ಎಲ್ಗರ್ ಪರಿಷತ್ ಪ್ರಕರಣದಲ್ಲಿ ಬಂಧಿತರಾದ 16 ಜನರಲ್ಲಿ ಒಬ್ಬರಾದ ವಕೀಲೆ-ಸಾಮಾಜಿಕ ಕಾರ್ಯಕರ್ತೆ ಸುಧಾ ಭಾರದ್ವಾಜ್ ಅವರು ಮೂರು ವರ್ಷಗಳ ಕಾಲ ಸೆರೆವಾಸ ಅನುಭವಿಸಿದ ನಂತರ ಇಂದು ಬೆಳಿಗ್ಗೆ ಬಿಡುಗಡೆಯಾಗಿದ್ದಾರೆ. ಡಿಸೆಂಬರ್ 1 ರಂದು ಬಾಂಬೆ ಹೈಕೋರ್ಟ್ ನೀಡಿದ್ದ ಡೀಫಾಲ್ಟ್ ಜಾಮೀನಿಗೆ ತಡೆ ನೀಡುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್.ಐ.ಎ) ಮಾಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಎರಡು ದಿನಗಳ ಹಿಂದೆ ತಿರಸ್ಕರಿಸಿತ್ತು. “ಹೈಕೋರ್ಟ್ ಆದೇಶದಲ್ಲಿ ಮಧ್ಯ ಪ್ರವೇಶಿಸಲು ನಮಗೆ ಯಾವುದೇ ಕಾರಣವಿಲ್ಲ. ಅರ್ಜಿಯನ್ನು ವಜಾಗೊಳಿಸಲಾಗಿದೆ” ಎಂದು ಪೀಠ ಹೇಳಿದೆ. ನ್ಯಾಯಮೂರ್ತಿಗಳಾದ ಯು.ಯು ಲಲಿತ್, ಎಸ್.ಆರ್ ಭಟ್ ಮತ್ತು ಬೇಲಾ ಎಂ ತ್ರಿವೇದಿ ಅವರ ಪೀಠವು ಈ ಆದೇಶ ನೀಡಿದೆ.
ನಿನ್ನೆ ಎನ್‌ಐಎ ನ್ಯಾಯಾಲಯ ಜಾಮೀನು ಷರತ್ತುಗಳನ್ನು ವಿಧಿಸಿದ ನಂತರ ಸುಧಾ ಭಾರದ್ವಾಜ್ ಬೈಕುಲ್ಲಾ ಮಹಿಳಾ ಕಾರಾಗೃಹದಿಂದ ಬಿಡುಗಡೆಗೊಂಡರು. ಈ ಪ್ರಕರಣದಲ್ಲಿ ಡೀಫಾಲ್ಟ್ ಜಾಮೀನು ಪಡೆದ ಮೊದಲ ಮಹಿಳೆ ಅವರಾಗಿದ್ದಾರೆ.
ಈ ಪ್ರಕರಣವನ್ನು ಮೊದಲು ಪುಣೆ ಪೊಲೀಸರು ನಿರ್ವಹಿಸಿದ್ದರು ಮತ್ತು ನಂತರ ಎನ್‌ಐಎ ಕೈಗೆತ್ತಿಕೊಂಡಿತ್ತು. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾಗ ಸುಧಾ ಅವರನ್ನು ಆರಂಭದಲ್ಲಿ ಪುಣೆಯ ಯೆರವಾಡ ಜೈಲಿನಲ್ಲಿ ಇರಿಸಲಾಗಿತ್ತು. ಪ್ರಕರಣವನ್ನು NIA ವಹಿಸಿಕೊಂಡ ನಂತರ ಬೈಕುಲ್ಲಾ ಮಹಿಳಾ ಜೈಲಿಗೆ ಸ್ಥಳಾಂತರಿಸಲಾಯಿತು. ಪ್ರಕರಣ ಇನ್ನೂ ವಿಚಾರಣೆಗೆ ಹೋಗಬೇಕಿದೆ.
