ವಿಶೇಷ ತನಿಖಾ ತಂಡದ ಶಿಫಾರಸಿನಂತೆ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಆಶಿಶ್ ಮಿಶ್ರಾ ಜಾಮೀನನ್ನು ರದ್ದುಗೊಳಿಸದಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಮಾರ್ಚ್ 30 ಬುಧವಾರದಂದು ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ಅವರು ಉತ್ತರ ಪ್ರದೇಶ ಸರ್ಕಾರದ ಪರ ಹಾಜರಾದ ವಕೀಲರನ್ನು, “ಮೇಲ್ವಿಚಾರಣಾ ನ್ಯಾಯಾಧೀಶರ ವರದಿಯಿಂದ ಅವರು ಜಾಮೀನು ರದ್ದುಗೊಳಿಸಲು ಶಿಫಾರಸು ಮಾಡಿದ್ದಾರೆ ಮತ್ತು ಇದಕ್ಕಾಗಿ ಅರ್ಜಿ ಸಲ್ಲಿಸಲು ಶಿಫಾರಸು ಮಾಡಿದ್ದಾರೆ ಎಂದು ತೋರುತ್ತದೆ. ಆದರೂ ಇದನ್ನು ಏಕೆ ಮಾಡಲಿಲ್ಲ? ” ಎಂದು ಪ್ರಶ್ನಿಸಿದ್ದಾರೆ ಎಂದು ಇಂಡಿಯನ್ ಟುಡೇ ವರದಿ ಮಾಡಿದೆ.
ಎಸ್ಐಟಿ ಮುಖ್ಯ ಕಾರ್ಯದರ್ಶಿ (ಗೃಹ) ಅವರಿಗೆ ಪತ್ರ ಬರೆದು ಜಾಮೀನು ರದ್ದುಗೊಳಿಸುವಂತೆ ಶಿಫಾರಸು ಮಾಡಿದೆ. ಮೇಲ್ವಿಚಾರಣಾ ನ್ಯಾಯಾಧೀಶರು ಸಹ ತಮ್ಮ ಪತ್ರದಲ್ಲಿ ಇದನ್ನೇ ಹೇಳಿದ್ದಾರೆ ಎಂದು ಸಿಜೆಐ ಹೇಳಿದರು.
ಇದಕ್ಕೆ ಉತ್ತರ ಪ್ರದೇಶ ಸರ್ಕಾರದ ವಕೀಲರು ಉತ್ತರಿಸಿದ್ದು, “ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ ಅವರು, ನಂತರ ಅವರು ಯುಪಿ ಮುಖ್ಯ ಕಾರ್ಯದರ್ಶಿಗೆ ಫೋನ್ ಮೂಲಕ ಕರೆ ಮಾಡಲು ನ್ಯಾಯಾಲಯದಿಂದ ಹೊರಗೆ ಹೋದರು. ನಂತರ ಮುಖ್ಯ ಕಾರ್ಯದರ್ಶಿ ಕಚೇರಿಗೆ ಎಸ್ಐಟಿ ಅಥವಾ ಮೇಲ್ವಿಚಾರಣಾ ನ್ಯಾಯಾಧೀಶರಿಂದ ಶಿಫಾರಸು ಪತ್ರ ಬಂದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಮೇಲ್ವಿಚಾರಣಾ ನ್ಯಾಯಾಧೀಶರ ನಿಲುವಿಗೆ ರಾಜ್ಯದ ಪ್ರತಿಕ್ರಿಯೆಯನ್ನು ಕೋರಿ ನ್ಯಾಯಾಲಯವು ವಿಚಾರಣೆಯನ್ನು ಏಪ್ರಿಲ್ 4 ಕ್ಕೆ ಮುಂದೂಡಿದೆ.
ಫೆಬ್ರವರಿ 22 ರಂದು ಮೇಲ್ವಿಚಾರಣಾ ನ್ಯಾಯಾಧೀಶರು ಸಲ್ಲಿಸಿದ ವರದಿಯ ಪ್ರತಿಯನ್ನು ಸರ್ಕಾರದ ವಕೀಲರು ಮತ್ತು ಅರ್ಜಿದಾರರಿಗೆ ನೀಡುವಂತೆ ಎಸ್ಸಿ ನಂತರ ರಿಜಿಸ್ಟ್ರಾರ್ಗೆ ಕೇಳಿತು. ಆಶಿಶ್ ಮಿಶ್ರಾ ಪರ ವಾದ ಮಂಡಿಸಿದ ಮಹೇಶ್ ಜೇಠ್ಮಲಾನಿ ಅವರು ಪ್ರತಿಯನ್ನು ಕೇಳಿದರು. ಅಲ್ಲದೆ ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡುವಂತೆ ಒತ್ತಾಯಿಸಿದರು. ಸಿಜೆಐ ರಮಣ ಅವರು ವಿನಂತಿಯನ್ನು ಪುರಸ್ಕರಿಸಿದ್ದಾದರೂ “ಈ ವಿಚಾರಣೆಯನ್ನು ಒಂದು ತಿಂಗಳಿಗಿಂತ ಹೆಚ್ಚು ಕಾಲ ವಿಸ್ತರಿಸಲಾಗಿದೆ” ಎಂದು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಅಕ್ಟೋಬರ್ 9 ರಂದು ಆಶಿಶ್ ಮಿಶ್ರಾ ಅವರನ್ನು ಬಂಧಿಸಲಾಗಿತ್ತು. ಅಕ್ಟೋಬರ್ 3, 2021 ರಂದು, ರೈತರ ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಘರ್ಷಣೆಯಲ್ಲಿ ಲಖಿಂಪುರ ಖೇರಿಯಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದರು.
ಅಲಹಾಬಾದ್ ಹೈಕೋರ್ಟ್ನ ಲಕ್ನೋ ಪೀಠದಿಂದ ಜಾಮೀನು ಪಡೆದ ನಂತರ ಅವರು ಜೈಲಿನಿಂದ ಬಿಡುಗಡೆಗೊಂಡರು. ಫೆಬ್ರವರಿ 14 ರಂದು ಅವರ ಜಾಮೀನು ಆದೇಶಕ್ಕೆ ಸಂಬಂಧಿಸಿದಂತೆ ಆಶಿಶ್ ಮಿಶ್ರಾ ಅವರ ವಕೀಲರು ತಲಾ 3 ಲಕ್ಷ ರೂಪಾಯಿಗಳ ಎರಡು ಜಾಮೀನು ಬಾಂಡ್ಗಳನ್ನು ಸಲ್ಲಿಸಿದರು.
ಅರ್ಜಿದಾರರ ಪರ ವಕೀಲ ದುಶ್ಯಂತ್ ದವೆ ಮಾತನಾಡಿ, “ಸಚಿವ ಅಜಯ್ ಮಿಶ್ರಾ [ಆಶಿಶ್ ಮಿಶ್ರಾ ಅವರ ತಂದೆ] ಬಹಳ ಪ್ರಭಾವಶಾಲಿ.” ಎಂದು ಹೇಳಿದ್ದಾರೆ.