ಬೆಂಗಳೂರು : ವಿಧಾನಭೆಯಲ್ಲಿಂದು ಆಡಳಿತ ಮತ್ತು ವಿಪಕ್ಷಗಳ ನಡುವೆ ಟೀಕಾ ಪ್ರಹಾರ ಜೋರಾಗಿಯೇ ನಡೆದಿದೆ. ರಾಜ್ಯಪಾಲರಿಗೆ ಕೇಶವ ಕೃಪಾದಿಂದ ಫೋನ್ ಕರೆಗಳು ಬರುತ್ತವೆ. ಜಂಟಿ ಅಧಿವೇಶನದಲ್ಲಿ ಭಾಷಣ ಮಾಡದಂತೆ ರಾಜ್ಯಪಾಲರಿಗೆ ದೆಹಲಿ ಬಿಜೆಪಿ ಕಚೇರಿಯಿಂದ ಫೋನ್ ಬಂದಿತ್ತು ಎಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಹೇಳಿಕೆ ನೀಡಿದ್ದು, ಇದಕ್ಕೆ ಬಿಜೆಪಿ ನಾಯಕರು ಕಾದು ಕೆಂಡವಾಗಿದ್ದಾರೆ.

ಈ ರಾಜ್ಯ ಸರ್ಕಾರ ಫೋನ್ ಕದ್ದಾಲಿಕೆ ನಡೆಸುತ್ತಿದೆ. ರಾಜ್ಯಪಾಲರ ಕಚೇರಿಯ ಫೋನ್ ಟ್ಯಾಪಿಂಗ್ ಆಗುತ್ತಿದೆ. ಹಾಗಾದರೆ ಇದು ಫೋನ್ ಟ್ಯಾಪಿಂಗ್ ಸರ್ಕಾರನಾ..? ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿ, ಕೂಡಲೇ ಸಚಿವ ಹೆಚ್ಕೆ ಪಾಟೀಲ್ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಅಜಿತ್ ಪವಾರ್ NDA ಕೂಟ ಬಿಟ್ಟು, INDIA ಒಕ್ಕೂಟ ಸೇರ್ಪಡೆಯಾಗಬೇಕಿತ್ತು: ವಿಮಾನ ಅಪಘಾತಕ್ಕೆ ದೀದಿ ಸ್ಪೋಟಕ ತಿರುವು..?
ನಮ್ಮ ಫೋನ್‌ಗಳು ಕೂಡ ಟ್ಯಾಪಿಂಗ್ ಮಾಡಲಾಗುತ್ತಿದೆ. ಈ ಹಿಂದೆ ಇದೇ ರೀತಿ ಫೊನ್ ಟ್ಯಾಪಿಂಗ್ ಮಾಡಿರುವ ಸರ್ಕಾರಗಳು ಬಿದ್ದು ಹೋಗಿವೆ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದನದಲ್ಲಿ ಸುಳ್ಳು ಹೇಳಿದ್ದಲ್ಲದೆ, ಈಗ ಅದನ್ನು ಸಮರ್ಥನೆ ಮಾಡಲು ಮತ್ತಷ್ಟು ಸುಳ್ಳು ಹೇಳುತ್ತಿದ್ದೀರಿ. ಕಡತದಿಂದ ಸಚಿವ ಹೆಚ್.ಕೆ. ಪಾಟೀಲ್ ಹೇಳಿಕೆಯನ್ನು ತೆಗೆದುಹಾಕಿ ಇಲ್ಲವಾದರೆ ಕರೆ ಮಾಡಿರುವುದಕ್ಕೆ ದಾಖಲೆ ಕೊಡಿ ಎಂದು ಆಗ್ರಹಿಸಿದ್ದಾರೆ.
ಇದಕ್ಕೆ ಪ್ರತ್ತ್ಯುತ್ತರ ನೀಡಿರುವ ಸಚಿವ ಹೆಚ್.ಕೆ. ಪಾಟೀಲ್, ನನ್ನ ಹೇಳಿಕೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸುತ್ತಿದ್ದಾರೆ. ನಿಮ್ಮ ಗೃಹ ಸಚಿವರನ್ನೇ ಕೇಳಿ, ನಮ್ಮನ್ನೇಕೆ ಕೇಳುತ್ತೀರಿ. ರಾಜ್ಯಪಾಲರ ನಡೆ ಕುರಿತು ದಕ್ಷಿಣ ಭಾರತದಲ್ಲಿ ಚರ್ಚೆ ಮುಂದುವರೆದಿದೆ. ಅವರ ನಡೆಯಿಂದ ವಿಶ್ವಾಸಾರ್ಹತೆ ಕಡಿಮೆಯಾಗುತ್ತಿದೆ. ಆ ಬಗ್ಗೆ ತನಿಖೆ ಮಾಡಿ ನಾವು ಸಾಬೀತು ಮಾಡುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.

ಬಳಿಕ ಇದಕ್ಕೆ ಸ್ಪಷ್ಟನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾವು ಯಾವುದೇ ಫೋನ್ ಟ್ಯಾಪಿಂಗ್ ನಡೆಸುತ್ತಿಲ್ಲ. ನಾವು ವಿಪಕ್ಷಗಳ ನಾಯಕರ ಫೋನ್ ಟ್ಯಾಪ್ ಮಾಡಿಲ್ಲ. ಕೇಂದ್ರದಿಂದ ಕರೆ ಬಂದಿರಬಹುದು ಎಂದು ಸಚಿವರು ಹೇಳಿದ್ದಾರೆ ಅಷ್ಟೇ ಎಂದು ತಿಳಿಸಿದ್ದಾರೆ.