ಅವರ ಜಾಮೀನು ಷರತ್ತುಗಳ ಭಾಗವಾಗಿ, ವಿಶೇಷ ಎನ್‌ಐಎ ನ್ಯಾಯಾಲಯವು 60 ವರ್ಷದ ಸುಧಾ ಅವರು ತನ್ನ ಪಾಸ್‌ಪೋರ್ಟ್ ಸಲ್ಲಿಸಬೇಕು ಮತ್ತು ಮುಂಬೈನಲ್ಲಿ ಉಳಿಯಬೇಕು ಎಂದು ಹೇಳಿದೆ. ನಗರ ಮಿತಿಯನ್ನು ತೊರೆಯಲು ಸುಧಾ ನ್ಯಾಯಾಲಯದ ಅನುಮತಿ ಪಡೆಯಬೇಕು.

ಸುಧಾ ಭಾರದ್ವಾಜ್ ಅವರು ಪ್ರಕರಣದ ಕುರಿತು ಮಾಧ್ಯಮಗಳೊಂದಿಗೆ ಸಂವಹನ ನಡೆಸುವಂತಿಲ್ಲ ಎಂದು ವಿಶೇಷ ನ್ಯಾಯಾಲಯ ಹೇಳಿದೆ. ಅವರ ಪರವಾದ ಮಂಡಿಸಿದ ವಕೀಲ ಯುಗ್ ಮೋಹಿತ್ ಚೌಧರಿ, ಇದು ಸುಧಾ ಅವರ ವಾಕ್ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಹೇಳಿದ್ದಾರೆ.
50,000 ರೂ. ತಾತ್ಕಾಲಿಕ ನಗದು ಜಾಮೀನಿನ ಮೇಲೆ ಸುಧಾ ಅವರನ್ನು ಬಿಡುಗಡೆ ಮಾಡಲಾಗಿದೆ ಮತ್ತು ಪ್ರತಿ ಹದಿನೈದು ದಿನಗಳಿಗೊಮ್ಮೆ ಹತ್ತಿರದ ಪೊಲೀಸ್ ಠಾಣೆಗೆ – ದೈಹಿಕವಾಗಿ ಅಥವಾ ವೀಡಿಯೊ ಕರೆ ಮೂಲಕ – ಭೇಟಿ ನೀಡುವಂತೆ ನಿರ್ದೇಶಿಸಲಾಗಿದೆ.
ಪ್ರಕರಣದಲ್ಲಿ ತನ್ನ ಸಹ-ಆರೋಪಿಗಳೊಂದಿಗೆ ಯಾವುದೇ ರೀತಿಯ ಸಂಪರ್ಕವನ್ನು ಸ್ಥಾಪಿಸಬಾರದು ಮತ್ತು ಯಾವುದೇ ಅಂತರರಾಷ್ಟ್ರೀಯ ಕರೆಗಳನ್ನು ಮಾಡಬಾರದು ಎಂದು ಅವರಿಗೆ ನಿರ್ದೇಶಿಸಲಾಗಿದೆ.
ಸುಧಾ ಭಾರದ್ವಾಜ್ ಅವರನ್ನು ಆಗಸ್ಟ್ 28, 2018 ರಂದು ಬಂಧಿಸಲಾಯಿತು ಮತ್ತು ನಂತರ ಗೃಹಬಂಧನದಲ್ಲಿ ಇರಿಸಲಾಯಿತು. ನಂತರ ಅವರನ್ನು ಅಕ್ಟೋಬರ್ 27, 2018 ರಂದು ಕಸ್ಟಡಿಗೆ ತೆಗೆದುಕೊಳ್ಳಲಾಯಿತು.
