ಉತ್ತರ ಪ್ರದೇಶ ಸರ್ಕಾರ ಸಚಿವ ಮತ್ತು ರೈತರನ್ನು ಕೊಂದ ಸಚಿವರ ಮಗನಿಗೆ ರಕ್ಷಣೆ ನೀಡುತ್ತಿದೆ, ಮೋದಿ ಅವರು ರೈತರನ್ನು ಆಂದೋಲನ ಜೀವಿಗಳು ಮತ್ತು ಭಯೋತ್ಪಾದಕರೆಂದು ಕರೆದಿದ್ದಾರೆ ಎಂದು ಪ್ರಿಯಾಂಕಾ ಆರೋಪಿಸಿದ್ದಾರೆ.
ವಾರಣಾಸಿ ʼಕಿಸಾನ್ ನ್ಯಾಯ್ʼ ರ್ಯಾ ಲಿಯನ್ನುದ್ದೇಶಿಸಿ ಮಾತನಾಡಿರುವ ಪ್ರಿಯಾಂಕಾ, ʼಮುಖ್ಯಮಂತ್ರಿಯವರು ಸಾರ್ವಜನಿಕ ವೇದಿಕೆಯಿಂದ ಸಚಿವರನ್ನು ರಕ್ಷಿಸುತ್ತಿದ್ದಾರೆ. ಪ್ರಧಾನ ಮಂತ್ರಿಯವರು ಉತ್ತರಪ್ರದೇಶದ ಅಭಿವೃದ್ಧಿಕಾರ್ಯಗಳನ್ನು ವೀಕ್ಷಿಸಲು ಮತ್ತುಆಜಾದಿ ಕಾ ಅಮೃತಮಹೋ ತ್ಸವದ ಸಲುವಾಗಿ ಲಖನೌಗೆ ಆಗಮಿಸಿದ್ದರು. ಆದರೆ, ಸಂತ್ರಸ್ತರ ದುಃಖ ಹಂಚಿಕೊಳ್ಳಲು ಲಖೀಂಪುರಕ್ಕೆ ಹೋಗಲಿಲ್ಲʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ʼಪ್ರಧಾನಿ ಮೋದಿ ಅವರು ಪ್ರತಿಭಟನಾ ನಿರತ ರೈತರನ್ನು ʼಆಂದೋಲನ ಜೀವಿಗಳುʼ ಮತ್ತು ಭಯೋತ್ಪಾದಕರು ಎಂದಿದ್ದಾರೆ. ರೈತರನ್ನು ಗೂಂಡಾಗಳು ಎಂದಿರುವ ಯೋಗಿ ಅವರು ತಮ್ಮನ್ನು ಬೆದರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇದೇ ಸಚಿವ (ಅಜಯ್ ಮಿಶ್ರಾ) ಎರಡು ನಿಮಿಷದಲ್ಲಿ ರೈತರನ್ನು ಸಾಲಿನಲ್ಲಿ ನಿಲ್ಲಿಸುತ್ತೇನೆ ಎಂದಿದ್ದರುʼ ಎಂದು ವಾಗ್ದಾಳಿ ನಡೆಸಿದ್ದಾರೆ.
ಮುಂದುವರಿದು, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಮತ್ತುಕೇಂದ್ರ ಸರ್ಕಾರವನ್ನೂ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕಿ, ಕೇವಲ ಎರಡು ರೀತಿಯ ಜನರು ಮಾತ್ರ ದೇಶದಲ್ಲಿ ಸುರಕ್ಷಿತವಾಗಿದ್ದಾರೆ. ಅದು ಅಧಿಕಾರದಲ್ಲಿರುವ ಬಿಜೆಪಿ ನಾಯಕರು ಮತ್ತು ಅವರ ಶತಕೋಟ್ಯಾದೀಶ ಸ್ನೇಹಿತರು ಮಾತ್ರ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಲಖನೌಗೆ ಆಗಮಿಸಿದ್ದರು. ಆದರೆ, ಅವರು ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ಸಂತ್ರಸ್ತರ ಕುಟುಂಬದವರನ್ನು ಭೇಟಿ ಮಾಡಲಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕಿಡಿಕಾರಿದ್ದಾರೆ.

ಅಕ್ಟೋಬರ್ 3ರಂದು ನಡೆದ ಹಿಂಸಾಚಾರದಲ್ಲಿನಾಲ್ವರು ರೈತರು ಸೇರಿದಂತೆ ಒಟ್ಟು ಎಂಟು ಮಂದಿ ಮೃತಪಟ್ಟಿದ್ದರು. ಉತ್ತರ ಪ್ರದೇಶ ಪೊಲೀಸರು ಕೇಂದ್ರ ಗೃಹ ಇಲಾಖೆಯ ರಾಜ್ಯ ಖಾತೆ ಸಚಿವ ಅಜಯ್ ಮಿಶ್ರಾ ಥೇಣಿ ಅವರ ಪುತ್ರ ಆಶಿಶ್ ಮಿಶ್ರಾ ಸೇರಿದಂತೆ ಮೂವರನ್ನು ಇದುವರೆಗೆ ಬಂಧಿಸಿದ್ದಾರೆ.
ಮೋದಿ ಅವರು ಲೋಕ ಸಭೆಗೆ ಪ್ರತಿನಿಧಿಸುವ ವಾರಣಾಸಿಯ ರೋಹಾನಿಯಾ ಪ್ರದೇಶದಲ್ಲಿ ʼಕಿಸಾನ್ ನ್ಯಾಯ್ʼ ರ್ಯಾಲಿಯನ್ನು ಆಯೋಜಿಸಲಾಗಿದೆ. ರ್ಯಾಲಿಯಲ್ಲಿ ಭಾಗವಹಿಸುವುದಕ್ಕೂ ಮುನ್ನ, ಪ್ರಿಯಾಂಕಾ ಇಲ್ಲಿನ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಉತ್ತರ ಪ್ರದೇಶದಲ್ಲಿಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ಪ್ರತಿ ತಿಂಗಳು ಐದು ದಿನ ರಾಜ್ಯದಲ್ಲಿ ಉಳಿದುಕೊಳ್ಳುವ ನಿರೀಕ್ಷೆ ಇದೆ.