ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಬಂಧನ ಭೀತಿಯನ್ನು ಎದುರಿಸುತ್ತಿದ್ದು, ಸಿಎಂ ರಾಜೀನಾಮೆ ನೀಡುವಂತೆ ಪ್ರತಿಪಕ್ಷದ ನಾಯಕರು ಪಟ್ಟು ಹಿಡಿದಿದ್ದಾರೆ. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರ ಜೀವನಾಧಾರಿತ ಸಿನಿಮಾದ ಶೂಟಿಂಗ್ಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.
ಖ್ಯಾತ ತಮಿಳು ನಟ ವಿಜಯ ಸೇತುಪತಿ ನಟನೆಯ ಲೀಡರ್ ರಾಮಯ್ಯ ಸಿನಿಮಾವನ್ನು ಬೆಂಗಳೂರು ಮೂಲದ ನಿರ್ದೇಶಕ ಸತ್ಯರತ್ನಂ, ಗಂಗಾವತಿ ಮೂಲದ ಹಯ್ಯಾತ್ ಫಿರ್ ನಿರ್ಮಾಣ ಮಾಡುತ್ತಿದ್ದಾರೆ.
ಮೂಡಾ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸಿನಿಮಾ ತಂಡ ಈಗ ಎರಡನೇ ಭಾಗದ ಚಿತ್ರಿಕರಣವನ್ನು ಸದ್ಯಕ್ಕೆ ನಿಲ್ಲಿಸುವುಕ್ಕೆ ಮುಂದಾಗಿದೆ ಎನ್ನಲಾಗಿದೆ. ಚಿತ್ರೀಕರಣವನ್ನು ಸ್ಥಗಿತಗೊಳಿಸಿ ಪರಿಸ್ಥಿತಿ ತಿಳಿಯಾದ ನಂತರ ಚಿತ್ರೀಕರಣವನ್ನು ಮುಂದುವರಿಸಲು ಚಿತ್ರತಂಡ ನಿರ್ಧರಿಸಿದೆ ಎಂದು ವರದಿಯಾಗಿದೆ.
ಈಗಾಗಲೇ ಮೈಸೂರು ಭಾಗದಲ್ಲಿ ಸಿಎಂ ಬಾಲ್ಯ ಹಾಗೂ ಪ್ರೌಢವಸ್ಥೆಯ ಮೊದಲ ಹಂತದ ಶೂಟಿಂಗ್ ಪೂರ್ಣವಾಗಿದ್ದು, ಎರಡನೇ ಹಂತದ ಶೂಟಿಂಗ್ ಗೆ ಚಿತ್ರ ತಂಡ ಬ್ರೇಕ್ ಹಾಕಿದೆ. ಇದೀಗ ರಾಜಕೀಯ ಬೆಳೆವಣಿಗೆಯನ್ನು ಗಮನಿಸುತ್ತಿದ್ದು, ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ವರದಿಯಾಗಿದೆ.