ಡಿಸೆಂಬರ್ 31, 2017 ರಂದು ಎಲ್ಗಾರ್ ಪರಿಷತ್ತಿನ ಸಮಾವೇಶದಲ್ಲಿ ಭಾಷಣ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈ ಭಾಷಣಗಳು ಮರುದಿನ ನಗರದ ಹೊರವಲಯದಲ್ಲಿರುವ ಕೋರೆಗಾಂವ್-ಭೀಮಾ ಯುದ್ಧ ಸ್ಮಾರಕದ ಬಳಿ ಹಿಂಸಾಚಾರವನ್ನು ಪ್ರಚೋದಿಸಿದವು ಎಂದು ಪೊಲೀಸರು ಹೇಳಿದ್ದಾರೆ. ಸಮಾವೇಶವು ಮಾವೋವಾದಿಗಳ ಬೆಂಬಲ ಹೊಂದಿತ್ತು ಎಂದು ಆರೋಪಿಸಲಾಗಿದೆ.

ಪುಣೆಯ ಹೆಚ್ಚುವರಿ ಸೆಷನ್ಸ್ ಕೋರ್ಟ್ ಕಳೆದ ವರ್ಷ ಆಗಸ್ಟ್‌ನಲ್ಲಿ ವೈದ್ಯಕೀಯ ಆಧಾರದ ಮೇಲೆ ಮಧ್ಯಂತರ ಜಾಮೀನು ಕೋರಿದ್ದ ಅವರ ಮನವಿಯನ್ನು ವಜಾಗೊಳಿಸಿತ್ತು, ಅಲ್ಲಿ ಅವರು ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಅಸ್ವಸ್ಥತೆಗಳಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದರು. ಇದು ಜೈಲಿನಲ್ಲಿದ್ದಾಗ ಕೋವಿಡ್‌ಗೆ ತುತ್ತಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಆ ಸಮಯದಲ್ಲಿ ಕೈದಿಯೊಬ್ಬರು ಕೋವಿಡ್ ಪಾಸಿಟಿವ್‌ಗೆ ಒಳಗಾಗಿದ್ದರು.
ಕಳೆದ ವರ್ಷ ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಭಯೋತ್ಪಾದನಾ-ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಬಂಧಿತರಾಗಿದ್ದ ಸಾಮಾಜಿಕ ಕಾರ್ಯಹರ್ತ 84 ವರ್ಷದ ಫಾದರ್ ಸ್ಟಾನ್ ಸ್ವಾಮಿ, ಆರೋಗ್ಯದ ಆಧಾರದ ಮೇಲೆ ಜಾಮೀನಿಗಾಗಿ ಹೋರಾಟ ನಡೆಸಿ ಜುಲೈನಲ್ಲಿ ನಿಧನರಾದರು.
ಪ್ರಕರಣದ ಇನ್ನೊಬ್ಬ ಆರೋಪಿ, ರಾಜಕೀಯ ಕಾರ್ಯಕರ್ತ ಮತ್ತು ಕವಿ ವರವರ ರಾವ್ ಅವರಿಗೆ ಈ ವರ್ಷದ ಆರಂಭದಲ್ಲಿ ವೈದ್ಯಕೀಯ ಕಾರಣಗಳಿಗಾಗಿ ಜಾಮೀನು ನೀಡಲಾಯಿತು.
ಭಾರದ್ವಾಜ್ ಜೊತೆಗೆ ಇತರ ಎಂಟು ಆರೋಪಿಗಳಾದ ಸುಧೀರ್ ದಾವಾಲೆ, ವರವರ ರಾವ್, ರೋನಾ ವಿಲ್ಸನ್, ಸುರೇಂದ್ರ ಗಡ್ಲಿಂಗ್, ಶೋಮಾ ಸೇನ್, ಮಹೇಶ್ ರಾವುತ್, ವೆರ್ನಾನ್ ಗೊನ್ಸಾಲ್ವಿಸ್ ಮತ್ತು ಅರುಣ್ ಫೆರೇರಾ – ಇದೇ ಆಧಾರದ ಮೇಲೆ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಅವರ ಅರ್ಜಿಗಳನ್ನು ತಿರಸ್ಕರಿಸಿದೆ. ಅರ್ಜಿಗಳನ್ನು ಸಕಾಲದಲ್ಲಿ ಸಲ್ಲಿಸಲಾಗಿಲ್ಲ ಮತ್ತು ಮುಂದೆ ಪರಿಗಣಿಸಬಹುದು ಎಂದು ಹೇಳಲಾಗಿದೆ.
