿತವನ್ನು ಬಲಿಕೊಡುತ್ತಾರೆ ಎಂಬುದು ಈಗಾಗಲೇ ವರ್ಷಗಳಿಂದ ಮತ್ತೆ ಮತ್ತೆ ನಿರೂಪಿತವಾಗುತ್ತಲೇ ಇದೆ. ಇಂತಹ ಪರಿಸ್ಥಿತಿಯಲ್ಲಿ ತಮ್ಮ ತಮ್ಮ ರಾಜಕೀಯ ಅಸ್ತಿತ್ವ ಕಾಯ್ದುಕೊಳ್ಳಲು ಪರ್ಯಾಯ ವೇದಿಕೆಗಳನ್ನು ಹುಡುಕುವುದು ತಮಗೆ ಅನಿವಾರ್ಯ ಎಂಬ ಮನಸ್ಥಿತಿಗೆ ಈಗಾಗಲೇ ಹಲವು ನಾಯಕರು ಬಂದಿದ್ದಾರೆ ಎಂಬುದು ಜೆಡಿಎಸ್ ಅಂತರಂಗದ ಪಿಸುದನಿ.

ಇದೀಗ ಅಂತಹ ಪಿಸುದನಿಗಳು ಗಡುಸುಗೊಳ್ಳತೊಡಗಿದ್ದು, ಬೆಳಗಾವಿಯ ಪ್ರಭಾವಿ ನಾಯಕ ಅಶೋಕ್ ಪೂಜಾರಿ ಮೊದಲ ಬಾರಿಗೆ ತಾವು ಕಾಂಗ್ರೆಸ್ ಸೇರುತ್ತಿರುವುದಾಗಿ ಬಹಿರಂಗವಾಗಿ ಘೋಷಿಸಿದ್ದಾರೆ. ಗೋಕಾಕ್ ಕ್ಷೇತ್ರದಲ್ಲಿ ನಾಲ್ಕು ಬಾರಿ ಜೆಡಿಎಸ್ ಮತ್ತು ಬಿಜೆಪಿಯಿಂದ ವಿಧಾನಸಭಾ ಚುನಾವಣಾ ಕಣಕ್ಕಿಳಿದು ಸೋಲು ಕಂಡಿದ್ದರೂ, ಪೂಜಾರಿ ಅವರಿಗೆ ಸಾಕಷ್ಟು ಪ್ರಭಾವ ಆ ಭಾಗದಲ್ಲಿದೆ.
“ನಾನು ಕಾಂಗ್ರೆಸ್ ಸೇರುತ್ತೇನೆ ಎಂದು ಒಂದು ವರ್ಷದಿಂದಲೂ ವದಂತಿ ಹರಡಿತ್ತು. ನಾನು ಗೋಕಾಕ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಲು ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಪಕ್ಷದ ಅನೇಕ ಮುಖಂಡರು ಕಾಂಗ್ರೆಸ್ ಸೇರುವಂತೆ ಸಂಪರ್ಕಿಸಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅಧಿಕೃತವಾಗಿ ಆಹ್ವಾನ ನೀಡಿದ್ದರು. ಗೋಕಾಕದಲ್ಲಿನ ಸರ್ವಾಧಿಕಾರಿ ಧೋರಣೆ ವಿರುದ್ಧದ ನಿಮ್ಮ ಹೋರಾಟಕ್ಕೆ ನಾವೂ ಕೈಜೋಡಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇತ್ತೀಚೆಗೆ ಪಕ್ಷಕ್ಕೆ ಸ್ವಾಗತ ಕೋರಿದ್ದರು. ಹಾಗಾಗಿ ಅಭಿಮಾನಿಗಳು, ಹಿತೈಷಿಗಳ ಜೊತೆ ಸೇರುತ್ತಿದ್ದೇನೆ. ಕಾಂಗ್ರೆಸ್ ಪಕ್ಷದ ನೀತಿ- ಸಿದ್ಧಾಂತವನ್ನು ಒಪ್ಪಿ ಬೇಷರತ್ತಾಗಿ ಸೇರುತ್ತಿದ್ದೇನೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೇಳಿಲ್ಲ. ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ” ಎಂದು ಪೂಜಾರಿ ಹೇಳಿದ್ದಾರೆ.