ಕಾಮೆಂಟ್ಸ್ ರೈಟ್ಸ್ ಗ್ರೂಪ್ , ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಸುಧಾ ಭಾರದ್ವಾಜ್ ಅವರಿಗೆ ನೀಡಲಾದ ಡೀಫಾಲ್ಟ್ ಜಾಮೀನನ್ನು ಸ್ವಾಗತಿಸಿದೆ ಮತ್ತು ಇದು “ಯುಎಪಿಎ ವಿರುದ್ಧ ಪಿಯುಸಿಎಲ್ ಮತ್ತು ಇತರ ಮಿತ್ರ ಗುಂಪುಗಳ ಸುದೀರ್ಘ ಅಭಿಯಾನದ ಸಮರ್ಥನೆ ಆಗಿದೆ. ಇದು ವಿಶಾಲ ಸಾರ್ವಜನಿಕ ಮನಸ್ಥಿತಿಯಲ್ಲಿ ಬದಲಾವಣೆಯನ್ನು ಸೂಚಿಸುತ್ತದೆ ಮತ್ತು ಸರ್ಕಾರವು ಸಮಸ್ಯಾತ್ಮಕವೆಂದು ಪರಿಗಣಿಸುವ ಯಾವುದೇ ದೃಷ್ಟಿಕೋನವನ್ನು ನಿಗ್ರಹಿಸಲು ಯುಎಪಿಎಯನ್ನು ಅನ್ಯಾಯದ ಮತ್ತು ಪ್ರಜಾಸತ್ತಾತ್ಮಕವಲ್ಲದ ಸಾಧನವೆಂದು ಒಪ್ಪಿಕೊಳ್ಳಲು ನ್ಯಾಯಾಂಗ ಮನಸ್ಸು ಮಾಡುತ್ತಿದೆ ಎಂದು ಪಿಯುಸಿಎಲ್‌ನ ಪ್ರಧಾನ ಕಾರ್ಯದರ್ಶಿ ಡಾ.ವಿ.ಸುರೇಶ್ ಹೇಳಿದ್ದಾರೆ. ವಿವಾದಾತ್ಮಕ ಭಯೋತ್ಪಾದನಾ ನಿಗ್ರಹ ಕಾನೂನು ಯುಎಪಿಎ ರದ್ದುಪಡಿಸುವುದು ಮತ್ತು ಅದರ ಅಡಿಯಲ್ಲಿ “ಅನ್ಯಾಯವಾಗಿ ಜೈಲಿನಲ್ಲಿ” ಇರುವ ಎಲ್ಲರ ಬಿಡುಗಡೆಯನ್ನು ಖಚಿತಪಡಿಸುವುದು ಸಂಘಟನೆಯ “ಅಂತಿಮ ಉದ್ದೇಶ” ಎಂದು ಅವರು ಹೇಳಿದ್ದಾರೆ.
ಭೀಮಾ ಕೋರೆಗಾಂವ್ ಪ್ರಕರಣದ ಎಲ್ಲಾ 16 ಆರೋಪಿಗಳ ವಿರುದ್ಧದ ಪ್ರಾಸಿಕ್ಯೂಷನ್ ಹಿಂಪಡೆಯಲು ಪಿಯುಸಿಎಲ್ ಸಂಘಟನೆಯು ಆಂದೋಲನ ನಡೆಸುತ್ತಿದೆ.