ಅಂದರೆ; ಅಶೋಕ್ ಪೂಜಾರಿ ಅವರ ವಲಸೆ ಮುಂದೆ ಬರಲಿರುವ ಪ್ರವಾಹದ ಮುನ್ಸೂಚನೆ. ಬೆಳಗಾವಿ, ವಿಜಯಪುರ, ಧಾರವಾಡ, ಗದಗ, ಹಾವೇರಿ ಸೇರಿದಂತೆ ಆ ಭಾಗದಲ್ಲಿ ಮುಂದಿನ ದಿನಗಳಲ್ಲಿ ಹಲವು ಮುಖಂಡರು ಜೆಡಿಎಸ್ ಮತ್ತು ಬಿಜೆಪಿಯಿಂದ ಕಾಂಗ್ರೆಸ್ ಕಡೆ ಹೆಜ್ಜೆ ಹಾಕಲಿದ್ದಾರೆ. ಮುಖ್ಯವಾಗಿ ಬಿಜೆಪಿಯ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಆಡಳಿತ ವೈಫಲ್ಯ, ಜನರ ಸಂಕಷ್ಟಕ್ಕೆ, ನೆರೆ-ಬರಕ್ಕೆ, ಕರೋನಾ ಕಷ್ಟಕ್ಕೆ ಕಿಂಚಿತ್ತೂ ನೆರವಾಗದ ಆಡಳಿತಗಳು ತಮ್ಮದೇ ಮೋಜುಮಸ್ತಿಯಲ್ಲಿ ದುಂದುವೆಚ್ಚದಲ್ಲಿ ಮುಳುಗಿರುವುದು ಜನಸಾಮಾನ್ಯರಲ್ಲಿ ಮಾತ್ರವಲ್ಲದೆ, ಬಿಜೆಪಿಯ ಹಲವು ನಾಯಕರಲ್ಲೂ ಬೇಸರ ಮೂಡಿಸಿದೆ. ಜೊತೆಗೆ ಅಂತಹ ದುರಾಡಳಿತದಿಂದ ರೋಸಿದ ಜನರ ಆಕ್ರೋಶಕ್ಕೆ ತಾವು ಬಲಿಯಾಗಬೇಕಾಗುತ್ತದೆ ಎಂಬ ಆತಂಕ ಕೂಡ ಹಾಲಿ ಶಾಸಕರಲ್ಲೂ ಇದೆ. ಆ ಹಿನ್ನೆಲೆಯಲ್ಲಿ ಇನ್ನು ಕೆಲವೇ ತಿಂಗಳಲ್ಲಿ ವಲಸೆಯ ಪರ್ವ ಆರಂಭವಾಗಲಿದೆ. ಅಂತಹ ಪರ್ವಕ್ಕೆ ಪೂಜಾರಿ ಇದೀಗ ನಾಂದಿ ಹಾಡಿದ್ದಾರೆ ಎಂಬುವುದು ಆಯಾ ಪಕ್ಷಗಳ ವಲಯದಲ್ಲೇ ಕೇಳಿಬರುತ್ತಿರುವ ಮಾತು.
ಆ ದೃಷ್ಟಿಯಿಂದ ಬೆಳಗಾವಿಯ ಸಕ್ಕರೆ ಲಾಭಿಯ ಸಂಘರ್ಷ ಮತ್ತು ಇದೀಗ ಆರಂಭವಾಗಿರುವ ರಾಜಕೀಯ ವಲಸೆ, ಬೆಳಗಾವಿ ಸೇರಿದಂತೆ ಬಿಜೆಪಿಯ ಭದ್ರಕೋಟೆಯಾಗಿರುವ ಮುಂಬೈ ಕರ್ನಾಟಕದಲ್ಲಿ ಸಂಭವಿಸಬಹುದಾದ ಭೂಕಂಪದ ಮುನ್ಸೂಚನೆಯೆ? ಎಂಬುದನ್ನು ಕಾದುನೋಡಬೇಕಿದೆ.